ADVERTISEMENT

ಗ್ರಾಮ್ಯ ಸೊಗಡಿನ ತಾಣ

ಮೇಲುಕೋಟೆ ಚೆಲುವನಾರಾಯಣ

ಸತೀಶ ಬೆಳ್ಳಕ್ಕಿ
Published 10 ಜನವರಿ 2014, 19:30 IST
Last Updated 10 ಜನವರಿ 2014, 19:30 IST

ಕ್ಕಿಗಳು ಎದ್ದು ಆಕಳಿಸುವ ಮುನ್ನವೇ ಮನೆಯ ಮುಂದಿನ ಅಂಗಳಕ್ಕೆ ನೀರು ಚಿಮುಕಿಸಿ ಚೆಂದದ ರಂಗೋಲಿ ಬಿಡಿಸುವಲ್ಲಿ ಮಗ್ನರಾದ ಗೃಹಿಣಿಯರು, ಹಸಿರು ನೀರಿನ ಕಲ್ಯಾಣಿಯಲ್ಲಿ ಮೀಯುವ, ಮಿಂದು ಚೆಲುವನಾರಾಯಣನಿಗೆ ನಮಿಸುವ ಭಕ್ತರು, ಇದರ ನಡುವೆ ಯಾರದ್ದೋ ಮನೆಯ ಕಿಟಕಿಯಿಂದ ತೇಲಿಬರುವ ಸಂಗೀತ, ಬೆಳಗಿನ ಪೂಜೆಗೆ ಅಣಿಮಾಡಿಕೊಳ್ಳಲು ಅಗ್ರಹಾರದೊಳಗೆ ಗಡಿಬಿಡಿಯಿಂದ ಓಡಾಡುತ್ತಿರುವ ಅರ್ಚಕರು, ಪೇಟೆ ಬೀದಿಯ ಕೊನೆಯಲ್ಲಿರುವ ಪುಟ್ಟ ಹೋಟೆಲ್‌ನ ಅಡುಗೆ ಮನೆಯೊಳಗೆ ಬಾಣಲಿಯಲ್ಲಿ ಬೇಯುತ್ತಿರುವ ಪುಳಿಯೋಗರೆ ವಗ್ಗರಣೆಯ ಘಮಲು.. 

– ಬೆಳ್ಳಂಬೆಳಗ್ಗೆ ಮೇಲುಕೋಟೆಯೊಳಗೆ ಒಂದು ಸುತ್ತು ಹಾಕಿದರೆ ಮನಸ್ಸಿಗೆ ಮುದ ನೀಡುವ ಇಂತಹ ಅನೇಕ ಚಿತ್ರಗಳು ಕಣ್ಣಿಗೆ ಬೀಳುತ್ತವೆ. ಆಧುನಿಕತೆಯನ್ನು ಅಪ್ಪಿಕೊಳ್ಳದೇ ಇಂದಿಗೂ ಗ್ರಾಮ್ಯ ಸೊಗಡನ್ನು ಉಳಿಸಿಕೊಂಡಿರುವುದು ಈ ಊರಿನ ವಿಶೇಷ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಮೇಲುಕೋಟೆ ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ. ದೈವ ಭಕ್ತಿಯ ಜತೆಗೆ ಪ್ರಕೃತಿಯ ರಮ್ಯತೆಯನ್ನು ಪ್ರವಾಸಿಗರಿಗೆ ಮೊಗೆದು ಉಣಬಡಿಸುವುದು ಈ ಊರಿನ ಮತ್ತೊಂದು ವಿಶೇಷತೆ. ಇಲ್ಲಿ ಸಿಗುವ ಅಯ್ಯಂಗಾರಿ ಪುಳಿಯೋಗರೆ, ಕೈಮಗ್ಗದಿಂದ ತಯಾರಾದ ಧೋತಿ ಮತ್ತು ಸೀರೆಗಳು ತುಂಬಾ ಜನಪ್ರಿಯ.

