ADVERTISEMENT

ಬೆರಳಿಲ್ಲದ ಕೈಯಲಿ ಅರಳಿದ ಕಲೆ

ಮಂಜುನಾಥ ಎಸ್.ರಾಠೋಡ
Published 30 ಜೂನ್ 2014, 19:30 IST
Last Updated 30 ಜೂನ್ 2014, 19:30 IST
ಹನುಮಂತರಾವ್ ಗಾಯಕವಾಡ ಅವರು ಕೆತ್ತಿರುವ ಸಿದ್ದಾರೂಢ ದೇವಸ್ಥಾನದ ರಥ ಹಾಗೂ ವಿವಿಧ ಕಲಾಕೃತಿಗಳು
ಹನುಮಂತರಾವ್ ಗಾಯಕವಾಡ ಅವರು ಕೆತ್ತಿರುವ ಸಿದ್ದಾರೂಢ ದೇವಸ್ಥಾನದ ರಥ ಹಾಗೂ ವಿವಿಧ ಕಲಾಕೃತಿಗಳು   

ಇವರ ಕೈ ಬೆರಳುಗಳು ಎಲ್ಲರಂತಿಲ್ಲ. ಅವುಗಳು ತುಂಡಾದಂತಿದ್ದು, ಯಾವುದೇ ವಸ್ತು ಹಿಡಿದುಕೊಳ್ಳಲೂ ಬಲವಿಲ್ಲ. ಆದರೆ ಇದೇ ಕೈಗಳಿಂದ ಮಣ್ಣಿನಲ್ಲಿ, ಕಟ್ಟಿಗೆಯಲ್ಲಿ, ಕಲ್ಲಿನಲ್ಲಿ ಅರಳುವ ಕಲಾಕೃತಿಗಳು ಮಾತ್ರ ನೋಡುಗರನ್ನು ನಿಬ್ಬೆರಗಾಗಿಸುತ್ತವೆ!

ಇದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡ ಸಮೀಪದ ಉಣಚಗೇರಿ ಗ್ರಾಮದ 72 ವರ್ಷದ ಶಿಲ್ಪಿ ಹನಮಂತರಾವ್ ಗಾಯಕವಾಡ ಅವರ ಕಲಾಜೀವನದ ಕಥೆ. ತಮ್ಮ ಅದ್ಭುತ ಕಲಾ ಚಾತುರ್ಯದಿಂದ ಕಲಾ ಆರಾಧಕರನ್ನು ಸೆಳೆದು ಇಟ್ಟುಕೊಳ್ಳುವ ಶಕ್ತಿ ಇದೇ ಕೈಗಳಿಂದ ಸೃಷ್ಟಿಯಾಗಿರುವ ಕಲೆಯಲ್ಲಿ ಅಡಕವಾಗಿದೆ.

ಆರು ತಿಂಗಳ ಶಿಶು ಇರುವಾಗ ತೊಟ್ಟಿಲಿಗೆ ಬೆಂಕಿ ಬಿದ್ದ ಕಾರಣದಿಂದ ಕೈಗಳಿಗೆ ಭಾರಿ ಹಾನಿಯಾಯಿತು. ಆದರೆ ಇದೇ ಕೈಯೊಂದಿಗೆ ಬೆಳೆದ ಗಾಯಕವಾಡ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಲಾದೇವಿ ಒಲಿದಳು.

ಗುರುಗಳಾದ ಯಮನಪ್ಪ ಚಿತ್ರಗಾರರ ಕರ ಸಂಜಾತರಾಗಿ ಬೆಳೆದು ಅವರ ಬಳಿ ಎರಡು ದಶಕ ತರಬೇತಿ ಪಡೆದರು. ಅವರ ಕಲಾಜೀವನ ಆರಂಭವಾದದ್ದು ಮಣ್ಣಿನ ಗಣೇಶನ ಮೂರ್ತಿಗಳಿಂದ. ನಂತರ ಅವರು ‘ಕಲಾವೃತ್ತಿ ಭವಾನಿ ಕಲಾ ನಿಧಿ’ ಎಂಬ ಅಂಗಡಿಯನ್ನು ತೆರೆದು ಪ್ರತಿವರ್ಷ ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಗಣೇಶ ಚತುರ್ಥಿಯಂದು ಮೂರ್ತಿ ತಯಾರಿಸಿಕೊಡಲು ಆರಂಭಿಸಿದರು. ಅವರ ಕರಗಳಿಂದ ಮೂಡಿಬರುವ ಗಣಪತಿಗೆ ಎಲ್ಲಿಲ್ಲದ ಬೇಡಿಕೆ ಆರಂಭವಾಯಿತು.

