ADVERTISEMENT

ಮಂಜಿನ ಜಗದಲಿ ಸಂಜೆಯವರೆಗೆ...

ಸುಚೇತಾ ಕೆ.ಎನ್.
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಮಂಜಿನ ಜಗದಲಿ ಸಂಜೆಯವರೆಗೆ...
ಮಂಜಿನ ಜಗದಲಿ ಸಂಜೆಯವರೆಗೆ...   

ನಾವು ಕುಳಿತಿರುವ ರೈಲು, ನಾರ್ವೆಯ ಕಡಲ ತೀರದಲ್ಲಿರುವ ಬಂದರು ಪಟ್ಟಣವಾದ ಬರ್ಗೆನ್‌ನ ನಸುಗತ್ತಲ ಬೀದಿಗಳನ್ನು ದಾಟಿ, ರಾಜಧಾನಿ ಓಸ್ಲೋ ಕಡೆಗೆ ಚಲಿಸುತ್ತಿದೆ. ಗಂಟೆ ಒಂಬತ್ತಾಗುತ್ತಾ ಬಂತು. ಈಗಷ್ಟೇ ನಿಧಾನವಾಗಿ ಬೆಳಕಾಗುತ್ತಿದೆ.

ನೆಲದ ತುಂಬೆಲ್ಲಾ ಬಿಳಿಯ ಜಮಖಾನ ಹಾಸಿದಂತೆ ಬೆಳ್ಮಂಜು, ಚಳಿರಾಯನ ಹೊಡೆತಕ್ಕೆ ಹೆದರಿ ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ನಿಂತ ಕಪ್ಪು ಕಪ್ಪು ಮರಗಳು ಕಣ್ಣಿಗೆ ಬೀಳುತ್ತಿವೆ. ಹತ್ತಿರಹತ್ತಿರವಾಗಿ ಹರಡಿಕೊಂಡಿರುವ ಗುಡ್ಡಗಳ ಮಧ್ಯದಲ್ಲಿ ನಮ್ಮ ಪುಟ್ಟ ರೈಲು ಹೆಚ್ಚು ಸದ್ದಿಲ್ಲದೇ ಸಾಗುತ್ತಿದೆ. ಎಲ್ಲವೂ ಹಿಮದ ಹೊದಿಕೆಯಡಿ ಹೂತು ಹೋಗಿವೆ.

ಹಲವೆಡೆ ಮೇಲಿಂದ ಕೆಳಗೆ ಧುಮುಕಲೆತ್ನಿಸಿದ್ದ ನೀರ ಹನಿಗಳು, ನೆಲ ತಲುಪಲಾಗದೆ ಸೋತು ಅಲ್ಲೇ ಹರಳುಗಟ್ಟಿ ಚೂಪಾದ ಕೋನಾಕೃತಿಗಳನ್ನು ನಿರ್ಮಿಸಿವೆ. ಆದರೂ ಅಪರೂಪಕ್ಕೊಮ್ಮೆ ಸುಂದರ ಜಲಪಾತಗಳ ದರ್ಶನವಾಗುತ್ತಿದೆ.

ಈಗ ವಾಸ್ಸ್ ಎಂಬ ನಿಲ್ದಾಣದಲ್ಲಿ ರೈಲು ನಿಂತಿದೆ. ಹೊರಗೆ ಮಂಜಿನ ಮಳೆಯಾಗುತ್ತಿದೆ. ಒಳಗೆ ಹತ್ತಿದವರು ತಮ್ಮ ಬೂಟಿಗೆ, ಕೋಟಿಗೆ, ಹ್ಯಾಟಿಗೆ ಅಂಟಿಕೊಂಡ ಹಿಮದ ಹರಳುಗಳನ್ನು ಕೊಡವಿಕೊಳ್ಳುತ್ತಿದ್ದಾರೆ.

