ADVERTISEMENT

ಅಮೆರಿಕಾ-ಯೊಸೆಮಿಟಿ ನ್ಯಾಷನಲ್ ಪಾರ್ಕ್ ಸಾಹಸಿ ಪ್ರವಾಸಿಗರ ಸ್ವರ್ಗ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:30 IST
Last Updated 25 ಸೆಪ್ಟೆಂಬರ್ 2019, 19:30 IST
ಯೊಸೆಟಿಮಿ ನ್ಯಾಷನಲ್ ಪಾರ್ಕ್‌ನ ಮಾಹಿತಿ ಕೇಂದ್ರ
ಯೊಸೆಟಿಮಿ ನ್ಯಾಷನಲ್ ಪಾರ್ಕ್‌ನ ಮಾಹಿತಿ ಕೇಂದ್ರ   

ಅಮೆರಿಕ, ಎಲ್ಲರಂತೆ ನಮಗೆಲ್ಲ ಚಿಕ್ಕಂದಿನಿಂದಲೂ ಕುತೂಹಲ ಹುಟ್ಟಿಸಿದ ದೇಶ. ವಿದೇಶ ಅಂದ್ರೆ ಅಮೆರಿಕ. ತಪ್ಪಿದರೆ ಲಂಡನ್. ಇವೆರಡೇ ನಮ್ಮ ಕಿವಿಗೆ ಬೀಳುತ್ತಿದ್ದ ಹೆಸರುಗಳು.ಈಗ ಬಾರಿ ಅಮೆರಿಕಕ್ಕೆ ಭೇಟಿ ನೀಡಿದಾಗ ನನಗೆ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡಲು ನ್ಯೂಯಾರ್ಕ್, ವಾಷಿಂಗ್ಟನ್‌, ನಯಾಗರ ಫಾಲ್ಸ್ ಬಿಟ್ಟರೆ ಬೇರೆ ಕಡೆ ತಿರುಗಾಡಲು ಆಗಿರಲಿಲ್ಲ.

ಈ ಬಾರಿ ತುಸು ಸಿದ್ಧನಾಗಿಯೇ ಹೊರಟೆ. ಮೊದಲ ಅವಕಾಶ ಸಿಕ್ಕಿದ್ದು ಪ್ರಸಿದ್ಧ ಯೊಸೆಮಿಟಿ ರಾಷ್ಟ್ರೀಯ ಉದ್ಯಾನಕ್ಕೆ. ಇದು ಕ್ಯಾಲಿಫೋರ್ನಿಯಾದ ಮಾರಿಪೋಸ ಜಿಲ್ಲೆಯಲ್ಲಿ ಹರಡಿಕೊಂಡಿದೆ. ಇದು ಸುಮಾರು 1,169 ಚದರಮೈಲಿಗಳ ವ್ಯಾಪ್ತಿಯಲ್ಲಿದೆ. 1890ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಮನ್ನಣೆ ಪಡೆದಿದೆ. ಆ ಕಾಲದಿಂದಲೇ ನಿಸರ್ಗಪ್ರಿಯರು, ಶಿಲಾ ವಿಜ್ಞಾನಿಗಳು, ಪ್ರವಾಸಪ್ರಿಯರು ಈ ತಾಣಕ್ಕೆ ಮುಗಿಬಿದ್ದಿದ್ದಾರೆ.

ನಾವು ಪಾರ್ಕ್‌ ಪ್ರವೇಶಿಸಿದಾಗ ಮೊದಲಿಗೆ ಏಕಶಿಲಾ ವೈಭವ ನಮ್ಮ ಕಣ್ಣುಗಳನ್ನು ಸರಕ್ಕನೆ ಸೆಳೆಯುತ್ತದೆ. ಅದೇ ‘ಎಲ್ ಕ್ಯಾಪಿಟಾನ್’. ನಮ್ಮ ವೀಕ್ಷಣೆಗೆ ಸಿಗುವ ಹಾಫ್ ಡೋಮ್ ಶಿಲಾಗೋಳವು ನಮಗೆ ಹೋರಿಯ ಬೆನ್ನ ಹಿಣಿಲಿನಂತೆ ಭಾಸವಾಗುತ್ತದೆ. ಅಮೆರಿಕನ್ನರು‌ ಅದಕ್ಕೆ ಹಾಫ್ ಡೋಮ್ ಎಂದು ಹೆಸರಿಸಿದ್ದಾರೆ.

