ADVERTISEMENT

ಮಳೆಗಾಲಕ್ಕೆ ಸಜ್ಜಾಗುವ ಗಡಿಬಿಡಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST

‘ಸೌದೆಗೆ ಹೋಗು, ಒಣ ಹುಲ್ಲು, ಗೊಬ್ಬರ ಹೊಡಿ, ಒಣ ಹೂಟಿ ಮಾಡು, ಕಟ್ಟಿಗೆ ಕಡಿ ಅಂತಾರೆ ಸಾಹುಕಾರ್ರು. ನೀವು ನೋಡಿದ್ರೆ ಮಾವಿನ ಮಿಡಿ ಕೊಯ್ಯಿ, ಹಲಸಿನ ಕಾಯಿ ಕೆಡವು, ಅಕ್ಕಿ ಮಾಡಿಸಿಲ್ಲ, ಪೇಟೆ ದಿನಸಿ ಬಂದಿಲ್ಲ ಎಂದು ಗಲಾಟೆ ಮಾಡುತ್ತೀರಿ. ಯಾವುದು ಮಾಡ್ಲಿ? ನಂಗೆ ಎರಡೇ ಕೈ ಇರೋದು. ಯಾವ ಕೆಲಸ ಮಾಡಲಿ? ಇದು ಕೆಲಸಗಾರ ಹಾಲಪ್ಪನ ಗೊಣಗಾಟ.  

 ಏಪ್ರಿಲ್ ಬಂತೆಂದರೆ ಮಲೆನಾಡಿನ ಹಳ್ಳಿಗಳ ಜನರಿಗೆ ಬರಲಿರುವ ಮುಂಗಾರಿಗೆ ಸಜ್ಜಾಗುವ ಗಡಿಬಿಡಿ. ಮಳೆಗಾಲದ ಆರು ತಿಂಗಳು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಸಂಗ್ರಹಿಸುವುದರ ಜತೆಗೆ ಬೇಸಾಯದ ಕೆಲಸವನ್ನು ನಿಭಾಯಿಸಬೇಕು. ಮಳೆಯಿಂದ ರಕ್ಷಣೆ ಪಡೆಯಲು ಮನೆಯನ್ನು ಭದ್ರಪಡಿಸಬೇಕು. ಒಂದೇ, ಎರಡೇ ಕೈತುಂಬ ಕೆಲಸ. ಯಾವುದನ್ನು ಮೊದಲು ಮಾಡಲಿ ಎಂಬ ಗಡಿಬಿಡಿ. ಎಲ್ಲ ಕೆಲಸಗಳು ಈ ಎರಡು ತಿಂಗಳಲ್ಲಿ ಮುಗಿಯಬೇಕು.

ಮಳೆಗಾಲ ಆರಂಭವಾಗುವವರೆಗೆ ಮನೆಯ ಯಜಮಾನಿ ಹಾಗೂ ಕೆಲಸದವರಿಗೆ ಬಿಡುವೇ ಇಲ್ಲ. ಹಪ್ಪಳ-ಸಂಡಿಗೆ ಹಾಕಬೇಕು. ಮಿಡಿ ಮಾವಿನಕಾಯಿ, ಕವಳಿಕಾಯಿ, ಅರಳಮರಳ ಕಾಯಿ ತರಸಿ ಉಪ್ಪು-ಕಾರ ಹಾಕಿ ಉಪ್ಪಿನಕಾಯಿ ಮಾಡಿ ಜಾಲಿಯ ಮುಚ್ಚಳಕ್ಕೆ ಮಣ್ಣು ಮೆತ್ತಿ ಗಪ್ಪ್ ಮಾಡಬೇಕು. ಇದರ ನಡುವೆಯೇ ಆರು ತಿಂಗಳಿಗೆ ಬೇಕಾದ ಅಕ್ಕಿ, ಒಣ ಮೆಣಸು, ಹುಣೆಸೇ ಹಣ್ಣು, ಡಬ್ಬಿ ಬೆಲ್ಲ. ಬೇಳೆ- ಕಾಳುಗಳನ್ನು ಚೊಕ್ಕ ಮಾಡಿ ಒಣಗಿಸಿ ಡಬ್ಬಗಳಲ್ಲಿ ತುಂಬಿಡಬೇಕು.

