ADVERTISEMENT

ಕಲಾ ಕುಸುರಿಯ ಕೋಪೇಶ್ವರ ದೇಗುಲ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 19:45 IST
Last Updated 20 ಮಾರ್ಚ್ 2019, 19:45 IST
ಕೋಪೇಶ್ವರ ದೇವಾಲಯದ ಒಳನೋಟ
ಕೋಪೇಶ್ವರ ದೇವಾಲಯದ ಒಳನೋಟ   

ಶಿಲ್ಪಕಲೆಯನ್ನೇ ಹೊದ್ದು ಕುಳಿತಿರುವ ಕಲಾತ್ಮಕ ದೇಗುಲ. ದೇಗುಲದೊಳಗೆ ಕಂಬಗಳ ಸಾಲು. ಪ್ರವೇಶ ದ್ವಾರದಿಂದ ದೇವಾಲಯ ಪ್ರವೇಶಿಸಿದರೆ ವೃತ್ತಾಕಾರದ ಕಿಂಡಿಯಲ್ಲಿ ನೀಲಾಕಾಶ ಕಾಣುವಂತಹ ವಿನ್ಯಾಸ. ಎದುರುಗಡೆ ಗರ್ಭಗುಡಿ. ಪ್ರತಿ ಕಂಬದ ಮೇಲೆ ವಿಭಿನ್ನ ಕಲಾಕೃತಿಗಳು...

ಇದು ಕರ್ನಾಟಕ – ಮಹಾರಾಷ್ಟ್ರದ ಗಡಿಯಲ್ಲಿರುವ, ಚಿಕ್ಕೋಡಿಗೆ ಬಹಳ ಸನಿಹದಲ್ಲಿರುವ ಖಿದ್ರಾಪುರ ಗ್ರಾಮದ ಕೋಪೇಶ್ವರ ದೇವಾಲಯದ ವಿವರಣೆ. ಇದು ಶಿವನ ದೇವಾಲಯ ಮಾತ್ರವಲ್ಲ. ಕಂಬ, ಗೋಡೆ, ಶಿಖರಗಳಲ್ಲಿ ಕಲಾಕೃತಿಗಳೇ ಮೇಳೈಸಿರುವ ಕಲಾ ದೇಗುಲ.

ಈ ಕಲಾಕೃತಿಯ ದೇಗುಲದ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಇಲ್ಲಿಗೆ ಭೇಟಿ ನೀಡಲಾಗಿರಲಿಲ್ಲ. ಇತ್ತೀಚೆಗೆ ಗೆಳೆಯರೊಬ್ಬರು, ಇದರ ವಿನ್ಯಾಸ ಮತ್ತು ಶಿಲ್ಪಕಲೆ ಬಗ್ಗೆ ಮಾಹಿತಿ ನೀಡಿದ್ದರು. ಆಗಲೇ, ಅದನ್ನು ನೋಡಲೇಬೇಕೆಂಬ ಮನಸ್ಸಾಯಿತು. ಕಳೆದ ರಜೆಯಲ್ಲಿ ಕುಟುಂಬ ಸಹಿತ ಕೊಲ್ಲಾಪುರಕ್ಕೆ ಪ್ರವಾಸ ಹೋಗಿದ್ದೆವು. ಅಲ್ಲಿನ ಸುತ್ತಮುತ್ತಲಿನ ತಾಣಗಳನ್ನು ವೀಕ್ಷಿಸಿದ ನಮ್ಮ ವಾಹನ ಖಿದ್ರಾಪುರದ ಕೋಪೇಶ್ವರ ದೇಗುಲದತ್ತ ಪ್ರಯಾಣ ಬೆಳೆಸಿತು.

ADVERTISEMENT

ಆ ಗ್ರಾಮ ಪ್ರವೇಶಿಸಿದ ತಕ್ಷಣ ವಾಹನ ನಿಲುಗಡೆ ಮಾಡಿ ದೇವಾಲಯದತ್ತ ಹೆಜ್ಜೆ ಹಾಕಿದೆವು. ದೇವಸ್ಥಾನದ ನಿರ್ವಹಣೆ ಮತ್ತು ಮಾಹಿತಿ ನೀಡುವ ಕಚೇರಿಗೆ ಬೀಗ ಹಾಕಿತ್ತು. ಆದರೆ ದೇವಾಲಯ ತೆರೆದಿತ್ತು. ನಾವು ದೇವಾಲಯದ ಆವರಣ ಪ್ರವೇಶಿಸಿದೆವು. ಮರಾಠಿ ಮತ್ತು ತಕ್ಕ ಮಟ್ಟಿಗೆ ಕನ್ನಡ ಬಲ್ಲ ದೇವಸ್ಥಾನದ ಅರ್ಚಕರು, ನಮ್ಮಂಥ ಪ್ರವಾಸಿಗರಿಗೆ ಗೈಡ್ ಆದರು. ‘7ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯರು ಖಿದ್ರಾಪುರದ ಕೃಷ್ಣಾ ತೀರದಲ್ಲಿ ನಿರ್ಮಿಸಿದ ಕಲಾತ್ಮಕ ದೇಗುಲವಿದು’ ಎಂದು ಹೇಳುತ್ತಾ, ದೇವಸ್ಥಾನದ ಐತಿಹ್ಯ ಹಾಗೂ ಪೌರಾಣಿಕ ಕಥೆಯೊಂದಿಗೆ ವಿವರಣೆ ನೀಡಿದರು.

