ಬಡತನದ ಬೇಗುದಿಯಲ್ಲಿ ಬೆಂದು ಅಕ್ಷರ ಜ್ಞಾನದಿಂದ ದೂರ ಉಳಿದರೂ ಛಲವೊಂದಿದ್ದರೆ ಮಾರ್ಗ ತಾನಾಗಿಯೇ ಬರುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ ಇಲ್ಲೊಬ್ಬ ಮುಸ್ಲಿಂ ಸಹೋದರಿಯರು.
ಬದುಕಿನುದ್ದವೂ ಕಣ್ಣೀರಿನ ಕಥೆಯಾಗಿದ್ದರೂ, ಬದುಕನ್ನೇ ಪ್ರಯೋಗವಾಗಿರಿಸಿಕೊಂಡು ತಾವೇನೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಗಜೇಂದ್ರಗಡದ ಮೆಹಬೂಬಿ ಬೇಗಂ ಮತ್ತು ಶಮ್‌ಷಾದ್ ಬೇಗಂ. ಪಟ್ಟಣದಲ್ಲಿ ಪಂಚರ್ ತಿದ್ದುವ ಅಂಗಡಿ ಇವರದ್ದು.
ಕಠಿಣ, ಕಷ್ಟದಾಯಕ ಕೆಲಸಗಳು ಪುರುಷರಿಗೆ ಮೀಸಲು ಎಂದಿರುವ ವ್ಯವಸ್ಥೆಗೆ ಸವಾಲೊಡ್ಡಿದ ಪರಿಯಲ್ಲಿ ಪಂಚರ್ ತಿದ್ದುತ್ತಿದ್ದಾರೆ ಸಹೋದರಿಯರು. ಚಲಿಸಲಾಗದ ವಾಹನಗಳಿಗೆ ಮತ್ತೆ ಜೀವ ತುಂಬುತ್ತಿದ್ದಾರೆ ಇವರು.
ಬದುಕಿನ ಹಾದಿ ಹೀಗಿದೆ...
5-6 ದಶಕಗಳ ಹಿಂದಿನ ಮಾತು. ಮುಕ್ತುಂ ಹುಸೇನ ಮುಲ್ಲಾ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ. ಜೀನವಕ್ಕೆ ಆಸರೆ ಹುಡುಕಿ ಕುಟುಂಬ ರೋಣದಿಂದ ಗಜೇಂದ್ರಗಡಕ್ಕೆ ಬಂದಿತು. ಬಸ್ ನಿಲ್ದಾಣದ ಬಳಿ ಇದ್ದ ಪೆಟ್ರೋಲ್ ಬಂಕ್‌ನಲ್ಲಿ ಗಾಲಿಗಳಿಗೆ ಪಂಚರ್ ತಿದ್ದುವ ಕಾಯಕ ಆರಂಭಿಸಿದರು.
ಗಾಡಿಗಳು ಗಾಳಿ ತುಂಬಿಸಿಕೊಂಡು ಹೋದವು. ಆದರೆ ಈ ಕುಟುಂಬದ ಬದುಕು ಮಾತ್ರ ಗಾಳಿ ಇಲ್ಲದ ಟೈಯರ್‌ನಂತಾಯಿತು. ಆರ್ಥಿಕ ಪರಿಸ್ಥಿತಿ ಸುಧಾರಿಸಲೇ ಇಲ್ಲ. ತಮ್ಮಿಬ್ಬರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಬದುಕಿನ ಬಂಡಿ ಎಳೆಯುವುದು ಕಷ್ಟಕರವಾಗಿತ್ತು. ಆದರೂ ತಮ್ಮ ಮಕ್ಕಳೂ ಶಿಕ್ಷಣ ಪಡೆದು ಈ ವೃತ್ತಿಯಿಂದ ಮುಕ್ತರಾಗಬೇಕು ಎನ್ನುವುದು ಮುಕ್ತುಂ ಹುಸೇನ ಮುಲ್ಲಾರ ಯೋಚನೆಯಾಗಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಅಕಾಲಿಕ ಮರಣಕ್ಕೆ ತುತ್ತಾದರು. ಅಪ್ಪನನ್ನು ಕಳೆದುಕೊಂಡ ಇಬ್ಬರು ಹೆಣ್ಣುಮಕ್ಕಳ ತಲೆಗೆ ಬದುಕಿನ ಬಂಡಿ ಓಡಿಸುವ ಜವಾಬ್ದಾರಿ.
