ಇರುವುದು ಹದಿನಾಲ್ಕು ಕಿಲೋಮೀಟರ್ ಉದ್ದದ ರಸ್ತೆ. ಅದರಲ್ಲಿ ಒಂಬತ್ತು ದೊಡ್ಡದಾದ ಹೇರ್ ಪಿನ್ ತಿರುವುಗಳು. ಸಣ್ಣ ತಿರುವುಗಳಿಗೆ ಲೆಕ್ಕವಿಲ್ಲ. ದಾರಿ ಮಧ್ಯೆ ಮೂರು ‘ವ್ಯೂ ಪಾಯಿಂಟ್’. ಒಂದೊಂದು ಕಡೆಯಿಂದ ನೋಡಿದಾಗಲೂ ಮೂರು ಬಗೆಯ ನೋಟಗಳು. ಮೇಲ್ಭಾಗದಲ್ಲಿ ಗಗನಕ್ಕೆ ಮುತ್ತಿಕ್ಕುವ ಮೋಡಗಳು ಕಂಡರೆ, ಕೆಳಭಾಗದಲ್ಲಿ ಥೇಟ್ ಹಾವಿನಂತೆ ಸುರುಳಿಯಾಕಾರದ ರಸ್ತೆ ವಿಸ್ಮಯಗೊಳಿಸುತ್ತದೆ. ಕೇರಳದ ವಯನಾಡಿನ ‘ಚೂರಂ’ ಘಟ್ಟದ ರಸ್ತೆಯು ವಾಹನ ಸವಾರರಿಗೆ ರೋಚಕ ಅನುಭವ ಕೊಡುತ್ತದೆ.
ಈ ರಸ್ತೆಗೆ ಶತಮಾನಗಳ ಇತಿಹಾಸವಿದೆ. ಸಂಬಾರು ಪದಾರ್ಥಗಳಿಗೆ ಮನಸೋತಿದ್ದ ಬ್ರಿಟಿಷರು, ಕೇರಳದಿಂದ ವಿವಿಧ ಬಂದರುಗಳ ಮೂಲಕ ಇವುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅದಕ್ಕಾಗಿಯೇ ಹಲವು ಮಾರ್ಗಗಳನ್ನು ರೂಪಿಸಿದ್ದರು. ಕೋಯಿಕ್ಕೋಡ್‍ನ ಬೈಪೋರ್ ಬಂದರಿಗೆ ಕೇರಳದ ಸಂಬಾರು ಪದಾರ್ಥಗಳನ್ನು ಸಾಗಿಸಲು ಕುಟ್ಟಾಡಿ ಮೂಲಕ ದಾರಿಯೊಂದನ್ನು ಮಾಡಿಕೊಂಡಿದ್ದರು. ಈ ದೂರದಾರಿಯನ್ನು ಕಡಿತಗೊಳಿಸಲು ಹೊಸ ಮಾರ್ಗಕ್ಕೆ ಹುಡುಕಾಟ ನಡೆಸಿದರು. ಆಗ ಅವರ ನೆರವಿಗೆ ಬಂದಿದ್ದು, ವಯನಾಡಿನ ಬುಡಕಟ್ಟು ಸಮುದಾಯದ ನಾಯಕ ಕರಿಂತಂಡನ್ ಮೂಪನ್. ವಯನಾಡಿನ ದಟ್ಟ ಕಾಡುಗಳ ಪರಿಚಯವಿದ್ದ ಕರಿಂತಂಡನ್, ಕಡಿದಾದ ಬೆಟ್ಟಗಳನ್ನು ಸುತ್ತು ಬಳಸಿ ಸಾಗುವ ದಾರಿಯನ್ನು ತೋರಿಸಿಕೊಟ್ಟ. ಆಮೇಲೆ ಆತನನ್ನು ಬ್ರಿಟಿಷರು ಕೊಂದರು ಎಂದು ಸ್ಥಳೀಯರು ಹೇಳುತ್ತಾರೆ.
