ADVERTISEMENT

ಆರೋಗ್ಯದ ಜತೆಗೆ ರಸಯಾತ್ರೆಯ ಭಾಗ್ಯ!

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:30 IST
Last Updated 5 ಮೇ 2018, 19:30 IST

ಎಸ್.ಪಿ. ವಿಜಯಲಕ್ಷ್ಮಿ

ಐತಿಹಾಸಿಕ, ಪಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಅನೇಕ ಸ್ಥಳಗಳಂತೆಯೇ ‘ಥರ್ಮಲ್‍ ಟ್ರೀಟ್‌ಮೆಂಟ್‌’ಗೆಂದೇ ಕೆಲವು ತಾಣಗಳು ಜನಪ್ರಿಯವಾಗಿವೆ. ಹಂಗೇರಿಯ ‘ಥರ್ಮಲ್‍ ಸ್ಪಾ’ಗಳು ಥರ್ಮಲ್‌ ಟ್ರೀಟ್‌ಮೆಂಟ್‌ಗೆ ಹೆಸರಾಗಿವೆ. ಹ್ಞಾಂ, ನಾನಿಲ್ಲಿ ಕಂಡು ಬೆರಗಾಗಿ ನಿಂತ ಟೌನ್ ‘ಹೆವಿಜ್’.

ಹಂಗೇರಿ ದೇಶದ ರಾಜಧಾನಿ ಬುಡಾಪೆಸ್ಟ್‌ನಿಂದ ಎರಡು ಗಂಟೆ ರಸ್ತೆ ಪ್ರಯಾಣದ ದೂರದಲ್ಲಿರುವ ಹೆವಿಜ್‌, ಈ ದೇಶದ ‘ಬಲತಾನ್ ರೀಜನ್‌’ನಲ್ಲಿದೆ. ವಿಶ್ವದಾದ್ಯಂತ ಇದು ಜನಪ್ರಿಯವಾಗಿರುವುದು ಥರ್ಮಲ್ ಲೇಕ್ ಮತ್ತು ಹೆಲ್ತ್ ಸ್ಪಾಗಳಿಂದ. ಇದು ಚಿಕ್ಕ ಊರು, ಆದರೆ ಪ್ರವಾಸಿಗರಿಗೆ ಬಲು ಪ್ರಿಯವಾದ ‘ಹೆಲ್ತ್ ರೆಸಾರ್ಟ್’.

ADVERTISEMENT

ಬುಡಾಪೆಸ್ಟಿನಿಂದ ನಾವು ಈ ಊರು ತಲುಪಿದಾಗ ಸಂಜೆ. ಅಚ್ಚುಕಟ್ಟಾಗಿ ಜೋಡಿಸಿದ ಮಾದರಿ ಊರಿನಂತೆ ಶುಭ್ರ ಸುಂದರವಾಗಿದ್ದ ಹೆವಿಜ್‌ ನೋಡುತ್ತ ನನ್ನ ಮನಸ್ಸಿನ ತುಂಬ ಸಂಭ್ರಮ ತುಂಬಿದ್ದು ಸುಳ್ಳಲ್ಲ. ಕುಟುಂಬಸಮೇತ ಹೋದರೆ ಇಲ್ಲಿ ಅಪಾರ್ಟ್‌ಮೆಂಟಿನಲ್ಲಿ ಉಳಿಯುವುದು ಬಜೆಟ್ ದೃಷ್ಟಿಯಿಂದ ಒಳಿತು.

