ADVERTISEMENT

ಭಟ್ಕಳದ ಭಕ್ಷ್ಯಗಳು

ಕೃಷ್ಣಿ ಶಿರೂರ
Published 11 ಜೂನ್ 2018, 19:30 IST
Last Updated 11 ಜೂನ್ 2018, 19:30 IST
ಭಟ್ಕಳದ ಚೌಕ್‌ ಬಜಾರ್‌ನಲ್ಲಿ ರಮ್ಜಾನ್‌ ಇಫ್ತಾರ್‌ಗೆ ಸಿದ್ಧಪಡಿಸಲಾದ ತರಹೇವಾರಿ ತಿನಿಸುಗಳು
ಭಟ್ಕಳದ ಚೌಕ್‌ ಬಜಾರ್‌ನಲ್ಲಿ ರಮ್ಜಾನ್‌ ಇಫ್ತಾರ್‌ಗೆ ಸಿದ್ಧಪಡಿಸಲಾದ ತರಹೇವಾರಿ ತಿನಿಸುಗಳು   

ಭಟ್ಕಳದ ರಮ್ಜಾನ್ ಮಾರ್ಕೆಟ್‌ ನೋಡುವ ಹಂಬಲದಿಂದ ಅಲ್ಲಿನ ರಾಘವೇಂದ್ರ ಭಟ್ಟರನ್ನು ಕೇಳಿದೆ–ಎಷ್ಟು ಹೊತ್ತಿಗೆ ಬಂದರೆ ರಮ್ಜಾನ್ ಮಾರ್ಕೆಟ್‌ ನೋಡಲು ಸಿಗಬಹುದು ಎಂದು. ‘ಮಧ್ಯಾಹ್ನ ಮೂರೂವರೆಗೆ ಬನ್ನಿ’ ಎಂದರು. ಅವರ ಆಣತಿಯಂತೆ ಭಟ್ಕಳ ಪೇಟೆ ತಲುಪಿದ್ದೆ. ಅಲ್ಲಿಂದ ಸಾಹಿಲ್‌ ಆನ್‌ಲೈನ್‌ನ ಮುಬಶೀರ್‌ ಹಲ್ಲಾರೆ ಅವರೊಡಗೂಡಿ ಪ್ರಮುಖ ರಮ್ಜಾನ್ ಮಾರ್ಕೆಟ್‌ – ಚೌಕ್‌ ಬಜಾರ್‌ಗೆ ಬಂದಾಗ ಗಂಟೆ ನಾಲ್ಕಾಗಿತ್ತು.

ಅದಾಗಲೇ ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ಇಟ್ಟಿದ್ದ ಟೇಬಲ್‌ಗಳ ಮೇಲೆ ತಿಂಡಿ ತಿನಿಸುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುತ್ತಿದ್ದರು. ದೈನಂದಿನ ರೋಜಾ ಅಂತ್ಯಗೊಳಿಸಿ ಇಫ್ತಾರ್‌ ಸಂದರ್ಭದಲ್ಲಿ ಸೇವಿಸಲು ಯೋಗ್ಯ ತಿನಿಸುಗಳ ಆಕರ್ಷಕ ಲೋಕವೇ ಅಲ್ಲಿತ್ತು. ಒಂದೆರಡಲ್ಲ; 40ಕ್ಕೂ ಹೆಚ್ಚಿನ ವೈವಿಧ್ಯಮಯ ತಿನಿಸುಗಳು ಅಲ್ಲಿ ಗ್ರಾಹಕರನ್ನು, ದಾರಿ ಹೋಕರನ್ನು ಕೈಬೀಸಿ ಸೆಳೆಯುತ್ತಿದ್ದವು. ಅವುಗಳ ಸ್ವಾದ, ಬಣ್ಣ, ಆಕಾರ ಬಾಯಲ್ಲಿ ನಿರೂರಿಸದೇ ಇರದು!

