ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಭಾರತೀಯರಲ್ಲಿ ಸಾಹಸಮಯ ಹಾಗೂ ದೊಡ್ಡ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವ ಹವ್ಯಾಸ ಹೆಚ್ಚಾಗುತ್ತಿದೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ.
ಬುಧವಾರ ಬಿಡುಗಡೆಯಾದ ʼಥಾಮಸ್ ಕುಕ್ ಇಂಡಿಯಾʼ ವರದಿಯಲ್ಲಿ ಈ ಅಂಶಗಳಿದೆ.
ಹೆಚ್ಚಿನ ಭಾರತೀಯರು ಐಸ್ ಬ್ರೇಕರ್ ಕ್ರೂಸ್, ಪ್ರಸಿದ್ಧ ಸಂಗೀತಗಾರರ ಸಂಗೀತ ಕಛೇರಿ, ವನ್ಯಜೀವಿ ಸಫಾರಿ, ಪ್ರಮುಖ ಕ್ರೀಡಾಕೂಟಗಳು, ಆಯೋಜನೆಯಾಗುವ ದೊಡ್ಡ ಕಾರ್ಯಕ್ರಮಗಳು ಹಾಗೂ ಸಾಹಸಮಯ ಪ್ರಯಾಣಗಳ ಕಡೆಗೆ ಒಲವು ಬೆಳಸಿಕೊಳ್ಳುತ್ತಿದ್ದಾರೆ ಎನ್ನುವ ಅಂಶಗಳು ವರದಿಯಲ್ಲಿವೆ.
ವರದಿಯ ಪ್ರಕಾರ ಪ್ರವಾಸಿಗರಲ್ಲಿ ಶೇ.85ರಷ್ಟು ಉದ್ಯೋಗಿಗಳು ಈ ವರ್ಷ ಹೆಚ್ಚಿನ ರಜಾ ದಿನಗಳನ್ನು ಪಡೆದುಕೊಂಡು, ಆ ವೇಳೆಯಲ್ಲಿ ಪ್ರವಾಸ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಶೇ.84ರಷ್ಟು ಪ್ರವಾಸಿಗರು ತಮ್ಮ ಪ್ರವಾಸಿ ವೆಚ್ಚವನ್ನು ಕಳೆದ ಬಾರಿಗಿಂತ ಶೇ.20ರಿಂದ ಶೇ.50ರಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾಹಿತಿಯು ವರದಿಯಲ್ಲಿದೆ.
ಪ್ರವಾಸಿಗರು ಕೇವಲ ವಿದೇಶಿ ಪ್ರವಾಸಗಳಷ್ಟೇ ಅಲ್ಲದೇ ದೇಶದೊಳಗಿನ ಪ್ರವಾಸದ ಕಡೆಗೂ ಆದ್ಯತೆ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ಜೀವನ ಶೈಲಿಯಿಂದ ಪ್ರವಾಸ ಮಾಡುವುದು ಅನಿವಾರ್ಯಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣ, ಓಟಿಟಿ ಹಾಗೂ ಸಿನಿಮಾಗಳು ಪ್ರವಾಸವನ್ನು ಕೈಗೊಳ್ಳುವಂತೆ ಉತ್ತೇಜನ ನೀಡುತ್ತಿವೆ ಎಂದು ವರದಿಯಲ್ಲಿದೆ.
ಸುಲಭವಾಗಿ ವೀಸಾ ಲಭ್ಯವಾಗುತ್ತಿರುವುದು ವಿದೇಶಿ ಪ್ರವಾಸ ಮಾಡುವವರಿಗೆ ಅನುಕೂಲವಾಗಿದೆ. ಅದರಲ್ಲೂ ಥೈಲ್ಯಾಂಡ್, ಮಲೇಷಿಯಾ, ಯುಎಇ, ಶ್ರೀಲಂಕಾ ತರಹದ ದೇಶಗಳಿಗೆ ಪ್ರವಾಸ ಮಾಡಲು ಭಾರತೀಯರು ಉತ್ಸುಕರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಪಾನ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಯುರೋಪ್ ದೇಶಗಳಿಗೆ ಪ್ರವಾಸ ಮಾಡಲು ಕೂಡ ಭಾರತೀಯರು ಇಷ್ಟಪಡುತ್ತಾರೆ ಎಂದು ವರದಿಯಲ್ಲಿದೆ.
ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ತಿಂಗಳ ಅವಧಿಯಲ್ಲಿ 2,500 ಜನರ ಅಭಿಪ್ರಾಯದ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.