ADVERTISEMENT

PV Web Exclusive: ಬಿದನೂರು ಕೋಟೆ ನೆತ್ತಿ ಮೇಲೆ ನಿಂತು...

ಪ್ರಕಾಶ ಕುಗ್ವೆ
Published 17 ನವೆಂಬರ್ 2020, 9:35 IST
Last Updated 17 ನವೆಂಬರ್ 2020, 9:35 IST
ಬಿದನೂರು (ನಗರ) ಕೋಟೆಯ ಮೇಲಿನ ವಿಹಂಗಮ ನೋಟ
ಬಿದನೂರು (ನಗರ) ಕೋಟೆಯ ಮೇಲಿನ ವಿಹಂಗಮ ನೋಟ   

ಈ ಕೋಟೆ ನೆತ್ತಿ ಮೇಲೆ ನಿಂತು ಒಮ್ಮೆ ಸುತ್ತ ಕಣ್ಣು ಹಾಯಿಸಿದರೆ ಕೊಡಚಾದ್ರಿ ಬೆಟ್ಟ ಶ್ರೇಣಿ, ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ, ಮೈತುಂಬಿಕೊಂಡ ನದಿ, ಕೆರೆಗಳು. ಹಸಿರು ಹೊದ್ದ ಗದ್ದೆ–ತೋಟಗಳು, ತಲೆ ಮೇಲೆಯೇ ತೇಲಾಡುವ ಮೋಡಗಳು, ಹಿತ ಅನುಭವ ನೀಡುವ ಬೀಸುವ ತಂಗಾಳಿ. ಮೈ–ಮನ ಎರಡಕ್ಕೂ ಮುದ ನೀಡುವ ಬಿದನೂರು (ನಗರ) ಕೋಟೆ ಚಳಿಗಾಲದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕೊಡಚಾದ್ರಿಯ ತಪ್ಪಲಿನಲ್ಲೇ ಬಿದನೂರು ಕೋಟೆ ಇದೆ. ಶಿವಮೊಗ್ಗ ಜಿಲ್ಲೆ ಹೊಸನಗರದಿಂದ ಕೊಡಚಾದ್ರಿ, ಕೊಲ್ಲೂರಿಗೆ ಹೋಗುವ ಹಾದಿಯಲ್ಲೇ ಬಿದನೂರು ಸಿಗುತ್ತದೆ. ಕರಾವಳಿಯಿಂದ ಬಾಳೆಬರೆ ಘಾಟಿ ಹತ್ತಿ ಮಾಸ್ತಿಕಟ್ಟೆ, ನಗರ ಮಾರ್ಗದಲ್ಲಿ ಬಂದರೆ ಹೆದ್ದಾರಿ ಬದಿಯಲ್ಲೇ ಈ ಕೋಟೆ ಎದುರಾಗುತ್ತದೆ. ಬೇಸಿಗೆಯಲ್ಲಿ ಬಿಸಿಲ ಝಳ, ಮಳೆಗಾಲದಲ್ಲಿ ಪಾಚಿಕಟ್ಟಿ ಕಾಲಿಡದ ಸ್ಥಿತಿ. ಚಳಿಗಾಲದ ಈ ವೇಳೆ ಇಡೀ ಪರಿಸರವೇ ಹಸಿರು ಹೊದ್ದು ಮಲಗಿದಂತೆ ಕಂಡು, ನಯನ ಮನೋಹರ ದೃಶ್ಯ ಸೃಷ್ಟಿಯಾಗುತ್ತದೆ.

‘ಮುಂಜಾನೆ ಹಾಗೂ ಸಂಜೆ ವೇಳೆ ಕೋಟೆ ಪರಿಸರದಲ್ಲಿ ಓಡಾಡುವುದು ಮನಸ್ಸಿಗೆ ಖುಷಿ ಸಿಗುತ್ತದೆ. ಫೋಟೊ ಶೂಟ್‌ಗೆ ಹೇಳಿ ಮಾಡಿಸಿದ ಜಾಗ ಇದು. ನಾವು ಈ ಹಾದಿಯಲ್ಲಿ ಹೋಗುವಾಗಲೆಲ್ಲ ಈ ಕೋಟೆಗೆ ಒಮ್ಮೆ ಭೇಟಿ ಕೊಟ್ಟೇ ಕೊಡುತ್ತೇವೆ’ ಎಂದು ತಮ್ಮ ಅನುಭವ ಹಂಚಿಕೊಂಡರು ಉಡುಪಿಯಿಂದ ಹೊಸನಗರಕ್ಕೆ ತೆರಳುತ್ತಿದ್ದ ಪ್ರವಾಸಿಗ ಗಣೇಶ ಪ್ರಸಾದ್.