ನಿನ್ನೆ ಕೂಡ ಇದೇ ರೈಲಿನಲ್ಲಿ ಪ್ರಯಾಣಿಸಿ ವಾಸ್ಸ್‌ನಲ್ಲಿ ಇಳಿದು ಫಿಯೋರ್ಡ್ ಪ್ರವಾಸ ಹೊರಟಿದ್ದೆವು. ನಮ್ಮ ಜೊತೆಗೇ ಇಲ್ಲಿ ಇಳಿದವರು ಅದೆಷ್ಟೋ ಮಂದಿ. ಆದರೆ ಹೆಚ್ಚಿನವರು ಸ್ಕೀಯಿಂಗ್ ಮಾಡಲು ಬಂದವರಾಗಿದ್ದರು. ನಾವು ಅಲ್ಲಿಂದ ಬಸ್ ಹತ್ತಿಕೊಂಡು ಗುಡ್ ವಾಂಗೇನ್ ಎನ್ನುವ ಸ್ಥಳ ತಲುಪಬೇಕಿತ್ತು. ಮೊದಲೇ ಬುಕ್ ಮಾಡಿಕೊಂಡು ಹೋಗಿದ್ದರಿಂದ ಬಸ್ ಸಿಗುವುದು ಕಷ್ಟವಾಗಲಿಲ್ಲ. ಬಸ್ ಚಾಲಕನಿಗೆ ಟಿಕೆಟ್ ತೋರಿಸಿ ಒಳಹೊಕ್ಕು ಆರಾಮಾಗಿ ಆಸೀನರಾಗಿ, ಮುಂದಿನ ಪ್ರಯಾಣದ ಆರಂಭಕ್ಕಾಗಿ ಕಾಯುತ್ತಾ ಕುಳಿತೆವು.

ಸುತ್ತಲೂ ಹತ್ತಿ ಮೆತ್ತಿದಂತಹ ಬಟ್ಟಬಯಲುಗಳ ನಡುವೆ, ಸ್ವಚ್ಛಗೊಳಿಸಿದ್ದ ಡಾಂಬರು ರಸ್ತೆಯಲ್ಲಿ ಬಸ್ಸು ಹೊರಟಿತು. ಇಲ್ಲಿನ ವಾಹನಗಳ ಒಳಗೆ ಹೀಟರ್‌ಗಳು ಇರುತ್ತವೆಯಾದ್ದರಿಂದ ಎಲ್ಲೂ ಚಳಿಯ ಅನುಭವವಾಗಲಿಲ್ಲ. ಅಲ್ಲಲ್ಲಿ ಇದ್ದ ಸರೋವರಗಳು ಗಡ್ಡೆಕಟ್ಟಿಕೊಂಡು ಗಟ್ಟಿಯಾಗಿದ್ದವು.

ನಮ್ಮ ಪಠ್ಯಪುಸ್ತಕದಲ್ಲಿದ್ದ ಕಾವ್ಯದ ಒಂದು ಭಾಗ ನೆನಪಾಯಿತು. ದುರ್ಯೋಧನ ಭೀಮಸೇನನಿಂದ ತಪ್ಪಿಸಿಕೊಳ್ಳಲು ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಾಗ ಅದನ್ನು ತಿಳಿದ ಭೀಮ ಅವನನ್ನು ಹೀಯಾಳಿಸುತ್ತಾನೆ. ಇದರಿಂದ ಸುಯೋಧನ ಕುಪಿತನಾಗುತ್ತಾನೆ. ಅವನ ಸಿಟ್ಟಿನ ಬಿಸಿಗೆ, ನೀರು ಕುದಿಯಲಾರಂಭಿಸಿ ಅಲ್ಲಿದ್ದ ಜಲಚರಗಳೆಲ್ಲ ಬೆಂದುಹೋಗುತ್ತವಂತೆ.

ಈ ಕೊಳಗಳಲ್ಲಿ ನೀರು ಪೂರ್ತಿ ಹೆಪ್ಪುಗಟ್ಟಿದರೆ ಮೀನುಗಳ ಕಥೆ ಏನಾಗಬಹುದೆಂಬ ಯೋಚನೆ ಬಂತು. ಆದರೆ ಇಲ್ಲಿ ನೀರಿನ ಮೇಲ್ಪದರವಷ್ಟೇ ಗಟ್ಟಿಯಾಗಿರುತ್ತದೆ, ಒಳಗೆ ತಕ್ಕ ಮಟ್ಟಿಗೆ ಬೆಚ್ಚಗಿದ್ದು ನೀರು ದ್ರವರೂಪದಲ್ಲೇ ಇರುತ್ತದೆ.

