ಪ್ರಜಾವಾಣಿ ಚಿತ್ರ
ಪಶುಸಂಗೋಪನೆ ಮತ್ತು ಹಾಲುಮತ ಸಂಸ್ಕೃತಿಯನ್ನು ಬಿಂಬಿಸುವ ಹಟ್ಟಿ ಹಬ್ಬಕ್ಕೆ ಪುರಾಣ ಐತಿಹ್ಯಗಳ ನಂಬಿಕೆಯೂ ಇದೆ. ಮಹಾಭಾರತದಲ್ಲಿ ವಿರಾಟ ರಾಜನ ಆಶ್ರಯದಲ್ಲಿದ್ದ ಪಾಂಡವರು ತಮ್ಮ ಅಜ್ಞಾತವಾಸವನ್ನು ಪೂರೈಸಿ ಪುರವನ್ನು ಗೋವುಗಳ ಜೊತೆ ಪ್ರವೇಶಿಸಿದ ದಿನವೇ ಹಟ್ಟಿ ಹಬ್ಬ ಎನ್ನುವುದು ಜನಪದ ನಂಬಿಕೆ. ಇದನ್ನೇ ದೀಪಾವಳಿ, ದೊಡ್ಡ ಹಬ್ಬ ಎಂದೂ ಕರೆಯುತ್ತಾರೆ.
‘ಹಬ್ಬ ತಪ್ಪಿದರೂ ಹೋಳಿಗೆ ತಪ್ಪಲ್ಲ’ ಎನ್ನುವ ಜನಪದರ ಅನುಭವದ ಮಾತು ಹಟ್ಟಿ ಹಬ್ಬಕ್ಕಂತೂ ಹೊಂದಿಕೆ ಆಗಿ ಬರುವುದಿಲ್ಲ. ಕೃಷಿ ಪ್ರಧಾನ ಕುಟುಂಬದಲ್ಲಿ ‘ದೊಡ್ಡಬ್ಬ’ ಎಂದೂ ಕರೆಯಿಸಿಕೊಳ್ಳುವ ದೀಪಾವಳಿ ಕುಟುಂಬ ವರ್ಗದ ಒಳಗೊಳ್ಳುವಿಕೆಯನ್ನು ಬಯಸುತ್ತದೆ. ‘ಉಂಡದ್ದೇ ಉಗಾದಿ ಮಿಂದದ್ದೇ ದೀಪಾವಳಿ’ ಎನ್ನುವ ಗಾದೆ ದೀಪಾವಳಿಯ ಮುನ್ನ ದಿನದ ಸ್ನಾನದ ಖುಷಿಯನ್ನು ಧ್ವನಿಸುತ್ತದೆ. ಹಾಗಾಗಿ ಹಟ್ಟಿ ಹಬ್ಬದ ಮೆರುಗು ಊಟೋಪಚಾರ ಮಾತ್ರ ಅಲ್ಲ. ಉಡುಗೆ ತೊಡುಗೆ, ಅಲಂಕಾರ, ಮಕ್ಕಳಾಟ, ಹೆಂಗಳೆಯರ ಸಡಗರ, ಪರಾಕ್ರಮ ಮೆರೆಯುವ ಯುವಕರ ದನ ಬೆದರಿಸುವ ಆಚರಣೆಯಲ್ಲೂ ಇಣುಕುತ್ತದೆ. ಸುಗ್ಗಿಯ ಸೊಬಗಿಗೆ ಮುನ್ನುಡಿ ಹಾಡುವ ದೀವಳಿಗೆಯ ಬೆಳಕಿನಲ್ಲಿ ಕೃಷಿಕರ ಬದುಕು ಪ್ರತಿಫಲಿಸುತ್ತದೆ. ಮೂರು ದಿನಗಳ ಕಾಲ ಮನೆ ಮಾರುಗಳಿಗೆ ಕಳೆ ತುಂಬುವ ಈ ಹಬ್ಬ ಕಾರ್ತೀಕ ಮಾಸವೆಲ್ಲ ಹಣತೆಯ ಹೊನಲಾಗಿ ಬೆಳಗುತ್ತದೆ. ಕಾರ್ತೀಕ ಮಾಸದ ಮೊದಲನೇ ದಿನವನ್ನೇ ಪಾಡ್ಯ ಅಥವಾ ಹಟ್ಟಿ ಹಬ್ಬ ಎಂದು ಆಚರಿಸುತ್ತೇವೆ. ಅದಕ್ಕೂ ಮುನ್ನವೇ ‘ಬೂರೆ ಅಮಾವಾಸ್ಯೆ’ ಆ ಸಡಗರಕ್ಕೆ ಪಲ್ಲವಿ ಹಾಡುತ್ತದೆ. ‘ನರಕ ಚತುರ್ದಶಿ’ಯೇ ಬೂರೆ ಹಬ್ಬ. ಅಭ್ಯಂಜನಕ್ಕಾಗಿ ಬಚ್ಚಲ ಮನೆಯ ಹಂಡೆಗೆ ನೀರು ತುಂಬುವ, ಅದನ್ನು ಅಲಂಕರಿಸುವ ಶಾಸ್ತ್ರದಿಂದ ಹಬ್ಬ ಕಳೆಗಟ್ಟುತ್ತದೆ. ಬೂರೆ ದಿನ ಬೈಸಿಕೊಂಡರೆ ಶುಭವಾಗುತ್ತೆ ಎನ್ನುವ ನಂಬಿಕೆಯೂ ಇದೆ.