ಜಡಿ ಮಳೆಗೆ ಹೆದರಿ ಮನೆಯೊಳಗೆ ಸೇರಿಕೊಂಡವರಿಗೆ ಬಿಸಿ ಬಿಸಿ ಹಪ್ಪಳದ ಕುರುಕುಲು ತಿಂಡಿ ಇಲ್ಲದಿದ್ದರೆ ಹೇಗೆ? ಹಲಸಿನ ಹಪ್ಪಳ ಮಲೆನಾಡಿಗರ ಕುರುಕುಲು ತಿಂಡಿ. ಹಲಸಿನ ಹಪ್ಪಳ ಮಾಡುವುದು ಎಂದರೆ ಮನೆ ಮಂದಿಗೆಲ್ಲಾ ಕೈತುಂಬಾ ಕೆಲಸ. ಮರದಿಂದ ಹಲಸಿನ ಕಾಯಿ ಕೆಡವಿ, ಕತ್ತಿಯಿಂದ ಹೆಚ್ಚುವುದು ಮನೆಯಾಳಿನ ಕೆಲಸ. ಮೇಣಭರಿತ ‘ತೊಳೆ’ ಬಿಡಿಸುವುದು ಮಕ್ಕಳದ್ದಾದರೆ ಬೇಯಿಸಿ, ಲಟ್ಟಿಸಿ ಬಿಸಿಲಿಗೆ ಹಾಕಿ ಕೆಡದಂತೆ ಡಬ್ಬಿ ತುಂಬುವ ಕೆಲಸ ಹೆಂಗಸರದ್ದು. 

ಮನೆಗಳ ರಕ್ಷಣೆ
ಆರು ತಿಂಗಳು ಮುಂಗಾರು ಮಳೆ, ಗಾಳಿ ಹೊಡೆತಕ್ಕೆ ಮನೆ ರಕ್ಷಣೆ ಕೆಲಸ ಒಂದು ಹರ ಸಾಹಸವೇ ಸೈ. ಗಾಳಿ- ಮಳೆ ಇರಚಲು ತಪ್ಪಿಸಲು ಮನೆ ಸುತ್ತ ಅಡಿಕೆ ಸೋಗೆ, ತೆಂಗಿನ ಮಡ್ಲ್ ಇಲ್ಲವೆ ಪ್ಲಾಸ್ಟಿಕ್‌ನಿಂದ ಮರೆ ಕಟ್ಟಬೇಕು. ಹಾಗೇ ಜಾನುವಾರುಗಳ ಕೊಟ್ಟಿಗೆ ರಿಪೇರಿ ಮಾಡಬೇಕು. ಹಳ್ಳದ ದಂಡೆ ಸವರಿ, ಕಾಲುಸಂಕ ಕಟ್ಟಿ ಮನೆ ಕಡೆಗೆ ನುಗ್ಗುವ ನೀರನ್ನು ಬೇರೆಡೆಗೆ ತಿರುಗಿಸಬೇಕು.

ಎತ್ತಿನಗಾಡಿ, ಅಡಿಕೆ ಚಪ್ಪರ ಕಟ್ಟಿಟ್ಟು, ಅಂಗಳದ ಮಣ್ಣಿನ ಸವಕಳಿ ತಡೆಯಲು ಅಡಿಕೆ ಸಿಪ್ಪೆ ಅಥವಾ ಮರಳು ಹಾಕುವ ಕೆಲಸ ಮಾಡಬೇಕು.