1750ರ ಸುಮಾರಿಗೆ ಈ ರಸ್ತೆಯಲ್ಲಿ ಸಂಚಾರ ಶುರುವಾಯಿತು ಎಂಬ ಮಾಹಿತಿ ಇದೆ. ಕೆಳಭಾಗದ ಆದಿವರಮ್‍ನಿಂದ ಮೇಲ್ಭಾಗದ ‘ಲಕ್ಕಿಡಿ ವ್ಯೂ ಪಾಯಿಂಟ್’ವರೆಗೆ ಹದಿನಾಲ್ಕು ಕಿಲೋ ಮೀಟರ್ ದೂರದ ರಸ್ತೆ ಸಂಪೂರ್ಣ ಅಂಕುಡೊಂಕು. ಕಳ್ಪೆಟ್ಟದಿಂದ ಸಾಗಿದರೆ ಸುಮಾರು 25 ಕಿ.ಮೀ ದೂರದಲ್ಲಿ ಪಶ್ಚಿಮ ಘಟ್ಟದ ಪರ್ವತಶ್ರೇಣಿ ತಲುಪುತ್ತೇವೆ. ಅಲ್ಲಿಂದ ಸಂಪೂರ್ಣ ಅಂಕುಡೊಂಕಾದ ರಸ್ತೆ ಕಾಡೊಳಗೆ ಸಾಗುತ್ತದೆ. ದ್ವಿಪಥ ರಸ್ತೆ ಅಚ್ಚುಕಟ್ಟಾಗಿಯೇ ಇದೆ; ಆದರೆ ಅಲ್ಲಿರುವ ತಿರುವುಗಳು ಆಗಾಗ್ಗೆ ದಿಢೀರೆಂದು ಎದುರಾಗಿ ರೋಮಾಂಚನವನ್ನೂ ತುಸು ಆತಂಕವನ್ನೂ ತಂದೊಡ್ಡುತ್ತವೆ. ಕಾಡುಪ್ರಾಣಿಗಳು ರಸ್ತೆಯನ್ನು ದಾಟುವ ನೋಟ ಸಾಮಾನ್ಯ. ಹೀಗಾಗಿ ನೂರಿನ್ನೂರು ಮೀಟರುಗಳಿಗೆ ಪದೇ ಪದೇ ‘ಹಾರ್ನ್ ನಿಷೇಧ’ ಎಂಬ ಫಲಕ ಕಾಣಿಸುತ್ತವೆ. ಬಹುತೇಕ ವಾಹನ ಚಾಲಕರು ಇದನ್ನು ಅನುಸರಿಸುತ್ತಾರೆ. ಆದರೆ ನಿಧಾನವಾಗಿ ಸಾಗುವ ವಾಹನಗಳ ಮಧ್ಯೆ ಭರ್ ಎಂದು ಓವರ್ ಟೇಕ್ ಮಾಡಿ ಮುಂದೋಡುವ ವಾಹನಗಳೂ ಕಾಣಿಸುತ್ತವೆ. ಒಂದು ಅಂದಾಜಿನಂತೆ, ನಿತ್ಯವೂ ಎರಡು ಸಾವಿರ ವಾಹನಗಳು ಈ ದಾರಿಯಲ್ಲಿ ಸಂಚರಿಸುತ್ತವೆ.
ಸಮುದ್ರ ಮಟ್ಟದಿಂದ ಸರಾಸರಿ 2,300 ಅಡಿ ಎತ್ತರದಲ್ಲಿರುವ ಲಕ್ಕಿಡಿಗೆ ಸದಾ ಕಾಲವೂ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಮೇ ತಿಂಗಳ ಮಧ್ಯಭಾಗದಿಂದ ಶುರುವಾಗುವ ಮಳೆಗಾಲ, ಮುಂದಿನ ಆರೇಳು ತಿಂಗಳವರೆಗೆ ಮುಂದುವರಿಯುತ್ತದೆ. ಇಲ್ಲಿನ ವಾರ್ಷಿಕ ಮಳೆ ಪ್ರಮಾಣ 650ರಿಂದ 700 ಸೆಂ.ಮೀ. ಚಾರಣ ಬರುವವರಿಗೆ ಹತ್ತು ಹಲವು ಆಕರ್ಷಣೆಗಳು ಇಲ್ಲುಂಟು. ಜಲಪಾತಗಳು, ಚಿಕ್ಕ ಅಣೆಕಟ್ಟೆಗಳು, ಸಸ್ಯ ಸಂಪತ್ತು, ಅಭಯಾರಣ್ಯ, ಬಗೆಬಗೆಯ ಹೂ-ಬಳ್ಳಿ, ಸಸ್ಯ ಪ್ರಭೇದಗಳ ಜತೆ ಚಹಾ, ಕಾಫಿ, ಕಿತ್ತಳೆ ತೋಟಗಳೂ ಕಾಣಸಿಗುತ್ತವೆ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ‘ಮಾನ್ಸೂನ್ ಟೂರಿಸಂ’ ಈ ವಲಯದಲ್ಲೂ ನಿಧಾನವಾಗಿ ಬೇರೂರುತ್ತಿದೆ.