ಸ್ವರ್ಗ ಮಂಟಪದ ಆಕರ್ಷಣೆ

ಕೋಪೇಶ್ವರ ದೇವಾಲಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಮುಖಮಂಟಪದ ಮೂಲಕ ಇಷ್ಟೂ ಭಾಗಗಳು ಆಂತರಿಕವಾಗಿ ಒದಕ್ಕೊಂದು ಬೆಸೆದುಕೊಂಡಿವೆ. ದೇವಾಲಯ ಪ್ರವೇಶಿಸಿದಾಗ ಸಿಗುವ ಮೊದಲ ವಿನ್ಯಾಸವೇ ಸ್ವರ್ಗ ಮಂಟಪ. ಅದ್ಭುತ ಕೆತ್ತನೆಯುಳ್ಳ, ಶಿಲ್ಪಕಲಾ ಅಲಂಕೃತ ಕಂಬಗಳು. ಪ್ರತಿ ಕಂಬವನ್ನೂ ಚದರ, ಷಟ್ಕೋನ ಮತ್ತು ಅಷ್ಟಕೋನಾಕೃತಿ.. ಹೀಗೆ ವಿವಿಧ ಆಕಾರಗಳಲ್ಲಿ ಕೆತ್ತಲಾಗಿದೆ.

ವರ್ತುಲಾಕಾರದಲ್ಲಿ ನಿರ್ಮಿಸಿದ, ಆಕಾಶಕ್ಕೆ ತೆರೆದುಕೊಂಡಿರುವ ಮೇಲ್ಛಾವಣಿಯ ಪ್ರಾಂಗಣವೇ ಸ್ವರ್ಗಮಂಟಪ. ವರ್ತುಲಾಕಾರದ ಚಾವಣಿ, ಪೂರ್ಣಿಮೆಯ ಚಂದ್ರನ ಬಿಂಬದಂತೆ ಕಾಣುತ್ತದೆ. ಇಲ್ಲಿ ರಾಜ ತನ್ನ ಮಂತ್ರಿಗಳೊಡನೆ ಹಾಗೂ ಆಸ್ಥಾನ ಪಂಡಿತರೊಡನೆ ಕುಳಿತು ಚರ್ಚಿಸುತ್ತಿದ್ದನಂತೆ. ಈ ವಿನ್ಯಾಸವನ್ನು ಹರಸಾಹಸ ಪಟ್ಟು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದೆ.

ದೇವಾಲಯದಲ್ಲಿ ಶಂಕುವಿನಾಕಾರದ ಗರ್ಭಗುಡಿಯೇ ವಿಶಿಷ್ಟವಾಗಿದೆ. ಗರ್ಭಗುಡಿಯಲ್ಲಿ ವಿಷ್ಣು (ಧೋಪೆಶ್ವರ) ಹಾಗೂ ಕೋಪೇಶ್ವರ(ಶಿವ) ಲಿಂಗಗಳಿವೆ. ಗರ್ಭಗುಡಿಯ ದ್ವಾರದಲ್ಲಿ ಜಯವಿಜಯರ ಸುಂದರ ವಿಗ್ರಹಗಳನ್ನು ಕೆತ್ತಲಾಗಿದೆ. ದೇವಾಲಯದ ಹೊರಮೈಯಲ್ಲಿ ಆನೆಗಳ ಮೇಲೆ ಆಭೂಷಣ ಹಾಗೂಆಯುಧಗಳಿಂದ ವಿಜೃಂಭಿಸುವ ದೇವತೆಗಳ ವಿಗ್ರಹಗಳನ್ನು ಸೂಕ್ಷ್ಮವಾಗಿ ಬಿಡಿಸಲಾಗಿದೆ. ಸುಮಾರು 92 ಆನೆಗಳ ವಿಗ್ರಹಗಳನ್ನು ದೇವಸ್ಥಾನದ ಹೊರಮೈಯಲ್ಲಿ ಕೆತ್ತಿದ್ದಾರೆ.

