ADVERTISEMENT

ಐರ್ಲೆಂಡ್‌ ದ್ವೀಪದಲ್ಲಿ ಗ್ಲೆನಿಫ್ ಹಾರ್ಸೋವು

ಪ್ರೊ.ಸಿ.ಸಿದ್ದರಾಜು ಆಲಕೆರೆ
Published 29 ಮೇ 2019, 19:30 IST
Last Updated 29 ಮೇ 2019, 19:30 IST
   

ಐರ್ಲೆಂಡ್, ವಾಯವ್ಯ ಯುರೋಪ್‍ನಲ್ಲಿರುವ ಒಂದು ದ್ವೀಪ ರಾಷ್ಟ್ರ. ಆ ದೇಶದ ಪೂರ್ವ ಅಂಚಿನಲ್ಲಿರುವ ರಾಜಧಾನಿ ಡಬ್ಲಿನ್‍ನಿಂದ ಮತ್ತೊಂದು ವಿರುದ್ಧದ ತುದಿಯಲ್ಲಿರುವ ಸ್ಲಿಗೋ ನಗರ. ಅದು 208 ಕಿ.ಮೀ. ದೂರದಲ್ಲಿದೆ. ಸ್ಲಿಗೊ ಸಮೀಪದಲ್ಲೇ ಗ್ಲೆನಿಫ್‍ ಹಾರ್ಸೋವು ಎಂಬ ಪರ್ವತಗಳ ಕಡಿವೆ ಇದೆ. ಅದು ಒಂಥರಾ ಅಳಿವಿನಂಚಿನ ಪರ್ವತಗಳ ಕಣಿವೆ. ಅಲ್ಲಿಗೆ ಹೆಚ್ಚು ಪ್ರವಾಸಿಗರು ಹೋಗುವುದಿಲ್ಲ. ನಾವು ಆ ತಾಣವನ್ನು ನೋಡಿಬರಲು ಹೊರಟೆವು.

ಐರ್ಲೆಂಡ್‍ನ ಮಧ್ಯಭಾಗದಲ್ಲಿರುವ ಅಥ್ಲೋನ್ ಪಟ್ಟಣ ಡಬ್ಲಿನ್‍ನಿಂದ ಸುಮಾರು 120 ಕಿ.ಮೀ. ದೂರದಲ್ಲಿದೆ. ಅಲ್ಲಿ ವಾಸವಾಗಿರುವ ಮಗಳು, ಅಳಿಯನ ಮನೆಗೆ ಹೋಗಿದ್ದಾಗ ಒಂದು ಭಾನುವಾರ ಬೆಳಿಗ್ಗೆ ಗ್ಲೆನಿಫ್‌ ಹಾರ್ಸೋವು ಕಣಿವೆ ನೋಡಲು ಕಾರಿನಲ್ಲಿ ಸ್ಲಿಗೋ ನಗರದ ಕಡೆ ಹೊರಟೆವು. ಅಥ್ಲೋನ್‍ನಿಂದ ಸ್ಲಿಗೋ ನಗರದವರೆಗೆ ವಿಶಾಲವಾದ ಹೆದ್ದಾರಿಯಿದೆ. ಆ ವಿಶಾಲವಾದ ರಸ್ತೆಯ ಎರಡು ಬದಿಯೂ ಹಸಿರುಮಯ ಬಯಲು. ಕಾರು 120 ಕಿ.ಮೀ.ವೇಗದಲ್ಲಿ ಹೋಗುತ್ತಿದ್ದರೂ ಅಷ್ಟು ವೇಗವಾಗಿ ಹೋಗುತ್ತಿದ್ದೇವೆಂದು ಎನ್ನಿಸುವುದೇ ಇಲ್ಲ. ಅಷ್ಟು ವೈಜ್ಞಾನಿಕವಾಗಿ, ಸುಂದರವಾಗಿ ಅಷ್ಟೇ ವಿಶಾಲವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ.