ಸಸ್ಯಹಾರಿ (ವೆಜ್‌), ಮಾಂಸಹಾರಿ (ನಾನ್‌ವೆಜ್‌) ಎರಡೂ ಬಗೆಯ ಖಾದ್ಯಗಳೂ ಅಲ್ಲಿದ್ದವು. ವೆಜ್‌ನಲ್ಲಿ ಸಮೋಸ, ಬಟಾಟೆ ವಡೆ, ಆಲೂ ಬಜ್ಜಿ, ಮಿರ್ಚಿ, ಚಟ್ಟಂಬೊಡೆ, ಈರುಳ್ಳಿ ಬಜ್ಜಿ, ಅಪ್ಪಂ, ಹೋಳಿಗೆ (ಒಬ್ಬಟ್ಟು), ಸಿರ್‌ಕುಂಬಾ, ಕಚೋರಿ, ನೀರದೋಸೆ, ಸಿಹಿ ಪಾಯಸ, ಖಾರ ಪಾಯಸ, ರಾಯತ,
ಕಿಚಡಿ, ಚೈನಾ ಬಟಾನಿ, ಚೋಲೆ ಮಸಾಲ, ಮಸಾಲ ರೋಟಿ. ನಾನ್‌ವೆಜ್‌ನಲ್ಲಿ ಚಿಕನ್‌, ಮಟನ್‌, ಮೀನು, ಚಿಪ್ಪಿಕಲ್ಲು, ನೀಲಿಕಲ್ಲು, ಸಿಗಡಿ ಬಳಸಿ ಸಿದ್ಧಪಡಿಸಿದ ಖಾದ್ಯಗಳಿದ್ದವು. ಎಗ್‌ ವಡಾ, ಚಿಪ್ಪಿ ಉಂಡೆ, ಪ್ಯಾಬಿಸ್‌, ಶಾಮಿ, ಪತ್ರಿ, ಧಮ್‌ ಬಿರಿಯಾನಿ, ಚಿಕನ್‌ ಸಮೋಸ, ಫಿಸ್‌ ಸಮೋಸ, ತಂದೂರಿ ಚಿಕನ್‌, ಮಸಾಲಾ ವಡೆ, ಅಪ್ಪಾಗುಡಿ, ಚೈನೀಸ್‌ ರೋಲ್‌, ಎಗ್‌ಪಿಜ್ಜಾ, ಬರ್ಗರ್‌ ಬಾಯಲ್ಲಿ ನೀರೂರಿಸುವಂತಿದ್ದವು.

ADVERTISEMENT

ಇಷ್ಟೆಲ್ಲ ತರಹೇವಾರಿ ಖಾದ್ಯಗಳಲ್ಲಿ ಹೆಚ್ಚು ಬೇಡಿಕೆ ಇದ್ದಿದ್ದು ಸಮೋಸಗೆ ಮಾತ್ರ. ಅದನ್ನು ಬಿಟ್ಟು, ಆಲೂ ಮತ್ತು ಕಾಂದಾ ಬಜ್ಜಿಗೆ ಡಿಮ್ಯಾಂಡ್. ಭಟ್ಕಳ ಪಟ್ಟಣದಲ್ಲಿರುವ ಮೂರು ಅಂಗಡಿಗಳಿ
ಗಾಗಿ ನಿತ್ಯ ಒಂದು ಲಕ್ಷ ಸಮೋಸಗಳನ್ನು ಫಾಹಿಮ್‌ ದರ್ಬಾರ್‌ ಹೋಟೆಲ್‌ನಿಂದ ಸಿದ್ಪಡಿಸಲಾಗುತ್ತದೆ. ಇದರ ಹೊರತಾಗಿ 38 ಬಗೆಯ ಪ್ರತಿ ತಿನಿಸುಗಳನ್ನು 100ರಿಂದ 150ರ ಪ್ರಮಾಣದಲ್ಲಿ ತಯಾರಿಸುತ್ತಾರೆ. ಭಟ್ಕಳದ ರಮ್ಜಾನ್ ಮಾರುಕಟ್ಟೆಯ ಆಳ ಅಗಲವನ್ನು ಸ್ಪಷ್ಟವಾಗಿ ಅರಿತಿ
ರುವ ಫಾಹಿಮ್‌ ಕಳೆದ 10 ವರ್ಷಗಳಿಂದ ರಮ್ಜಾನ್ ಮಾಸದಲ್ಲಿ ಭರ್ಜರಿ ವ್ಯಾಪಾರ ನಡೆಸುತ್ತಾರೆ. ಈ ಮಾಸ ಪೂರ್ತಿ ₹10 ರೂಪಾಯಿಗೆ ಮೂರು ಸಮೋಸದ ಆಫರ್ ಕೊಡ್ತಾರೆ. ಉಳಿದ ದಿನಗಳಲ್ಲಿ ₹10ಕ್ಕೆ 2 ಸಮೋಸ. ಧಮ್ ಬಿರಿಯಾನಿ + ತಂದೂರಿ ಚಿಕನ್ ಒನ್‌ ಪೀಸ್‌ ಪ್ಯಾಕೇಜ್‌ಗೆ ₹ 160 ನಿಗದಿಪಡಿಸಿದ್ದಾರೆ. ಉಳಿದ ದಿನಗಳಲ್ಲಿ ಇದರ ದರ ₹ 200. ಒಂದು ತಿಂಗಳ ವಹಿವಾಟು ಬರೋಬ್ಬರಿ ₹15 ಲಕ್ಷ. ಅದರಲ್ಲಿ ಶೇ 40 ಭಾಗ ಲಾಭವಾಗಲಿದೆ ಎನ್ನುತ್ತಾರೆ ಹೋಟೆಲ್‌ನ ಮಾಲೀಕ ಫಾಹಿಮ್‌.