ಬೆಂಗಳೂರಿನಿಂದ 133 ಕಿ.ಮೀ, ಮಂಡ್ಯದಿಂದ 36 ಕಿ.ಮೀ. ಅಂತರದಲ್ಲಿರುವ ಮೇಲುಕೋಟೆ ಹಲವು ವಿಶೇಷತೆಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಒಂದು ದಿನದ ಪ್ರಯಾಣಕ್ಕೆ ಇದು ಹೇಳಿಮಾಡಿಸಿದಂತಹ ತಾಣ. ನಾರಾಯಣಾದ್ರಿ, ವೇದಾದ್ರಿ, ಯಾದವಾದ್ರಿ ಮತ್ತು ತಿರುನಾರಾಯಣಪುರ ಅಂತೆಲ್ಲಾ ಕರೆಯಿಸಿಕೊಂಡಿದ್ದ ಈ ಕ್ಷೇತ್ರವೀಗ ಮೇಲುಕೋಟೆ ಎಂದು ಪ್ರಸಿದ್ಧಿ ಪಡೆದಿದೆ. ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಯೋಗ ನರಸಿಂಹ ದೇವಸ್ಥಾನ, ಕಲ್ಲಿನಿಂದ ಆವೃತ್ತವಾದ ಪುಷ್ಕರಣಿ, ರಾಯಗೋಪುರ, ಅಕ್ಕ ತಂಗಿ ಕೊಳ, ಸಂಸ್ಕೃತ ಕಾಲೇಜು ಮತ್ತು ಗ್ರಂಥಾಲಯ ಮೇಲುಕೋಟೆಯ ಪ್ರಮುಖ ಆಕರ್ಷಣೆಯ ಕೇಂದ್ರಗಳು.  

12ನೇ ಶತಮಾನದಲ್ಲಿದ್ದ ಶ್ರೀರಾಮನುಜಾಚಾರ್ಯ ಅವರು ಮೇಲುಕೋಟೆಯಲ್ಲಿ 14 ವರ್ಷ ಉಳಿದುಕೊಂಡಿದ್ದರು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ. ತಮಿಳುನಾಡಿನಿಂದ ಮೇಲುಕೋಟೆಗೆ ಬಂದ ಶ್ರೀರಾಮಾನುಜಾಚಾರ್ಯರು ಹೊಯ್ಸಳ ದೊರೆ ಬಿಟ್ಟಿದೇವನ ನೆರವಿನಿಂದ ಭವ್ಯ ದೇವಸ್ಥಾನ ನಿರ್ಮಿಸಿ, ಚೆಲುವನಾರಾಯಣ ಸ್ವಾಮಿಯನ್ನು ಇಲ್ಲಿ ಪುನರ್‌ ಪ್ರತಿಷ್ಠಾಪಿಸಿದರೆಂದು ಇತಿಹಾಸ ಹೇಳುತ್ತದೆ. ಇಲ್ಲಿನ ಚೆಲುವನಾರಾಯಣಸ್ವಾಮಿಗೆ ವರ್ಷಕ್ಕೊಮ್ಮೆ  ಶ್ರೀಕೃಷ್ಣ ರಾಜಮುಡಿ, ವೈರಮುಡಿ ಬ್ರಹ್ಮೋತ್ಸವವನ್ನು ಅತ್ಯಂತ ವೈಭವದಿಂದ ನಡೆಸಲಾಗುತ್ತದೆ. ಹತ್ತು ದಿನ ನಡೆವ ಈ ಉತ್ಸವಗಳಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.

ಸಮುದ್ರ ಮಟ್ಟದಿಂದ 1,777ಮೀಟರ್‌ ಎತ್ತರದಲ್ಲಿರುವ ಯೋಗ ನರಸಿಂಹ ಸ್ವಾಮಿ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ. ಗರ್ಭಗುಡಿಯಲ್ಲಿ ಯೋಗ ಪಟ್ಟ ತೊಟ್ಟ ಯೋಗ ನರಸಿಂಹ ಸ್ವಾಮಿಯ ಸುಂದರ ವಿಗ್ರಹವಿದೆ. ನಿಸರ್ಗದ ರಮ್ಯತೆಯನ್ನು ಮಡಿಲಲ್ಲಿ ಇಟ್ಟುಕೊಂಡು ಬೀಗುವ ಮೇಲುಕೋಟೆಯ ಸೌಂದರ್ಯ ಈ ಬೆಟ್ಟದ ಮೇಲೆ ನಿಂತು ನೋಡಿದಾಗ ಮತ್ತಷ್ಟು ಮೋಹಕವಾಗಿ ಕಾಣಿಸುತ್ತದೆ. ಈ ದೇವಾಲಯದಲ್ಲಿ ಟಿಪ್ಪು ಸುಲ್ತಾನ ದಾನವಾಗಿ ನೀಡಿದ ಒಂದು ನಗಾರಿ ಹಾಗೂ ಮೈಸೂರಿನ ಪರಕಾಲ ಮಠದವರು ನೀಡಿದ ಒಂದು ಘಂಟೆ ಇದೆ. ಈ ದೇವಾಲಯ ಸಪ್ತನರಸಿಂಹ ಕ್ಷೇತ್ರಗಳಲ್ಲಿ ಒಂದು ಎಂಬ ಪ್ರತೀತಿ ಇದೆ.