ADVERTISEMENT

ಅಮೆರಿಕನ್ ಇಂಡಿಯನ್ನರ ಜನಪದ ಐತಿಹ್ಯವು ಒಂದು ಕುತೂಹಲದ ಕತೆಯನ್ನೇ ಹೇಳುತ್ತದೆ. ಒಮ್ಮೆ ಪತಿ–ಪತ್ನಿಯರಿಗೆ ವಾಗ್ಯುದ್ಧ, ಕಾದಾಟ ನಡೆಯಿತಂತೆ. ಅಸಮಾಧಾನಗೊಂಡ ದೈವಗಳು ಅವರೀರ್ವರನ್ನೂ ಕಲ್ಲಾಗಿ ಮಾರ್ಪಾಡು ಮಾಡಿದವಂತೆ. ಒಂದನ್ನ ಹಾಫ್ ಡೋಮ್ ಅಂತಲೂ ಇನ್ನೊಂದು ಭಾಗವನ್ನ ನಾರ್ತ್ ಡೋಮ್ ಎಂದೂ ಹೆಸರಿಸಲಾಗಿದೆ.

ಶಿಲಾರೋಹಿಗಳಿಗೆ ಸವಾಲು!

ಶಿಖರವೇರುವ ಸಾಹಸಿಗರಿಗೆ 1868 ರಲ್ಲಿ ಒಂದು ಪಂಥಾಹ್ವಾನ ನೀಡಲಾಯಿತಂತೆ. ‘ಹಾಫ್ ಡೋಮ್ ಮೇಲೆ ಯಾರೂ ಕಾಲಿಡುವ ಸಾಹಸ ಮಾಡುವುದಿಲ್ಲ’ ಎಂದು ಯೊಸೆಮಿಟಿ ಗೈಡ್ ಪುಸ್ತಕದಲ್ಲಿ ಅಸಾಧ್ಯವೆಂಬಂತೆ ಬರೆದಿದ್ದರು. ಆ ಸವಾಲನ್ನು ಸ್ವೀಕರಿಸಿದ ಜಾರ್ಜ್‌ ಅಂಡರ್ಸನ್ ಎಂಬ ಸಾಹಸಿಗ 1875ರಲ್ಲಿ ಹಾಫ್‌ಡೋಮ್‌ ತುದಿಗೇರಿ ಬಾವುಟ ನೆಟ್ಟ. ನಂತರ ಬಹಳಷ್ಟು ಸಾಹಸಿಗರು ಆತನನ್ನು ಅನುಸರಿಸಿದರು.

