ADVERTISEMENT

ಹುಸೇನಿಯ ಏಕ ರೇಖಾ ಗಣಪ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2012, 19:30 IST
Last Updated 27 ಫೆಬ್ರುವರಿ 2012, 19:30 IST
ಹುಸೇನಿಯ ಏಕ ರೇಖಾ ಗಣಪ
ಹುಸೇನಿಯ ಏಕ ರೇಖಾ ಗಣಪ   

ಕಲೆ ಎಂಬುದು ಒಂದು ಸೃಜನಶೀಲ ಅಭಿವ್ಯಕ್ತಿ. ಈ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ. ರೇಖೆಗಳಿಗೆ ಚಿತ್ರ ರೂಪ ಕೊಟ್ಟು ಅದನ್ನು ಕಲೆಯಾಗಿ ಅರಳಿಸುವ ಕಾರ್ಯ ಮಾಡುತ್ತಿದ್ದಾರೆ ಎಸ್.ಎಫ್ ಹುಸೇನಿ. ಕೇವಲ ಒಂದು ರೇಖೆಯ ಮೂಲಕ ಒಂದು ಚಿತ್ರಕ್ಕೆ ಎಂತಹ ಆಕಾರವನ್ನಾದರೂ ನೀಡಬಲ್ಲ ನಿಷ್ಣಾತ.

ಒಮ್ಮೆ ಕಾಗದದ  ಮೇಲೆ ಒಂದು ಜಾಗದಿಂದ ಚಿತ್ರ ಬರೆಯಲು ಆರಂಭ ಮಾಡಿದರೆ ಚಿತ್ರ ಅಂತಿಮ ಸ್ವರೂಪ ಪಡೆದ ನಂತರವೇ ಕೈ ತೆಗೆಯಲಾಗುತ್ತದೆ. ಗೆರೆಗಳನ್ನು ಲೀಲಾಜಾಲವಾಗಿ ಕಾಗದದ ಮೇಲೆ ಮೂಡಿಸುವ ಮೂಲಕ ಅದ್ಭುತ ಚಿತ್ರವನ್ನು ಮೂಡಿಸುವಲ್ಲಿ ಹುಸೇನಿ ಸಿದ್ಧಹಸ್ತರು. ಇವರ ಬತ್ತಳಿಕೆಯಲ್ಲಿ ರೂಪುಗೊಂಡ ಚಿತ್ರಗಳು ಅನೇಕ.

ಅದರಲ್ಲಿಯೂ ಗಣಪನ ಚಿತ್ರ ಎಂಥವರ ಗಮನವನ್ನೂ ಸೆಳೆಯುತ್ತದೆ. ಗಣೇಶನ ಕಿರೀಟದಿಂದ ಆರಂಭವಾಗುವ ರೇಖೆ ಇಲಿಯ ಬಾಲದಲ್ಲೇ ಅಂತ್ಯವಾಗುತ್ತದೆ. ಈ ವಿಧಾನದಲ್ಲಿ ಸುಮಾರು 4 ಸಾವಿರ ಚಿತ್ರಗಳನ್ನು ಸೃಷ್ಟಿಸಿದ್ದಾರೆ.

ಗಣೇಶನನ್ನು ಒಂದು ದೈವಿ ಸ್ವರೂಪದಲ್ಲಿ ಕಾಣುವುದಕ್ಕಿಂತ ಹೆಚ್ಚಾಗಿ ಸಾಮಾನ್ಯರ ಬದುಕಿನ ಕನ್ನಡಿಯಾಗಿ ಚಿತ್ರಿಸಿರುವುದು ಇವರ ಸೃಜನಶೀಲತೆಗೆ ಸಾಕ್ಷಿ. ಬಾಲ್ಯದಲ್ಲಿ ನೇಯ್ಗೆಗಾಗಿ ತಾಯಿ ನೂಲು ಉಂಡೆಯನ್ನು ಸುತ್ತುತ್ತಿದ್ದಾಗ ಆ ದಾರದಲ್ಲಿ ಇವರು ಆಟ ಆಡುತ್ತಿದ್ದರಂತೆ. ಆ ಪ್ರಯೋಗ ಇಂದು ಕಲೆಯಾಗಿ ರೂಪುಗೊಳ್ಳಲು ಕಾರಣವಾಗಿದೆ. `ಇದಕ್ಕೆ ನನ್ನ ತಾಯಿ ಹಾಗೂ ಮನೆಯವರೇ ಸ್ಫೂರ್ತಿ. ಮೂಲತಃ ಫೈನ್ ಆರ್ಟ್ ಕಾಲೇಜಿನ ವಿದ್ಯಾರ್ಥಿಯಾದ ನನಗೆ  ಚಿತ್ರಗಳಲ್ಲಿ ಪ್ರಯೋಗ ಮಾಡುವುದು ಹವ್ಯಾಸ.

ಇದರಿಂದ ವಿವಿಧ ರೀತಿ ಚಿತ್ರಗಳು ಮೂಡಿಸಲು ಸಾಧ್ಯವಾಯಿತು. ರೇಖೆಗಳನ್ನು ದಾರಗಳಂತೆ ಸರಾಗವಾಗಿ ಓಡಿಸುವ ಮೂಲಕ ನಮ್ಮ ಕಲ್ಪನೆಗೆ ರೂಪ ನೀಡಬಹುದು~ ಎನ್ನುತ್ತಾರೆ. ಅವರ ಸಂಪರ್ಕ ಸಂಖ್ಯೆ: 98451 53277

ಹುಟ್ಟಿದ್ದು ಮಂಡ್ಯ ಜಿಲ್ಲೆಯ ಶಿವನಸಮುದ್ರ. ಈಗ ವಾಸ ಬೆಂಗಳೂರು. ಕಾಗದವನ್ನು ಅಲಂಕಾರಿಕವಾಗಿ ಕತ್ತರಿಸುವ ಕಲೆ ಹೇಳಿಕೊಡುತ್ತಾರೆ. ಇದರಲ್ಲಿ ಸಾಂಜಿ ಕಲೆ ಎಂಬುದೊಂದಿದೆ. ಇದು ಉತ್ತರ ಭಾರತದಲ್ಲಿ ಕೃಷ್ಣನನ್ನು ಕುರಿತಾದ ಕಥೆಗಳನ್ನು ಕಾಗದ ಕತ್ತರಿಸಿ ನಿರೂಪಿಸುವ ಪದ್ಧತಿ. ಇದು ಅವರಿಗೆ ಬದುಕಿನ ಮಾರ್ಗ ತೋರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.