ಮನೆ ಮಂದಿಯೊಂದಿಗೆ ಒಂದು ದಿನದ ಆಹ್ಲಾದಕರ ಪ್ರವಾಸಕ್ಕೆ ಮೇಲುಕೋಟೆ ಅತ್ಯುತ್ತಮ ತಾಣ. ಈ ಊರಿಗೆ ಚಳಿಗಾಲದಲ್ಲಿ ಹೋದರೆ ಒಳ್ಳೆಯದು. ದೇವರ ದರ್ಶನದ ಜತೆಗೆ ಪ್ರಕೃತಿಯ ರಮ್ಯತೆಯನ್ನು ಮನಸಾರೆ ಸವಿಯಬಹುದು. ಮೇಲುಕೋಟೆಗೆ ಬಸ್‌ ಸಂಪರ್ಕ ಚೆನ್ನಾಗಿದೆ. ಪ್ರವಾಸಿಗರಿಗೆ ಅತಿಥ್ಯ ನೀಡಲು ಚಿಕ್ಕಪುಟ್ಟ ಹೋಟೆಲ್‌ಗಳಿವೆ. ಮನಸ್ಸಿಗೆ ಮುದ ನೀಡುವ ಈ ಊರಿನಲ್ಲಿ ಉಳಿದುಕೊಳ್ಳ ಬಯಸುವವರಿಗೆ ಮಾತ್ರ ಉತ್ತಮ ಲಾಡ್ಜ್‌ಗಳ ವ್ಯವಸ್ಥೆ ಇಲ್ಲ. ಹಾಗಾಗಿ, ಮಂಡ್ಯದಲ್ಲಿ ಉಳಿದುಕೊಂಡರೆ ಸೂಕ್ತ. ದೇವರ ದರ್ಶನ ಆದ ನಂತರ ಮೇಲುಕೋಟೆಯೊಳಗೆ ಅಡ್ಡಾಡಿದರೆ ಒಂದು ಪ್ರಫುಲ್ಲ ಅನುಭವ ನಿಮ್ಮದಾಗುತ್ತದೆ.

ADVERTISEMENT

ಹ್ಞಾ, ಮೇಲುಕೋಟೆಯಲ್ಲಿ ಸಿಗುವ ಅಯ್ಯಂಗಾರಿ ಪುಳಿಯೋಗರೆ ಸವಿಯುವುದನ್ನು ಮಾತ್ರ ಮರೆಯಬೇಡಿ. ಮಿಸ್‌ ಮಾಡದೇ ತಿನ್ನಬೇಕಾದ ತಿಂಡಿಯಿದು. ಪುಳಿಯೋಗರೆ ರುಚಿ ಇಷ್ಟವಾದರೆ ಪುಳಿಯೋಗರೆ ಮಿಕ್ಸ್‌ನ್ನು ಸಹ ಕೊಂಡುಕೊಳ್ಳಬಹುದು. ಅಂದಹಾಗೆ, ಕನ್ನಡ ಸಾರಸ್ವತ ಲೋಕಕ್ಕೆ ಗಣನೀಯ ಕೊಡುಗೆಯನ್ನಿತ್ತ ಪು.ತಿ.ನ. ಅವರು ಹುಟ್ಟಿ ಬೆಳೆದಿದ್ದು ಇಲ್ಲಿಯೇ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ತವರೂರು ಈ ಮೇಲುಕೋಟೆ.

ಶೂಟಿಂಗ್‌ ತಾಣ
ಮೇಲುಕೋಟೆ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವಂತೆ ಸಿನಿಮಾದವರನ್ನು ಹೆಚ್ಚು ಆಕರ್ಷಿಸಿದ ತಾಣ. ಮೇಲುಕೋಟೆಯಲ್ಲಿ ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಯ ಅನೇಕ ಚಿತ್ರಗಳು ಚಿತ್ರೀಕರಣಗೊಂಡಿವೆ. ರಜನಿಕಾಂತ್‌, ಅಕ್ಕಿನೇನಿ ನಾಗಾರ್ಜುನ ಅವರಿಗೆ ಮೇಲುಕೋಟೆಯ ಮೇಲೆ ವಿಶೇಷ ಅಕ್ಕರೆ. ಅವರ ಅಭಿನಯದ ಅನೇಕ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ರಾಯ ಗೋಪುರ, ಅಕ್ಕ ತಂಗಿ ಕೊಳದ ಬಳಿ ಲೆಕ್ಕವಿಲ್ಲದಷ್ಟು ಚಿತ್ರಗಳ ಶೂಟಿಂಗ್‌ ನಡೆದಿದೆ.
–ಕೆ.ಎಂ. ಸತೀಶ್‌ ಬೆಳ್ಳಕ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.