ADVERTISEMENT

ಶಿಕ್ಷಣ ಕಾಶಿ

ಶ್ರೀಪಾದ ಯರೇಕುಪ್ಪಿ
Published 26 ಅಕ್ಟೋಬರ್ 2010, 18:30 IST
Last Updated 26 ಅಕ್ಟೋಬರ್ 2010, 18:30 IST


ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ, ಶಿಕ್ಷಣ ಕಾಶಿ ಇತ್ಯಾದಿ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿರುವ, ಅತ್ತ ಪೂರ್ಣ ಮಲೆನಾಡೂ ಅಲ್ಲದ, ಇತ್ತ ಬಯಲುಸೀಮೆಯೂ ಅಲ್ಲದ ಧಾರವಾಡ ಕರ್ನಾಟಕದ ವಿಶಿಷ್ಟ ಜಿಲ್ಲೆ.ಧಾರವಾಡದ ಹೆಸರು ಹೇಳುತ್ತಿದ್ದಂತೆ ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಚಿಂತಕರು, ಹೋರಾಟಗಾರರು ನೆನಪಾಗುತ್ತಾರೆ. ಬದುಕಿನ ಇಳಿ ಸಂಜೆಯನ್ನು ನೆಮ್ಮದಿಯಿಂದ ಕಳೆಯಲು ಬಯಸುವ ನಿವೃತ್ತರ ಸ್ವರ್ಗ ಎಂಬ ಹೆಸರು ಧಾರವಾಡಕ್ಕಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳ ಉನ್ನತ ಶಿಕ್ಷಣದ ಕೇಂದ್ರಸ್ಥಾನ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ  ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯಗಳು ಸೇರಿದಂತೆ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಧಾರವಾಡಕ್ಕೆ ಶಿಕ್ಷಣ ‘ಕಾಶಿ’ ಎಂಬ ಹೆಸರನ್ನು ಸಾರ್ಥಕ ಮಾಡಿವೆ.

 ಬೇಸಾಯ ಜಿಲ್ಲೆಯ ಪ್ರಧಾನ ಕಸುಬು. ಜೊತೆಗೆ ವ್ಯಾಪಾರಕ್ಕೂ ಹೆಸರುವಾಸಿ. ಗುಣಮಟ್ಟದ ಹತ್ತಿ ಬೆಳೆಯುವುದಕ್ಕೂ ಜಿಲ್ಲೆ ಹೆಸರಾಗಿದೆ.ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಕೇಂದ್ರವಾಗಿ ಬಹಳ ಹಿಂದಿನಿಂದ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ಹತ್ತಿ ಗಿರಣಿಗಳು ಇತಿಹಾಸದ ಪುಟ ಸೇರಿವೆ.

ಧಾರವಾಡಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿನ ದುರ್ಗಾದೇವಿ ದೇವಸ್ಥಾನದಲ್ಲಿರುವ ಕ್ರಿ.ಶ. 1117ರ ಕನ್ನಡ ಶಾಸನದಲ್ಲಿ ‘ಧಾರವಾಡ’ ಎಂಬ ಹೆಸರಿದೆ. ಧಾರವಾಡ ಮಲೆನಾಡು ಮತ್ತು ಬಯಲುಸೀಮೆಯ ನಡುವೆ ಹಾದು ಹೋಗುತ್ತಿದ್ದ ಸರಕುಗಳ ಸುಂಕ ಸಂಗ್ರಹಕ್ಕೆ ದ್ವಾರದಂತೆ ಇತ್ತು. ಬ್ರಿಟಿಷರು ಧಾರವಾಡವನ್ನು ಧಾರವಾರ್ ಎಂದು ಕರೆದರು. ಈಗ ಧಾರವಾಡ ಎಂದೇ  ಪ್ರಸಿದ್ಧಿ. ಮರಾಠರು ದಕ್ಷಿಣ ಭಾರತದ ಮೇಲೆ ದಾಳಿ ಮಾಡಿದಾಗಲೆಲ್ಲ ಈ ಜಿಲ್ಲೆ ಹೆದ್ದಾರಿಯಂತೆ ಬಳಕೆಯಾಗುತ್ತಿತ್ತು.10-12ನೇ ಶತಮಾನದಲ್ಲಿ ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, 1573ರಲ್ಲಿ ವಿಜಾಪುರದ ಸುಲ್ತಾನರು, 1586ರಲ್ಲಿ ಮೊಗಲರು, 1686ರಲ್ಲಿ ವಿಜಾಪುರ ಮೊಗಲರ ಆಡಳಿತಕ್ಕೆ ಧಾರವಾಡ

