ADVERTISEMENT

ಮಳೆ ನುಂಗುವ ಹುಲಿಕಲ್...!

ಹೊಸನಗರ ಶ್ರೀಕಂಠ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST
ಮಳೆರಾಯನ ಬಿಡುವಿನ ನಡುವೆ ಒಮ್ಮಮ್ಮೆ ಭೂರಮೆಗೆ ಭಾಸ್ಕರನ ದರ್ಶನ ಭಾಗ್ಯ
ಮಳೆರಾಯನ ಬಿಡುವಿನ ನಡುವೆ ಒಮ್ಮಮ್ಮೆ ಭೂರಮೆಗೆ ಭಾಸ್ಕರನ ದರ್ಶನ ಭಾಗ್ಯ   

ಜೂನ್ ತಿಂಗಳ ಎರಡನೇ ವಾರ ಕಾಲಿಟ್ಟರೆ ಸಾಕು, ಇಲ್ಲಿ ಮುಂಗಾರು ಮಳೆಯ ರೌದ್ರ ನರ್ತನ ಆರಂಭ ಆದಂತೆಯೇ. ಮೊದ ಮೊದಲು ಸೌಮ್ಯವಾಗಿ ತನ್ನ ಮುಂಗಾರ ಮುಮ್ಮೇಳದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ವರುಣದೇವ ದಿನಕಳೆದಂತೆ ಉಗ್ರ ಸ್ವರೂಪಿ ಆಗಿಬಿಡುತ್ತಾನೆ. ಆವರೆಗೂ ಬೇಸಿಗೆಯ ಬರಬಿಸಿಲಿಗೆ ಬಾಡಿ ಬೆಂಡಾಗಿದ್ದ ವನದೇವತೆ, ಮಳೆರಾಯನ ಕೃಪೆಯಿಂದಾಗಿ ಇಡೀ ಕಾನನಕ್ಕೆ ಹಚ್ಚ ಹಸಿರಿನ ಹೊದಿಕೆ ಹೊದಿಸಿದಂತೆ ಕಂಗೊಳಿಸುವುದು ಮಲೆನಾಡಿನ ವಿಶೇಷವೇ. ಸುಮಾರು 3-4 ತಿಂಗಳು ಎಡೆಬಿಡದೇ ಸುರಿವ ಭಾರಿ ಮಳೆಯಿಂದಾಗಿ ಆ ಭಾಗದಲ್ಲೆಲ್ಲಾ ಎಲ್ಲಿ ನೋಡಿದರೂ ನೀರೇ ನೀರು.
ಧೋ... ಎಂದು ಸುರಿವ ಆ ಭಾರಿ ಮಳೆಗೆ ಕೊಡೆ ಹಿಡಿದರೂ ಅಷ್ಟೇ, ಬಿಟ್ಟರೂ ಅಷ್ಟೇ. ಮೈಯೆಲ್ಲಾ ಬರೀ ಚಳಿ-ಚಳಿ ಮಾತ್ರ. ಇದು ಸ್ಥಳೀಯರಿಗೆ ಮಾಮೂಲಾದರೆ, ಪ್ರವಾಸಿಗರಿಗೆ ಮೈ ಝುಂ ಅನ್ನಿಸುವ ಅನುಭವ.

ಆಗುಂಬೆಯಿಂದ ಹುಲಿಕಲ್‌ಗೆ ಶಿಫ್ಟ್
ಹಿಂದೆ ರಾಜ್ಯದಲ್ಲೇ ಸಿಕ್ಕಾಪಟ್ಟೆ ಮಳೆ ಬೀಳುತ್ತಿದ್ದ ಜಾಗವೀಗ ಬದಲಾಗಿ, ಮಳೆರಾಯ ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿನ ಮಲೆನಾಡ ತವರು ಎಂದೇ ಹೆಸರಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಲಿಕಲ್ ಎಂಬ ಕುಗ್ರಾಮದಲ್ಲಿ ಮನೆ ಮಾಡಿದ್ದಾನೆ ಎಂದರೆ, ಯಾರಾದರೂ ಕ್ಷಣಕಾಲ ಯೋಚಿಸುವ ಸಂಗತಿಯೇ.

