ADVERTISEMENT

ಇಂಬಳಗಳ ರಾಜಧಾನಿ ನಿಶಾನಿ ಮೊಟ್ಟೆ

ಕೆವಿನ್‌ ಕಿಶೋರ್‌
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ನಿಶಾನಿ ಮೊಟ್ಟೆ
ನಿಶಾನಿ ಮೊಟ್ಟೆ   

ಮಂಜಿನ ನಗರಿ, ಕರ್ನಾಟಕದ ಕಾಶ್ಮೀರ ಎಂದೇ ಪ್ರಖ್ಯಾತಿ ಪಡೆದಿರುವ ಕೊಡಗಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಎಲ್ಲ ಕಾಲಕ್ಕೂ  ಹಿತವೆನಿಸುತ್ತದೆ. ಅದರಲ್ಲೂ ಚುಮುಚುಮು ಚಳಿಯಲ್ಲಿ ಅತ್ತ ಪ್ರಯಾಣ ಬೆಳೆಸಿದರೆ ಅದ್ಭುತ ಅನುಭವಗಳ ಬುತ್ತಿಯೇ ನೆನಪಿನಂಗಳದಲ್ಲಿ ಭದ್ರವಾಗುತ್ತದೆ.

ಅದರಲ್ಲೂ ಇಂಬಳಗಳ ರಾಜಧಾನಿ ಎಂದೇ ಕರೆಸಿಕೊಳ್ಳುವ ‘ನಿಶಾನಿ ಮೊಟ್ಟೆ’ಯ ಸುಂದರ ಸ್ಥಳಗಳಲ್ಲಿ ವಿಹರಿಸುವ ಸಲುವಾಗಿ ಕೆಲ ದಿನಗಳ ಹಿಂದೆ ಮುಂಜಾನೆ ನಾನು ಮತ್ತು ನಾಲ್ಕು ಜನ ಸ್ನೇಹಿತರು ಪ್ರಯಾಣ ಆರಂಭಿಸಿದೆವು. ಹಾಸನ ಮಾರ್ಗವಾಗಿ ನಮ್ಮ ಪ್ರಯಾಣ ಆರಂಭವಾಯಿತು. ಈ ಮಾರ್ಗದಲ್ಲಿ ಪ್ರಯಾಣಿಸುವುದೇ ಒಂದು ಸಂಭ್ರಮ.

ಮೊದಲೇ ನಿರ್ಧರಿಸಿದಂತೆ ‘ದೇವರಕೊಲ್ಲಿ’ ಜಲಪಾತದಲ್ಲಿ ಮೊದಲ ದಿನ ತಂಗಿದೆವು. ಮಡಿಕೇರಿಯಿಂದ ಕೆಲವೇ ಕಿ.ಮೀ. ಅಂತರದಲ್ಲಿ ಮಂಗಳೂರು ಮಾರ್ಗದಲ್ಲಿ ಈ ಜಲಪಾತವಿದೆ. ಈ ಜಲಪಾತದ ಆಸುಪಾಸಿನಲ್ಲಿ ಕೆಲವು ಕುರುಕಲು ತಿಂಡಿಗಳ ಮಳಿಗೆಗಳಿವೆ. ಜಲಪಾತಕ್ಕೆ ಇಳಿದು ಸ್ನಾನ ಮಾಡಲು ಅಥವಾ ನೀರಿನಲ್ಲಿ ಆಟವಾಡಲು ಸಾಧ್ಯವಿಲ್ಲ. ಆದರೆ, ಸುಂದರ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಸದವಕಾಶ ಇಲ್ಲಿದೆ.

ADVERTISEMENT

ಸಣ್ಣ ವಿರಾಮದ ನಂತರ ‘ದೇವರಗುಡಿ’ ಜಲಪಾತದತ್ತ ನಮ್ಮ ಪ್ರಯಾಣ ಬೆಳೆಸಿದೆವು. ಸಂಪಾಂಜೆಯಿಂದ 13 ಕಿ.ಮೀ. ದೂರದಲ್ಲಿರುವ ತೊಡಿಕಾನ ಎಂಬ ಹಳ್ಳಿಯಲ್ಲಿ ಈ ಜಲಪಾತವಿದೆ. ನಮ್ಮ ವಾಹನವನ್ನು ಜಲಪಾತದಿಂದ ಎರಡು ಕಿ.ಮೀ ಹಿಂದೆಯೇ ನಿಲ್ಲಿಸಿ ನಡೆದುಕೊಂಡೇ ಜಲಪಾತ ತಲುಪಿದೆವು.

ಮುಂಗಾರಿನ ಸಂದರ್ಭದಲ್ಲಿ ಈ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಜನವರಿ ಕೊನೆಯವರೆಗೂ ಈ ಜಲಪಾತ ಮೈ ತುಂಬಿಕೊಂಡಿರುತ್ತದೆ. ಬೇಸಿಗೆಯಲ್ಲಿ ಜಲಪಾತದಲ್ಲಿ ನೀರು ಇರುವುದಿಲ್ಲ. ಜಲಪಾತದಲ್ಲಿ ಅಪಾಯಕಾರಿ ಸುಳಿಗಳಿವೆ. ಹಾಗಾಗಿ ಮಕ್ಕಳೊಂದಿಗೆ ತೆರಳಿದಾಗ ಎಚ್ಚರಿಕೆ ಅಗತ್ಯ ಎಂಬುದು ಸ್ಥಳೀಯರು ಹೇಳುವ ಕಿವಿಮಾತು.

