ADVERTISEMENT

‘ಬಾಹುಬಲಿ’ ಸಾಮ್ರಾಜ್ಯ ಈಗ ಹೇಗಿದೆ...!

ಸುಬ್ರಹ್ಮಣ್ಯ ಎಚ್.ಎಂ
Published 14 ನವೆಂಬರ್ 2018, 19:31 IST
Last Updated 14 ನವೆಂಬರ್ 2018, 19:31 IST
ಅ
   

‘ಅ ಬ್ಬಾ! ಮಾಹಿಷ್ಮತಿ ಸಾಮ್ರಾಜ್ಯ ಅದೆಷ್ಟು ದೊಡ್ಡದಾಗಿದೆ. ವಿಶಾಲ ಅರಮನೆ. ಅಂಗಳದಲ್ಲಿ ಆನೆ, ಕುದರೆ, ಸಾವಿರಾರು ಕಾಲಾಳುಗಳು. ಎತ್ತರದ ಸಿಂಹಾಸನ... ಇವೆಲ್ಲ ಹೇಗೆ ಮಾಡಿದ್ದಾರಪ್ಪಾ. ಅದ್ಹೇಗೆ ಇಂಥ ನಗರವನ್ನೇ ಕಟ್ಟಿದ್ದಾರೋ..?’

‘ಬಾಹುಬಲಿ – ದಿ ಬಿಗಿನಿಂಗ್’ ಸಿನಿಮಾ ನೋಡುವಾಗ ನನ್ನನ್ನೂ ಒಳಗೊಂಡಂತೆ ಅನೇಕ ಪ್ರೇಕ್ಷಕರ ಮನದಲ್ಲಿ ಹೀಗೆ ‘ಉದ್ಗಾರ’ಗಳು ಬಂದು ಹೋಗಿದ್ದವು. ಸಿನಿಮಾಗಿಂತ ‘ಮೇಕಿಂಗ್ ಆಫ್ ಬಾಹುಬಲಿ’ ಟ್ರೈಲರ್ ನೋಡಿದಾಗ ಈ ‘ಸಾಮ್ರಾಜ್ಯ’ದ ಸೆಟ್ ನೋಡಬೇಕುನಿಸಿತ್ತು. ಇತ್ತೀಚೆಗೆ ಆ ಸೆಟ್ ಹಾಕಿರುವ ಜಾಗದ ವಿಡಿಯೊ ವೈರಲ್ ಆದದಮೇಲೆ, ನನ್ನ ಉತ್ಸಾಹ ಇನ್ನೂ ಹೆಚ್ಚಾಯಿತು.

ಇತ್ತೀಚೆಗೆ ಹೈದರಾಬಾದ್‌ನ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ರಾಮೋಜಿ ಫಿಲಂ ಸಿಟಿಗೆ ಪ್ರವಾಸ ಹೋಗಿದ್ದೆ. ನಮ್ಮನ್ನು ಕರೆದೊಯ್ದಿದ್ದ ಗೈಡ್ ‘ಈ ಫಿಲಂ ಸಿಟಿ ಪಕ್ಕದಲ್ಲೇ ಬಾಹುಬಲಿ ಸಿನಿಮಾ ತೆಗೆದ ಸೆಟ್ ಇದೆ. ಅದನ್ನೂ ನೋಡಬಹುದು. ಬೇಕಾದರೆ ಅದಕ್ಕೂ ಸೇರಿಸಿ ಟಿಕೆಟ್ ತಗೊಳ್ಳಿ’ ಎಂದುಬಿಟ್ಟ. ಅವನ ಮಾತು ಕೇಳಿ ಮನಸ್ಸು ಅರಳಿತು. ‘ಮಾಹಿಷ್ಮತಿ ಸಾಮ್ರಾಜ್ಯ’ದ ಸೆಟ್ ನೋಡುವ ಕನಸು ನನಸಾಗುವ ಕಾಲ ಸಮೀಪಿಸಿತು ಎಂದುಕೊಡು, ಟಿಕೆಟ್ ತಗೊಂಡು ಸೆಟ್ ಕಡೆಗೆ ಹೊರಡಲು ಬಸ್ ಹತ್ತಿ ಬಿಟ್ಟೆ.