ವಿಶಿಷ್ಟ ಕೆತ್ತನೆಯ ಶಿಲ್ಪಗಳು

‌ಕೆಳಭಾಗದಲ್ಲಿ ಕೆತ್ತಿರುವ ಆನೆಯ ಚಿತ್ರಗಳನ್ನು ನೋಡಿದರೆ, ಅವುಗಳು ದೇವಸ್ಥಾನದ ಭಾರ ಹೊತ್ತಿರುವಂತೆ ಭಾಸವಾಗುತ್ತದೆ. ಬೇಲೂರು, ಹಳೆಬೀಡಿನಂತೆ ಇಲ್ಲಿಯೂ ‘ದರ್ಪಣ ಸುಂದರಿ’ಯರಿದ್ದಾರೆ. ದೇವಾಲಯದ ಸುತ್ತಲೂ ರಾಮಾಯಣ ಮಹಾಭಾರತದ ವಿವಿಧ ಪ್ರಸಂಗಗಳನ್ನು ವಿವರಿಸುವ ಶಿಲ್ಪಗಳಿವೆ. ಶಿವನ ಪರಮ ಭಕ್ತನಾದ ಕೀರ್ತಿಸುರ ಎಂಬ ರಾಕ್ಷಸನಿಗೆ ಅನಂತ ಹಸಿವಿನ ವರವಿತ್ತ೦ತೆ. ಎಷ್ಟು ತಿಂದರೂ ಮತ್ತಷ್ಟು ಬಕ್ಕರಿಸುವ ಬಕಾಸುರತೆಯಿಂದ ಕೊನೆಗೆ ತನ್ನ ದೇಹವನ್ನೇ ತಿಂದನ೦ತೆ. ಆಗ ಉಳಿದದ್ದು‘ಕೀರ್ತಿಮುಖ’. ಹಾಗಾಗಿ, ಆತನ ಮುಖವನ್ನು ಕೋಪೇಶ್ವರ ದೇವಾಲಯದ ಕೆತ್ತನೆಗಳಲ್ಲಿ ಬಿಂಬಿಸಲಾಗಿದೆ. ಅನೇಕ ವಿಗ್ರಹಗಳು ಪರಕೀಯರದಾಳಿಯಿಂದಾಗಿ ಭಗ್ನವಾಗಿವೆ. 12 ನೇ ಶತಮಾನದಲ್ಲಿ ಶಿಲಾಹಾರ ಮತ್ತು ಯಾದವ ಮನೆತನದ ರಾಜರು ಈ ದೇವಾಲಯವನ್ನು ನವೀಕರಣಗೊಳಿಸಿದರೆಂದು ನಂಬಲಾಗಿದೆ.

ಚಿತ್ರಗಳು: ಲೇಖಕರವು

**

ತಲುಪುವುದು ಹೇಗೆ?

ಬೆಳಗಾವಿ ಜಿಲ್ಲೆ ಚಿಕ್ಕೋಡಿಯಿಂದ 35 ಕಿ.ಮೀ ದೂರದಲ್ಲಿ ಖಿದ್ರಾಪುರವಿದೆ. ವಸತಿ, ಟೂರ್ ಗೈಡ್ ಅಥವಾ ಇತರೆ ಗುಣಮಟ್ಟದ ಸೌಲಭ್ಯಗಳು ಇಲ್ಲಿ ಲಭ್ಯವಿಲ್ಲ. ಖಿದ್ರಾಪುರಕ್ಕೆ ಭೇಟಿ ನೀಡಲು ಜೂನ್‌ ತಿಂಗಳಿಂದ ಫೆಬ್ರುವರಿವರೆಗೆ ಸಮಯ ಉತ್ತಮ.

ಊಟ–ವಸತಿ

ಖಿದ್ರಾಪುರದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಊಟ– ವಸತಿಯ ವ್ಯವಸ್ಥೆ ಇಲ್ಲ. ಗ್ರಾಮದ ಕೆಲ ಗೂಡಂಗಡಿಗಳಲ್ಲಿ ಚಹಾ, ಬಜ್ಜಿ, ಚುರುಮುರಿ ಸೂಸಲದಂತಹ ಉಪಹಾರ ಲಭ್ಯ. ದೇವಸ್ಥಾನದ ಕಲೆಯ ಸವಿಯನ್ನು ಕಣ್ಣು ತುಂಬಾ ಆಸ್ವಾದಿಸಿದಾಗ ಹೊಟ್ಟೆಯ ಹಸಿವಿನ ಪರಿವಿರುವುದಿಲ್ಲ. ಪ್ರಯಾಣವನ್ನು ಮುಂದುವರೆಸಿ ಹೆದ್ದಾರಿ ಬದಿಯ ಹೊಟೇಲ್‌ಗಳಲ್ಲಿ ಮಧ್ಯಾಹ್ನದ ಊಟ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.