ADVERTISEMENT

ಬಸವಕಲ್ಯಾಣದಲ್ಲಿ ಅಣ್ಣನ ತೇರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಸಾಮಾಜಿಕ ಬದಲಾವಣೆಗಾಗಿ ಎಂಟು ಶತಮಾನಗಳ ಹಿಂದೆಯೇ ಪ್ರಯತ್ನಿಸಿದ `ದೇಹವೇ ದೇಗುಲ...~ ಎಂದಿದ್ದ ಜಗಜ್ಯೋತಿ ಬಸವಣ್ಣ ಸ್ಥಾವರದ ವಿರೋಧಿ ಆಗಿದ್ದರು. ಆದರೂ ಎಲ್ಲೆಡೆ ಇವರ ದೇವಾಲಯಗಳಿವೆ. ಈ ಪೈಕಿ ಬಸವಾದಿ ಶರಣರ ಕಾಯಕಭೂಮಿ ಬೀದರ ಜಿಲ್ಲೆಯ ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಪ್ರಮುಖವಾಗಿದೆ.

ಇದೇ ಸ್ಥಳದಲ್ಲಿ ಅಣ್ಣ ಬಸವಣ್ಣನವರು ಧ್ಯಾನ ಮಾಡಿದ್ದರು. ಹೀಗಾಗಿ ಇದು ಪವಿತ್ರ ಸ್ಥಾನ. ಆದರೆ ದೇವಸ್ಥಾನದ ಕಟ್ಟಡ ಇತ್ತೀಚಿನದು. ದೂರದೂರದ ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಾರೆ.

ದೊಡ್ಡ ಮಠದಂತಿರುವ ದೇವಸ್ಥಾನಕ್ಕೆ ಎತ್ತರದ ಗೋಪುರ ಇದೆ. ಗರ್ಭಗೃಹದಲ್ಲಿ ಬಸವಣ್ಣನವರು ಆಸನದ ಮೇಲೆ ಕುಳಿತಿರುವ ಹಿತ್ತಾಳೆಯ ಆಕರ್ಷಕ ಮೂರ್ತಿ ಇದೆ. ಅದರ ಎದುರಿಗೆ ಇಷ್ಟಲಿಂಗಾರ್ಚನೆ ಮಾಡುತ್ತಿರುವ ಇನ್ನೊಂದು ಶಿಲಾ ಮೂರ್ತಿಯೂ ಇದೆ.

ಬೃಹತ್ ಸಭಾಮಂಟಪ, ಆಕರ್ಷಕ ಮುಖ್ಯದ್ವಾರ ಇದೆ. ಸಭಾ ಮಂಟಪದ ಗೋಡೆಯಲ್ಲಿ ಈಚೆಗೆ ಶರಣರ ತೈಲಚಿತ್ರಗಳನ್ನು ಬಿಡಿಸಿ ದೇವಸ್ಥಾನದ ಆಕರ್ಷಣೆ ಹೆಚ್ಚಿಸಲಾಗಿದೆ.
ಪ್ರತಿವರ್ಷ ಅಕ್ಷಯ ತದಿಗೆಯಿಂದ (ಬಸವ ಜಯಂತಿ ದಿನದಿಂದ) ಮೂರು ದಿನ ಇಲ್ಲಿ ಬೃಹತ್ ಜಾತ್ರೆ ನಡೆಯುತ್ತದೆ.

ಮೊದಲ ದಿನ ತೊಟ್ಟಿಲಿಗೆ ಹಾಕುವುದು, ಕೊನೆಯ ದಿನ ಮಧ್ಯರಾತ್ರಿ ರಥೋತ್ಸವ ಇರುತ್ತದೆ. ಈ ಎರಡೂ ದಿನ ಪಲ್ಲಕ್ಕಿ ಮತ್ತು ಎತ್ತರದ ನಂದಿಕೋಲುಗಳ ಮೆರವಣಿಗೆ ಎಲ್ಲರನ್ನೂ ಸೆಳೆಯುತ್ತದೆ.

ಇಲ್ಲಿ ನಿತ್ಯವೂ ಪೂಜೆ, ಅಭಿಷೇಕ, ರುದ್ರಪೂಜೆ ನಡೆಯುತ್ತದೆ. ಆದರೆ ಯಾವುದೇ ಸೇವಾ ಶುಲ್ಕ ಇಲ್ಲ. ಭಕ್ತರ ವಾಸ್ತವ್ಯಕ್ಕೆ ದೇವಸ್ಥಾನದ ಸಮೀಪದಲ್ಲಿ ಈಚೆಗೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಭವ್ಯ ಅತಿಥಿಗೃಹ ಕಟ್ಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.