ADVERTISEMENT

ಚಂದ್ರನ ತುಣುಕು `ಪೊಲೊಲೆಮ್'

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2013, 19:59 IST
Last Updated 2 ಫೆಬ್ರುವರಿ 2013, 19:59 IST
ಚಂದ್ರನ ತುಣುಕು `ಪೊಲೊಲೆಮ್'
ಚಂದ್ರನ ತುಣುಕು `ಪೊಲೊಲೆಮ್'   

ಬಿಳಿ ಮರಳು, ನೀಲಿ ನೀರು, ಹಸಿರು ಮರಗಳು, ಅಗಾಧ ಶರಧಿ, ಉಕ್ಕುವ ಅಲೆಗಳು... ಇದೆಲ್ಲ ಬಣ್ಣನೆ ಗೋವಾದ ಪೊಲೊಲೆಮ್ ಸಮುದ್ರ ತೀರಕ್ಕೆ ಸಲ್ಲಬೇಕು. ಚಂದ್ರನ ತುಣುಕಿನಂತೆ (ಅರ್ಧ ಚಂದ್ರಾಕೃತಿಯಲ್ಲಿ) ಕಾಣಿಸುವ, ಗೋವಾದ ದಕ್ಷಿಣ ಭಾಗದಲ್ಲಿ ಇರುವ ಪೊಲೊಲೆಮ್ ಕಡಲ ತೀರಕ್ಕೆ ಅಸಗಾಂವ್‌ನಿಂದ 83 ಕಿಮೀ, ಬೇಕಲ್‌ನಿಂದ 368 ಕಿಮೀ, ಗೋಕರ್ಣದಿಂದ 96ಕಿಮೀ, ಮಡಗಾಂವ್‌ನಿಂದ 43 ಕಿಮೀ, ಕಾರವಾರದಿಂದ 40 ಕಿಮೀ ಅಂತರ.

ಛೌದಿ ಪಟ್ಟಣದ ಸಮೀಪ ಇರುವ ಪೊಲೊಲೆಮ್ ತೀರ ವಿಶಿಷ್ಟ ಎನ್ನಿಸಲಿಕ್ಕೆ ಕಾರಣ ಅದಕ್ಕೆ ಹೊಂದಿಕೊಂಡಂತೆ ಇರುವ ದ್ವೀಪ. ಅದನ್ನು ಸ್ಥಳೀಯರು `ಮಂಕಿ ದ್ವೀಪ' ಎಂದು ಕರೆಯುತ್ತಾರೆ. ಸಮುದ್ರ ತೀರದಲ್ಲಿ ನಡೆದಾಡುವ ಪ್ರವಾಸಿಗರು ದ್ವೀಪಕ್ಕೆ ನಡೆದುಕೊಂಡೇ ಹೋಗಬಹುದು. ಸಮುದ್ರ ತಡಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವುದರಿಂದ ಇದಕ್ಕೆ ಇಂಥ ಕಳೆ. ಅಲ್ಲಿ ಕುಳಿತು ಅಲೆಗಳನ್ನು ಎಣಿಸಬಹುದು ಹಾರಾಡುವ ನೀರಹಕ್ಕಿಗಳನ್ನು ನೋಡಬಹುದು.

ನೀರ ನಡುವಿನ ಹಸಿರು ಗುಡ್ಡದಲ್ಲಿ ಕುಳಿತಿದ್ದರೆ ಸಮುದ್ರದ ನಟ್ಟನಡುವೆ ಕುಳಿತ ಅನುಭವ ದೊರೆಯುತ್ತದೆ. ತೀರದುದ್ದಕ್ಕೂ ಕಲಾಕೃತಿಗಳಂತೆ ಕಂಗೊಳಿಸುವ ಬಂಡೆಗಳು ನೋಟದ ಆನಂದವನ್ನು ಹೆಚ್ಚಿಸುತ್ತವೆ.

ಮಾಲಿನ್ಯದಿಂದ ಸಾಕಷ್ಟು ಮುಕ್ತವಾದ ಪೊಲೊಲೆಮ್‌ನಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಕಾಟೇಜ್‌ಗಳಿವೆ. ಟ್ರೆಕ್ಕಿಂಗ್, ದೋಣಿ ಯಾನ, ಸ್ಕೂಬಾ ಡೈವಿಂಗ್‌ಗೆ ಅವಕಾಶ ಇದೆ. ರಾತ್ರಿ ವೇಳೆಯಲ್ಲಿ ಸುಳಿಯುವ ತೀರಯಾನಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಈ ತಾಣಕ್ಕೆ ಹೆಚ್ಚಾಗಿ ನವದಂಪತಿಗಳೇ ಬರುವುದರಿಂದ ಅವರಿಗಾಗಿಯೇ ವಿಶಿಷ್ಟವಾಗಿ ರೆಸ್ಟೊರೆಂಟ್‌ಗಳನ್ನು ಸಿಂಗರಿಸಲಾಗಿದೆ.

ಹೆಚ್ಚು ಜನಜಂಗುಳಿ ಇಲ್ಲದ ಈ ಸಮುದ್ರ ತೀರದಲ್ಲಿ ಡಾಲ್ಫಿನ್‌ಗಳೂ ಇವೆ. ಸೂರ್ಯಾಸ್ತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಡಾಲ್ಫಿನ್‌ಗಳ ದರ್ಶನ ಆಗುತ್ತಿರುತ್ತದೆ. ಸಾಕಷ್ಟು ಸಿನಿಮಾಗಳಲ್ಲಿಯೂ ಪೊಲೊಲೆಮ್ ಸಮುದ್ರದ ಅಂದವನ್ನು ಸೆರೆ ಹಿಡಿಯಲಾಗಿದೆ.

ಅರ್ಧಚಂದ್ರಾಕೃತಿಯ ಅಪರೂಪದ ಪೊಲೊಲೆಮ್ ಶರಧಿಯ ನೋಟ ಪ್ರವಾಸಿಗರ ಮೈಮನಗಳನ್ನು ಪುಳಕಿತಗೊಳಿಸಿ ಅವಿಸ್ಮರಣೀಯ ಅನುಭವ ನೀಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.