ADVERTISEMENT

ಸಂತಸ ತರುವ ಉರುಸ್

ರಮೇಶ ಎಸ್.ಕತ್ತಿ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST
ಸಂತಸ ತರುವ ಉರುಸ್
ಸಂತಸ ತರುವ ಉರುಸ್   

ಹೆಸರಿಗೆ ಇದು ಮುಸ್ಲಿಂ ಧರ್ಮೀಯರ ಜಾತ್ರೆ. ಆದರೆ ಇಲ್ಲಿ ಧರ್ಮದ ಬೇಧವಲ್ಲ. ಹಿಂದು, ಮುಸ್ಲಿಂ, ಕ್ರೈಸ್ತ ಎಲ್ಲರೂ ಇಲ್ಲಿ ಒಂದೇ. ರಾಜ್ಯ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದಲೂ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು  ಇದಕ್ಕೆ ಸಾಕ್ಷಿಯಾಗುತ್ತಾರೆ. ಇದೇ ವಿಜಾಪುರ ಜಿಲ್ಲೆಯ  ಆಲಮೇಲ ಪೀರ ಗಾಲೀಬ ಸಾಹೇಬ ಉರುಸ್.

ವಿಜಾಪುರದ ಐತಿಹಾಸಿಕ ಕಟ್ಟಡಗಳ ಮೇಲೆ ಕಾಣುವ ಕೆತ್ತನೆಗಳ ಪೈಕಿ ಬಹುತೇಕ ಕೆತ್ತನೆಗಳು ಪೀರಗಾಲೀಬ ಸಾಹೇಬರಿಗೆ ಸೇರಿದ್ದು ಎನ್ನುವುದು ಇತಿಹಾಸ. ಸೂಫಿಯಾಗಿದ್ದ ಪೀರಗಾಲೀಬರು ಶ್ರದ್ಧೆಯಿಂದ ಬಾಳಿ ಬದುಕಿದವರು. ವಾಸ್ತುಶಿಲ್ಪದ ಮೂಲಕ ಅಂದು ಸುಲ್ತಾನರ ಆಪ್ತರಾಗಿದ್ದ ಇವರನ್ನು ಕಟ್ಟಡದ ಕೆಲಸ ಮುಗಿದ ಮೇಲೆ ಹೊರಗಟ್ಟಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.

ಇವರ ಬಗ್ಗೆ ಇನ್ನೂ ಒಂದು ರೋಚಕ ಕಥೆ ಇದೆ. ಇವರು ಹಲವು ವರ್ಷಗಳ ಹಿಂದೆ ಅಲ್ಲಿನ ದೇಶಮುಖ ಮನೆಯಲ್ಲಿ ಕೆಲಸಕ್ಕಾಗಿ ಬಂದು ನೆಲೆ ನಿಂತರು. ಅಲ್ಲಿರುವ ಒಂದು ಕೊಠಡಿಯಲ್ಲಿ ಅವರು ವಾಸಮಾಡಿದರು. ಒಮ್ಮೆ ದೇಶಮುಖರಿಗೂ ಅವರ ಮಡದಿ ಲಕ್ಷ್ಮಿಬಾಯಿಗೂ ಯಾವುದೋ ಕಾರಣಕ್ಕೆ ಜಗಳವಾದಾಗ ಲಕ್ಷ್ಮಿಬಾಯಿ  ಮನೆಬಿಟ್ಟು ತೋಟದಲ್ಲಿ ಹೋಗಿ ಕುಳಿತರು.
 
ಆಕೆಯನ್ನು ಕರೆತರಲು ದೇಶಮುಖರು ಬಂಡಿಯನ್ನು ಕಳಿಸುತ್ತಾರೆ. ಅದರಲ್ಲಿ ಲಕ್ಷ್ಮಿಬಾಯಿ ವಾಪಸ್ಸು ಮನೆಗೆ ಬರುತ್ತಾರೆ. ಆದರೆ ದೇಶಮುಖರು ಆಕೆಯನ್ನು ಮನೆಯ ಒಳಕ್ಕೆ ಬರಲು ಬಿಡುವುದಿಲ್ಲ. ಇದರಿಂದ ನೊಂದ ಅವರು ಬಂಡಿಯಲ್ಲಿಯೇ ಐದು ದಿನ ಕಳೆಯುತ್ತಾರೆ. ನಂತರ ಅಲ್ಲಿಯೇ ದೇಹತ್ಯಾಗ ಮಾಡುತ್ತಾರೆ. ತಮ್ಮ ಯಜಮಾನಿ ಈ ಪರಿಯಲ್ಲಿ ದೇಹತ್ಯಾಗ ಮಾಡಿರುವುದು  ಪೀರ ಗಾಲೀಬರಿಗೆ ಸಹ್ಯ ಎನಿಸುವುದಿಲ್ಲ. ಯಜಮಾನಿಯಂತೆಯೇ ತಾವೂ ದೇಹ ತ್ಯಜಿಸುತ್ತಾರೆ.

ಮುಂದೊಂದು ದಿನ ದೇಶಮುಖರ ಕನಸಿನಲ್ಲಿ ಕಾಣಿಸಿಕೊಂಡ ಅವರು ತನಗೊಂದು ಊರಹೊರಗೆ ಗುಡಿ ಕಟ್ಟಿಸಿ ನಿತ್ಯ ಪೂಜೆ ಮಾಡುವಂತೆ ಆಜ್ಞೆ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಹಿಂದು- ಮುಸ್ಲಿಂ ಸಮುದಾಯದವರು ಭಕ್ತಿ ಶ್ರದ್ಧೆಯಿಂದ  ಇಲ್ಲಿ ಪೂಜೆ ನೆರವೇರಿಸುತ್ತಾರೆ ಎನ್ನುವುದು ಐಹಿತ್ಯ.

ಕಾರ್ಯಕ್ರಮದ ವಿವರ:
22ರಂದು ಗಂಧ(ಸಂದಲ್)  ಪೂಜೆ. 23ರಂದು ದೀಪ (ಚಿರಾಗ) ಪೂಜೆ, 24ರಂದು ಮದ್ದು ಪೂಜೆ ಮತ್ತು ಉರುಸ್‌ನ ಕೊನೆಯ ದಿನ 25 ಶನಿವಾರ ಜಂಗಿಕುಸ್ತಿಗಳು ನಡೆಯುತ್ತವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.