ಗುಡ್ ವಾಂಗೇನ್ ಬೆಟ್ಟಗುಡ್ಡಗಳಿಂದ ಆವೃತವಾದ, ಪುಟ್ಟ ಹಳ್ಳಿ. ಕೆಲವು ಚಿಕ್ಕ ಮನೆಗಳು, ಸುವೆನೀರ್ ಅಂಗಡಿ ಕಂಡದ್ದು ಬಿಟ್ಟರೆ ಬೇರೇನಿಲ್ಲ. ನಮ್ಮ ಮುಂದಿನ ಫಿಯೋರ್ಡ್ ಪ್ರವಾಸ ಅಲ್ಲಿಂದಲೇ ಪ್ರಾರಂಭವಾಗುತ್ತಿತ್ತು. ‘ಫಿಯೋರ್ಡ್’ ಎಂದರೆ ಕಡಿದಾದ ಪರ್ವತ ಶ್ರೇಣಿಗಳ ನಡುವಿನ ಕಿರಿದಾದ ಜಾಗಗಳಲ್ಲಿ ಸಮುದ್ರದ ನೀರು ಒಳಪ್ರವೇಶಿಸಿ ನಿರ್ಮಿಸಿರುವ ಖಾರಿಗಳು. ನಾರ್ವೆಯಲ್ಲಿ ಇಂತಹ ಖಾರಿಗಳು ಬಹಳಷ್ಟಿವೆ ಮತ್ತು ಪ್ರವಾಸಿಗರು ಅವುಗಳ ಸೌಂದರ್ಯ ಸವಿಯಲೆಂದು ಬೋಟುಗಳ ವ್ಯವಸ್ಥೆ ಮಾಡಲಾಗಿದೆ.

ಸುವೆನೀರ್ ಅಂಗಡಿಯಲ್ಲಿ ಸುಮ್ಮನೆ ಒಂದು ಸುತ್ತು ಹಾಕಿ, ಅಲ್ಲಲ್ಲಿ ಛಾಯಾಚಿತ್ರಗಳ ಸೆರೆ ಹಿಡಿಯುತ್ತಾ ಅಡ್ಡಾಡುವಷ್ಟರಲ್ಲಿ ಬೋಟ್ ಬಂದು ನಿಂತಿತು. ನಮ್ಮ ಟಿಕೆಟ್ ನೋಡಿ ಒಳಗೆ ಹೋಗಲು ಅನುಮತಿ ನೀಡಿದ ಬಾಗಿಲಲ್ಲಿ ನಿಂತಿದ್ದಾತ. ಎತ್ತರದ ಜಾಗದಲ್ಲಿ ಹೋಗಿ ನಿಂತುಕೊಂಡೆವು. ನೆರೊಯ್ ಫಿಯೋರ್ಡ್ ನಮ್ಮೆದುರು ಉದ್ದಕ್ಕೆ ಹರಡಿತ್ತು. ನಿಧಾನವಾಗಿ ನೀರಲೆಗಳನ್ನು ಹಿಂದೆ ಜೀಕಿ ನಮ್ಮ ಜಲ ಸಾರಿಗೆ ಮುಂದಡಿಯಿಡುತಿತ್ತು.