ಸ್ನಾನ ಮಾಡಿದ ನಂತರ ಭಾಗಮಂಡಲದ ಮಯೂರ ಕಾವೇರಿ ರೆಸ್ಟೊರೆಂಟ್‌ನಲ್ಲಿ ನಾವು ತಂಗಿದೆವು. ಭಾಗಮಂಡಲ ಪಕ್ಕದ ಸಣ್ಣ ಹಳ್ಳಿಯಲ್ಲಿ ರಾತ್ರಿಯ ಭೋಜನ ಸವಿದೆವು. ಮಾರನೆ ದಿನ ಬೆಳಿಗ್ಗೆ ಭಾಗಮಂಡಲದಲ್ಲಿನ ಅರಣ್ಯ ಕಚೇರಿಗೆ ಭೇಟಿ ನೀಡಿ ‘ನಿಶಾನಿ ಮೊಟ್ಟೆ’ಗೆ ಟ್ರೆಕಿಂಗ್ ಹೋಗಲು ಒಪ್ಪಿಗೆ ಪಡೆದುಕೊಂಡ ನಂತರ ಪ್ರವೇಶ ಶುಲ್ಕ ಮತ್ತು ಮಾರ್ಗದರ್ಶಕರ ಶುಲ್ಕ ಭರಿಸಿದೆವು. ಅಲ್ಲಿಂದ ಇನ್ನೊಂದು ಹೊಸ ಗೆಳೆಯರ ಬಳಗ ಸಹ ಟ್ರೆಕಿಂಗ್‌ನಲ್ಲಿ ನಮ್ಮ ಜೊತೆಯಾಯಿತು.

ಒಟ್ಟು 5 ಕಿ.ಮೀ. ವ್ಯಾಪ್ತಿಯ ಟ್ರೆಕಿಂಗ್ ಪ್ರದೇಶ ‘ನಿಶಾನಿ ಮೊಟ್ಟೆ’. ಬೆಳಿಗ್ಗೆ 9ಕ್ಕೆ ಅತ್ತ ಪ್ರಯಾಣ ಆರಂಭಿಸಿದೆವು. ಆರಂಭದಲ್ಲಿಯೇ ಬೃಹತ್‌ ಗಾತ್ರದ ಮರಗಳು ಸ್ವಾಗತಿಸಿದವು. ನಂತರದ 20 ನಿಮಿಷಗಳ ‍‍ಪ್ರಯಾಣದ ತರುವಾಯ ಹಸಿರ ವನಸಿರಿಯ ನಡುವೆ ಸಾವಿರಾರು ಇಂಬಳಗಳು ನಮ್ಮತ್ತ ಜಿಗಿದು ಬರುತ್ತಿದ್ದ ದೃಶ್ಯ ಕಂಡು ಮೂಕವಿಸ್ಮಿತರಾದೆವು. ಈ ಪ್ರದೇಶವನ್ನು ‘ಇಂಬಳಗಳ ರಾಜಧಾನಿ’ ಎಂದು ಕರೆಯುವುದರಲ್ಲಿ ಅಶ್ಚರ್ಯವಿಲ್ಲ ಎಂದೆನಿಸಿತು.

2 ಗಂಟೆಗಳ ಟ್ರೆಕಿಂಗ್‌ ನಂತರ ನಾವು ಮಂಜು ಮುಸುಕಿದ್ದ ಎತ್ತರದ ಪ್ರದೇಶಕ್ಕೆ ತಲುಪಿದೆವು. ಅಲ್ಲಿದ್ದ ಪ್ರತಿಕ್ಷಣವು ಅಲ್ಲಿಯ ಹಸಿರು ಮತ್ತು ಇಂಬಳಗಳನ್ನು ಸಂಭ್ರಮಿಸಿದೆವು. ನಮಗಾಗಿ ಕಾಯುತ್ತಿದ್ದ ಜೀಪು ಹತ್ತಿ ಮಧ್ಯಾಹ್ನ 2.30ಕ್ಕೆ ಅರಣ್ಯ ಇಲಾಖೆಯ ಕಚೇರಿ ತಲುಪಿದೆವು. ಊಟವನ್ನು ಮುಗಿಸಿ ಅಲ್ಲಿಂದ ಕೇವಲ 15 ನಿಮಿಷ ಪ್ರಯಾಣದ ಅಂತರದಲ್ಲಿರುವ ತಲಕಾವೇರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದೆವು. ಕಾವೇರಿಯ ಉಗಮ ಸ್ಥಾನದ ಸೌಂದರ್ಯವನ್ನು ಕಣ್ತುಂಬಿಕೊಂಡು ಸುಂದರ ನೆನಪಿನ ಬುತ್ತಿಯೊಂದಿಗೆ ಮಂಜಿನ ನಗರಿಯಿಂದ ಸಿಲಿಕಾನ್ ಸಿಟಿಯತ್ತ ಒಲ್ಲದ ಮನಸಿನಿಂದ ಪ್ರಯಾಣ ಬೆಳೆಸಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.