ಚಂದದ ಸುಂದರಿಯೊಬ್ಬಳು ಬಂದು ಕೀ ತೆರೆದು ನಮ್ಮನ್ನು ಮನೆಯೊಳಗೆ ಸ್ವಾಗತಿಸಿದಳು. ಆ ಮನೆ ಕೂಡ ಸುಸಜ್ಜಿತವಾಗಿ ಊರಿನಷ್ಟೇ ಕ್ಯೂಟ್ ಆಗಿತ್ತು. ಒಳಗೆ ಒಂದಿಷ್ಟು ನೀರಾಟದ ಪ್ಲಾಸ್ಟಿಕ್‍ ಸಲಕರಣೆಗಳಿದ್ದವು. ಹ್ಞಾಂ, ಇಲ್ಲಿ ಎಲ್ಲ ಮನೆಗಳಲ್ಲೂ ಇವುಗಳನ್ನಿಟ್ಟಿರುತ್ತಾರೆ. ಕಾರಣ, ಇಲ್ಲಿಗೆ ಬರುವ ಪ್ರವಾಸಿಗರು ಮುಖ್ಯವಾಗಿ ಸರೋವರದಲ್ಲಿ ಕಾಲ ಕಳೆಯಲು ಬರುತ್ತಾರೆನ್ನುವುದು ಒಂಥರಾ ಡೀಫಾಲ್ಟ್.

ಹೀಗೊಂದು ಐತಿಹ್ಯ...
ಬಲತಾನ್ ಪ್ರದೇಶದ ಹೆವಿಜ್‌ಟೌನ್‌, 18ನೇ ಶತಮಾನದಲ್ಲೇ ಬೆಳಕಿಗೆ ಬಂದು, 20ನೇ ಶತಮಾನದ ಕೊನೆಗೆ ವಿಶ್ವದ ಅತ್ಯಂತ ಜನಪ್ರಿಯವಾದ ಊರಾಗಿದೆ. ಈ ಸರೋವರ ಉದ್ಭವವಾದ ಕುರಿತು ದಂತಕತೆಯೊಂದಿದೆ. ನರ್ಸೊಬ್ಬಳು ಅನಾರೋಗ್ಯದ ಮಗುವಿಗೆ ಜೀವದಾನ ಮಾಡುವಂತೆ ವರ್ಜಿನ್‍ಮೇರಿಯಲ್ಲಿ ಪ್ರಾರ್ಥಿಸಿದಾಗ, ನೆಲದಾಳದಲ್ಲಿ ಹುದುಗಿದ್ದ ವಿಸ್ಮಯ ಭೂಪದರಗಳು ಒಡೆದು ಕುದಿವ ಮಣ್ಣಿನೊಂದಿಗೆ ಕುದಿವ ನೀರೂ ಸೇರಿ ಮೇಲುಕ್ಕಿತಂತೆ. ಹೀಗೆ ಉದ್ಭವಿಸಿದ ನೀರು-ಮಣ್ಣಿನ ಲೇಪ ಮಗುವಿಗೆ ಮಾಡಿದರೆ ಗುಣವಾಗುವುದೆಂಬ ಮೇರಿಯ ಅಭಯ ನಿಜವಾಯಿತಂತೆ. ಹೀಗೆ ಇನ್ನೂ ದಂತಕತೆಗಳಿರುವ ಈ ಮಣ್ಣುನೀರು ಚರ್ಮರೋಗ ನಿವಾರಕ ಗುಣಗಳ ಹೊಂದಿದ್ದು, ಈ ಸರೋವರದ ಕೆಳಗಿನ ಭೂಭಾಗದಲ್ಲಿರುವ ಮೂವತ್ತೆಂಟು ಮೀ. ಆಳದ ಬಂಡೆಗಲ್ಲುಗಳ ಒಳಗಿಂದುಕ್ಕುವ ತಾಪಮಾನದ ಜಲಮೂಲವೇ ಇದರ ಅಸ್ತಿತ್ವಕ್ಕೆ ಆಧಾರವಾಗಿದೆ. ಈ ಜಲದ ಒಳಹರಿವು ನಿರಂತರವಾಗಿರುವುದರಿಂದ ಈ ಸರೋವರ ಬಹಳ ಶುದ್ಧವಾಗಿ ಚರ್ಮದ ಆರೋಗ್ಯಕ್ಕೆ ಬಹಳ ಅತ್ಯುತ್ತಮವಾಗಿದೆ ಎನ್ನುತ್ತವೆ ಇಲ್ಲಿನ ಮಾಹಿತಿಗಳು...