ಪ್ರಜಾವಾಣಿ ಚಿತ್ರ
ಹಟ್ಟಿಲಕ್ಕಮ್ಮ
ಕೃಷಿಕರ ಹಟ್ಟಿ ಹಬ್ಬದಲ್ಲಿ ಲಕ್ಷ್ಮಿ ಕೂಡ ಅವತರಿಸುತ್ತಾಳೆ. ಮನೆ ಮತ್ತು ಹಟ್ಟಿ (ಕೊಟ್ಟಿಗೆ), ತಿಪ್ಪೆ, ಮರ, ಗಿಡ, ಅಂಗಳದಲ್ಲಿ ಲಕ್ಷ್ಮಿಯ ಕುರುಹು ಕಾಣುವ ಪ್ರಕ್ರಿಯೆ ಈ ಆಚರಣೆಯ ಹಿಂದಿದೆ. ಬೆನಕ ಅಥವಾ ಬೆನಪ ಮಾದರಿಯಲ್ಲೇ ಹಟ್ಟಿಯಮ್ಮ ಹಟ್ಟೆಮ್ಮ ರೂಪ ತಾಳುತ್ತಾಳೆ. ಅದಕ್ಕಾಗಿ ಸಗಣಿ ಸಂಗ್ರಹಿಸುವುದು ಹಬ್ಬದ ಭಾಗ. ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ದನಕರುಗಳ ಸಗಣಿಯನ್ನು ರಾಶಿ ಮಾಡಿ ಇಡುತ್ತಾರೆ. ಸಂಗ್ರಹಿಸಿದ ಸಗಣಿಯನ್ನು ದೊಡ್ಡ ಮುದ್ದೆ ಗಾತ್ರದಲ್ಲಿ ಕಟ್ಟಿ ಮನೆಯ ಎಲ್ಲ ಬಾಗಿಲ ಎಡ ಬಲಕ್ಕೆ ತಲಾ ಒಂದೊಂದು ಇಡುತ್ತಾರೆ. ದೇವರ ಜಗುಲಿ ಸೇರಿದಂತೆ ಮನೆಯ ಅಂಗಳದಲ್ಲಿ ಇನ್ನೂ ದೊಡ್ಡಗಾತ್ರದಲ್ಲಿ ಇಡುತ್ತಾರೆ. ದನಕರುಗಳು ಇದ್ದವರು ಕೊಟ್ಟಿಗೆಯಲ್ಲಿ ದೊಡ್ಡಹಟ್ಟೆಮ್ಮನನ್ನು ಮಾಡಿ ಇಡುತ್ತಾರೆ. ಅಂತೆಯೇ ತಿಪ್ಪೆಗುಂಡಿಯಲ್ಲಿ ಒಂದನ್ನು ಇಡುತ್ತಾರೆ. ಅವುಗಳಿಗೆ ಚಂಡೂವು, ಭತ್ತ, ರಾಗಿ ತೆನೆ ಸೇರಿ ತಮ್ಮ ಹೊಲ ಗದ್ದೆ ಫಸಲಿನ ಒಂದೊಂದು ಕುಡಿ ಸಿಕ್ಕಿಸುತ್ತಾರೆ. ಕಾಡು ಗೇರುಬೀಜ, ಉತ್ತರಾಣಿ ಕಡ್ಡಿಯಿಂದ ಅದನ್ನು ಅಲಂಕರಿಸುತ್ತಾರೆ. ನಂತರ ಹಟ್ಟೆಮ್ಮನಿಗೆ ಪೂಜೆ ಸಲ್ಲಿಸುವುದು ಒಂದು ಭಾಗ. ಸಂಜೆ ಅದನ್ನು ಬೆಳಗಿಸುವುದು ಮತ್ತೊಂದು ಮಜಲು. ಹಟ್ಟಿಯನ್ನು ಬೆಳಗಲು ನಿಸರ್ಗದ ಹಣತೆ ಆಕೆಯ ನೆತ್ತಿಯ ಮೇಲೆ ಕೂತಿರುತ್ತವೆ. ಹಿಂಡಲಚ್ಚಿ ಕಾಯಿ (ಮುಳ್ಳು ಸವತೆಯಂತೆ ಕಾಣುವ ಕಹಿಕಾಯಿ) ಅದನ್ನು ಎರಡು ಭಾಗ ಮಾಡಿ ತಿರುಳನ್ನು ತೆಗೆದು ಅದರೊಳಗೆ ಎಣ್ಣೆ ಹಾಕಿ ಬತ್ತಿ ಇಟ್ಟು ದೀಪ ಹಚ್ಚಿದರೆ ಹಟ್ಟಿಯ ಸಂಭ್ರಮ ಮತ್ತೊಂದು ರೂಪು ಪಡೆಯುತ್ತದೆ.
ಪ್ರಜಾವಾಣಿ ಚಿತ್ರ
ಹುಡುಗರ ಪಂಚಿನಾಟ
ಅಷ್ಟರಲ್ಲಾಗಲೇ ಕತ್ತಲು ಲಗುಬಗೆಯಿಂದ ಆಕ್ರಮಿಸುತ್ತಿರುತ್ತದೆ. ಮನೆ ಮಕ್ಕಳು ಪಂಜು ಹಿಡಿದು ಕುಣಿದಾಡುವುದು ಬೆಳಕಿನ ಮೆರವಣಿಗೆಯಂತೆ ಕಾಣಿಸುತ್ತದೆ. ಪಂಜು ಅಂದರೆ ಒಣಕಡ್ಡಿ, ಕಟ್ಟಿಗೆ, ಸೆಣಬಿನ ಕಡ್ಡಿ, ಸಾಸಿವೆ, ಸೂರ್ಯಕಾಂತಿ, ಔಡಲದ ದಂಟುಗಳ ಸಣ್ಣ ಹೊರೆ. ಕೈಯಲ್ಲಿ ಹಿಡಿಯುವ ಉದ್ದನೆಯ ಸಿವುಡಿಗೆ ಬೆಂಕಿಯನ್ನು ಹಚ್ಚಿಕೊಂಡು ಊರು ಕೇರಿಯಲ್ಲಿ ಕೇಕೆ ಹಾಕುತ್ತಾ ಓಡುವ ಮಕ್ಕಳ ಆಟದ ಸಂಭ್ರಮ ಹೇಳತೀರದು. ಮೂರೂ ದಿವಸವೂ ಸಂಜೆ ಉರಿವ ಪಂಜನ್ನು ಹಿಡಿದು ‘ಪುಂಡಿಯ ಕಡ್ಡಿ.. ಕೆಂಡದಾ ರೊಟ್ಟಿ..’ ಎಂದು ಕೂಗುತ್ತಾ ಪಂಜಿನಾಟ ಮಾಡುವುದು ದೀಪಾವಳಿಯ ವಿಶೇಷ. ಹೆಣ್ಣುಮಕ್ಕಳು ಅಣ್ಣ ತಮ್ಮಂದಿರಿಗೆ ದೀಪದಾರತಿ ಮಾಡುವುದೂ ಸಂಪ್ರದಾಯ.
