ADVERTISEMENT

ಬಂಡಪಲ್ಲಿಯಲ್ಲಿ ಭರ್ತಿ ನೀರು

ಕೆ.ನರಸಿಂಹ ಮೂರ್ತಿ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST
ಬಂಡಪಲ್ಲಿಯಲ್ಲಿ ಭರ್ತಿ ನೀರು
ಬಂಡಪಲ್ಲಿಯಲ್ಲಿ ಭರ್ತಿ ನೀರು   

ಕೋಲಾರ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಬೇಸಿಗೆಯ ತಾಪ ಏರುವ ಮುನ್ನವೇ ನೀರಿನ ಸಮಸ್ಯೆ ಭುಗಿಲೆದ್ದಿದೆ. ಹಲವು ಕೊಳವೆ ಬಾವಿಗಳು ಬತ್ತಿವೆ. ಹೊಸ ಕೊಳವೆ ಬಾವಿಗಳೂ ವಿಫಲವಾಗುತ್ತಿವೆ. ಜಿಲ್ಲಾಡಳಿತ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುತ್ತಿದೆ. ಖಾಸಗಿ ತೋಟಗಳ ಕೊಳವೆ ಬಾವಿಗಳಿಂದಲೂ ನೀರು ಪಡೆಯುತ್ತಿದೆ.

ಇಂಥ ವೇಳೆಯಲ್ಲೇ, ಇದೇ ಜಿಲ್ಲೆಯ ಹಳ್ಳಿಯೊಂದರಲ್ಲಿ 24 ಗಂಟೆಯೂ ಜನರಿಗೆ ಮತ್ತು ರಾಸುಗಳಿಗೆ ನೀರು ಪೂರೈಕೆಯಾಗುತ್ತಿದೆ ಎಂಬುದೇ ವಿಶೇಷ. ಈ ಹಳ್ಳಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಹಳ್ಳಿಯ ನಡುವೆಯೇ ಇರುವ ಕುಂಟೆಯಲ್ಲಿ ಸದಾ ಕಾಲ ನೀರು ಸಂಗ್ರಹವಾಗಿರುತ್ತದೆ. ರಾಸುಗಳಿಗೆ ಯಾವಾಗ ಬೇಕಾದರೂ ಇಲ್ಲಿಂದ ನೀರು ಕೊಂಡೊಯ್ಯಬಹುದು. ಅಂದ ಹಾಗೆ ಯಾವುದೀ ಹಳ್ಳಿ? 

  ಕೋಲಾರ- ಶ್ರೀನಿವಾಸಪುರ ರಸ್ತೆಯ ಪುಂಗನೂರು ಕ್ರಾಸ್‌ನಿಂದ 8 ಕಿಮೀ ದೂರದ ಬಂಡಪಲ್ಲಿಯೇ ಜಲ ಸುಭಿಕ್ಷೆಯಿಂದ ಸಂತೃಪ್ತವಾಗಿರುವ ಪುಟ್ಟ ಹಳ್ಳಿ.

ಇಲ್ಲಿ 170 ಮನೆಗಳಿವೆ. ಜನಸಂಖ್ಯೆ ಸುಮಾರು 10 ಸಾವಿರ. ಕಳೆದ ಮೂರು ವರ್ಷದಿಂದ ಈ ಜನ ಯಾವತ್ತೂ ನೀರಿನ ಸಮಸ್ಯೆ ಬಗ್ಗೆ ದೂರಿಲ್ಲ. ಹಾಗಂತ ಇಲ್ಲಿನ ಯಾವುದೇ ಮನೆಗೂ ಪ್ರತ್ಯೇಕ ನಲ್ಲಿ ಸಂಪರ್ಕವೂ ಇಲ್ಲ. ಆದರೆ 32 ಬೀದಿ ನಲ್ಲಿಗಳಿಂದ ಜನ ನೀರು ಪಡೆಯುತ್ತಾರೆ. ನೀರಿನ ಮಿತ ಬಳಕೆ ಮತ್ತು ಆ ಮೂಲಕ ಜಲಸಂತೃಪ್ತಿಯ ದಾರಿ ಕಂಡುಕೊಂಡಿದ್ದಾರೆ. 

  ಹಳ್ಳಿಯಲ್ಲಿನ ಎರಡು ಕೊಳವೆ ಬಾವಿಗಳಿಂದ ಬೃಹತ್ ಟ್ಯಾಂಕಿಗೆ ನೀರು ಹರಿಸಿ ಅಲ್ಲಿಂದ ಬೀದಿ ನಲ್ಲಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ನೀರು ಪೂರೈಸುವ ವೇಳೆಯೂ ವಿಶಿಷ್ಟ ಮತ್ತು ಜನಸ್ನೇಹಿ. ಬೆಳಿಗ್ಗೆ 6 ರಿಂದ 7 ಮತ್ತು ಸಂಜೆ 7 ರಿಂದ 8ರ ವರೆಗೆ ಬೀದಿ ನಲ್ಲಿಗಳಲ್ಲಿ ನೀರು ಬರುತ್ತದೆ.

 ರೈತರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ತಮ್ಮ ಕೆಲಸಕ್ಕೆ ಹೋಗುವ ಮುಂಚೆ, ಕೆಲಸಗಳನ್ನು ಮುಗಿಸಿ ಮನೆಗೆ ಬಂದ ಬಳಿಕ ನೀರು ಸಂಗ್ರಹಿಸಬಹುದು. ಈ ವೇಳಾಪಟ್ಟಿಯಿಂದ ಎಲ್ಲರೂ ನೀರು ಸಂಗ್ರಹಿಸಿಡಲು ಅನುಕೂಲವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ, ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಮಾಜಿ ಅಧ್ಯಕ್ಷ ಚಂದ್ರಾರೆಡ್ಡಿ.