‘ಹೆವಿಜ್’ ಎಂದರೆ ಹಂಗೇರಿ ಭಾಷೆಯಲ್ಲಿ ಬಿಸಿನೀರು ಎಂದೇ ಅರ್ಥ. ಮೊದಲಿಗೆ ಇಲ್ಲಿ ಸ್ನಾನ ಮಾಡಿ ಆರೋಗ್ಯ ವೃದ್ಧಿಸಿಕೊಂಡವರು ರೋಮನ್ನರಂತೆ. ನಂತರದಲ್ಲಿ ಇತಿಹಾಸದ ಅನೇಕ ದೊರೆಗಳೂ ಈ ಆರೋಗ್ಯವರ್ಧಕ ಚಿಕಿತ್ಸೆಯ ಸ್ನಾನಕ್ಕಾಗಿ ಇಲ್ಲಿ ಧಾವಿಸಿದ್ದಾರಂತೆ.

ಏನೇನಿದೆ ಇಲ್ಲಿ?
ಹಿಂದೆಯೇ ಹೇಳಿದಂತೆ ಇದೊಂದು ಪುಟ್ಟ ಪಟ್ಟಣ. ಇಲ್ಲಿ ಅತಿ ದೊಡ್ಡದಾದ ‘ಸ್ಪಾ ರೆಸಾರ್ಟ್’ ಒಂದಿದ್ದು, ಇದೇ ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿ ಚರ್ಮರೋಗಗಳಿಗೆ ಅಥವಾ ದೇಹಕಾಂತಿ ವೃದ್ಧಿಸಿಕೊಳ್ಳಲು ಹತ್ತಾರು ವಿಧದ ಚಿಕಿತ್ಸಾ ವಿಧಾನಗಳಿವೆ. ಜೇಬು ಮಾತ್ರ ಭಾರವಿರಬೇಕು. ಪ್ರತಿಯೊಂದಕ್ಕೂ ಬೇರೆ ಬೇರೆ ಟಿಕೆಟ್, ಪ್ಯಾಕೇಜುಗಳೂ ಲಭ್ಯ. ನಾವೂ ಹೋದೆವು.

ಇಲ್ಲೊಂದು ಮರದ ಚಂದದ ಸೇತುವೆಯಿದೆ; ದಾಟಿದಾಗ ಅತಿ ದೊಡ್ಡ ಸುಸಜ್ಜಿತ ಹಾಲ್ ಸಿಗುತ್ತದೆ. ಇಲ್ಲಿನ ವಾತಾವರಣ ನನಗಂತೂ ಒಂದಿಷ್ಟು ಮುಜುಗರ ಉಂಟು ಮಾಡಿದ್ದು ಸುಳ್ಳಲ್ಲ. ಕಾರಣ, ಇದು ಸರೋವರದ ಮೇಲೆ ಕಟ್ಟಿರುವ ಕಟ್ಟಡ. ಇಲ್ಲೇ ಬದಿಯಲ್ಲಿ ನಾನಾ ತೆರನಾದ ‘ಸ್ಪಾ’ಗಳಿವೆ. ಪ್ರವಾಸಿಗರು ಸರೋವರಕ್ಕೆ ಇಳಿಯುವ, ಹೊರಬರುವ ಜಾಗವಿದು. ಹೆಂಗಸರು ಕೇವಲ ಬಿಕಿನಿಯಲ್ಲಿ, ಗಂಡಸರು ಒಳಉಡುಪಿನಲ್ಲಿದ್ದರು. ಇಲ್ಲಿಗೆ ಬರುವ ಉದ್ದೇಶವೇ ನೀರಾದ್ದರಿಂದ, ಇಂತಹ ಉಡುಗೆ ಅವರಿಗೆ ಸಾಮಾನ್ಯ. ನಿರಾಳರಾಗಿ ಬಿಸಿಬಿಸಿ ಹಬೆಯಾಡುತ್ತಿರುವ ಬೆತ್ತಲ ಮೈಯಲ್ಲೇ ನೂರಾರುಮಂದಿ ಎದುರಾಗುವ, ಬೀಚ್‍ಬೆಡ್‍ಗಳಲ್ಲಿ ಮೈಚಾಚಿ ಮಲಗಿರುವ ದೃಶ್ಯವೇ ಕಣ್ಣಿಗೆ ರಾಚಿ ನನ್ನುಸಿರು ಹೊರಬರಲಾರದೆ ಒದ್ದಾಡಿತು.