ಪಾರ್ಕ್‌ನಲ್ಲಿ ನಮಗೆ ಸಿಗುವ ಮೊದಲ ತಾಣವೇ ಬ್ರೈಡಲ್ ವೈಲ್(Bridal veil falls)ಜಲಪಾತ. ಸುಮಾರು 2,450 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುತ್ತದೆ. ಮದುವಣಗಿತ್ತಿಯ ಮೋರೆ ಮುಚ್ಚುವ ತೆಳು ಪರದೆಯಂತೆ ನೀರು ಧಾರೆಯಾಗಿ ಬೀಳುತ್ತದೆ. ತೆನಾಯ ಸರೋವರ ನೋಡಲು ತೆರಳುವ ಮಾರ್ಗದಲ್ಲಿ ವೀಕ್ಷಣಾ ತಾಣ ಇದೆ. ಅಲ್ಲಿ ಉದ್ಯಾನದವರೇ ದೂರದರ್ಶಕ ಸೌಲಭ್ಯವಿರಿಸಿದ್ದಾರೆ. ಅಲ್ಲಿಂದ ಹಾಫ್ ಡೋಮ್ ಶಿಲಾಗೋಳದ ಆರೋಹಣ ಮಾಡುತ್ತಿರುವ ಚಾರಣಿಗರು ನಮ್ಮ ಕಣ್ಣಿಗೆ ಇರುವೆಗಳಂತೆ ಕಂಡುಬರುತ್ತಾರೆ. ಒಂದು ಕ್ಷಣ ವಾಹ್..ಅದ್ಭುತ! ಎಂದು ನಮಗರಿವಿಲ್ಲದೇ ಉದ್ಗರಿಸುತ್ತೇವೆ. ಈ ಆರೋಹಣ ಎಲ್ಲದರಂತೆ ಸುಲಭವಲ್ಲ. ಪ್ರಾಣಾಂತಿಕ. ‘ಪ್ರತಿ ವರ್ಷ ಹತ್ತರಿಂದ ಹನ್ನೆರಡು ಮಂದಿ ಸಾಹಸಿಗರು ಜಾರಿಬಿದ್ದು ಜೀವ ಕಳೆದುಕೊಂಡಿದ್ದಾರೆ’ ಎಂದು ಅಂಕಿ–ಅಂಶಗಳು ಹೇಳುತ್ತವೆ.

ಅಬ್ರಾಹಂ ಲಿಂಕನ್ ಅವರ ಅಧ್ಯಕ್ಷೀಯ ಅವಧಿಯಲ್ಲಿ(ಕ್ರಿ.ಶ.1864) ನಿಸರ್ಗದ ಈ ಸುಂದರತಾಣ ಸಂರಕ್ಷಣೆ ಕಾನೂನಿಗೊಳಪಟ್ಟಿತು. ಈಗ ವರ್ಷವೊಂದಕ್ಕೇ ಸುಮಾರು ನಾಲ್ಕು ದಶಲಕ್ಷ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಎಲ್ಲೆಲ್ಲೂ ಪೈನ್ ವೃಕ್ಷಗಳು ಗಗನಕ್ಕೆ ಚಾಚಿ ನಿಂತು ಹಸಿರ ಸೈನಿಕ ಪಡೆಯಂತೆ ಗೋಚರಿಸುತ್ತವೆ. ನಿಸರ್ಗ ಪ್ರಿಯ ಲೇಖಕ ಜಾನ್ ಮುಯಿರ್ ಪ್ರಕೃತಿಯೇ ಮೈವೆತ್ತ ಈ ಪ್ರದೇಶವನ್ನ ‘ಯಾವುದೇ ಮನುಷ್ಯ ಶಿಲ್ಪಿ ಕಡೆದ ದೇವಾಲಯವನ್ನು ಈ ನಿಸರ್ಗ ಕಡೆದ ಆಲಯಕ್ಕೆ ಹೋಲಿಸಲಾಗದು’ ಎಂದು ಹಾಡಿ ಹೊಗಳಿದ್ದಾನೆ.