ADVERTISEMENT

ಇತಿಹಾಸದ ಪುಟಗಳಿಂದ....:

ಬಿದನೂರು ಕೋಟೆ ಕೆಳದಿ ಅರಸರ ಮೂರನೇ ರಾಜಧಾನಿ. ವೆಂಕಟಪ್ಪನಾಯಕ (ಕ್ರಿ.ಶ. 1505–52) ರಾಜ್ಯ ವಿಸ್ತರಣೆಯ ಸಂದರ್ಭದಲ್ಲಿ ಹೊನ್ನೆಯ ಕಂಬಳಿ ಅರಸರಿಂದ ಗೆದ್ದುಕೊಂಡಿದ್ದುದಾಗಿ ‘ಕೆಳದಿ ನೃಪವಿಜಯಂ’ನಿಂದ ತಿಳಿದು ಬರುತ್ತದೆ. 1561ರಲ್ಲಿ ಬಿದನೂರನ್ನು (ನಗರ) ವೀರಭದ್ರನಾಯಕನು ತನ್ನ ಆಡಳಿತ ಕೇಂದ್ರವನ್ನಾಗಿಸಿ 1568ರಲ್ಲಿ ಶಿವಪ್ಪನಾಯಕನಿಗೆ ಇಲ್ಲಿ ಪಟ್ಟಾಭಿಷೇಕ ನೆರವೇರಿಸಿದ್ದ. ಕ್ರಿ.ಶ 1645–1665ರಲ್ಲಿ ಬಿದನೂರಿನಲ್ಲಿ ರಾಜಧಾನಿಯನ್ನು ನಿರ್ಮಿಸಲು ಮುಂದಾದಾಗ ಈ ಕೋಟೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಭದ್ರಪಡಿಸಿದ ಎಂದು ಇತಿಹಾಸ ಹೇಳುತ್ತದೆ.

ವಿನ್ಯಾಸವೇ ವಿಶೇಷ:ಷಟ್ಕೋನ ತಲವಿನ್ಯಾಸ ಹೊಂದಿರುವ ಈ ಕೋಟೆಗೆ ಉತ್ತರಭಾಗದಲ್ಲಿ ಕಂದಕಗಳಿಂದ ಹೊರಚಾಚಿದ ಹಾಗೂ ಬತೇರಿಯಿಂದ ಆವೃತವಾದ ಪ್ರವೇಶದ್ವಾರವಿದೆ. ಕೋಟೆಯ ಗೋಡೆಗೆ ಹೊಂದಿಕೊಂಡಂತೆ ನಾಲ್ಕೂ ದಿಕ್ಕುಗಳಲ್ಲಿ ದೈತ್ಯಾಕಾರದ ಕಲ್ಲುಗಳಿಂದ ಕಟ್ಟಿದ ಆರು ವರ್ತುಲ ಬತ್ತೇರಿಗಳಿವೆ. ಒಳಗಡೆ ಒಪ್ಪವಾಗಿ ಕೂಡಿಟ್ಟ ಕಲ್ಲು ಹಾಸಿನ ಹಾದಿ ಇದೆ. ಕೋಟೆಯ ಗೋಡೆಯ ಮೇಲೆ ದಪ್ಪನಾದ ಮೇಲ್ಗೋಡೆಯಿದ್ದು, ಅದರಲ್ಲಿ ವೀಕ್ಷಣ ಗೋಪುರಗಳಿವೆ.