ಇದೇ ಉತ್ತೇಜನದೊಂದಿಗೆ ವಿವಿಧ ಕಲಾಕೃತಿಗಳನ್ನು ಅವರು ಆರಂಭಿಸಿದರು. ಇಲ್ಲಿಯವರಿಗೆ 300 ಅಧಿಕ ದೇವಾಲಯದ ಗೋಪುರಗಳನ್ನು ಅವರು ನಿರ್ಮಿಸಿದ್ದಾರೆ. ನಾಲ್ಕು ಗಾಲಿಗಳಿರುವ ಮಾನವ ದೇಹದ ಪ್ರತೀಕವಾಗಿ ನಿರ್ಮಿಸಿರುವ ಹಲವು ರಥಗಳು ಅವರ ಕಲೆಗೆ ಹಿಡಿದ ಕನ್ನಡಿಯಾಗಿದೆ.

ಅಪೂರ್ವ ರಥ
ಅವರು ನಿರ್ಮಿಸಿದ ರಥದಲ್ಲಿಯೇ ಶ್ರೇಷ್ಠ ಎನಿಸುವ ಸಿದ್ದಾರೂಢ ರಥ. ಈ ರಥದಲ್ಲಿ 108 ಓಂಕಾರ ಜಪಗಳಿವೆ. ಇವು ಕನ್ನಡ, ತೆಲುಗು, ತಮಿಳು, ಉರ್ದು, ಹಿಂದಿ ಮತ್ತು ದೇವನಾಗರ ಲಿಪಿಯಲ್ಲಿವೆ. ಈ ರಥದಲ್ಲಿ ಅಪರೂಪದ ಗಜ ಪಕ್ಷಿಯನ್ನು ಚಿತ್ರಿಸಿದ್ದಾರೆ. ಒಮ್ಮೆ ಈ ಗಜ ಪಕ್ಷಿ ಹಾರುತ್ತ ಇಂದ್ರನ ಆಸ್ಥಾನಕ್ಕೆ ಹೋದಾಗ ಐರಾವತದ ಸೊಂಡಿಲುಗಳಿಗೆ ಈ ಪಕ್ಷಿಯ ರೆಕ್ಕೆ ತಾಗಿ ರಕ್ತ ಸುರಿಯಲಾರಂಭಿಸಿದಾಗ ಕೊಪಗೊಂಡ ಇಂದ್ರನು ತನ್ನ ವಜ್ರಾಯುಧದಿಂದ ಈ ಗಜಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿದ್ದು ಪೌರಾಣಿಕ ದಾಖಲೆಯಲ್ಲಿದೆ. ಈ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ರಥದಲ್ಲಿ ಮೂಡಿಸಿದ್ದಾರೆ ಇವರು.

ಇವರ ಜೀವನದ ಕುರಿತು ಗದುಗಿನ ವಿಜಯಕಲಾ ಮಂದಿರದ ಬಸಪ್ಪ ವಿ. ಪಟ್ಟಣಶೆಟ್ಟಿಯವರು ಅಧ್ಯಯನ ನಡೆಸಿ ಪ್ರಬಂಧ ರಚಿಸಿದ್ದಾರೆ. ಆದರೆ ಇಂತಹ ಅಪರೂಪದ ಕಲಾವಿದನನ್ನು ಸರ್ಕಾರ ಗುರುತಿಸದೇ ಇರುವುದು ವಿಷಾದಕರ ಸಂಗತಿ. ಅರ್ಜಿ ಸಲ್ಲಿಸಿದರಷ್ಟೇ ಕಲಾವಿದರನ್ನು ಗುರುತಿಸುವ ಪದ್ಧತಿ ಹೋದರೆ ಇಂಥ ಅನೇಕ ಕಲಾವಿದರು ಬೆಳಕಿಗೆ ಬರುತ್ತಾರೆ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT