ADVERTISEMENT

ಭಕ್ತಸಂಪ್ರೀತೆ ಹುಚ್ಚಮ್ಮದೇವಿ ರಥೋತ್ಸವ

ಎಸ್.ಶಿವಕುಮಾರ್ ಸಾರ್ಥವಳ್ಳಿ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಕರ್ನಾಟಕ ಇತಿಹಾಸದ ವೈಭವದಲ್ಲಿ ಜಾತ್ರೆ ಎಂಬ ಹೆಜ್ಜೆ ಗುರುತು ಹೊಸಹೊಸ ಆಯಾಮಗಳನ್ನು ಪಡೆದು ಇಂದಿಗೂ ನಡೆದುಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿದೆ ತುಮಕೂರು ಜಿಲ್ಲೆಯ ಕಲ್ಪತರು ನಾಡೆಂದು ಪ್ರಸಿದ್ಧಿ ಪಡೆದಿರುವ ತಿಪಟೂರು ತಾಲ್ಲೂಕಿನ ಸಾರ್ಥವಳ್ಳಿ ಗ್ರಾಮ. ಇದೇ 22ರಿಂದ 29ರವರೆಗೆ ನಡೆಯಲಿದೆ ಹದಿನಾಲ್ಕು ಹಳ್ಳಿ ಗ್ರಾಮದೇವತೆ ಶ್ರೀ ಹುಚ್ಚಮ್ಮದೇವಿ ಹಾಗೂ ಶ್ರೀ ಕಲ್ಲೇಶ್ವರ ದೇವರ ಜಾತ್ರಾ ರಥೋತ್ಸವ.

ಪ್ರತಿದಿನ ಒಂದೊಂದು ರೀತಿಯ ಪುಷ್ಪಾಲಂಕರ, ವಾದ್ಯಗೋಷ್ಠಿ ಇಲ್ಲಿಯ ವಿಶೇಷ. ಜಾತ್ರೆಯ ದಿನಗಳಲ್ಲಿ ಗ್ರಾಮದ ದೇವಾಲಯಗಳು, ರಾಜಬೀದಿಗಳು ತಳಿರುತೋರಣ ವಿದ್ಯುದ್ದೀಪಗಳಿಂದ ಸಾಲಂಕೃತಗೊಂಡು ಬೆಳಗುತ್ತವೆ. ಜಾನಪದ ಕಲೆಗಳಾದ ಸೋಮನ ಕುಣಿತ, ವೀರಗಾಸೆ, ನಂದಿಧ್ವಜ, ಡೊಳ್ಳು- ನಗಾರಿ, ಕೊಂಬು ಕಹಳೆ ಅರೆನಾದಸ್ವರ ವಾದ್ಯಗಳು ಝೇಂಕರಿಸುತ್ತವೆ. 

ಶ್ರೀ ಕಲ್ಲೇಶ್ವರ ಸ್ವಾಮಿಯ ಅಗ್ನಿಕೊಂಡೋತ್ಸವದೊಂದಿಗೆ ಜಾತ್ರೆಯ ಆರಂಭ. ರುದ್ರಾಭಿಷೇಕ, ಅಮ್ಮನವರಿಗೆ ಕುಂಕುಮಾರ್ಚನೆಯಾದ ನಂತರ ಭಕ್ತಾದಿಗಳಿಗೆ ಅನ್ನದಾಸೋಹ. ಇದಾದ ಮರುದಿನ ದೇವಿಯ ಜಾತ್ರೆ ಪ್ರಾರಂಭ. ಕಂಕಣಧಾರಿಣಿಯಾಗಿ ದೇವಿ ಕಂಗೊಳಿಸುತ್ತಾಳೆ. ಧ್ವಜಾರೋಹಣದೊಂದಿಗೆ ದೇವಿಯ ಪ್ರವೇಶ. ಹದಿನಾಲ್ಕು ಹಳ್ಳಿಗಳ ಸುಮಂಗಲಿಯರಿಂದ ಆರತಿ ನಡೆಯುತ್ತದೆ. ನಂತರ ನಡೆಯುವುದು ಸಿಡಿ ಉತ್ಸವ, ಕಳಸೋತ್ಸವ.

ಹುಚ್ಚಮ್ಮದೇವಿ ದೇವಾಲಯವೇ ವಿಶೇಷತೆಯಿಂದ ಕೂಡಿದೆ. ಪ್ರಶಾಂತ ವಾತಾವರಣದಲ್ಲಿ ಕೆರೆಯ ದಡದಲ್ಲಿದೆ ಈ ದೇಗುಲ. ದೇವಾಲಯ ಸಮೀಪಿಸುತ್ತಿದ್ದಂತೆ ರಾಜಗೋಪುರ, ರಥಬೀದಿ ತೂಗುಯ್ಯಾಲೆಗಳು ಎದ್ದು ಕಾಣುತ್ತವೆ. ಚೋಳರ ಕಾಲದಲ್ಲಿ ನಿರ್ಮಿತವಾದ ಬೃಹದಾಕಾರದ ಬಸವ, ಗಣೇಶ ಮೂರ್ತಿಗಳು ಇಲ್ಲಿವೆ. ಚೆನ್ನಕೇಶವ, ಆಂಜನೇಯ, ರಾಮೇಶ್ವರ, ಮಲ್ಲಿಕಾರ್ಜುನ, ವೀರಭದ್ರ ಸೇರಿದಂತೆ ಹಲವು ದೇವಾಲಯಗಳೂ ಸನಿಹದಲ್ಲಿವೆ.ಪ್ರತಿಯೊಂದು ಹಬ್ಬ ಹರಿದಿನ, ಅಮಾವಾಸ್ಯೆ- ಹುಣ್ಣಿಮೆಗಳಲ್ಲಿ ಇಲ್ಲಿ ವಿಶೇಷ ಪೂಜೆ.

ಈ ಕ್ಷೇತ್ರ ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿದೆ. ತಿಪಟೂರಿನಿಂದ ಹುಳಿಯಾರು ಹಡಗಲಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು 7 ಕಿ.ಮೀ ಸಾಗಿದರೆ ಹೊನ್ನವಳ್ಳಿ ಬಳುವನೇರಳು ಮಾರ್ಗದ ರಸ್ತೆಯಲ್ಲಿ 2 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.