ಕಣ್ಮನ ಸೆಳೆವ ಗ್ಲೇಸಿಯರ್ ಪಾಯಿಂಟ್

ಇನ್ನೂ ಒಂದು ಕಣ್ಮನ ಸೆಳೆಯುವ ತಾಣ ಗ್ಲೇಸಿಯರ್‌ ಪಾಯಿಂಟ್. ಇದು ಉದ್ಯಾನದ ನೆತ್ತಿಯ ಭಾಗ. ಸುಮಾರು 5000ಅಡಿಗಳಷ್ಟು ಎತ್ತರದಲ್ಲಿದೆ. ಡಿಸೆಂಬರ್ ತಿಂಗಳ ಹಿಮ ಸುರಿವ ವೇಳೆ ಐಸ್ ಕ್ರೀಮ್ ಸಿಂಪಡಿಸಿದ ದುಂಡು ಕೇಕಿನಂತೆ ಕಲ್ಲು ಬಂಡೆಗಳು ತಮ್ಮ ಸ್ವರೂಪ ಬದಲಾಯಿಸಿ ಪ್ರವಾಸಿಗರ ನೋಟ ಅಪಹರಿಸುತ್ತವೆ. ಹಿಮಪಾತವಾದಾಗ ಬಹಳೆಡೆ ಮಾರ್ಗಗಳು ಬಂದ್. ಕೆಲವೆಡೆಯಿಂದ ಮಾತ್ರ ಚಾರಣಿಗರಿಗೆ ಪ್ರವೇಶ. ಈ ಬಗ್ಗೆ ಪಾರ್ಕ್ ಪ್ರಾಧಿಕಾರ ಆಗಾಗ್ಗೆ ಮಾಹಿತಿ ಪ್ರಕಟಿಸುತ್ತಿರುತ್ತದೆ. ಪ್ರವಾಸಿಗಳು ಇದನ್ನು ಗಮನಿಸಿಯೇ ವಾಹನ ಚಾಲನೆ ಮಾಡಬೇಕು.

ನೆವಡಾ ಮತ್ತು ವರ್ನಲ್ ಜಲಪಾತಗಳು ಬೇರೆಬೇರೆಯಾಗಿ ಧುಮುಕುತ್ತವೆ. ಮುಂದೆ ಅವು ಮರ್ಸೆಡ್ ನದಿಯ ಭಾಗವಾಗುತ್ತವೆ. ಯೊಸೆಮಿಟಿ ಜಲಪಾತವು ಇಲ್ಲಿನ ಪ್ರಮುಖ ಆಕರ್ಷಣೆ. ಮಳೆ ಬಿದ್ದರೆ, ಹಿಮಪಾತವಾದರೆ ಅದು ಹಾಲಿನ ನೊರೆಯಂತೆಯೇ ಕಾಣುತ್ತದೆ. ಅದು ಅಮೆರಿಕ ದೇಶದ ಅತಿದೊಡ್ಡ ಜಲಪಾತ. ಜಗತ್ತಿನಲ್ಲಿ ಐದನೆಯದು. (ಕೆಲವು ತಿಂಗಳುಗಳಲ್ಲಿ ಬತ್ತಿ ಅದೃಶ್ಯವಾಗಿರುತ್ತದೆ) ಇದು ಮುಂದೆ ಮರ್ಸೆಡ್ ನದಿಗೆ ಸೇರಿಕೊಂಡು ಯೊಸೆಮಿಟಿ ಕಣಿವೆಯಲ್ಲಿ ವೈಯಾರದಿಂದ ಹರಿಯುತ್ತದೆ.

ಮರ್ಸೆಡ್ ನದಿ, ಯೊಸೆಮಿಟಿ ರಾಷ್ಟ್ರೀಯ ಉದ್ಯಾನಕ್ಕೆ ಸಾಗುವ ಮಾರ್ಗ ಗುಂಟವೇ ನಮ್ಮ ಎಡ ಮತ್ತು ಬಲಬದಿ ಜತೆಗೇ ಇರುತ್ತದೆ. ಜುಳುಜುಳು ಸದ್ದಿನೊಂದಿಗೆ ಕಣಿವೆಯ ತುಂಬ ಹರಿಯುತ್ತದೆ. ಸ್ಫಟಿಕದಂತೆ ಸ್ವಚ್ಛ. ತುಂಗೆಯಂತೆ ಸಿಹಿ. ಅದರ ಆಜೂಬಾಜಿನಲ್ಲೇ ಪ್ರವಾಸಿಗರು‌ ಊಟ‌ ಉಪಾಹಾರ ಸೇವಿಸಬಹುದು. ಅದೂ ಪಿಕ್ನಿಕ್ ಏರಿಯಾ ಅಂತ ಸೂಚನಾಫಲಕಗಳಿವೆ. ಅಲ್ಲಿಯೇ ಊಟ ತಿಂಡಿ ಮಾಡಬೇಕು. ಏಕೆಂದರೆ, ಅಲ್ಲಿ ಪರಿಸರ ಸ್ವಚ್ಛತೆಗೆ ಆದ್ಯತೆ.

