ADVERTISEMENT

ಮೈಲಾರ ಮಲ್ಲಣ್ಣ ದೇಗುಲ

ಉ.ಮ.ಮಹೇಶ್
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST

 ಬೀದರ್ ಮತ್ತು ಭಾಲ್ಕಿ ತಾಲ್ಲೂಕು ಗಡಿಯಲ್ಲಿ ಬೀದರ್ ನಗರದಿಂದ 15 ಕಿ.ಮೀ. ದೂರದಲ್ಲಿ ಇರುವ ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಲ್ಲಿ ದೊಡ್ಡ ಸಂಖ್ಯೆಯ ಭಕ್ತರಿದ್ದಾರೆ.

ಈ ದೇವರು ಕರ್ನಾಟಕ ಮತ್ತು ಆಂಧ್ರದ ಭಕ್ತರಿಗೆ ಮೈಲಾರ ಮಲ್ಲಣ್ಣನಾದರೆ ಮಹಾರಾಷ್ಟ್ರದ ಭಕ್ತರಿಗೆ ಖಂಡೋಬಾ. ಜಾತಿಗಳನ್ನು ಮೀರಿ ಜನ ಇಲ್ಲಿಗೆ ಬಂದು ಭಕ್ತಿ ಸಮರ್ಪಿಸಿದರೂ, ಈ ಭಾಗದಲ್ಲಿ ಗೊಂಡ ಎಂದೇ ಗುರುತಿಸುವ ಕುರುಬ ಸಮುದಾಯದವರು ಹೆಚ್ಚು ಬರುತ್ತಾರೆ.

ಮೈಲಾರ ಮಲ್ಲಣ್ಣ ಅಥವಾ ಖಂಡೋಬಾ ದೇವರು ಭಗವಾನ್ ಈಶ್ವರನ ಇನ್ನೊಂದು ರೂಪ. ಜನರಿಗೆ ಕಿರುಕುಳ ನೀಡುತ್ತಿದ್ದ ಮಣಿಕಂಠ ಮತ್ತು ಮಲ್ಲ ಎಂಬ ಅಸುರರನ್ನು ಸಂಹರಿಸಲು ಮಾರ್ತಾಂಡ ಭೈರವನ ರೂಪ ತಳೆದ ಶಿವ ಬಳಿಕ ಇಲ್ಲಿಯೇ ಮೈಲಾರ ಮಲ್ಲಣ್ಣನಾಗಿ ನೆಲೆಯೂರಿದ ಎಂಬುದು ಕೇಳಿಬರುವ ನಂಬಿಕೆ.

ಸಾಮಾನ್ಯವಾಗಿ ಭಾನುವಾರ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಪ್ರತಿ ವರ್ಷ ಡಿಸೆಂಬರ್‌ನ ಎಳ್ಳಮಾವಾಸ್ಯೆ ಸಂದರ್ಭದಲ್ಲಿ ತಿಂಗಳು ಕಾಲ ಹಬ್ಬ ನಡೆಯುತ್ತದೆ. ಉಳಿದಂತೆ ಆಗಾಗ್ಗೆ ಇಲ್ಲಿ ಜಾನುವಾರುಗಳ ಜಾತ್ರೆ ಇರುತ್ತದೆ.

ಇಲ್ಲಿ ಸಾಕಷ್ಟು ಮದುವೆಗಳು ನಡೆಯುತ್ತವೆ. ಮುಜರಾಯಿ ವ್ಯಾಪ್ತಿಗೆ ಒಳಪಟ್ಟಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ. ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯದ ಸಮಸ್ಯೆ ಇದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದರೂ ಒಳ್ಳೆ ಹೋಟೆಲ್‌ಗಳು ಹತ್ತಿರದಲ್ಲಿ ಇಲ್ಲ. ಇದರ ಬಳಿಯೇ ಗಾಯಮುಖ, ಶನಿ ಮಹಾತ್ಮ, ಹೊನ್ನಿಕೇರಿ ಸಿದ್ದೇಶ್ವರ ದೇಗುಲಗಳಿವೆ. ಖಾಸಗಿ ವಾಹನದಲ್ಲಿ ಹೋದರೆ ಇವೆಲ್ಲದರ ದರ್ಶನ ಮಾಡಬಹುದು.

ಪೂಜೆ, ವಿಶೇಷ ಪೂಜೆಗಳಿಗೆ ನಿಗದಿತ ಸಮಯ ಇಲ್ಲ. ಭಾಲ್ಕಿ ರಸ್ತೆಯಲ್ಲಿ ಬೀದರ್ ನಗರಕ್ಕೆ ಹತ್ತಿರದಲ್ಲಿ ಇರುವುದರಿಂದ ರಸ್ತೆ, ಬಸ್ ಸಂಪರ್ಕ ಚೆನ್ನಾಗಿದೆ. ಹೀಗಾಗಿ ಸುಗಮ, ಸುಲಲಿತ ಭೇಟಿ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.