ಬಕ್ಕನೋಸಿ ಎನ್ನುವ ಪರ್ವತದ ತಪ್ಪಲಿನಲ್ಲಿ ಇದ್ದ ಬಕ್ಕ ಎನ್ನುವ ಪುಟ್ಟ ಹಳ್ಳಿ ಮೊದಲಿಗೆ ಎದುರಾಯಿತು. ಸುಮಾರು ಹತ್ತು ಜನರು ವಾಸವಾಗಿದ್ದಾರಂತೆ ಇಲ್ಲಿ. ಮುಂದೆ ಹೋದಂತೆಲ್ಲ ಹಿಮಾಚ್ಛಾದಿತ ಪರ್ವತ ಶ್ರೇಣಿಗಳು, ಒಂದೆರಡು ಸಣ್ಣ ಹಳ್ಳಿಗಳು ಕಂಡವು. ಕುಳಿರ್ಗಾಳಿ ಜೋರಾಗಿ ಬೀಸುತಿತ್ತು, ಚಳಿ ಹೆಚ್ಚಾಯಿತು. ಬೆರಳುಗಳೆಲ್ಲ ನೋಯಲು ಪ್ರಾರಂಭವಾಯಿತು. ಕೈಚೀಲ ಧರಿಸಿ ಬೆಚ್ಚಗೆ ಒಂದೆಡೆ ಕುಳಿತೆ.

ನಂತರದಲ್ಲಿ ನಮ್ಮ ಎಡ ಭಾಗದಲ್ಲಿದ್ದ  ಸುಮಾರು 500 ಮೀಟರ್ ಎತ್ತರದ ಸಾಗ್ ಫಾಸ್ಸೆನ್ ಜಲಪಾತ ಜಾರಿ ಕೆಳಗಿದ್ದ ಖಾರಿಗೆ ಸೇರುತಿದ್ದ ನೋಟ ಕಣ್ಮನ ಸೆಳೆಯಿತು. ಹಲವು ಕ್ಯಾಮೆರಾಗಳು ಕ್ಲಿಕ್ ಕ್ಲಿಕ್ ಎಂದು ಸದ್ದು ಮಾಡಿದವು. ಮುಂದೆ ಪುಟ್ಟ ತಿರುವಿನಲ್ಲಿ ನೆರೊಯ್ ಫಿಯೋರ್ಡ್ ಮತ್ತು ಆರ್ಲ್ಯಾಂಡ್ಸ್ ಫಿಯೋರ್ಡ್ ಸಂಗಮವಾಗುತಿತ್ತು. ಬೋಟು ತನ್ನ ದಿಕ್ಕು ಬದಲಿಸಿ ಆರ್ಲ್ಯಾಂಡ್ಸ್ ಫಿಯೋರ್ಡ್ ಕಡೆಗೆ ಸಾಗಿತು. ಮತ್ತದೇ ಧವಳಗಿರಿಗಳ ಸಾಲು, ಅಗಾಧ ಜಲರಾಶಿ, ಹಿಮಕರಗಿ ಧುಮುಕುತ್ತಿದ್ದ ಅಲ್ಪಕಾಲದ ಜಲಧಾರೆಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದ್ದವು.

ಸುಮಾರು ಎರಡು ಗಂಟೆಗಳ ಕಾಲ ನೀರಿನಲ್ಲಿ ತೇಲುತ್ತಾ ‘ಫ್ಲ್ಯಾಮ್’ ಎನ್ನುವ ಸ್ಥಳ ಸೇರಿದೆವು. ಅಲ್ಲಿಂದ ಫ್ಲ್ಯಾಮ್ ರೈಲಿನಲ್ಲಿ ಸುಮಾರು 2800 ಅಡಿಗಳಷ್ಟು ಮೇಲೆ ಇರುವ ಮಿರ್ಡಾಲ್ ಎನ್ನುವ ಊರು ತಲುಪಬೇಕಿತ್ತು. ಇದ್ದ ಅರ್ಧ ಗಂಟೆಯನ್ನು ಊರು ನೋಡುತ್ತಾ ಕಳೆದು ಕೊನೆಗೆ ಊಟಕ್ಕೆ ಸಮಯ ಸಿಗದೇ ರೈಲಿನಲ್ಲಿ ಕುಳಿತು ತಂದಿದ್ದ ಹಣ್ಣು ಹಂಪಲು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾಯಿತು.

ಮುಂದಿನ ಸುಮಾರು ಒಂದು ಗಂಟೆಯ ಕಾಲ ಅಪೂರ್ವ ಅನುಭವವೊಂದು ನಮ್ಮದಾಗಲಿತ್ತು. ಇದನ್ನು ಮಾತಲ್ಲಿ ಹೇಳಿದರೆ ಅಪೂರ್ಣವೆನಿಸುತ್ತದೆ. ಬರೆಯುವುದಕ್ಕೆ ಪದಗಳನ್ನು ಹುಡುಕಬೇಕಾಗಿದೆ. ಚಿತ್ರಗಳಿಂದಲೂ ಇದರ ಮೋಹಕತೆಯನ್ನು ಸೆರೆಹಿಡಿಯಲು ಸಾಧ್ಯವಿಲ್ಲ. ಕೇವಲ ಅನುಭವಕ್ಕಷ್ಟೇ ಸೀಮಿತ ಇದು.

ಕಣಿವೆಗಳ ನಡುವಲ್ಲೆಲ್ಲೋ ನಮ್ಮ ಬಂಡಿ ಸಾಗುತಿತ್ತು. ಆಕಾಶವೇ ಬಾಯ್ತೆರೆದು ನುಂಗುತ್ತಿದೆಯೇನೋ ಎಂಬಂತೆ ಬೆಟ್ಟಗಳ ತುದಿಗಳೆಲ್ಲವೂ ಕಾಣೆಯಾಗಿದ್ದವು. ಮರಗಿಡಗಳೆಲ್ಲ ಶ್ವೇತಧಾರಿಗಳಾಗಿದ್ದವು. ಅಲ್ಲಲ್ಲಿ ಕೆಲವರು ಸ್ಕೀಯಿಂಗ್ ಮಾಡುತ್ತಿದ್ದುದನ್ನು ಕಂಡೆ. ಮುಂದೆ ದಾರಿಯಲ್ಲಿ ಶಿಯೋಸ್ ಫಾಸ್ಸೆನ್ ಎನ್ನುವ ಜಲಪಾತದೆದುರು ರೈಲು ನಿಂತಿತು. ಬೇರೆ ಸಮಯದಲ್ಲಾದರೆ ಭೋರ್ಗರೆಯುತ್ತಾ ಧುಮುಕುವ ಈ ಜಲಪಾತ, ಚಳಿಗೆ ಮರಗಟ್ಟಿ ನಿಧಾನವಾಗಿ ಜಾರುತ್ತಿತ್ತು. ಅಲ್ಲೊಂದಷ್ಟು ಫೋಟೊ ತೆಗೆಯುವ ಪ್ರಯತ್ನ ಮಾಡಿದೆ. ನಾಲ್ಕು ಗಂಟೆಯ ಹೊತ್ತಿಗೆ ಮಿರ್ಡಾಲ್ ತಲುಪಿದ್ದೆವು. ಆಗಲೇ ಸೂರ್ಯಾಸ್ತವಾಗುವ ಸಮಯವಾಗಿತ್ತು.

ಇಲ್ಲಿನ ಜನರಿಗೆ ಬದುಕಲು ಪ್ರಕೃತಿ ಪೂರಕವಾಗಿಲ್ಲ. ವಿಪರೀತ ಚಳಿ, ಬಿಟ್ಟೂ ಬಿಡದೆ ಸುರಿಯುವ ಹಿಮ, ಸೂರ್ಯನ ಬೆಳಕಿಗೆ ಪರಿತಪಿಸಬೇಕಾದ ಪರಿಸ್ಥಿತಿ ಚಳಿಗಾಲದಲ್ಲಾದರೆ ಬೇಸಿಗೆಯಲ್ಲಿ ರಾತ್ರಿಯಲ್ಲೂ ಬೆಳಕು ಇರುತ್ತದೆ. ಮಧ್ಯರಾತ್ರಿಯಲ್ಲಿ ಸೂರ್ಯೋದಯವಾಗುವ ನಾಡು ನಾರ್ವೇಯಲ್ಲವೇ!
ಈ ಕಷ್ಟದಲ್ಲೂ ಜನ ಬದುಕಿದ್ದಾರೆ. ಅವುಗಳಿಗೆ ಸವಾಲೆನ್ನುವಂತೆ ಬೆಳೆದಿದ್ದಾರೆ. ಬಂಡೆಗಳನ್ನೂ ಕೊರೆದು ಸುರಂಗಮಾರ್ಗ ನಿರ್ಮಿಸಿಕೊಂಡು ದಾರಿ ಮಾಡಿಕೊಂಡಿದ್ದಾರೆ. ಅವರ ಕಷ್ಟ ಸಹಿಷ್ಣುತೆಯನ್ನು ಮೆಚ್ಚಲೇಬೇಕು.

ಹಿಂದಿನ ದಿನ ಮಿರ್ಡಾಲ್‌ನಿಂದ ಬರ್ಗೆನ್‌ನ ದಾರಿ ಹಿಡಿದಾಗಲೇ ಕತ್ತಲಾಗಿತ್ತು. ಏನೂ ನೋಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಅದೇ ದಾರಿಯಲ್ಲಿ ಮತ್ತೆ ಪಯಣ. ಕಿಟಕಿಯಾಚೆಗಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಬೆಚ್ಚಗೆ ಒಳಗೆ ಕುಳಿತು, ಬರೆಯುತ್ತಿದ್ದೇನೆ.

ಹೊರಗೆ ದೊಡ್ಡ ಹತ್ತಿಯ ಉಂಡೆಗಳಂತೆ ಕಾಣುತ್ತಿರುವ ಮಂಜು ಎಷ್ಟು ಢಾಳಾಗಿ ಸುರಿಯುತ್ತಿದೆಯೆಂದರೆ, ರೈಲು ಹಳಿಯ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳ ಕೂಡ ಮುಚ್ಚಿಹೋಗಿದೆ. ಸೇತುವೆಗಳ ಮೇಲೆ ಪದರ ಪದರಗಳಾಗಿ ಶೇಖರವಾದ ಹಿಮ ಮನುಷ್ಯರ ಹೆಜ್ಜೆ ಗುರುತೂ ಕಾಣದಂತೆ ಎಲ್ಲವನ್ನೂ ಅಳಿಸಿಹಾಕಿದೆ.

ಎದುರು ಕಾಣುತ್ತಿರುವ ಮನೆಗಳ ಬಾಗಿಲುಗಳು ತೆರೆಯಲಾಗದಂತೆ ಹುಗಿದು ಹೋಗಿವೆ. ಹಿಮಪಾತ ತಡೆಯಲು ಗುಡ್ಡಗಳ ಇಳಿಜಾರಿನಲ್ಲಿ ಕೆಲವೆಡೆ ತಡೆಗಳನ್ನು ನಿರ್ಮಿಸಲಾಗಿದೆ. ಅವೂ ಭಾರಕ್ಕೆ ಕೆಳಗೆ ಬಾಗಿದಂತೆ ಕಾಣುತ್ತಿದೆ.

ಈಗ ಮತ್ತೆ ಮಿರ್ಡಾಲ್ ನಿಲ್ದಾಣದಲ್ಲಿದ್ದೇವೆ. ಇಳಿಯುವವರು, ಇಳಿದಾಯಿತು. ಹತ್ತುವವರು ಹತ್ತುತ್ತಿದ್ದಾರೆ. ಬಾಗಿಲಲ್ಲಿ ನಿಂತು ಹೊರಗೊಮ್ಮೆ ನೋಡುತ್ತಿದ್ದೇನೆ. ಕೆಳಗೆ ಇಳಿದು ಆಡುವ ಮನಸ್ಸಾದರೂ ಅದು ಸಾಧ್ಯವಾಗದು. ಖಂಡಿತ ಮತ್ತೊಮ್ಮೆ ಬರುವೆ ಎಂದು ಆ ಊರಿಗೆ ವಿದಾಯ ಹೇಳಿದೆ.
ಈಗ ಉಗಿಬಂಡಿ ಹೊರಟಿದೆ ಓಸ್ಲೋ ನಗರಿಯೆಡೆಗೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT