ADVERTISEMENT

ಒಂದಲ್ಲ ಎರಡಲ್ಲ... ಹತ್ತು ಜಲಪಾತ!

ಅಮೆರಿಕದ ‘ಸಿಲ್ವರ್ ಫಾಲ್ಸ್ ಸ್ಟೇಟ್ ಪಾರ್ಕ್’ನ ನೋಟ

ವಿ.ಶ್ರೀನಿವಾಸ
Published 26 ಡಿಸೆಂಬರ್ 2018, 19:30 IST
Last Updated 26 ಡಿಸೆಂಬರ್ 2018, 19:30 IST
ಮಗ ಅರವಿಂದ್‌ ಹಾಗೂ ಪತ್ನಿ ನಾಗರತ್ನ ಅವರೊಂದಿಗೆ ಲೇಖಕ ಶ್ರೀನಿವಾಸ
ಮಗ ಅರವಿಂದ್‌ ಹಾಗೂ ಪತ್ನಿ ನಾಗರತ್ನ ಅವರೊಂದಿಗೆ ಲೇಖಕ ಶ್ರೀನಿವಾಸ   

‘ಈ ವಾರಾಂತ್ಯದಲ್ಲಿ ಹತ್ತು ಫಾಲ್ಸ್ ನೋಡೋಣ’ ಎಂದು ಮಗ ಹೇಳಿದಾಗ – ‘ಓಹ್‌... ಹತ್ತು ಜಲಪಾತಗಳನ್ನು ನೋಡಲು ಎಷ್ಟು ಸುತ್ತಬೇಕೋ? ಎಷ್ಟು ಸಮಯ ಹಿಡಿಯುತ್ತದೆಯೋ?’ ಎಂದುಕೊಂಡೆವು. ನಿಸರ್ಗದ ನೋಟದಲ್ಲಿ ಜಲಪಾತಗಳದ್ದೇ ಒಂದು ಸೊಗಸು. ಹಾಗಾಗಿ ಉತ್ಸಾಹದಿಂದಲೇ ಹೊರಟೆವು.

ನಾವು ಇದ್ದಿದ್ದು, ಓರೆಗಾನ್ ರಾಜ್ಯದ ಪೋರ್ಟ್‌ಲ್ಯಾಂಡ್‌ನ ಹಿಲ್ಸ್‌ಬರೋದಲ್ಲಿ. ಅಲ್ಲಿಂದ ಹೊರಟು ಒಂದೂವರೆ ಗಂಟೆ ಪ್ರಯಾಣದ ನಂತರ ‘ಸಿಲ್ವರ್ ಫಾಲ್ಸ್ ಸ್ಟೇಟ್ ಪಾರ್ಕ್’ ತಲುಪಿದೆವು. ಹಚ್ಚ ಹಸಿರಿನ ಬಯಲು, ಸುತ್ತಲೂ ಹಸಿರು ವನರಾಶಿ, ಹಿತವಾದ ವಾತಾವರಣ.

ಹತ್ತೂ ಜಲಪಾತಗಳನ್ನು ನೋಡಲು ಸುಮಾರು 9 ಮೈಲು ನಡೆಯಬೇಕು. ನಮಗೆ ಅಷ್ಟು ನಡೆಯಲು ಆಗುವುದಿಲ್ಲವೆಂದರೆ, ಎರಡೂವರೆ ಮೈಲು ನಡೆದರೆ ಮುಖ್ಯವಾದ ಎರಡು ಜಲಪಾತಗಳನ್ನು ನೋಡಿ ವಾಪಸ್ ಬರಬಹುದು. ಜಲಪಾತಗಳನ್ನು ನೋಡಲಿಕ್ಕೆ ನಡೆಯುವುದೊಂದೇ ದಾರಿ. ‘ಎರಡೂವರೆ ಮೈಲಿ ಆದ್ರೆ ಪರವಾಗಿಲ್ಲ. ಎರಡು ಫಾಲ್ಸ್ ನೋಡ್ಕೊಂಡು ಬರೋಣ ಸಾಕು’ ಎಂದುಕೊಂಡು ಹೊರಟೆವು.

ADVERTISEMENT

ಸ್ವಲ್ಪ ದೂರ ನಡೆಯುತ್ತಿದ್ದಂತೆ ಯಾವುದೋ ಅನ್ಯಲೋಕ ಪ್ರವೇಶಿಸಿದ ಅನುಭವ. ಸುತ್ತಮುತ್ತಲೂ ನಾವು ಎಂದೂ ನೋಡಿರದ ಚಿತ್ರ ವಿಚಿತ್ರಾಕೃತಿಯ ಪಾಚಿ ಸಸ್ಯಗಳು ಮರಗಳನ್ನು ಆವರಿಸಿಕೊಂಡಿದ್ದವು. ಅವುಗಳನ್ನು ಬೆರಗಿನಿಂದ ನೋಡುತ್ತ, ಒಂದು ಮೈಲು ನಡೆದದ್ದೇ ಗೊತ್ತಾಗಲಿಲ್ಲ. ಆಗ ಎದುರಾದದ್ದೇ ‘ಸೌತ್ ಫಾಲ್ಸ್’. ಇದು ಜಲಪಾತಗಳ ಸರಣಿಯಲ್ಲಿ ಮೊದಲನೆಯದು.

54 ಮೀಟರ್ ಎತ್ತರದಿಂದ ಏಕಧಾರೆಯಾಗಿ ಧುಮ್ಮಿಕ್ಕುವ ಈ ಜಲಪಾತದ ಸೊಗಸನ್ನು ನೋಡುತ್ತಾ, ಫೋಟೊ ತೆಗೆದುಕೊಳ್ಳುತ್ತಾ ನಿಂತೆವು. ಕಂದಕದ ಗೋಡೆಯ ನಡುವೆ, (20–25 ಮೀಟರ್ ಎತ್ತರದಲ್ಲಿ) ಜನ ಓಡಾಡುತ್ತಿದ್ದುದು ಕಾಣಿಸಿತು! ಅರೆರೆ... ಎಷ್ಟೆಷ್ಟೋ ಜಲಪಾತಗಳನ್ನು ನೋಡಿದ್ದೇವೆ, ಎದುರಿನಿಂದ, ಅಕ್ಕಪಕ್ಕದಿಂದ, ಮೇಲಿಂದ, ಕೆಳಗಿನಿಂದ. ಆದರೆ ಈ ಜಲಪಾತದ ಹಿಂಬದಿಗೂ ಹೋಗಿ ನೋಡಬಹುದೆಂಬ ಸಂಗತಿ ತಿಳಿದು ಅಚ್ಚರಿಯಾಯಿತು.

ಕಾಲುದಾರಿಯಲ್ಲಿ ಸಾಗಿ ಜಲಪಾತದ ಹಿಂಬದಿಗೆ ಹೋಗಿ ನೋಡಿದಾಗ ಅನುಭವಿಸಿದ ರೋಮಾಂಚನಕ್ಕೆ ಪಾರವಿಲ್ಲ. ಎದುರಿಗೆ ದಬ ದಬ ಸುರಿಯುವ ಜಲ ಪರದೆಯಿಂದ ಸಿಂಚನಗೊಳ್ಳುವ ತುಂತುರು ಹನಿಗಳು... ಆಹಾ ಅನುಭವಿಸಿಯೇ ಆ ಪುಳಕ ಅರಿಯಬೇಕು. ಅರ್ಧ ಚಂದ್ರಾಕೃತಿಯ ಕಾಲುದಾರಿಯುದ್ದಕ್ಕೂ ಅದರ ನೋಟದಿಂದ ಕಣ್ಣು ತೆಗೆಯಲಿಲ್ಲ.

ಪುನಃ ಪಾಚಿ ಸಸ್ಯಗಳನ್ನು ಹೊದ್ದ ಮರಗಳನ್ನು ನೋಡುತ್ತಾ ಮುಂದೆ ಸಾಗಿದಾಗ ಎದುರಾದದ್ದು ಎರಡನೇ ಜಲಪಾತ ‘ಲೋಯರ್ ಸೌತ್ ಫಾಲ್ಸ್’. ಇದು 28 ಮೀಟರ್ ಆಳಕ್ಕೆ ಧುಮ್ಮಿಕ್ಕುತ್ತದೆ. ಆದರೆ ಅಗಲ ಹೆಚ್ಚು. ಏಕ ಧಾರೆಯಾಗಿ ಪರದೆಯಂತೆ ಸುರಿಯುತ್ತಿದ್ದ ನೋಟ ಬಲು ಸುಂದರ.

ಮುಂದಿನ ಫಾಲ್ಸ್‌ಗಳನ್ನು ನೋಡಲು ಇನ್ನೂ ದೂರ ನಡೆಯಬೇಕಿತ್ತು. ಬೇಡವಾದರೆ, ಇಲ್ಲಿಂದಲೇ ವಾಪಸ್ ಹೋಗಲು ದಾರಿ ಇದೆ. ‌‘ನಿಮಗೆ ಇನ್ನು ಆರೇಳು ಮೈಲಿ ನಡೆಯಲು ಆಗುತ್ತದೆಯೇ’ ಎಂದು ಮಗ ಕೇಳಿದ. ಆ ಎರಡು ಜಲಪಾತಗಳ ಹಾಗೂ ಅನ್ಯಲೋಕದಂತಿದ್ದ ವನರಾಶಿಯ ಸೌಂದರ್ಯಕ್ಕೆ ಸಂಪೂರ್ಣ ಮನ ಸೋತಿದ್ದ ನಾವು ‘ನಮ್ಮಂಥವರಿಗೆ ಇವೆಲ್ಲ ಜೀವನದಲ್ಲಿ ಒಮ್ಮೆ ಸಿಗುವ ಅವಕಾಶ’ ಎಂದುಕೊಂಡು, ಪೂರಾ ನೋಡಿಕೊಂಡೇ ಹೋಗೋಣ ಎಂದು ದೃಢವಾಗಿ ಹೇಳಿದೆವು. ವಾತಾವರಣ ಹಿತಕರವಾಗಿದ್ದುದರಿಂದ ಬಹಳ ಆಯಾಸವೂ ಆಗಿರಲಿಲ್ಲ.

ಎಷ್ಟು ನೋಡಿದರೂ ತಣಿಯದ ಆ ಅಡವಿಯ ಕಾಲುದಾರಿಯಲ್ಲಿ ಹತ್ತಿಳಿಯುತ್ತಾ ಮುಂದೆ ಮುಂದೆ ಸಾಗುತ್ತಾ ನಾವು ನೋಡಿದ ಮೂರನೆಯ ಜಲಪಾತ 9.1 ಮೀಟರ್ ಎತ್ತರದ ‘ಲೋಯರ್ ನಾರ್ತ್ ಫಾಲ್ಸ್’. ನಾಲ್ಕನೆಯದು 54 ಮೀಟರ್ ಎತ್ತರದಿಂದ ಬೀಳುವ ‘ಡಬಲ್ ಫಾಲ್ಸ್’. ಇದು ಏಕಧಾರೆಯಾಗಿ ಬೀಳದೆ, ಎರಡು ಹಂತಗಳಲ್ಲಿ ಬೀಳುವುದರಿಂದ ಇದಕ್ಕೆ ‘ಡಬಲ್ ಫಾಲ್ಸ್’ ಎಂಬ ಹೆಸರು ಬಂದಿದೆ. ಈ ಜಲಪಾತಗಳ ಸರಣಿಯಲ್ಲಿ ಇದು ಅತ್ಯಂತ ಎತ್ತರದ ಫಾಲ್ಸ್ ಕೂಡಾ ಹೌದು.

ನಂತರ ನೋಡಿದ್ದು ‘ಡ್ರೇಕ್ ಫಾಲ್ಸ್’. ಈ ಸ್ಥಳಕ್ಕೆ ‘ಪಾರ್ಕ್’ ಮಾನ್ಯತೆ ಕೊಡಬೇಕೆಂದು 1900ನೇ ಇಸವಿಯಿಂದಲೇ ಸತತವಾಗಿ ಪ್ರಯತ್ನಿಸಿದ ಫೋಟೊಗ್ರಾಫರ್ ಜೂನ್ ಡಿ ಡ್ರೇಕ್‌ನ ಹೆಸರನ್ನು ಈ ಜಲಪಾತಕ್ಕೆ ಇಡಲಾಗಿದೆ

ಆರನೆಯದು 32 ಮೀಟರ್ ಎತ್ತರದಿಂದ ಬೀಳುವ ‘ಮಿಡ್ಲ್ ನಾರ್ತ್ ಫಾಲ್ಸ್’. ಏಳನೆಯದು 41 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ‘ವಿಂಟರ್ ಫಾಲ್ಸ್’. ಎಂಟನೆಯದು 9.4 ಮೀಟರ್ ಎತ್ತರದಿಂದ ಇಳಿಯುವ ‘ಟ್ವಿನ್ ಫಾಲ್ಸ್’ – ಹೆಸರೇ ಹೇಳುವಂತೆ ಇದು ಜೋಡಿ ಜಲಪಾತ. ಇಷ್ಟು ನೋಡಿದ ನಂತರ ಇನ್ನೊಂದು ಕವಲುದಾರಿಗೆ ಬಂದಿದ್ದೆವು. ಉಳಿದ ‘ನಾರ್ತ್ ಫಾಲ್ಸ್’ ‘ಅಪ್ಪರ್ ನಾರ್ತ್ ಫಾಲ್ಸ್’ಗಳನ್ನು ನೋಡಲು ಇನ್ನೂ ಒಂದೂವರೆ ಮೈಲಿ ನಡೆಯಬೇಕಿತ್ತು. ಅರ್ಧ ಮೈಲು ದೂರದಲ್ಲಿ ಕಾರ್ ಪಾರ್ಕಿಂಗ್ ಸ್ಥಳ ಇತ್ತು. ಅಷ್ಟರಲ್ಲಿ ಸಾಕಷ್ಟು ಸಮಯವಾಗಿದ್ದರಿಂದ ಹೊಟ್ಟೆ ತಾಳ ಹಾಕುತ್ತಿತ್ತು. ಕಾಲುಗಳು ಊಟದ ಕಡೆಗೆ ಎಳೆದವು. ಆರಂಭದ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಊಟ ತಿಂಡಿ ಮಾಡಲು ತಂಗುದಾಣಗಳಿವೆ. ರಾತ್ರಿ ಉಳಿಯಲೂ, ಫೈರ್ ಕ್ಯಾಂಪ್ ಚಟುವಟಿಕೆಗಳಿಗೂ ಅನುಕೂಲಗಳಿವೆ.