ADVERTISEMENT

ಸೆಟ್‌ನೊಳಗೆ ಕಾಲಿಡುತ್ತಲೇ ಬೆಳ್ಳಿಪರದೆ ಮೇಲೆ ಮಿಂಚಿದ್ದ ‘ಸಾಹೋರೆ ಬಾಹುಬಲಿ’ ಹಾಡು ನೆನಪಾಯಿತು. ಬಲ್ಲಾಳ ಕುಳಿತುಕೊಂಡಿದ್ದ ಎತ್ತರದ ಸಿಂಹಾಸನ, ಅದರ ಸುತ್ತಲಿರುವ ಕುದುರೆಗಳು ಓಡುತ್ತಿರುವ ಚಿತ್ರ, ಮರದ ಚಕ್ರಗಳು, ಯುದ್ಧ ದೃಶ್ಯಗಳಿಗೆ ಬಳಸುತ್ತಿದ್ದ ವಾಹನಗಳು, ಕೋಟೆಯಿಂದ ಆಚೆಗೆ ಜಿಗಿಯಲು ಬಳಸುತ್ತಿದ್ದ ಬೃಹತ್ ಗಾತ್ರದ ಮರದ ಟ್ರಾಲಿಗಳು... ಅಬ್ಬಾ ಪ್ರತಿಯೊಂದು ಪರಿಕರವೂ ಸಿನಿಮಾ ಒಂದೊಂದು ದೃಶ್ಯಗಳನ್ನು ಕಣ್ಮುಂದೆ ತಂದು ನಿಲ್ಲಿಸುತ್ತಿತ್ತು.

ಓರಿರಿ ರಾಜಾ... ಓರೋರೆ ರಾಜಾ... ಹಾಡು ಕೇಳುತ್ತಾ ಸೆಟ್ ಸುತ್ತುತ್ತಿದ್ದಾಗ, ‘ಇಲ್ಲೇ ಎಲ್ಲೋ ಆ ಹಾಡಿನ ದೃಶ್ಯ ಚಿತ್ರೀಕರಿಸಿದ್ದಾರೆ’ ಎನ್ನಿಸುತ್ತಿತ್ತು. ಪದಮರ ಕೊಂಡಲೊ ವಾಲಿನಾ ಸೂರಿಡಾ...ದಂಡಾಲಯ್ಯ... ದಂಡಾಲಯ್ಯ...ಮಾತೊಡೆ ವುಂಡಾಲಯ್ಯ ಹಾಡಂತೂ ಭಾವುಕ ಸನ್ನಿವೇಶದ್ದು. ಈ ಹಾಡು ಚಿತ್ರೀಕರಣಗೊಂಡ ಸೆಟ್‌ ಮೇಲೆ ನಿಂತಿದಾಗ ಮತ್ತಷ್ಟು ಭಾವುಕ ಮಧುರಾನುಭೂತಿ ನೋಡುಗರದ್ದು.

ಇನ್ನು ಸೆಟ್‌ನಲ್ಲಿರುವ ದರ್ಬಾರ್‌ ಹಾಲ್‌, ಬಲ್ಲಾಳದೇವನ ಬೃಹತ್‌ ಪ್ರತಿಮೆ, ‍ಪುರ ಜನರ ಪಂಚಾಯಿತಿ ಕಟ್ಟೆ, ‍‍ಪುಷ್ಪಾಕಾರದ ಕುಂಡಲಿ, ಹೆಬ್ಬಾಗಿಲು, ನ್ಯಾಯದ ಗಂಟೆ, ಜಲಪಾತದ ಸೆಟ್‌ ನೋಡುವುದೇ ಕಣ್ಣಿಗೆ ಹಬ್ಬ.