ಕೋಟೆಯ ಒಳಭಾಗದಲ್ಲಿ ಕಾವಲುಗಾರ ಕೋಣೆಗಳಿದ್ದು, ಕೋಟೆಯ ಹೊರಗೋಡೆಯ ಸುತ್ತಲೂ ಆಳವಾದ ಕಂದಕ ನಿರ್ಮಿಸಲಾಗಿದೆ. ಪ್ರವೇಶದ್ವಾರದಿಂದ ತುಸು ಮುಂದಕ್ಕೆ ಹೋದರೆ ಪಶ್ಚಿಮ ದಿಕ್ಕಿನಲ್ಲಿ ಒಂದು ಕೊಳ ಮತ್ತು ಆಗ್ನೇಯ ದಿಕ್ಕಿನಲ್ಲಿ ಅರಮನೆಯ ಭಗ್ನಾವಶೇಷಗಳೂ ಕಂಡುಬರುತ್ತವೆ. ಕೊಳದ ಬಾವಿಗೆ ನಾಲ್ಕೂ ದಿಕ್ಕುಗಳಿಂದ ಪ್ರವೇಶ ‍ಪಾವಟಿಕೆಗಳಿವೆ. ಇದರ ದಕ್ಷಿಣಕ್ಕೆ ತುಸು ಎತ್ತರವಾದ ಸ್ಥಳದಲ್ಲಿ ಆಯತಾಕಾರದ ಅರಮನೆಯ ಅವಶೇಷಗಳಿದ್ದು, ಅವುಗಳಲ್ಲಿ ಅನೇಕ ಹಜಾರ ಹಾಗೂ ಕೋಣೆಗಳಿವೆ. ಇದರ ಪಶ್ಚಿಮಕ್ಕೆ ತೆರೆದಿರುವ ಸ್ಥಳವು ಪ್ರಾಯಶಃ ಸಭೆ ನಡೆಸುವ ಸ್ಥಳವಾಗಿದ್ದಿತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ನೈರುತ್ಯ ದಿಕ್ಕಿನಲ್ಲಿ ಒಂದು ಆಳವಾದ ಅಷ್ಟಮೂಲೆಯ ಬಾವಿಯಿದ್ದು, ಕೋಟೆಯ ಗೋಡೆಯನ್ನು ಆಧರಿಸಿ ನಿರ್ಮಿಸಲಾದ ಒಂದು ಕಡಿದಾದ ಹಾದಿಯು ವಿಚಕ್ಷಣಾ ಗೋಪುರಕ್ಕೆ ಕರೆದೊಯ್ಯುತ್ತದೆ. ಇದೇ ಅಲ್ಲದೇ ಅಷ್ಟಮೂಲೆ ಬಾವಿಯ ಬಳಿ ಮತ್ತೊಂದು ಕೊಳವು ಮತ್ತು ಇತರ ಕಟ್ಟಡಗಳ ಅವಶೇಷವೂ ಕಾಣುತ್ತವೆ.

ಭದ್ರವಿಲ್ಲದ ಬಾಗಿಲುಗಳು:ಸುಮಾರು 25 ಎಕರೆಯಲ್ಲಿ ಹಬ್ಬಿರುವ ಬಿದನೂರು ಕೋಟೆ ಪ್ರದೇಶ ಹಲವು ಮೂಲ ಸೌಕರ್ಯಗಳಿಂದ ನರಳುತ್ತಿದೆ. ಕೋಟೆಯ ಪ್ರವೇಶದ ಬಾಗಿಲುಗಳು ಹಾಳಾಗಿ ಎಷ್ಟೋ ಕಾಲವಾಗಿದೆ. ನಿಧಿ ಶೋಧದ ಹೆಸರಿನಲ್ಲಿ ಕೋಟೆಯ ಕಲ್ಲುಗಳನ್ನು ಅಲ್ಲಲ್ಲಿ ಕೀಳಲಾಗಿದೆ.

‘ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ. ಪ್ರವಾಸಿಗರಿಗೆ ಭದ್ರತೆಯೂ ಇಲ್ಲ. ಮಲೆನಾಡಿನ ಸಮೃದ್ಧ ಇತಿಹಾಸ ಸಾರುವ ಈ ಕೋಟೆ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಬೇಕು. ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ತುರ್ತಾಗಿ ಗಮನ ಹರಿಸಬೇಕು’ ಎಂದು ಒತ್ತಾಯಿಸುತ್ತಾರೆ ಸಾಗರದ ರವಿಪ್ರಕಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.