ವಿಶಾಲವಾದ ಅರಮನೆಯ ಪ್ರಾಂಗಣ. ಒಳಭಾಗದಲ್ಲಿ ಗುಮ್ಮಟಗಳಿರುವ ಕಟ್ಟಡಗಳು. ಪ್ರಾಂಗಣದ ಸುತ್ತಲೂ ಕೆರೆ, ತೊರೆ, ಬಾವಿಗಳು. ಗಡಿಯಲ್ಲಿ ಕಂದಕಗಳು. ಮಳೆ ನೀರು ಹರಿದು ಕೆರೆ, ತೊರೆ ಸೇರಲು ಕಾಲುವೆಗಳು.. ಒಟ್ಟಾರೆ ಒಂದೇ ನೋಟಕ್ಕೆ ಸಿಗುವ ಅದ್ಭುತ ಜಲ ಸಂರಕ್ಷಣಾ ರಚನೆಗಳು !
ಇದು ವಿಜಯಪುರ ನಗರದಲ್ಲಿನ ಭಾರಿಶಪುರದ ‘ಜಲಜಾಗೃತಿ ಕೇಂದ್ರ’ದಲ್ಲಿರುವ ಜಲಸಂರಕ್ಷಣಾ ಮಾದರಿಯೊಂದರ ತುಣುಕು. ಒಮ್ಮೆ ಈ ಕೇಂದ್ರವನ್ನು ಸುತ್ತು ಹಾಕಿದರೆ, ಇಂಥ ಮಳೆ ನೀರು ಸಂಗ್ರಹ ಮಾದರಿಗಳ ವಿಶ್ವರೂಪ ದರ್ಶನವಾಗುತ್ತದೆ. ಕೇಂದ್ರದಿಂದ ಹೊರಬರುವಾಗ ಮನದಲ್ಲಿ ‘ಕಡ್ಡಾಯವಾಗಿ ಮಳೆ ನೀರು ಹಿಡಿಯಲೇಬೇಕು’ ಎಂಬ ಸಂಕಲ್ಪವನ್ನು ಮೂಡಿಸದಿರದು.
ರಾಜ್ಯ ಸರ್ಕಾರ 2006–07ರಲ್ಲಿ ಈ ಜಲಜಾಗೃತಿ ಕೇಂದ್ರ ಸ್ಥಾಪಿಸಿದೆ. ಮಳೆ ನೀರು ಸಂಗ್ರಹ, ಇಂಗುಗುಂಡಿ, ಕೊಳವೆಬಾವಿಗೆ ಜಲಮರುಪೂರಣ ಸೇರಿದಂತೆ ಜಲಸಂರಕ್ಷಣೆ ಕುರಿತು ಜನರಲ್ಲಿರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಹೇಳಬೇಕು ಎಂಬುದು ಈ ಕೇಂದ್ರದ ಉದ್ದೇಶವಾಗಿದೆ.
ಕೇಂದ್ರದಲ್ಲಿ ಏನೇನಿದೆ ?
ಕೇಂದ್ರವನ್ನು ಪ್ರವೇಶಿಸುವ ದ್ವಾರವೇ ವಿಶೇಷವಾಗಿದೆ. ಬಾಗಿಲ ಎರಡು ಕಂಬಗಳ ಮೇಲೆ ಛತ್ರಿಯನ್ನು ಉಲ್ಟಾ ನಿಲ್ಲಿಸಿರುವ ಮಾದರಿಯಿದೆ. ಇದು ಮಳೆ ನೀರು ಸಂಗ್ರಹಿಸುವ ಮೊದಲ ಮಾದರಿ. ಕೇಂದ್ರದ ಒಳಗೆ ಪ್ರವೇಶಿಸಿದ ಕೂಡಲೇ ಕಪ್ಪೆಯ ಒಂದು ಪ್ರತಿಮೆ ಮತ್ತು ನಾಲ್ಕೈದು ಮಂದಿ ಒಗ್ಗಟ್ಟಿನಿಂದ ದೊಡ್ಡ ಮಡಕೆಯನ್ನು ಮಳೆ ನೀರಿಗಾಗಿ ಮೇಲಕ್ಕೆ ಎತ್ತಿ ಹಿಡಿದು ನಿಂತಿರುವ ಪ್ರತಿಕೃತಿ ಇದೆ. ಇದು ಎಲ್ಲರೂ ಒಗ್ಗಟ್ಟಾಗಿ ಮಳೆ ನೀರು ಹಿಡಿಯಬೇಕೆಂಬ ಸಂದೇಶ ಸಾರುವ ಮಾದರಿ.