ಯೊಸೆಮಿಟಿ ಉದ್ಯಾನವನ ವೀಕ್ಷಣೆಗೆ ಕನಿಷ್ಠ ಒಂದು ವಾರವಾದರೂ ಬೇಕು. ಕೈಕಾಲು ಗಟ್ಟಿಯೂ ಇರಬೇಕು. ಸಾಹಸೀ ಮನೋಭಾವದವರಿಗೆ ಮಾತ್ರ ಇದು ಮೈ ಚಳಿ ಬಿಡಿಸುತ್ತದೆ.ಇಲ್ಲಿ ಸುಮ್ಮನೆ ಕೂತು ನೋಡುವ ಯಾವ ಸ್ಥಳವಿಲ್ಲ. ನಡೆಯಬೇಕು, ಹತ್ತಬೇಕು ಮತ್ತೆ ಇಳಿಯಬೇಕು. ದೇಹ ಬಗ್ಗಿಸಿ, ಕುಗ್ಗಿಸಿ ಉಸಿರು ಬಿಗಿ ಹಿಡಿದು ನಂತರ ಸಿಗುವ ಮನೋಲ್ಲಾಸ ಅನುಭವಿಸಬೇಕು. ಆಗ ಮಾತ್ರ ದೈತ್ಯ ಯೊಸೆಮಿಟಿ ನಮಗೆ ಆಪ್ತತೆಯ ಅನುಭವ ನೀಡುತ್ತದೆ.

ಯೊಸೆಮಿಟಿ ನೋಡಿದ ಅನುಭವವನ್ನು ಒಂದು ಪುಟ್ಟ ಬರಹದಲ್ಲಿ ಅಡಗಿಸಿಡಲು ಅಸಾಧ್ಯ. ಅಂತಹ ದೈತ್ಯ ನಿಸರ್ಗದ ಮಡಿಲು. ಒಬ್ಬೊಬ್ಬರಿಗೂ ಒಂದೊಂದು ದಿವ್ಯ ಅನುಭವ ನೀಡುವುದಂತೂ ಸತ್ಯ. ‘ಸೌಂದರ್ಯ ಗುರು ಪ್ರಕೃತಿ ಮಂಕುತಿಮ್ಮ’ ಎಂಬ ದಾರ್ಶನಿಕ ಡಿವಿಜಿ ಅವರ ನುಡಿಗಳಿಗೆ ಇದು ಸದೃಶವಾದ ಸ್ಥಳ.

ಹೋಗುವುದು ಹೇಗೆ?

ಸ್ಯಾನ್‌ಫ್ರಾನ್ಸಿಸ್ಕೊ ನಗರದಿಂದ 287 ಮೈಲುಗಳ ದೂರದಲ್ಲಿದೆ ಯೊಸೆಮಿಟಿ. ಅಲ್ಲಿ ಪ್ರವೇಶದ್ವಾರದಲ್ಲಿ ಟಿಕೆಟ್‌ ಪಡೆದ ಮೇಲೆ ‘ಎಲ್ ಕ್ಯಾಪಿಟಾನ್’ ನಿಲ್ದಾಣದಿಂದ ಉಚಿತ ಬಸ್ ಸೌಕರ್ಯವಿದೆ.