ಪ್ರಜಾವಾಣಿ ಚಿತ್ರ
ಹಬ್ಬದ ಹೋರಿ ಕಟ್ಟಿದವನೇ ಧೀರ
ಹಬ್ಬದ ಹೋರಿ ಕಟ್ಟುವುದು ರೈತನೊಬ್ಬನ ಪ್ರತಿಷ್ಠೆ. ಓಡುವ ಹೋರಿಯನ್ನು ಹಿಡಿದು ಕೊಬ್ಬರಿ ಕಿತ್ತುಕೊಳ್ಳುವ ಸವಾಲು ಪರಾಕ್ರಮದ ಪ್ರತೀಕವೂ ಹೌದು. ಹೊನ್ನಾಳಿ, ನ್ಯಾಮತಿ, ಶಿಕಾರಿಪುರ, ಸೊರಬ, ಹಾವೇರಿ ಹಾನಗಲ್, ಹಿರೇಕೆರೂರು ಭಾಗದಲ್ಲಿ ಹೋರಿ ಹಬ್ಬ ಅತ್ಯಂತ ಜನಪ್ರಿಯ. ಭೂತಾಯಿ ಗರ್ಭ ಹೊತ್ತ ಈ ತಿಂಗಳು ಕೃಷಿ ಚಟುವಟಿಕೆಗೆ ಒಂದಿಷ್ಟು ವಿರಾಮ. ಈ ಸಮಯದಲ್ಲಿಯೇ ದನಕರುಗಳ ಸಂಭ್ರಮ ಮೈದಳೆಯುತ್ತದೆ. ದನಕರುಗಳ ಮೈ ತೊಳೆದು ಕೋಡು, ಮೈಗೆಲ್ಲ ಬಣ್ಣವನ್ನು ಹಚ್ಚುವುದು, ಕಾಲಿಗೆ ಗೆಜ್ಜೆ, ಬಣ್ಣ ಬಣ್ಣದ ಬಲೂನು, ಟೇಪು ಕಟ್ಟಿ ಅಲಂಕರಿಸಿ ಪಾದ ಪೂಜೆ ಮಾಡುವುದೇ ಹಟ್ಟಿ ಹಬ್ಬದ ಮಹತ್ವದ ಘಟ್ಟ. ಆಗ ಪೂಜೆ ಮಾಡಿ ತಮ್ಮ ಜಾನುವಾರಗಳ ಸಂರಕ್ಷಣೆ ಮತ್ತು ಆರೋಗ್ಯದ ದಯೆ ಇರಲಿ ಎಂದು ಬೇಡುತ್ತಾರೆ. ಮನೆಯೊಳಗೆ ಆಕಳನ್ನು ಕರೆತಂದು ಪೂಜೆ ಮಾಡಿ ನೈವೇಧ್ಯ ಅರ್ಪಿಸಿದರೆ ಹಬ್ಬದ ಬಹುಮುಖ್ಯ ಭಾಗ ಮುಗಿದಂತೆ ಆಗುತ್ತದೆ. ಇದಾದ ಮೇಲೆ ಯುವ ಮನಸ್ಸುಗಳು ಪರಾಕ್ರಮ ಮೆರೆಯಲು ಹಾತೊರೆಯುತ್ತವೆ. ಅಷ್ಟರಲ್ಲಾಗಲೇ ಹಬ್ಬದೂಟವನ್ನು ಸವಿದಾಗಿರುತ್ತದೆ. ಊರ ಹೋರಿ ಬೆದರಿಸುವ ಅಂಕಣದಲ್ಲಿ ಹಬ್ಬ ಮಡುಗಟ್ಟುತ್ತದೆ. ಅದುವೇ ಹಟ್ಟಿ ಹಬ್ಬದ ವಿಶೇಷಗಳಲ್ಲಿಯೇ ವಿಶೇಷ. ಬಿಡುವಿಲ್ಲದ ಕೃಷಿ ಕೆಲಸದಲ್ಲಿ ತೊಡಗಿದ ರೈತನಿಗೆ ಈಗ ಸ್ವಲ್ಪ ಬಿಡುವು. ಈ ಸಮಯದಲ್ಲೇ ತನ್ನ ನೇಗಿಲ ಸಂಗಾತಿ ಎತ್ತುಗಳನ್ನು ಸಡಗರದಿಂದ ಮೆರೆಸುತ್ತಾನೆ. ಹಬ್ಬ ಮಾಡುವ ಹೋರಿ ಬೆಳೆಸಿದ ರೈತ ಆ ಹೋರಿಗೆ ಕೊಬ್ಬರಿಯ ಸರವನ್ನು ಕಟ್ಟಿ ಬೆದರಿಸುತ್ತಾನೆ. ಓಡುವ ಅದನ್ನು ಹುರಿಯಾಳುಗಳು ಹಿಡಿದು ಕೊಬ್ಬರಿಯನ್ನು ಬಿಚ್ಚಿಕೊಳ್ಳಬೇಕು. ಕೆಲವರು ತಮ್ಮ ಹೋರಿಯನ್ನು ಹಿಡಿದವರಿಗೆ ಬಹುಮಾನವನ್ನೂ ಘೋಷಿಸುತ್ತಾರೆ.
ಪ್ರಜಾವಾಣಿ ಚಿತ್ರ
ಚೆನ್ನಾಗಿ ಹಬ್ಬ ಮಾಡುವ ಹೋರಿ ಯಾರ ಕೈಗೂ ಸಿಗದೆ ಹಿಡಿಯಲು ನಿಂತವರನ್ನೇ ಬೆದರಿಸಿ ಛಂಗನೇ ಜಿಗಿದು ಓಡುತ್ತದೆ. ನಿರ್ದಿಷ್ಟ ಪಟ್ಟಿಯನ್ನು ದಾಟಿದ ತಕ್ಷಣ ಆ ಹೋರಿಯ ಮಾಲಿಕ ಹರ್ಷೋದ್ಗಾರ, ಕೂಗಾಟ, ಕುಣಿದಾಟ ನೋಡುವುದೇ ಚಂದ. ಮತ್ತೆ ಆ ಹೋರಿಯನ್ನು ಹಿಡಿದು ತಂದು ಓಡಿಸುತ್ತಾರೆ. ಹೀಗೆ ಊರ ರೈತರೆಲ್ಲ ಒಂದೆಡೆ ಸೇರಿ ಸಂಜೆಯ ತನಕ ದನಕರುಗಳನ್ನು ಓಡಿಸುತ್ತಾರೆ. ಈ ಆಟವನ್ನು ನೋಡಲು ನೂರಾರು ಜನ ನೆರದಿರುತ್ತಾರೆ. ಸಿಕ್ಕದೆ ಓಡುವ ಹೋರಿಯನ್ನು ಅವರು ಸಿಳ್ಳೆ ಕೆಯಿಂದ ಹುರಿದುಂಬಿಸುತ್ತಾರೆ. ಅಂತೆಯೇ ಕೊಬ್ಬರಿ ಕಿತ್ತ ಪರಾಕ್ರಮಿಯನ್ನೂ ಕೊಂಡಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹೋರಿ ಬೆದರಿಸುವ ಸಂದರ್ಭ ಅಪಾಯಕಾರಿಯೂ ಆಗಿದ್ದು ಕೆಲವೊಮ್ಮ ಎತ್ತು ತಿವಿದು ಸಾವು, ನೋವುಗಳು ಆದ ಪ್ರಸಂಗಗಳು ಇವೆ. ಚಂದದಿಂದ ಓಡುವ ಹೋರಿಗೂ ಬಹುಮಾನವನ್ನು ನೀಡುತ್ತಾರೆ. ಇದಕ್ಕಾಗಿಯೇ ವಿಶೇಷ ಹೋರಿ ಬೆದರಿಸುವ ಹಬ್ಬವನ್ನು ಮಾಡುತ್ತಾರೆ. ಅದಕ್ಕಾಗಿ ರಾಜ್ಯ ವ್ಯಾಪಿ ಹಬ್ಬದ ಹೋರಿಗಳನ್ನು ಆಮಂತ್ರಿಸುತ್ತಾರೆ.
‘ಹಣತೆ ಹಚ್ಚುತ್ತೇನೆ ನಾನು’
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ’’ ಎಂದು ಜಿ.ಎಸ್. ಶಿವರುದ್ರಪ್ಪ ತಮ್ಮ ಕಾವ್ಯದಲ್ಲಿ ಹೇಳುತ್ತಾರೆ. ಹಬ್ಬದ ಬೆಳಗು ನಮ್ಮನ್ನು ನಾವು ಅರಿತು ಬಾಳುವ ಸಹನೆಯನ್ನು ವೃದ್ಧಿಸಲಿ ಎನ್ನುವ ಆಶಯದಿಂದ ದೀಪಾವಳಿಯ ಶುಭಾಶಯಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.