‘ಜಸ್ಟ್ ಬಿಫೋರ್ ಡಾನ್’ ಎಂಬ ಹಾರರ್ ಸಿನಿಮಾದ ಚಿತ್ರೀಕರಣ ಇಲ್ಲಿ ನಡೆದಿದೆ. ಹಾಗೆಯೇ ‘ದಿ ಹಂಟೆಡ್’ ಮತ್ತು ‘ಟ್ವಿಲೈಟ್’ ಸಿನಿಮಾಗಳೂ ಇಲ್ಲಿ ಚಿತ್ರಿತವಾಗಿವೆ. ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇರುವುದರಿಂದ ಯೂ ಟ್ಯೂಬಿನಲ್ಲಿ ‘ಸಿಲ್ವರ್ ಫಾಲ್ಸ್ ಸ್ಟೇಟ್ ಪಾರ್ಕ್, ಓರೆಗಾನ್’ ಎಂದು ಹುಡುಕಿ ವೀಕ್ಷಿಸಬಹುದು.

**

‘ಸಿಲ್ವರ್ ಫಾಲ್ಸ್ ಸ್ಟೇಟ್ ಪಾರ್ಕ್’

ಒಂಬತ್ತು ಮೈಲು ಚಾರಣದಲ್ಲಿ ನೋಡಬಹುದಾದ ಹತ್ತು ಜಲಪಾತಗಳಾಗಿ ಹರಿಯುವ ‘ಸಿಲ್ವರ್ ಕ್ರೀಕ್’ ಎಂಬ ಉಪನದಿಯ ಕಣಿವೆ ಬಹುಶಃ ಇಂತಹ ಏಕೈಕ ಸ್ಥಳ. ಜಲಪಾತದ ಹಿಂಬದಿಯಿಂದ ಜಲಧಾರೆಯನ್ನು ವೀಕ್ಷಿಸುವ ಸೌಲಭ್ಯ ಅಚ್ಚರಿ ಹುಟ್ಟಿಸುವಂತಹದ್ದು. ಒಂದಕ್ಕಿಂತ ಒಂದು ವಿಭಿನ್ನ ಜಲಧಾರೆಗಳು.

ಅಬ್ಬಿಗಳು... ಅಬ್ಬೆಗಳು... ಇಷ್ಟಲ್ಲದೇ ಬೋನಸ್ ಎಂಬಂತೆ, ಫೋಟೊಜನಿಕ್ ಆದ ಅನೇಕ ಸಣ್ಣ ಪುಟ್ಟ ಜಲಧಾರೆಗಳು ದಾರಿಯುದ್ದಕ್ಕೂ ನೋಡಲು ಸಿಗುತ್ತವೆ. ಒಟ್ಟಿನಲ್ಲಿ ನಮ್ಮ ಅಮೆರಿಕದ ಮೊದಲ ಪ್ರವಾಸದಲ್ಲಿ ನಯಾಗಾರ ಫಾಲ್ಸ್ ನೋಡಲಾಗಲಿಲ್ಲ ಎಂಬ ಕೊರತೆಯನ್ನು ನೀಗಿಸಿದ್ದು ಈ ‘ಸಿಲ್ವರ್ ಫಾಲ್ಸ್ ಸ್ಟೇಟ್ ಪಾರ್ಕ್’.

‘ಜಸ್ಟ್ ಬಿಫೋರ್ ಡಾನ್’ ಎಂಬ ಹಾರರ್ ಸಿನಿಮಾದ ಚಿತ್ರೀಕರಣ ಇಲ್ಲಿ ನಡೆದಿದೆ. ಹಾಗೆಯೇ ‘ದಿ ಹಂಟೆಡ್’ ಮತ್ತು ‘ಟ್ವಿಲೈಟ್’ ಸಿನಿಮಾಗಳೂ ಇಲ್ಲಿ ಚಿತ್ರಿತವಾಗಿವೆ. ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇರುವುದರಿಂದ ಯೂ ಟ್ಯೂಬಿನಲ್ಲಿ ‘ಸಿಲ್ವರ್ ಫಾಲ್ಸ್ ಸ್ಟೇಟ್ ಪಾರ್ಕ್, ಓರೆಗಾನ್’ ಎಂದು ಹುಡುಕಿ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.