ಪಣತ-ಪಥಾಸ್-ನಾಗೊಂದಿಗೆ ಫುಲ್
ಒಕ್ಕಲು ಮಾಡಿದ ಭತ್ತ ದೊಡ್ಡ ಮರದ ಪಣತ ಸೇರಿಸಿ, ಮಳೆಗಾಲಕ್ಕೆ ಬೇಕಾಗುವಷ್ಟು ಅಕ್ಕಿ ಮಾಡಿಸಿ ಮರದ ಪಥಾಸ್ ಇಲ್ಲವೆ ಪಣತಕ್ಕೆ ತುಂಬಿಸಬೇಕು. ಬೆಲ್ಲದ ಗಡಿಗೆ ಇಲ್ಲವೆ ಡಬ್ಬಿ ಮನೆಯ ಮೇಲಿನ ನಾಗೊಂದಿಗೆಗೆ ಏರಿಸುವುದು ಸವಾಲಿನ ಕೆಲಸ. ಸ್ವಲ್ಪ ಎಡವಿದರೆ ಮನೆ-ಮೈ ತುಂಬ ಬೆಲ್ಲ. ಇಲಿ-ಹೆಗ್ಗಣ ಕಾಟ ತಪ್ಪಿಸಲು ಮನೆಯ ತೊಲೆಗೆ ಅಡ್ಡಲಾಗಿ ಬಾಳೆದಾರದಿಂದ ಕಟ್ಟಿದ ಬಣ್ಣಸೌತೆ(ಮೊಗೆ), ಕುಂಬಳ, ಚೀಣಿಕಾಯಿ ಕಲರ್‌ಫುಲ್ ಸಾಲುಗಳು ನೋಡಲಿಕ್ಕೆ ಸುಂದರ. ಇವುಗಳ ಬೀಜಗಳನ್ನು ಬೂದಿಯೊಂದಿಗೆ ಬೆರೆಸಿ ಗೋಡೆಗೆ ಬೆರಣಿಯ ತರ ಹೊಡೆದು ರಕ್ಷಿಸುವ ಕೆಲಸ ಮನೆಯ ಯಜಮಾನತಿಯದು.   

ಕೃಷಿ ಲೋಕ
ಏಪ್ರಿಲ್-ಮೇ ತಿಂಗಳು ಮಲೆನಾಡಿನ ರೈತ ಕುಟುಂಬಗಳಿಗೆ ಕೈ ತುಂಬ ಕೆಲಸ. ಮುಂಗಾರಿನ ಆಗಮನಕ್ಕೆ ಮುನ್ನದ ತಯಾರಿ. ವರ್ಷಂಪ್ರತಿ ಮಾಡುವ ಕೆಲಸವಾದರೂ ಒಂದು ಸಣ್ಣ ಲೋಪವಾದರೂ ವರ್ಷವೀಡಿ ಸಮಸ್ಯೆ. ಹದ ಮಳೆ ಬರುವ ಮುನ್ನ ಗದ್ದೆಗೆ ಗೊಬ್ಬರ, ಹುಡಿ ಹೂಟಿ, ಸೊಪ್ಪಿನ ದರಕು ಒಟ್ಟು ಮಾಡಿ ಕುತ್ರೆ (ರಾಶಿ) ಹಾಕುವುದು, ಹುಲ್ಲಿನ ಅಟ್ಟಕ್ಕೆ ಒಣ ಹುಲ್ಲು ಏರಬೇಕು. ನಾಟಿಗಾಗಿ ಕಂಬಳಿ, ಗೊರಬು ತಯಾರಿಯ ಜತೆಗೆ ಆಷಾಢದ ಮಳೆಯ ಜತೆಗೆ ಗಡ ಗಡ ನಡುಗಿಸುವ ಚಳಿ ತಡೆಯಲು ಕಬ್ಬಿನ ಕಾಕಂಬಿಯಿಂದ ಕಳ್ಳಭಟ್ಟಿ ತಯಾರಿಸಿಕೊಳ್ಳುವುದು ಗುಟ್ಟಾಗಿ ಉಳಿದಿಲ್ಲ.

ಈ ಎಲ್ಲಾ ಕೆಲಸಗಳನ್ನು ಮಳೆ ಆರಂಭಕ್ಕೆ ಮೊದಲು ಮಾಡಿ ಮುಗಿಸಬೇಕು. ಸ್ವಲ್ಪ ವಿಳಂಬ ಆದರೂ ತೊಂದರೆ ತಪ್ಪಿದ್ದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.