ADVERTISEMENT

ಸಂಕೀಘಟ್ಟದ ಸುಂದರ ಬಸದಿ

ಜೆ.ರಂಗನಾಥ್
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST
ಸಂಕೀಘಟ್ಟದ ಸುಂದರ ಬಸದಿ
ಸಂಕೀಘಟ್ಟದ ಸುಂದರ ಬಸದಿ   

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ತಿಪ್ಪಸಂದ್ರ ಹೋಬಳಿಗೆ ಸೇರಿದ ಸಂಕೀಘಟ್ಟ ಐತಿಹಾಸಿಕ ತಾಣ. ಶಾಂತಿಪ್ರಿಯರು ಮತ್ತು ಅಹಿಂಸಾವಾದಿಗಳಾದ ಜೈನ ಶ್ರಾವಕರ ಬೀಡು. 15 ನೇ ಶತಮಾನದಲ್ಲಿ  `ವಜ್ರಕುಮಾರ ಚರಿತೆ  ಹಾಗೂ ಅನಂತನಾಥ ಚರಿತೆ~ ಎಂಬ ಕಾವ್ಯಗಳನ್ನು ರಚಿಸಿದ ಚಿಕ್ಕಪದ್ಮಣ್ಣ ಶೆಟ್ಟಿ ಇದೇ ಗ್ರಾಮದವರು.

ಇಲ್ಲಿರುವ ವರ್ಧಮಾನ ಮಹಾವೀರ ತೀರ್ಥಂಕರರ ಬಸದಿ ಶಿಲ್ಪಕಲೆಗೆ ಹೆಸರಾದುದು. ಹೊಯ್ಸಳ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಹೊಯ್ಸಳ ದೊರೆ 1ನೇ ಹೊಯ್ಸಳ ನರಸಿಂಹ ಕ್ರಿ.ಶ. 1141 ರಿಂದ 1173ರ ತನ್ನ ಆಳ್ವಿಕೆಯಲ್ಲಿ ಈ ಬಸದಿಯನ್ನು ನಿರ್ಮಿಸಿದ.

ಇಲ್ಲಿನ ಗರ್ಭಗುಡಿಯಲ್ಲಿನ  ವರ್ಧಮಾನಸ್ವಾಮಿಯ ಮೂಲ ವಿಗ್ರಹದ ಬೆನ್ನಲ್ಲೇ ಹೊಯ್ಸಳ ದೊರೆ ವಿನಯಾದಿತ್ಯನಿಂದ 1ನೇ ನರಸಿಂಹನ ವರೆಗೆ ಹೊಯ್ಸಳ ದೊರೆಗಳ ವಂಶಾವಳಿ ವಿವರಿಸುವ ಶಾಸನ ಕೆತ್ತಲಾಗಿದೆ. ಇದು 11ನೇ ಶತಮಾನದ ಉತ್ತರಾರ್ಧಕ್ಕೆ ಸೇರಿದೆ. ವಿಗ್ರಹ ಪೀಠದ ಮೇಲೆ ಮತ್ತೊಂದು ಶಾಸನವಿದ್ದು ಕಾಲ ಚಕ್ರಕ್ಕೆ ಸಿಕ್ಕಿ ಸವೆದು ಹೋಗಿದೆ ಎನ್ನುತ್ತಾರೆ ಶಾಸನ ತಜ್ಞ ಸಿ.ಆರ್. ನರಸಿಂಹಚಾರ್ಯ.

ದಕ್ಷಿಣಾಭಿಮುಖವಾದ ಬಸದಿಯಲ್ಲಿ ಗರ್ಭಗುಡಿ, ಸುಖನಾಸಿ, ನವರಂಗ, ಮುಖಮಂಟಪ, ಪ್ರದಕ್ಷಿಣ ಪಥ ಇದೆ. 5 ಅಡಿ ಎತ್ತರದ ಪೌಳಿ ಮೇಲೆ ನಿರ್ಮಾಣಗೊಂಡಿದೆ. ಒಳಭಾಗದ ಶಿಲಾ ಕಂಬಗಳು ನಯನ ಮನೋಹರವಾಗಿವೆ.

ಸಂಕೀಘಟ್ಟ ಮಾಗಡಿಯಿಂದ 30 ಕಿ ಮೀ ದೂರ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ತಿಪ್ಪಸಂದ್ರ ಗೇಟ್‌ನಿಂದ 7 ಕಿ ಮೀ ಉತ್ತರದಲ್ಲಿದೆ. ಪೂಜೆ ಮತ್ತಿತರ ಮಾಹಿತಿಗೆ ಕಾರ್ಯದರ್ಶಿ ಎಸ್.ಎ. ಕಾಂತರಾಜು (89714 41610) ಅಥವಾ ಪುರೋಹಿತ ಬಾಹುಬಲಿರಾಜು (91412 60337) ಇವರನ್ನು ಸಂಪರ್ಕಿಸಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.