ಮಾಹಿಷ್ಮತಿ ಸಾಮ್ರಾಜ್ಯದ ಅದ್ಭುತ ಸೆಟ್‌ಗಾಗಿ ಸಿನಿಮಾ ತಂಡ ಸುಮಾರು ₹60 ಕೋಟಿ ಖರ್ಚು ಮಾಡಿದೆಯಂತೆ. ಆ ಸೆಟ್‌ ಅನ್ನು ತೆಗೆಯದೇ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿದೆ. ರಾಮೋಜಿ ಫಿಲಂಸಿಟಿ ನೋಡುವವರಿಗೆ ಬಾಹುಬಲಿ ಸಿನಿಮಾ ಸೆಟ್‌ ನೋಡುವ ಅವಕಾಶವಿದೆ. ರಾಮೋಜಿ ಫಿಲ್ಮ ಸಿಟಿ ಹಾಗೂ ಬಾಹುಬಲಿ ಸೆಟ್‌ ವೀಕ್ಷಣೆಗೆ ಪ್ರವೇಶ ಶುಲ್ಕ ₹1250( ಸಾಮಾನ್ಯ ಪ್ರವೇಶ) ₹2349(ವಿಶೇಷ ಪ್ರವೇಶಕ್ಕಾಗಿ) ಶುಲ್ಕ ನಿಗದಿಪಡಿಸಲಾಗಿದೆ.

ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ನೇರವಾಗಿ ಫಿಲಂಸಿಟಿ ಬಳಿಯೇ ಟಿಕೆಟ್ ಖರೀದಿ ಮಾಡಬಹುದು. ಅಧಿಕೃತ ವೆಬ್ ಸೈಟ್‌: ramojifilmcity.com ಇಲ್ಲವೇ 1800 419 0994 ಕರೆ ಮಾಡಿ ಬುಕಿಂಗ್ ಮಾಡಬಹುದು.

ತಲುಪುವುದು ಹೇಗೆ ?

ಬೆಂಗಳೂರಿನಿಂದ ಹೈದರಾಬಾದ್‌ಗೆ ನೇರವಾಗಿ ವಿಮಾನ, ರೈಲು, ಬಸ್‌ ಸೌಲಭ್ಯ ಇದೆ. ಬಸ್ ಇಲ್ಲವೇ ರೈಲು ಮಾರ್ಗ ಆಯ್ಕೆ ಮಾಡಿಕೊಂಡರೆ ಉತ್ತಮ. ಅಲ್ಲಿನ ಮಹಾತ್ಮಗಾಂಧಿ ಬಸ್‌ ನಿಲ್ದಾಣದಿಂದ ನೇರವಾಗಿ ರಂಗಾರೆಡ್ಡಿ ಜಿಲ್ಲೆಯ ರಾಮೋಜಿ ಫಿಲಂ ಸಿಟಿಗೆ ಸಾಕಷ್ಟು ಬಸ್‌ ಸಂಪರ್ಕ ಇದೆ. ಟ್ಯಾಕ್ಸಿಗಿಂತ ಬಸ್‌ ಸೇವೆ ಬಳಸಿದರೆ ಖರ್ಚು ಉಳಿತಾಯ.

ಸಾಮಾನ್ಯವಾಗಿ ಜೂನ್‌ನಿಂದ –ಜನವರಿವರೆಗೂ ರಾಮೋಜಿ ಫಿಲಂಸಿಟಿ ವೀಕ್ಷಣೆಗೆ ಸೂಕ್ತ ಸಮಯ. ಬಿಸಿಲಿನ ತಾಪಮಾನ ತಡೆದುಕೊಳ್ಳುವವರು ಯಾವ ಕಾಲಮಾನದಲ್ಲೂ ಬೇಕಾದರೂ ವೀಕ್ಷಣೆ ತೆರಳಬಹುದು.

ಚಿತ್ರಗಳು : ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.