ಹಲವು ದಶಕಗಳಿಂದ ಭಾರೀ ಮಳೆ ದಾಖಲಾಗುತ್ತ್ದ್ದಿದ ಕಾರಣ, ದಕ್ಷಿಣದ ಚಿರಾಪುಂಜಿ ಎಂದೇ ಪ್ರಖ್ಯಾತವಾಗಿದ್ದ ಆಗುಂಬೆ ಈಗ ಚಿರಾಪುಂಜಿಯಾಗಿ ಉಳಿದಿಲ್ಲ, ಆ ಸ್ಥಾನವನ್ನು ಹುಲಿಕಲ್ ಎಂಬ ಕುಗ್ರಾಮ ನುಂಗಿಬಿಟ್ಟಿದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗುವುದುಂಟು. ಆದರೆ, ಇದು ಸತ್ಯ. ಇದಕ್ಕೆ ಪ್ರಕೃತಿ ಮಾತೆಯೇ ಈಗ ಉತ್ತರಿಸಿದ್ದಾಳೆ. ಹಲವು ವರ್ಷಗಳಿಂದೀಚೆ ನಿರಂತರವಾಗಿ ಆ ಭಾಗದಲ್ಲಿ ಸುರಿದ ವರ್ಷಧಾರೆಯೇ ಇದಕ್ಕೆ ಸಾಕ್ಷಿ.

ಮಳೆ ಕ್ಷೀಣಿಸುತ್ತಿದೆಯೆ?
ಆಗುಂಬೆಯಿಂದ ಹುಲಿಕಲ್‌ನತ್ತ ಮಳೆರಾಯ ಸಾಗುತ್ತಿದ್ದದ್ದು ಇಂದು ನಿನ್ನೆಯಿಂದಲ್ಲ. 50ರ ದಶಕದಲ್ಲಿಯೇ. ಮಳೆ ದಾಖಲೆಗಳು ಸಹ ಇದನ್ನೇ ಪುಷ್ಟೀಕರಿಸಿವೆ. 70ರ ದಶಕದ ಕೊನೆಯಲ್ಲಿ ಆಗುಂಬೆಯಲ್ಲಿ ಸರಾಸರಿ 7,992 ಮಿ.ಮೀ ಮಳೆಯಾಗಿದ್ದರೆ, ಹುಲಿಕಲ್‌ನಲ್ಲಿ ದಾಖಲಾದ ಮಳೆಯ ಪ್ರಮಾಣ ಸರಾಸರಿ 7762 ಮಿ.ಮೀ.ಗಳು. 2010ಕ್ಕೆ ಆಗುಂಬೆಯಲ್ಲಿನ ಪ್ರಮಾಣ 7,764 ಮಿ.ಮೀ.ಗಳಾದರೆ, ಹುಲಿಕಲ್‌ನಲ್ಲಿ 8,077 ಮಿ.ಮೀ. 2011ರಲ್ಲಿ ಕ್ರಮವಾಗಿ ಮಳೆ ಪ್ರಮಾಣ 7,208 ಮಿ.ಮೀ ಹಾಗೂ 8,341 ಮಿ.ಮೀ. ಒಂದು ದಶಕದಲ್ಲಿ ಆಗುಂಬೆಗಿಂತ ಹುಲಿಕಲ್‌ನಲ್ಲಿ ಸರಾಸರಿ 300 ಮಿ.ಮೀ ಮಳೆ ಹೆಚ್ಚಾಗೇ ಸುರಿದಿರುವುದು, ದಕ್ಷಿಣದ ಚಿರಾಪುಂಜಿ ಪಟ್ಟಕ್ಕೆ ಹುಲಿಕಲ್ ಅರ್ಜಿ ಗುಜರಾಯಿಸಿದಂತೆಯೇ ಆಗಿದೆ.

ಅಂದರೆ, ಆಗುಂಬೆಯಲ್ಲಿ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖ ಆಗುತ್ತಿರುವ ವಿಷಯ ದಟ್ಟ ಕಾನನದ ನಡುವೆ ಸೂರ್ಯಾಸ್ತ ನೋಡುತ್ತಿದ್ದ ಅದೆಷ್ಟೋ ಪರಿಸರಾಸಕ್ತರಿಗೆ ನೋವಿನ ಸಂಗತಿ. ಇನ್ನೊಂದೆಡೆ ರಾಜ್ಯಕ್ಕೆ ವಿದ್ಯುತ್ ಪೂರೈಸಲು ಸವಾಲಾಗಿರುವ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಈ ಭಾಗದ ಚಕ್ರಾ, ಸಾವೆಹಕ್ಲು ಜಲಾಶಯಗಳು ಸೇರಿದಂತೆ ಏಷ್ಯಾ ಖಂಡದ ಪ್ರಥಮ ಭೂಗರ್ಭ ಜಲ ವಿದ್ಯುತ್‌ಗಾರ ಎಂದೇ ಹೆಸರಾದ ವರಾಹಿ ಜಲ ವಿದ್ಯುತ್ ಯೋಜನೆಯ ಮಾಣಿ ಜಲಾಶಯ ಪ್ರತಿ ವರ್ಷ ಮೈದುಂಬುವುದು ಪ್ರಕೃತಿ ಮಾತೆಯೇ ಜನತೆಗೆ ಹಾಲು-ಜೇನು ಉಣಿಸಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.