‘ವಯನಾಡಿನ ಜೀವನಾಡಿ’ ಎಂದೇ ಪ್ರಸಿದ್ಧಿ ಪಡೆದಿರುವ ‘ಚೂರಂ’ ರಸ್ತೆಯೂ ಅದರಲ್ಲಿ ಸಿಗುವ ಲಕ್ಕಿಡಿಯನ್ನೂ ನೋಡಿ ಆನಂದಿಸಲು ಇದು ಸಕಾಲ. ಮಾರ್ಚ್‍ನಿಂದ ಮೇ ಮೊದಲ ವಾರದವರೆಗಿನ ಬಿಸಿಲ ಧಗೆ ಹೊರತುಪಡಿಸಿದರೆ ಉಳಿದ ಸಮಯದಲ್ಲಿ ಈ ಪ್ರದೇಶ ಮಂಜು- ಮೋಡಗಳಿಂದ ಆವೃತವಾಗಿರುತ್ತದೆ. ಬೇಸಿಗೆಯಲ್ಲಿ ತಂಪು ವಾತಾವರಣವಿದ್ದರೆ, ಚಳಿಗಾಲದಲ್ಲಿ ಇಲ್ಲಿನ ತಾಪಮಾನ 12 ಡಿ.ಸೆ.ವರೆಗೆ ಇರುತ್ತದೆ. ಮಳೆಗಾಲದಲ್ಲಿ ಇಲ್ಲಿ ದಕ್ಕುವ ನೋಟ ವರ್ಣಿಸಲಸದಳ. ರಾಶಿರಾಶಿ ಮೋಡಗಳು ದಟ್ಟಾರಣ್ಯದಲ್ಲಿ ತೇಲಾಡುತ್ತ, ಕೊನೆಗೆ ನಿಮ್ಮನ್ನೇ ಆವರಿಸಿಕೊಂಡಾಗ ಮೈ ಜುಂ ಎನಿಸುವ ಅನುಭವಕ್ಕೆ ಸಾಟಿಯಿಲ್ಲ.
ಹೋಗುವುದು ಹೇಗೆ ?
* ವಯನಾಡು ಹಾಗೂ ಕೋಯಿಕ್ಕೋಡ್ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ‘ಚೂರಂ’ ಘಟ್ಟದ ದಾರಿ ಹಾಗೂ ‘ಲಕ್ಕಿಡಿ ವ್ಯೂ ಪಾಯಿಂಟ್’ ಸಿಗುತ್ತವೆ.
*ಕೋಯಿಕ್ಕೋಡ್ ಹಾಗೂ ಕಳ್ಪೆಟ್ಟದಿಂದ ಲಕ್ಕಿಡಿ ವ್ಯೂ ಪಾಯಿಂಟ್‍ಗೆ ವಾಹನ ಸೌಲಭ್ಯ ಸಾಕಷ್ಟಿದೆ.
ಇನ್ನೇನು ನೋಡಬಹುದು ?
* 15 ಎಕರೆ ವಿಸ್ತಾರದ ‘ಪೂಕುತ್ ಸರೋವರ’ ಇಲ್ಲಿನ ಮತ್ತೊಂದು ಆಕರ್ಷಣೆ. ಇದೊಂದು ಪಿಕ್ನಿಕ್ ತಾಣವೂ ಆಗಿದೆ.
* ಲಕ್ಕಿಡಿಯಿಂದ ಬರೀ ಐದು ಕಿಲೋ ಮೀಟರ್ ದೂರವಿರುವ ವೈತಿರಿ ಪಟ್ಟಣದಲ್ಲಿ ಸಾಮಾನ್ಯ ದರದಿಂದ ಹಿಡಿದು ದುಬಾರಿ ದರದ ವಸತಿ ಸೌಲಭ್ಯ ಸಿಗುತ್ತದೆ.
* ಈ ಕಾಡುಗಳಲ್ಲಿ ಸಿಂಗಳೀಕ, ನೀರುಕಾಗೆ, ಕೊಕ್ಕರೆ ಸೇರಿದಂತೆ ನಾನಾ ಬಗೆಯ ಹಕ್ಕಿಗಳು ಕಾಣುತ್ತವೆ. ಪಕ್ಷಿ ವೀಕ್ಷಕರಿಗೆ ಇದು ಹೇಳಿಮಾಡಿಸಿದ ತಾಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.