ಒಳಪಟ್ಟಿತ್ತು. 1719ರಲ್ಲಿ ಧಾರವಾಡವನ್ನು ಮೊಗಲ ಚಕ್ರವರ್ತಿಯಿಂದ ಮರಾಠರು ಪಡೆದರು. ನಂತರ ಮರಾಠಾ ಸರದಾರರು ಪೇಶ್ವೆಗಳ ಅಧೀನದಲ್ಲಿ ಆಡಳಿತ ನಿರ್ವಹಿಸಲು ಆರಂಭಿಸಿದರು. 1818 ರಿಂದ ಜಿಲ್ಲೆ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.ಬ್ರಿಟಿಷರ ಅಡಳಿತಾವಧಿಯಲ್ಲಿ ಧಾರವಾಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. 1830ರಲ್ಲಿ ಧಾರವಾಡ ಜಿಲ್ಲೆ ರಚಿಸಿ ಮುಂಬೈ ಪ್ರಾಂತ್ಯಕ್ಕೆ ಸೇರಿಸಲಾಯಿತು. ಈಗಿನ ಬೆಳಗಾವಿ, ವಿಜಾಪುರ, ಸೊಲ್ಲಾಪುರ (ದಕ್ಷಿಣ ಮರಾಠಾ ಪ್ರಾಂತ್ಯ) ಜಿಲ್ಲೆಗಳ ಹಲವು ಪ್ರದೇಶಗಳು ಅಂದಿನ ಧಾರವಾಡ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು.

ಬ್ರಿಟಿಷರ ಆಗಮನದ ನಂತರ ಶಿಕ್ಷಣ, ಸಾರಿಗೆ, ವೈದ್ಯಕೀಯದ ಕಡೆಗೆ ಹೆಚ್ಚಿನ ಗಮನ ನೀಡಲಾಯಿತು. ಅದುವರೆಗೆ ಧಾರವಾಡದಲ್ಲಿ ಸಾಲಿಮಠ. ಕೂಲಿಮಠ ಎಂಬ ಹೆಸರಿನ ಖಾಸಗಿ ಶಾಲೆಗಳು ಇದ್ದವು, ಆದರೆ ಶಿಕ್ಷಣ ಸಾರ್ವತ್ರಿಕವಾಗಿರಲಿಲ್ಲ. 1826ರಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಒಂದೊಂದು ಮರಾಠಿ ಶಾಲೆ ಆರಂಭವಾದವು, ಒಂಬತ್ತು ವರ್ಷಗಳ ನಂತರ ಅಂದರೆ, 1835ರಲ್ಲಿ ಎರಡೂ ಊರುಗಳಲ್ಲಿ ಒಂದೊಂದು ಕನ್ನಡ ಶಾಲೆ ಆರಂಭವಾದವು. 1848ರಲ್ಲಿ ಧಾರವಾಡದಲ್ಲಿ ಮೊದಲ ಇಂಗ್ಲಿಷ್ ಶಾಲೆ ಆರಂಭವಾಯಿತು.1855-56ರ ಹೊತ್ತಿಗೆ ಜಿಲ್ಲೆಯಲ್ಲಿ ಇಂಗ್ಲಿಷ್ ಶಾಲೆ, ಶಿಕ್ಷಕರ ಟ್ರೈನಿಂಗ್ ಶಾಲೆ ಸೇರಿ ಒಟ್ಟು 14 ಶಾಲೆಗಳಾದವು.

ಧಾರವಾಡ ಮರಾಠಿ ಪ್ರದೇಶವೆಂದು ಬ್ರಿಟಿಷರಿಗೆ ನಂಬಿಕೆಯಿದ್ದ ಆ ಕಾಲದಲ್ಲಿ ಎಲಿಯಟ್ ಎಂಬ ಆಂಗ್ಲ ಅಧಿಕಾರಿ ಇದು ಕನ್ನಡ ಪ್ರದೇಶವೆಂದು ಘೋಷಿಸಿ ಕನ್ನಡ ಶಾಲೆ ತೆರೆಯಲು ಬಹಳ ಮುತುವರ್ಜಿ ವಹಿಸಿದರು. 1869ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಧಾರವಾಡಕ್ಕೆ ಬಂದನಂತರ ಕನ್ನಡ ಶಾಲೆಗಳು ಹೆಚ್ಚಾದವು. ಸ್ವಾತಂತ್ರ್ಯ ನಂತರವೂ ಧಾರವಾಡ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಪ್ರಾಮುಖ್ಯತೆ ಮುಂದುವರಿಸಿಕೊಂಡು ಬಂತು.