ನಾಲ್ಕಾರು ದಿನಗಳಿದ್ದು ವೈವಿಧ್ಯದ ಚಿಕಿತ್ಸೆ ಪಡೆಯಲು ಜಗತ್ತಿನ ಬೇರೆ ಬೇರೆ ಭಾಗಗಳಿಂದ ಜನರು ಹಾತೊರೆದು ಬರುತ್ತಾರೆ. ನಾಲ್ಕು ಹೆಕ್ಟೇರ್ ವಿಸ್ತಾರದಲ್ಲಿನ ಈ ಸರೋವರ, ಸುತ್ತಲ ಪರಿಸರ ಎಷ್ಟು ಮನೋಹರ ಎಂದರೆ ಮನಸ್ಸು, ಕಣ್ಣಿಗೇ ಮೊದಲು ಒತ್ತಡ ಪರಿಹಾರವಾಗಿಬಿಟ್ಟಿರುತ್ತದೆ. ನೀಲನೀರಿನ ಸರೋವರ, ಮೇಲೆ ಕಟ್ಟಿರುವ ಚಂದದ ಸ್ಪಾ ರೆಸಾರ್ಟ್ ಕಟ್ಟಡ ಇಡೀ ಪರಿಸರದ ಆಕರ್ಷಣೆ. ಈ ಸರೋವರದ ತುಂಬ ಕೆಂಪುಬಣ್ಣದ ಲಿಲ್ಲಿ ಹೂಗಳು ತುಂಬಿಕೊಂಡು ಮತ್ತೂ ಆಕರ್ಷಕವಾಗಿದೆ.

ಇಲ್ಲಿ ಸಲಹೆಗಾರರು, ಟ್ರೈನರ್ಸ್, ಡಾಕ್ಟರ್ಸ್ ಎಲ್ಲರೂ ಲಭ್ಯ. 1ರಿಂದ 7ಮೀ ಎತ್ತರದ ಖನಿಜಾಂಶಗಳ ಬಿಸಿಮಣ್ಣಿನ ಲೇಯರ್ ಮೇಲೆ ಈ ಸರೋವರ ರಚಿತವಾಗಿದ್ದು, ಇಲ್ಲಿಯ ಹ್ಯೂಮಿಕ್‍ ಆ್ಯಸಿಡ್‌ನಿಂದ ಈ ಮಣ್ಣು ಕಪ್ಪಗಿದೆ. ಇದು ಒದ್ದೆಯಿದ್ದಾಗ ದಟ್ಟ ಸಲ್ಫರ್ ವಾಸನೆ ಬರುತ್ತದೆ. ಆದರೆ ಒಣಗಿದಾಗ ಮಾಮೂಲಿ ಮಣ್ಣಿನಂತೆ ವಾಸನಾರಹಿತವಿರುವುದು. ಇದರ ರೋಗನಿವಾರಕ ಗುಣದಿಂದಾಗಿ ಇಲ್ಲಿ ಮಡ್‍ಬಾತ್ ಬಹಳ ಜನಪ್ರಿಯ. ನಾವು ರಾಮೇಶ್ವರದ ಮರಳನ್ನು  ಪವಿತ್ರ ಎಂದು ತರುವಂತೆ, ಈ ಮಣ್ಣನ್ನು ಚರ್ಮದಾರೋಗ್ಯಕ್ಕಾಗಿ ಪ್ರವಾಸಿಗರು 5-10ಕೆ.ಜಿ. ಪ್ಯಾಕ್‌ ಮಣ್ಣನ್ನು ಹಣ ತೆತ್ತು ಮನೆಗೆ ಕೊಂಡೊಯ್ಯುತ್ತಾರೆ. ಈ ಮಣ್ಣು-ನೀರು ಹಲವು ರೋಗಗಳಿಗೂ ಫಲಕಾರಿಯಂತೆ.

ಬಲತಾನ್‌ ಸರೋವರ
ಹೆವಿಜ್‌ನಲ್ಲೇ ಇರುವ ಇನ್ನೊಂದು ಸರೋವರ ‘ಬಲತಾನ್ ಸರೋವರ’. ಇದಂತೂ ಸಮುದ್ರದ ಹಾಗೆ ಭಾಸವಾಗುತ್ತದೆ. 70ಕಿ.ಮೀ. ವಿಸ್ತೀರ್ಣದ ಈ ಸರೋವರ, ಬೆಟ್ಟ, ಗುಡ್ಡ, ಪರ್ವತಗಳಿಂದ ಸುತ್ತುವರಿದಿದ್ದು, ಹತ್ತಿರದ ‘ಜಾಲಾ’ ನದಿಯಿಂದ ಹರಿವ ನೀರು ಇಲ್ಲಿಗೆ ನುಗ್ಗಿ ಸರೋವರ ಆಗಿದೆ. ಇಲ್ಲಿ ನೀವು ಒಳ ಪ್ರವೇಶಕ್ಕೆ ಟಿಕೆಟ್ ಕೊಂಡರಾಯಿತು. ಹೆವಿಜ್‌ ಸರೋವರ ಖಾಸಗಿಯಾದರೆ, ಇದು ಸಾರ್ವಜನಿಕವಾದ್ದರಿಂದ ನೀರಿಗಿಳಿಯಲು ಹಣ ತೆರಬೇಕಿಲ್ಲ. ಇಲ್ಲಿಯೂ ನೀರು, ಮಣ್ಣು ಪೂರ್ತಿ ಚರ್ಮದಾರೋಗ್ಯ ಖನಿಜಾಂಶಗಳ ತುಂಬಿಕೊಂಡಿದೆ.

ಇಲ್ಲಿಯೂ ವಿಶಾಲ ಉದ್ಯಾನವಿದ್ದು ವಿಶ್ರಾಂತಿಗೆ ಬೀಚ್‍ಬೆಡ್, ಆಟೋಟಗಳಿಗೆ ಮೈದಾನ, ಈಸಿ ಹಸಿವಾದರೆ ತಿನ್ನಲು ಒಂದು ರೆಸ್ಟೊರೆಂಟ್ ಇದೆ. ಸರೋವರದ ತುಂಬ ಬಿಕಿನಿಧಾರಿಗಳ ಹಿಂಡು ನಮ್ಮಲ್ಲಿಯ ಕುಂಭಮೇಳದಲ್ಲಿ ನೆರೆದಂತೆ ತುಂಬಿಕೊಂಡು ಮೈಮರೆತು ಬಿಡುತ್ತಾರೆ. ಇದು ಫ್ರೆಶ್‍ವಾಟರ್ ಲೇಕ್, ಸೆಂಟ್ರಲ್ ಯೂರೋಪಿನ ಅತಿದೊಡ್ಡ ಸರೋವರ. ಆದರಿದು ಹೆವಿಜ್‌ ಸರೋವರದಂತೆ ಥರ್ಮಲ್ ಅಂದರೆ ಬಿಸಿನೀರಿನ ಸರೋವರ ಅಲ್ಲ. ಚಳಿಗಾಲದಲ್ಲಿ ಇಲ್ಲಿಯ ನೀರು ಹೆಪ್ಪುಗಟ್ಟುವುದಂತೆ...