ಹಿರಿಯ ಮಗಳು ಮೆಹಬೂಬಿ ಅಪ್ಪನ ಹಾದಿಯನ್ನೇ ಹಿಡಿದರು. ಪಂಚರ್ ತಿದ್ದುವ ಕಾಯಕ ಆರಂಭಿಸಿದರು. ಇತ್ತೀಚಿಗೆ ರಾಯಬಾಗ್ ಕುಟುಂಬ ಪೆಟ್ರೋಲ್ ಬಂಕನ್ನು ಕುಷ್ಟಗಿ ರಸ್ತೆಗೆ ವರ್ಗಾಯಿಸಿತು. ಅಲ್ಲಿ ಪಂಚರ್ ತಿದ್ದುವ ಕೆಲಸಕ್ಕೆ ಮೆಹಬೂಬಿ ಕೈಹಾಕಿದರು. ಆದರೆ ಅಲ್ಲೂ ಹಣೆಬರಹ ಸರಿಯಿರಲಿಲ್ಲ. ಅಂಗಡಿಯು ಶಾರ್ಟ್ ಸರ್ಕಿಟ್‌ನಿಂದ ಭಸ್ಮಗೊಂಡಿತು. ಇವರ ಬದುಕೇ ಬುಡಮೇಲು ಆಯಿತು. ಇವರ ಪರಿಸ್ಥಿತಿ ಮನಗಂಡು ಪುರಸಭೆಯ ಅಂದಿನ ಮುಖ್ಯಾಧಿಕಾರಿ ಆರ್.ಎಂ ಕೊಡಗೆ ಅವರು ಪುರಸಭೆ ವತಿಯಿಂದ ಅಂಗಡಿಯನ್ನು ಕೊಡಿಸಿದರು. ಸುಮಾರು 40 ಸಾವಿರ ರೂಪಾಯಿಗಳ ಸಾಮಾನು ಕೊಡಿಸಿದರು. ಇದರ ಫಲವಾಗಿ ಇಂದು ಈ ಬೇಗಂ ಸಹೋದರಿಯರ ಬದುಕು ಯಾರ ಹಂಗೂ ಇಲ್ಲದೇ ಸ್ವತಂತ್ರವಾಗಿ ಸಾಗಿಸುತ್ತಲಿದ್ದಾರೆ.
ಪಟ್ಟಣದಲ್ಲಿ ಬರುವ ಬಹುತೇಕ ವಾಹನಗಳ ಪಂಚರ್ ತಿದ್ದುವ ಕಠಿಣ ಕಾರ್ಯವನ್ನು ಅತ್ಯಂತ ಹರ್ಷವಾಗಿಯೇ ನಿರ್ವಹಿಸುತ್ತಿರುವ ಸಹೋದರಿಯರು ಸುರಕ್ಷಿತವಾಗಿರಲು ಮನೆ ಇಲ್ಲ. ಚಿಕ್ಕ ಬಾಡಿಗೆಯ ಮನೆಯಲ್ಲಿಯೇ ಬದುಕುತ್ತಿದ್ದಾರೆ. `ಪ್ರತಿ ದಿನಕ್ಕೆ 150 ರಿಂದ 250 ದುಡಿಯುತ್ತೇವೆ. ಅದರಲ್ಲಿ ದುಡಿಮೆಯ ಅರ್ಧದಷ್ಟು ಬಾಡಿಗೆ ಕಟ್ಟುತ್ತಿದ್ದೇವೆ' ಎನ್ನುತ್ತಾರೆ ಸಹೋದರಿಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.