ನಿತ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗುವ ಈ ಖಾದ್ಯಗಳ ಮಾರಾಟ ಇಫ್ತಾರ್‌ ಸಮಯದವರೆಗೂ ಮುಂದುವರೆಯುತ್ತದೆ. ಸಂಜೆ 7ಗಂಟೆ ವೇಳೆಗೆ ತಿನಿಸುಗಳೆಲ್ಲವೂ ಖಾಲಿ ಖಾಲಿ. ಮುಸ್ಲಿಮರಲ್ಲದೆ ಇತರರೂ ಇಲ್ಲಿನ ರಮ್ಜಾನ್ ತಿನಿಸುಗಳನ್ನು ಮುಗಿಬಿದ್ದು ಖರೀದಿಸುವುದು ವಿಶೇಷ. ಭಟ್ಕಳ ಪಟ್ಟಣದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 80ರಷ್ಟು ಮುಸ್ಲಿಮರಿದ್ದು, ಹೆಚ್ಚಿನವರು ಉಪವಾಸ ಅಂತ್ಯಗೊಳಿಸುವಾಗ ಕರ್ಜೂರ ಸೇವಿಸಿ ನಂತರ ಮಾರುಕಟ್ಟೆಯಲ್ಲಿರುವ ಖಾದ್ಯವನ್ನು ಬಳಸುತ್ತಾರೆ.

ಇಸ್ಲಾಂ ಧರ್ಮದ ಐದು ಕಡ್ಡಾಯ ನಿಯಮಗಳಲ್ಲಿ ಉಪವಾಸವೂ ಒಂದು. ರಮ್ಜಾನ್ ಮಾಸದ ರೋಜಾ ಪ್ರಾಪ್ತ ವಯಸ್ಸಿನ ಮುಸ್ಲಿಂ ಮಹಿಳೆ, ಪುರುಷರಿಗೆ ಕಡ್ಡಾಯ. ಕೆಲ ಷರತ್ತುಗಳಡಿ ರೋಜಾದಿಂದ ಹಲವರಿಗೆ ವಿನಾಯ್ತಿಯೂ ಇರಲಿದೆ. ಅದರಲ್ಲೂ ಭಟ್ಕಳದ ಮುಸ್ಲಿಮರು ಕಟ್ಟಾ ಸಂಪ್ರದಾಯವಾದಿಗಳಾಗಿದ್ದು, ರಮ್ಜಾನ್ ಉಪವಾಸವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.