ಇಲ್ಲಿಯ ರೆಸ್ಟೊರೆಂಟ್‌ನಲ್ಲಿ ಸಿಗುವ ‘ಲಾಂಗೂಸ್’ ಎನ್ನುವ ತಿಂಡಿಗೆ ನಾನಂತೂ ಫಿದಾ ಆಗ್ಬಿಟ್ಟೆ. ನೋಡಲು ಪಿಜ್ಜಾ ಆಕಾರದ ಇದರ ರುಚಿ ತುಂಬಾ ಚೆನ್ನ.  ವೈವಿಧ್ಯದ ಸಸ್ಯಾಹಾರ ತಿಂಡಿಗಳ ಪಟ್ಟಿಯೇ ಇದೆ. ಆದರೆ ಹೆಸರು ತಿಳಿದಿರಬೇಕಷ್ಟೆ. ಬಲತಾನ್ ಏರಿಯಾ ತುಂಬಾ ದಟ್ಟಕಾಡಿದ್ದು ಪ್ರಕೃತಿಪ್ರಿಯರಾದರೆ ಕಾಲ ಕಳೆಯಲು ಕಾಡಿನ ಮಡಿಲ ಹೊಕ್ಕುಬಿಡಬಹುದು, ಅನ್ವೇಷಕರಾಗಬಹುದು, ಸೃಷ್ಟಿಯೊಂದಿಗೆ ಸೃಷ್ಟಿಯೇ ಆಗಿ ನಿರುಮ್ಮಳ ಭಾವ ಪಡೆಯಬಹುದು.

ಏನಿದು ಥರ್ಮಲ್, ಹಾಟ್‍ಸ್ಪ್ರಿಂಗ್‍ ಗೀಸರ್ ಇತ್ಯಾದಿ
ಭೂಮಿಯೊಳಗಣ ನೀರು ಅಲ್ಲಿಯ ಒತ್ತಡಕ್ಕೆ ಕುದ್ದು ಉಕ್ಕುವ, ಚಿಮ್ಮುವ ಸೃಷ್ಟಿಯ ವಿದ್ಯಮಾನವೇ ಈ ‘ಥರ್ಮಲ್‌ ಗೀಸರ್’ಗಳು. ಇವುಗಳಲ್ಲಿ ಎರಡು ವಿಧ. ಒಂದು, ಹೀಗೆ ಉಕ್ಕುವ ನೀರು ಜ್ವಾಲಾಮುಖಿಯಿಂದುಕ್ಕುವ ಮ್ಯಾಗ್ಮಾ ಟೆಂಪರೇಚರ್‌ನಲ್ಲಿದ್ದು ಹತ್ತಿರ ಹೋಗಲೂ ಅಸಾಧ್ಯವಾಗಿರುತ್ತವೆ. ಇಲ್ಲಿ ನೀರಿನೊಂದಿಗೆ ಮಣ್ಣೂ ಕೂಡ ಸೇರಿ ಕೊತಕೊತ ಕುದಿಯುತ್ತ ಭೂಮೈಮೇಲೆ ‘ಮಡ್‍ಪಾಟ್’ಗಳಾಗಿ ಕಾಣಿಸಿಕೊಳ್ಳುತ್ತವೆ. ಇಲ್ಲಿ ನೆಲದ ಮೇಲೆ ಓಡಾಡುವುದು ಅಸಾಧ್ಯ. ನ್ಯೂಜಿಲೆಂಡ್‌, ಜಪಾನ್, ಅಮೆರಿಕ, ನಮ್ಮ ಹಿಮಾಲಯದ ಕೆಲವೆಡೆಯೂ ಇಂಥ ತಾಣಗಳಿವೆ.