ಇವೆಲ್ಲ ನೆನಪಿರಲಿ

ಇದು ಕರಡಿಗಳ ಪ್ರದೇಶ. ಜಾಗ್ರತೆ ಅಗತ್ಯ. ವನ್ಯಪ್ರಾಣಿಗಳನ್ನ ಹಿಂಸಿಸಬಾರದು. ವಾಹನ ಚಾಲನೆಯಲ್ಲಿ ಅತಿವೇಗ ಬೇಡ. ಅವುಗಳಿಗೆ ಆಹಾರ ತೋರಿಸಿ ಕರೆದರೆ ನಿಮಗೆ 5000 ಡಾಲರ್ ದಂಡ ವಿಧಿಸಲಾಗುತ್ತದೆ.ನದಿಗಳ ನೀರು ಹಿಮದಷ್ಟು ಕೊರೆಯುತ್ತದೆ. ನೀರಿನಲ್ಲಿ ಕಾಲಿಟ್ಟರೆ ಪಾಚಿ ಕಟ್ಟಿರುವ ಕಲ್ಲುಗಳು ಜಾರಿ ಬೀಳಿಸುತ್ತವೆ. ಹಠಾತ್ತನೆ ಬದಲಾಗುವ ವಾತಾವರಣಕ್ಕೆ ಹೊಂದಿಕೊಳ್ಳಲು ಸಿದ್ಧರಾಗಬೇಕು.

ಇಲ್ಲಿ ಪ್ಲಾಸ್ಟಿಕ್ ನಿಷೇಧ. ಕೈತಪ್ಪಿ ಕಸ ಹಾಕಿದಿರೋ ದಂಡ ತೆರಬೇಕಾಗುತ್ತದೆ. ಪಿಕ್ನಿಕ್ ಏರಿಯಾ ಎಂಬ ಫಲಕವಿರುವೆಡೆ ಮಾತ್ರ ಊಟ ಉಪಾಹಾರ ಸೇವನೆಗೆ ಅವಕಾಶ. ರೆಸ್ಟ್‌ರೂಮ್ ಸೌಕರ್ಯವಿದೆ.

ಭೇಟಿಗೆ ಸೂಕ್ತ ಅವಧಿ: ಮಾರ್ಚ್ –ಏಪ್ರಿಲ್ ಮತ್ತು ಸೆಪ್ಟೆಂಬರ್–ಅಕ್ಟೋಬರ್.

ಪಾರ್ಕ್‌ ಕುರಿತ ಯಾವುದೇ ಮಾಹಿತಿ ಬೇಕಾದರೆ, ಅಲ್ಲಿನ ವಿಸಿಟರ್ಸ್ ಸೆಂಟರ್‌ನಲ್ಲಿ ಲಭ್ಯ. ಅಲ್ಲಿನ ಮ್ಯೂಸಿಯಂ ಕೂಡ ಯೊಸೆಮಿಟಿ ಬಗ್ಗೆ ಸಾಂಕೇತಿಕ ವಸ್ತು ಮತ್ತು ಮಾದರಿ ವಿನ್ಯಾಸಗಳ ಮೂಲಕ ಅರ್ಥೈಸಲು ಸಹಕಾರಿಯಾಗಿದೆ.

‌ಊಟ – ವಸತಿ ಹೇಗೆ

ಉಳಿದುಕೊಳ್ಳಲು ಹೋಂ ಸ್ಟೇ ಮತ್ತು ವಸತಿ ಸೌಲಭ್ಯಗಳಿವೆ. ಮುಂಚೆಯೇ ಬುಕ್ ಮಾಡಿದರೆ ನಿಮ್ಮ ಪ್ರವಾಸ ಸುಖದಾಯಕ.
ಸಾಕಷ್ಟು ಆಹಾರ–ಪಾನೀಯ ಜತೆಗಿದ್ದರೆ ನಿಮಗೆ ಹಣ ಉಳಿತಾಯ.ನಿಮ್ಮ ಆರೋಗ್ಯ ನಿಮ್ಮ ಕೈಲಿ. ಆಹಾರದಲ್ಲಿ ನಿಯಂತ್ರಣವಿರಲಿ.

ವಸತಿ ಸೌಕರ್ಯ ಮತ್ತು ಹೆಚ್ಚಿನ ಮಾಹಿತಿಗೆ:

Yosemite National Park. CA 953890577, 2093720200 ಅಥವಾ TTY 2093724726, www.nps.gov/yose ಸಂಪರ್ಕಿಸಬಹುದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.