ADVERTISEMENT

ಸಮಾಜ ಮುಖಿ ಹಿರೇಮಾಗಡಿ ಸುಕ್ಷೇತ್ರ

ಉಮೇಶ್ ಬಿಚ್ಚುಗತ್ತಿ
Published 29 ಮೇ 2011, 9:40 IST
Last Updated 29 ಮೇ 2011, 9:40 IST
ಸಮಾಜ ಮುಖಿ ಹಿರೇಮಾಗಡಿ ಸುಕ್ಷೇತ್ರ
ಸಮಾಜ ಮುಖಿ ಹಿರೇಮಾಗಡಿ ಸುಕ್ಷೇತ್ರ   

ಪವಿತ್ರ ಪುಣ್ಯ ಕ್ಷೇತ್ರ ಅಲ್ಲದೇ, ಅನಾಥಾಶ್ರಮ, ವೃದ್ಧಾಶ್ರಮ, ಶಿಕ್ಷಣ ಕ್ಷೇತ್ರವಾಗಿ ಸೊರಬ ತಾಲ್ಲೂಕಿನ ಹಿರೇಮಾಗಡಿ ಸುಕ್ಷೇತ್ರ ತನ್ನದೇ ಆದ ಹಿರಿಮೆ-ಗರಿಮೆ ಹೊಂದಿದೆ.ಸುಮಾರು 1,500 ಜನಸಂಖ್ಯೆ ಇರುವ, ಹಂಚಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಗಡಿಭಾಗದಲ್ಲಿರುವ ಕ್ಷೇತ್ರಕ್ಕೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ.

ದೊಡ್ಡ ಮಠ ಕ್ಷೇತ್ರದಲ್ಲಿ ಇರುವುದರಿಂದ, ಹಿರೇ ಮಾಗುಂಡಿ/ಮಾಗಡಿ ಹೆಸರಾಗಿದೆ ಎನ್ನಲಾಗಿದ್ದು, ಚಿತ್ರದುರ್ಗದ ಬೃಹನ್ಮಠದ ಚನ್ನಬಸವ ಮುರುಘರಾಜೇಂದ್ರ ಸ್ವಾಮೀಜಿ ಧರ್ಮ, ದೇವರು, ಅಹಿಂಸೆಯ ತತ್ವಗಳನ್ನು ಬೀರುತ್ತಾ ಪಾದಚಾರಿಯಾಗಿ ಗ್ರಾಮಕ್ಕೆ ಬಂದು, ಇಲ್ಲಿನ ಪವಿತ್ರವನದಲ್ಲಿ ತಪಸ್ಸು ಆಚರಿಸಿದರು.
 
ಗ್ರಾಮದ ಹೊರಭಾಗದಲ್ಲಿ ಇರುವ ವನದಲ್ಲಿ 101 ಬಿಲ್ವಪತ್ರೆ ಗಿಡಗಳಿದ್ದವು. ಸ್ವಾಮೀಜಿ ದಯೆಯಿಂದ ಮಗನ ಕುಂಟುತನ ದೂರವಾದ ಹಿನ್ನೆಲೆಯಲ್ಲಿ ಗ್ರಾಮದ ಪಟೇಲರು ಸ್ವಾಮೀಜಿ ಬೇಡಿಕೆಯಂತೆ ಮಠವನ್ನು ಕಟ್ಟಿಸಿ ಕೊಟ್ಟರು. ಪಟೇಲರ ಕುಟುಂಬದವರ ಸಮಾಧಿ ಸ್ವಾಮೀಜಿ ಗದ್ದುಗೆಯ ಎದುರಿಗೆ ಇದೆ ಎನ್ನುತ್ತಾರೆ ಗ್ರಾಮಸ್ಥರು.

ಈವರೆಗೆ ಮಠ 15- 20 ಮಠಾಧೀಶರನ್ನು ಕಂಡಿದ್ದು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಕಳೆದ 27 ವರ್ಷಗಳಿಂದ ಪಟ್ಟದಲ್ಲಿ ಇದ್ದಾರೆ. ಮಠದಲ್ಲಿ ಮುರುಘರಾಜೇಂದ್ರ ಕಾನ್ವೆಂಟ್ ಸ್ಥಾಪನೆಗೆ ಕಾರಣರಾಗಿದ್ದು, ವೃದ್ಧಾಶ್ರಮ, ಅನಾಥಾಶ್ರಮದ ಮೂಲಕ ಬಡ ಜನರ ಬದುಕಿಗೆ ಆಸರೆ ಆಗಿದ್ದಾರೆ. ಭಕ್ತರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪ್ರೇರೇಪಿಸಿದ್ದಾರೆ.

ಮಠಕ್ಕೆ ತಾಲ್ಲೂಕು, ಜಿಲ್ಲೆ ಅಲ್ಲದೇ ದಾವಣಗೆರೆ, ಧಾರವಾಡ, ಗದಗ, ಹಾವೇರಿ ಮೊದಲಾದ ಕಡೆಗಳಿಂದ ಸಹಸ್ರಾರು ಭಕ್ತರಿದ್ದಾರೆ. ಪ್ರತಿ ವರ್ಷ ಕಡೆಯ ಕಾರ್ತಿಕ ಅಮಾವಾಸ್ಯೆಯಂದು ನಡೆಯುವ ಕಾರ್ತಿಕೋತ್ಸವ, ಯುಗಾದಿ ನಂತರದ ನವಮಿ, ದಶಮಿಯಂದು ನಡೆಯುವ ಜಾತ್ರೋತ್ಸವಕ್ಕೆ ಕಿಕ್ಕಿರಿದು ಸೇರುತ್ತಾರೆ.

ಮಠದ ಆವರಣದಲ್ಲಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳಿಗೆ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಗ್ರಾಮ ಹಾಗೂ ಸುತ್ತಮುತ್ತ ಸುಮಾರು 10ರಿಂದ 13ನೇ ಶತಮಾನದ ಅವಧಿಯ ಪ್ರಾಚೀನ ದೇಗುಲಗಳು, ಅವಶೇಷಗಳು ಕಂಡು ಬರುತ್ತವೆ.

ಮೂಲಸೌಕರ್ಯ ಕೊರತೆ: ಸರ್ಕಾರದ ಸ್ಪಂದನೆ- ಗ್ರಾಮ ಹಾಗೂ ಮಠಕ್ಕೆ ಶತಮಾನಗಳ ಇತಿಹಾಸವಿದ್ದರೂ ಮೂಲಸೌಕರ್ಯ ಕೊರತೆ ಇನ್ನೂ ನೀಗಿಲ್ಲ. ರಸ್ತೆ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಇದು ಬಸ್ ಸಂಚಾರಕ್ಕೂ ಅಡ್ಡಿಯಾಗಿದ್ದು, ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು 10 ಕಿಮೀಗೂ ಹೆಚ್ಚು ಅಂತರದಿಂದ ನಡೆದುಕೊಂಡೇ ಮುಖ್ಯರಸ್ತೆ ಸೇರಬೇಕಿದೆ.

ಗ್ರಾಮಸ್ಥರ ಮನವಿಗೆ ಸರ್ಕಾರ ಸ್ಪಂದಿಸಿದ್ದು, 10ನೇ ಮೈಲುಕಲ್ಲಿನಿಂದ ಹಿರೇಮಾಗಡಿ ಹಾಗೂ ಅಲ್ಲಿಂದ ಗಂಗೊಳ್ಳಿ ಗ್ರಾಮಕ್ಕೆ ಸಾಗುವ ರಸ್ತೆ ಅಭಿವೃದ್ಧಿಗೆ ಒಟ್ಟು ರೂ. 2 ಕೋಟಿ ಮಂಜೂರು ಮಾಡಿದೆ. ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಒಳಪಡಿಸಲಾಗಿದೆ. ಕುಗ್ರಾಮಕ್ಕೆ ವಸತಿಶಾಲೆಗಳನ್ನು ಮಂಜೂರು ಮಾಡುವ ಮೂಲಕ ಅಭಿವೃದ್ಧಿಗೆ ಮುಂದಾಗಿದೆ.

ಆಸ್ಪತ್ರೆಗೆ ಬೇಡಿಕೆ: ಸುತ್ತ ಹತ್ತಾರು ಗ್ರಾಮಗಳಿದ್ದು, ಸಮೀಪದಲ್ಲಿ ಆಸ್ಪತ್ರೆ ಇಲ್ಲದಿರುವುದರಿಂದ ವೃದ್ಧರು ಹಾಗೂ ಮಹಿಳೆಯರಿಗೆ ಅತೀವ ತೊಂದರೆ ಆಗಿದೆ. ಶೀಘ್ರ ಸರ್ಕಾರಿ ಆರೋಗ್ಯ ಕೇಂದ್ರ ಆರಂಭಗೊಂಡಲ್ಲಿ ನಿವಾಸಿಗಳ ಅನೇಕ ವರ್ಷಗಳ ಬವಣೆ ನೀಗಿದಂತೆ ಆಗುತ್ತದೆ ಎಂಬುದು ಗ್ರಾಮಸ್ಥರು ಒಕ್ಕೊರಲ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.