ಮಳೆ ಬರುವಾಗ ವ್ಯಕ್ತಿಯೊಬ್ಬರು ಹೆಗಲ ಮೇಲಿನ ವಸ್ತ್ರವನ್ನೇ ಬಾನಿಗೆ ಆಲಿಕೆಯಂತೆ ಒಡ್ಡಿ ನಿಂತಿರುವ ದೃಶ್ಯವಿದೆ. ಮೂರ್ನಾಲ್ಕು ಮಂದಿ ಮಳೆ ನೀರಿಗಾಗಿ ಬೊಗಸೆ ಒಡ್ಡಿ ನಿಂತಿರುವಂತಹ ಬೊಂಬೆಗಳನ್ನು ನಿಲ್ಲಿಸಲಾಗಿದೆ. ಮಳೆ ಕೊರತೆಯಿಂದ ಕಂಗಾಲಾದ ಜನ ಕಣ್ಣಿನ ಮೇಲೆ ಕೈ ಅಡ್ಡ ಹಿಡಿದು ಮೋಡಗಳನ್ನು ಗಮನಿಸುತ್ತಿರುವ ಪ್ರತಿಕೃತಿಗಳು ನೀರಿನ ಸಮಸ್ಯೆಯ ಅಗಾಧತೆಯನ್ನು ಬಿಂಬಿಸುತ್ತವೆ. ಒಟ್ಟಾರೆ, ನೀರಿನ ಕೊರತೆ, ಅದಕ್ಕೆ ಪರಿಹಾರ ಸೂಚಿಸುವ ಹಾಗೂ ಅನುಸರಿಸಬೇಕಾದ ಮಾರ್ಗಗಳನ್ನು ಇಲ್ಲಿನ ಮಾದರಿಗಳು ಮನಸ್ಸಿಗೆ ಮುಟ್ಟಿಸುತ್ತವೆ.
ಇವೆಲ್ಲದರ ಜತೆಗೆ ಕೇಂದ್ರದ ಒಳಗಿರುವ 600 ವರ್ಷಗಳ ಹಿಂದಿನ ಆದಿಲ್‌ಶಾಹಿ ಆಳ್ವಿಕೆ ಕಾಲದ ಜಲಜಾಗೃತಿ ಕಾರ್ಯಗಳ ಪ್ರತಿಕೃತಿ ನೋಡುಗರನ್ನು ಸೆಳೆಯುತ್ತದೆ. ಆದಿಲ್‌ಶಾಹಿ ಅರಸರು, ಅರಮನೆ ಹಾಗೂ ಕೋಟೆಯ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುವ ಮಳೆ ಸಂಗ್ರಹಿಸಲು ಮಾಡಿದ್ದ ಕಾಲುವೆಗಳ ಮಾದರಿಯಿದೆ. ಬೇಗಂ ತಾಲಾಬ್ ಮತ್ತು ರಾಮ್ ನಿಂಗಂ ಕೆರೆ, ತೊರವಿ ಕೆರೆಯ ರಚನೆಯಿದೆ. ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ, ಬುರುಜು ಸೇರಿದಂತೆ ಸುತ್ತಲ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು ಎಂಬ ವಿಹಂಗಮ ಮಾದರಿ ಆಕರ್ಷಕವಾಗಿದೆ.
ವಿವಿಧ ಮಾದರಿಗಳು :
ಮನೆಯ ಚಾವಣಿ ಮೇಲೆ ಸುರಿಯುವ ಮಳೆ ನೀರನ್ನು ಹಿಡಿಯುವ ವಿವಿಧ ಮಾದರಿಗಳು ಈ ಕೇಂದ್ರದಲ್ಲಿವೆ. ತಗಡಿನ ಚಾವಣಿ, ಹೆಂಚಿನ ಮನೆ, ತಾರಸಿ ಮನೆಗಳಿಂದ ನೀರು ಸಂಗ್ರಹ, ಅಂಚೆ ಕಚೇರಿ, ಶಾಲೆಗಳ ಮೇಲೆ ಸುರಿಯುವ ಮಳೆ ನೀರನ್ನು ಹೇಗೆ ಹಿಡಿಯಬೇಕು ? ಎಂಬುದನ್ನು ಇಲ್ಲಿರುವ ಮಾದರಿಗಳು ವಿವರಿಸುತ್ತವೆ.
ಚಾವಣಿ ಮೇಲೆ ಕಸ ಬೀಳದಂತೆ ಹೇಗೆ ನೋಡಿಕೊಳ್ಳಬೇಕು? ಮಳೆ ನೀರನ್ನು ಶುದ್ಧವಾಗಿಡುವುದು ಹೇಗೆ? ಚಾವಣಿ ನೀರು ಟ್ಯಾಂಕ್ ಗೆ ಸೇರುವಂತೆ ಮಾಡುವ ವಿಧಾನ, ಮಳೆ ನೀರು ಸಮೃದ್ಧ ಗ್ರಾಮದ ಮಾದರಿ, ಇಂಗು ಗುಂಡಿಗಳ ರಚನೆಯನ್ನು ಮಾದರಿ ರೂಪದಲ್ಲಿ ತೋರಿಸಲಾಗಿದೆ. ಕಲ್ಯಾಣಿಗಳಿಗೆ ಮಳೆ ನೀರು ಸಂಗ್ರಹ ಮಾಡುವ ವಿಧಾನ, ಬೋರ್‌ವೆಲ್ ಗಳಿಗೆ ಜಲಮರುಪೂರಣ ಮಾಡುವ ತಂತ್ರಗಾರಿಕೆಯ ಪ್ರತಿಕೃತಿಯೂ ಇಲ್ಲಿದೆ.
ಮಾನವನ ಸ್ವಯಂಕೃತ ಅಪರಾಧಗಳಿಂದ ನೀರಿನ ಕೊರತೆ ಉಂಟಾಗುತ್ತಿದೆ. ನೀರು ಸಕಲ ಜೀವಿಗಳಿಗೂ ಕೇವಲ ಜಲವಲ್ಲ; ಅದು ಜೀವಜಲ. ಮಳೆಯಿಲ್ಲದಿದ್ದರೆ ನೀರಿಗಾಗಿ ಏಳುವ ಕೋಲಾಹಲ ಊಹೆಗೂ ಮೀರಿದ್ದು. ಅದಕ್ಕಾಗಿ ಮಳೆ ನೀರು ಸಂಗ್ರಹ, ಜಲ ಸಂರಕ್ಷಣೆ ಎಷ್ಟು ಅಗತ್ಯವಾದದ್ದು ಎಂಬುದನ್ನು ಈ ಮಾದರಿ ಕೇಂದ್ರ ಅರಿವು ಮೂಡಿಸಲಿದೆ.
ವಿಜಯಪುರದಲ್ಲಿ ಗೋಳಗುಮ್ಮಟ, ಬಾರಾಕಮಾನಿನಂತವು ಮಾತ್ರ ಪ್ರವಾಸಿ ತಾಣವಲ್ಲ, ಜಲ ಜಾಗೃತಿ ಮೂಡಿಸುವ ಈ ಕೇಂದ್ರ ಕೂಡ ಸೇರುತ್ತದೆ.
ಮಾಹಿತಿ ಫಲಕಗಳು
ದಿನಕ್ಕೆ ಒಬ್ಬರಿಗೆ 20 ರಿಂದ100 ಲೀಟರ್ ನೀರು ಸಾಕಾಗುತ್ತದೆ. ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ ದಿನವೊಂದಕ್ಕೆ 400 ಲೀಟರ್ ನೀರು ಬೇಕಾಗುತ್ತದೆ. ಮೂರು ತಿಂಗಳಲ್ಲಿ ಮಳೆರಾಯ ನಮ್ಮ ಅಗತ್ಯವನ್ನು ಪೂರೈಸುತ್ತಾನೆ. ಮನೆಯಲ್ಲಿ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದರೆ ತಿಂಗಳಿಗೆ ಆಗುವಷ್ಟು ನೀರು ಸಂಗ್ರಹವಾಗುವುದು. ಅಂದರೆ ಶೇ 50ರಷ್ಟು ನೀರನ್ನು ಮಳೆಯಿಂದ ಪಡೆಯಬಹುದು. ಇಂಥ ಲೆಕ್ಕಾಚಾರದ ಮಾಹಿತಿಗಳು ಜಲ ಜಾಗೃತಿ ಕೇಂದ್ರದ ಫಲಕಗಳಲ್ಲಿ ನಮೂದಿಸಲಾಗಿದೆ.
‘ನೀರು ಒಂದು ಅಮೂಲ್ಯ ಸಂಪತ್ತು .ಕೆರೆ, ಬಾವಿಗಳಲ್ಲಿ ಹೀಗೆ ಎಲ್ಲದರಲ್ಲಿಯೂ ಸಿಗುವಂತಹ ನೀರು ಇಂದು ಬರಿದಾಗುತ್ತಿದೆ. ಜಲಮೂಲ ಮಾಲಿನ್ಯಗೊಳ್ಳುವ ಮೂಲಕವೂ ಜಲ ಕ್ಷಾಮ ಉಂಟಾಗುತ್ತಿದೆ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಮಳೆ ನೀರಿನ ಸಂಗ್ರಹ ಹಾಗೂ ನೀರಿನ ಮಿತವ್ಯಯ ಹಾಗೂ ಸದ್ಬಳಕೆ’ ಎಂಬ ಅರಿವು ಮೂಡಿಸುವ ಕೆಲಸವನ್ನೂ ಈ ಕೇಂದ್ರ ಮಾಡುತ್ತಿದೆ.
‘ನಾನು ಸುಮಾರು 23 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತೀ ವರ್ಷ ಈ ಕೇಂದ್ರಕ್ಕೆ ಸುಮಾರು 50 ಸಾವಿರದಷ್ಟು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಮಳೆ ನೀರಿನ ಜಾಗೃತಿ ಬಗ್ಗೆ ವಿವರಣೆ ನೀಡುವ ಜತೆಗೆ, ಸ್ವಚ್ಛತೆಗೂ ಆದ್ಯತೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೇರೆ ಬೇರೆ ಮಾಹಿತಿಗಳನ್ನು ನೀಡುವ ಮಾದರಿಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಭವಿಷ್ಯದ ಯೋಜನೆಯನ್ನೂ ಹಂಚಿಕೊಳ್ಳುತ್ತಾರೆ ಜಲಜಾಗೃತಿ ಮಾಹಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ. ಎನ್. ಮಲ್ಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.