  `ಮೂರು ವರ್ಷದ ಹಿಂದೆ ನಮ್ಮ ಹಳ್ಳಿಯಲ್ಲೂ ನೀರಿನ ಸಮಸ್ಯೆ ಇತ್ತು. ಮನೆಗಳಿಗೆ ನಲ್ಲಿ ಸಂಪರ್ಕ ಪಡೆದಿದ್ದ ಬಹಳಷ್ಟು ಮಂದಿ ನೀರನ್ನು ಮಿತವಾಗಿ ಬಳಸುತ್ತಿರಲಿಲ್ಲ.

ಎಲ್ಲರಿಗೂ ಸಾಕಾಗುವಷ್ಟು ನೀರು ಸಿಗುತ್ತಿರಲಿಲ್ಲ. ಹೀಗಾಗಿಯೇ ಎಲ್ಲರ ಮನೆಗಳ ನಲ್ಲಿ ಸಂಪರ್ಕವನ್ನು ಕಡಿತಗೊಳಿಸಿ ಬೀದಿ ನಲ್ಲಿ ಅಳವಡಿಸುವ ನಿರ್ಧಾರ ಮಾಡಿದೆವು. ಆ ಕೆಲಸವನ್ನೂ ಕೂಡ ಗ್ರಾಮಸ್ಥರೆಲ್ಲರೂ ಸೇರಿಕೊಂಡೇ ಮಾಡಿದ್ದು ಹೆಮ್ಮೆಯ ಸಂಗತಿ.

ಮನೆ ನಲ್ಲಿ ಸಂಪರ್ಕ ಕಡಿದು ಹಾಕಲು ಪ್ರತಿ ಮನೆಯಿಂದಲೂ ಕನಿಷ್ಠ ಕೂಲಿಗೆ ಒಬ್ಬೊಬ್ಬರು, ಇಬ್ಬರು ಬಂದರು. ಕೆಲಸ ಸಲೀಸಾಯಿತು~ ಎಂದು ಅವರು ಸ್ಮರಿಸುತ್ತಾರೆ.

 24 ಗಂಟೆ ನೀರು
ಹಳ್ಳಿಯ ನಡು ಮಧ್ಯೆ ಇರುವ ಓವರ್‌ಹೆಡ್ ಟ್ಯಾಂಕಿನ ಬುಡದಲ್ಲಿ ನಲ್ಲಿಯೊಂದನ್ನು ಹಾಕಲಾಗಿದೆ. ಆ ನಲ್ಲಿಯಲ್ಲಿ 24 ಗಂಟೆಯೂ ನೀರು ಬರುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೀದಿ ನಲ್ಲಿಯಲ್ಲಿ ಬರುವ ನೀರು ಸಾಲದಿದ್ದರೆ, ರಾಸುಗಳಿಗೆ ನೀರು ಬೇಕೆಂದಾಗ ಯಾರು ಬೇಕಾದರೂ ಈ ನಲ್ಲಿಯಿಂದ ನೀರು ಹಿಡಿಯಬಹುದು. ರಾಸುಗಳಿಗೂ ನೀರು ಕುಡಿಸಬಹುದು. ಇದು ಇಲ್ಲಿನ ವಿಶೇಷ. 

  ಪಕ್ಕದ್ಲ್ಲಲೇ ಮತ್ತೊಂದು ವಿಶೇಷವೂ ಇದೆ. ಟ್ಯಾಂಕಿನ ಬುಡದ ಆ ಕಡೆಗೆ ಒಂದು ಕುಂಟೆಯಿದೆ. ಕೊಳವೆ ಬಾವಿಗಳಿಂದ ಟ್ಯಾಂಕಿಗೆ ಹರಿವ ನೀರು ತುಂಬಿದ ಬಳಿಕವೂ ವಿದ್ಯುತ್ ಪೂರೈಕೆ ಇದ್ದರೆ, ನೀರು ಕುಂಟೆಗೆ ಸೇರುವ ವ್ಯವಸ್ಥೆ ಮಾಡಲಾಗಿದೆ. 15 ಅಡಿ ಆಳದ ಕುಂಟೆಯಲ್ಲಿ ಗ್ರಾಮಸ್ಥರು ಮೀನು ಮರಿಗಳನ್ನೂ ಸಾಕುತ್ತಿದ್ದಾರೆ.
 
ರಾಸುಗಳಿಗೆ ನೀರು ಬೇಕಾದವರು ಈ ಕುಂಟೆಯಿಂದಲೂ ನೀರು ಪಡೆಯಬಹುದು. ಆದರೆ ರಾಸುಗಳನ್ನು ಕುಂಟೆಗೆ ಇಳಿಸುವಂತಿಲ್ಲ. ಸ್ವಚ್ಛತೆಯನ್ನು ಕಾಪಾಡುವುದಕ್ಕೆಂದೇ ಈ ನಿಯಮವನ್ನು ಅಳವಡಿಸಲಾಗಿದೆ. 

  `ನಮ್ಮ ಹಳ್ಳಿಯಲ್ಲಿರುವಂಥ ವ್ಯವಸ್ಥೆ ಸುತ್ತಮುತ್ತಲಿನ ಬೇರೆ ಹಳ್ಳಿಗಳಲ್ಲಿ ಇಲ್ಲವೇ ಇಲ್ಲ~ ಎಂಬುದು ಇಲ್ಲಿನ ಜನರ ಹೆಮ್ಮೆಯ ನುಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.