ಎರಡನೆಯದು ಹೀಗೆ ಭೂತಳದ ಒತ್ತಡಕ್ಕೆ ಮೇಲೇಳುವ ಬಿಸಿನೀರ ಬುಗ್ಗೆಗಳು ಸುಖೋಷ್ಣ ಸ್ಥಿತಿಯಲ್ಲಿದ್ದು ಸಹಜ ಸ್ನಾನಾದಿ ಕ್ರಿಯೆಗಳಿಗೆ ಹಿತಕಾರಿಯಾಗಿರುತ್ತವೆ; ಸುರಕ್ಷಿತವಾಗಿರುತ್ತವೆ. ಅತಿ ಬಿಸಿಯಲ್ಲಿದ್ದರೆ ಅದನ್ನು ಸುಖೋಷ್ಣ ಹದಕ್ಕೆ ಹೊಂದಿಸಿ ಬಳಸುವ ಸಾಧ್ಯತೆಯೂ ಇರುತ್ತದೆ. ಇವು ಅಷ್ಟು ಜನಪ್ರಿಯವಾಗಲು ಮುಖ್ಯ ಕಾರಣ ಈ ನೀರಿನಲ್ಲಿರುವ ರೋಗನಿವಾರಣಾ ಗುಣದಿಂದ. ಗಂಧಕ-ಸಲ್ಫರ್ ಎಂದು ಕರೆಯಲ್ಪಡುವ ಈ ನೀರು ಹೆಚ್ಚಿನ ಮಟ್ಟದ ಗಂಧಕದೊಂದಿಗೆ ಇನ್ನಿತರ ಚರ್ಮರೋಗ ನಿವಾರಣಾ ಖನಿಜಾಂಶಗಳನ್ನೂ ಹೊಂದಿರುತ್ತದೆ. ಭಾರತವನ್ನೊಳಗೊಂಡು ವಿಶ್ವದ ಅನೇಕ ಭಾಗಗಳಲ್ಲಿ ಈ ಥರ್ಮಲ್‌ ನೀರಿನ ತಾಣಗಳಿವೆ. ಹಂಗೇರಿ ಇಂಥ ಸುರಕ್ಷಿತ ಬಿಸಿನೀರ ಬುಗ್ಗೆಗಳ ದೇಶ. ಇದು ‘ಸ್ಪಾ ಕಂಟ್ರಿ’ ಎಂಬ ಹೆಗ್ಗಳಿಕೆ ಹೊತ್ತಿದೆ.

ಹೇಗೆ ಹೋಗುವುದು?
ಯೂರೋಪಿನ ಎಲ್ಲ ಮಹಾನಗರಗಳಿಂದಲೂ ಹಂಗೇರಿಯ ಬುಡಾಪೆಸ್ಟಿಗೆ ವಿಮಾನ, ರೈಲು, ಬಸ್ಸು ವ್ಯವಸ್ಥೆಯಿದೆ. ಕಾರಿನಲ್ಲಿ ಬರಬಹುದು. ಇಲ್ಲಿಂದ ಹೆವಿಜ್‌ಗೆ ಕೇವಲ ಎರಡು ಗಂಟೆಗಳಲ್ಲಿ ಹೋಗಬಹುದು. ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾಗೆ ಬಲು ಹತ್ತಿರ. ‘ಯುರಾಲಿಕ್’ ಎನ್ನುವ ಹಂಗೇರಿ ಭಾಷೆ ಮಾತನಾಡುವ ಇವರಲ್ಲಿ ಕೆಲವರು ಇಂಗ್ಲಿಷನ್ನೂ ಮಾತನಾಡುತ್ತಾರೆ. ಇಲ್ಲಿಯ ಕರೆನ್ಸಿ ‘ಫೊರೆಂಟ್’ ಆದರೂ ಡಾಲರ್, ಯೂರೋಗಳಲ್ಲೂ ವ್ಯವಹರಿಸಬಹುದು.

ಎಸ್.ಪಿ.ವಿಜಯಲಕ್ಷ್ಮಿ
ಫ್ಲಾಟ್ ನಂ 305, ಚಾರ್ಟರ್ಡಮಡಿ ಅಪಾರ್ಟಮೆಂಟ್
17ನೇ ಮುಖ್ಯರಸ್ತೆ, 2ನೇ ಹಂತ, ಜೆ.ಪಿ.ನಗರ
ಬೆಂಗಳೂರು...78
ಮೊ...9980712738

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.