ಕರ್ನಾಟಕ ಏಕೀಕರಣದ ನಂತರ ಧಾರವಾಡ ಜಿಲ್ಲೆ ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿ ಗುರುತಿಸಿಕೊಂಡಿತು. ಆ ಸಂದರ್ಭದಲ್ಲಿ ಜಿಲ್ಲೆಯು 13,738 ಚದರ್ ಕಿಮೀ ಭೌಗೋಳಿಕ ವಿಸ್ತೀರ್ಣ ಹೊಂದಿತ್ತು. ಆಡಳಿತಾತ್ಮಕ ಅನುಕೂಲಕ್ಕಾಗಿ 1997ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜಿಸಿ, ಗದಗ ಹಾಗೂ ಹಾವೇರಿ ಹೊಸ ಜಿಲ್ಲೆಗಳು ರೂಪುಗೊಂಡವು. ಜಿಲ್ಲೆಗಳ ಪುನರ್ರಚನೆಯ ನಂತರ ಅತ್ಯಂತ ಚಿಕ್ಕ ಜಿಲ್ಲೆಯಾದ ಧಾರವಾಡ ಇಂದಿಗೂ  ಉತ್ತರ ಕರ್ನಾಟಕದ ಕೇಂದ್ರ ಸ್ಥಾನವಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಹುಬ್ಬಳ್ಳಿ, ನವಲಗುಂದ, ಕುಂದಗೋಳ, ಕಲಘಟಗಿ, ಧಾರವಾಡ ತಾಲ್ಲೂಕುಗಳಿವೆ. ಜಿಲ್ಲೆಯಲ್ಲಿ 372 ಜನವಸತಿ ಗ್ರಾಮಗಳಿವೆ. ಜಿಲ್ಲಾ ವಿಭಜನೆ ನಂತರ ಧಾರವಾಡ ಜಿಲ್ಲೆ 4263 ಚದರ್ ಕಿಮೀ ವಿಸ್ತೀರ್ಣ ಹೊಂದಿದ್ದು, ಆಡಳಿತದ ವಿಕೇಂದ್ರೀಕರಣ ದೃಷ್ಟಿಯಿಂದ ಒಂದು ಕಂದಾಯ ಉಪವಿಭಾಗ ಹೊಂದಿದೆ.

1,01,228 ಹೆಕ್ಟೇರ್ ಕೃಷಿ ಭೂಮಿಯ ಪೈಕಿ 42,899 ಹೆಕ್ಟೇರ್ ನೀರಾವರಿ ಪ್ರದೇಶವಿದೆ. 44,798 ಹೆಕ್ಟೇರ್ ಕೃಷಿಯೇತರ ಭೂಮಿ ಇದೆ. 35,235 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಜನಸಂಖ್ಯೆ ಹೆಚ್ಚಳ, ನಗರೀಕರಣ ಹಾಗೂ ಕಾಂಕ್ರೀಟ್ ಯುಗಕ್ಕೆಒಗ್ಗಿಕೊಂಡಿರುವುದರಿಂದ ಭೂಮಿಯ ಬಳಕೆಯಲ್ಲಿ ಏರುಪೇರುಗಳಾಗಿವೆ.
ಉತ್ತರಕ್ಕೆ ಬೆಳಗಾವಿ, ದಕ್ಷಿಣಕ್ಕೆ ಹಾವೇರಿ, ಪೂರ್ವಕ್ಕೆ ಗದಗ ಹಾಗೂ ಪಶ್ಚಿಮಕ್ಕೆ ಉತ್ತರ ಕನ್ನಡ ಜಿಲ್ಲೆಗಳಿವೆ. 2001ರ ಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 16,04,253.
ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ವರದಾ, ಮಲಪ್ರಭಾ, ತುಂಗಭದ್ರಾ ನದಿಗಳು ಹರಿಯುತ್ತಿದ್ದವು. ಆದರೆ ವಿಭಜನೆ ನಂತರ ಒಂದೂ ನದಿ ಈ ಜಿಲ್ಲೆಯಲ್ಲಿಲ್ಲ. ಕೆರೆ-ಕಟ್ಟೆಗಳಿಂದ, ಬಾವಿಗಳಿಂದ ಸಂಪದ್ಭರಿತವಾಗಿದ್ದ ಈ ಜಿಲ್ಲೆಯಲ್ಲಿ ಈಗ ಬೆರಳಣಿಕೆಯಷ್ಟು ಕೆರೆಗಳು ಮಾತ್ರ ಉಳಿದಿವೆ. ಬಹುತೇಕ ಬಾವಿಗಳು ಇತಿಹಾಸ ಸೇರಿವೆ. ಈಗಿರುವ ಕೆರೆಗಳ ಒತ್ತುವರಿ ನಿರಾತಂಕವಾಗಿ ಮುಂದುವರಿದಿದೆ. ಜಿಲ್ಲೆಯಲ್ಲಿ ಮಲಪ್ರಭಾ ಬಲದಂಡೆ ಕಾಲುವೆ ಇದ್ದರೂ, ರೈತರು ನೀರಾವರಿಗೆ ಕೊಳವೆ ಬಾವಿಗಳು, ಕೆರೆಗಳನ್ನೇ ಅವಲಂಬಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಲುವೆಯಲ್ಲಿ ನೀರು ಹರಿದಿರುವುದು ಕಡಿಮೆ. ಮಳೆಗಾಲದಲ್ಲಿ ರೈತರಿಗೆ ಕಣ್ಣೀರು ತರಿಸುವ ಬೆಣ್ಣೆಹಳ್ಳದ ನೀರನ್ನು ಬೇಸಾಯಕ್ಕೆ ಉಪಯೋಗಿಸಲಾಗುತ್ತಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.