ಮಧ್ಯಾಹ್ನ 1 ಗಂಟೆ ಹೊತ್ತಿಗೆ ಸ್ಲಿಗೋ ನಗರವನ್ನು ತಲುಪಿದೆವು. ಅಲ್ಲಿಂದ ಗ್ಲೆನಿಫ್‌ ಹಾರ್ಸೊವುದತ್ತ ಹೊರಟಾಗ 22 ಕಿ.ಮೀ. ದೂರದಲ್ಲಿ ಕ್ಲಿಫನ್ ಎಂಬ ಹಳ್ಳಿ ಸಿಕ್ಕಿತು. ಕ್ಲಿಫನ್‍ನಿಂದ 8 ಕಿ.ಮೀ. ಕಿರುರಸ್ತೆಯಲ್ಲಿಯೇ ಸಾಗಿದೆವು. ಅದು ಹೊಸ ಜಾಗವಾದ್ದರಿಂದ ಪ್ರಯಾಣ ಬೇಸರ ತರಿಸಲಿಲ್ಲ.

ADVERTISEMENT

ಮುಂದೆ ಸಾಗಿದಂತೆ ಗ್ಲೆನಿಫ್ ಹಾರ್ಸೋವು ಸಿಕ್ಕಿತು. ಅಲ್ಲಿಗೆ ತಲುಪುತ್ತಿದ್ದಂತೆ ಮರುಳು ಗುಡ್ಡೆಯೊಂದು ಅರ್ಧಭಾಗ ಕುಸಿದು ಹೋಗಿರುವಂತಹ ಆಕೃತಿ ಎದುರಾಯಿತು. ಅದು ಒಂದು ಪರ್ವತ. ಎರಡು ಕಡೆಯ ಪರ್ವತಗಳ ಸಾಲಿನ ನಡುವೆ ಕಿರು ರಸ್ತೆಯಲ್ಲಿ ಹೋಗುತ್ತಿರುವಾಗ ‘ನಿಸರ್ಗದ ಚಿತ್ರ ಕಲೆ’ ಕಣ್ಣೆದುರು ತೆರೆದುಕೊಂಡಿತು.

ಆ ಪರ್ವತ ಕಣಿವೆಯ ದೃಶ್ಯ ಅದ್ಭುತವಾಗಿತ್ತು. ನಾವು 19ನೇ ಶತಮಾನದಲ್ಲಿದ್ದ ಬ್ಯಾರೆಟ್ ಗಿರಣಿಯ ಅವಶೇಷವಿದ್ದ ಸ್ಥಳದಲ್ಲಿ ಕಾರು ನಿಲ್ಲಿಸಿದೆವು. ಮೂರು ಕಡೆಯೂ ಕಾಣುವ ಪರ್ವತಗಳ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಂಡೆವು. ಒಂದು ಪರ್ವತ ತನ್ನ ಮಡಿಲಿನಲ್ಲಿ ಮರಗಳನ್ನು ಬೆಳೆಸಿಕೊಂಡು ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದ್ದರೆ, ಈ ಕಣಿವೆಯ ಎರಡು ಕಡೆಯಿಂದ ಹರಿಯುತ್ತಿರುವ ಸಣ್ಣ ಝರಿಗಳು ಆ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದವು.

ಈ ಕಣಿವೆ ಜಾಗ, ಟೈವ್‍ಬಾನ್, ಟ್ರುಸ್ಕೋರ್ ಮತ್ತು ಬೆನ್ವಿಸ್ಕೆನ್ ಎಂಬ ಮೂರು ಪರ್ವತಗಳಿಂದ ರಕ್ಷಿಸಲ್ಪಟ್ಟಿದೆ. ಈ ಕಣಿವೆಗೆ ಸ್ಲಿಗೋ ನಗರದಿಂದ ಉತ್ಸಾಹಿ ಯುವಕರು ಸೈಕಲ್ ಟ್ರಕ್ಕಿಂಗ್‍ಗೆ ಬರುತ್ತಾರೆ. ಮೂರು ಕಡೆ ಪರ್ವತಗಳಿರುವುದರಿಂದ ಇದು ಒಂದು ರೀತಿಯಲ್ಲಿ ಕುದುರೆ ಲಾಳಕಾರದಲ್ಲಿ ಕಾಣುತ್ತದೆ. ಬಹುಶಃ ಹಿಂದೆ ಇಲ್ಲಿಗೆ ರಸ್ತೆ ಇಲ್ಲದೆ ಇದ್ದ ಕಾರಣದಿಂದ ಕುದುರೆಯ ಸವಾರನೊಬ್ಬ ಈ ಸ್ಥಳವನ್ನು ಕಂಡುಹಿಡಿದ ಹಿನ್ನೆಲೆಯಲ್ಲಿ ಗ್ಲೆನಿಫ್ ಹಾರ್ಸೋವು ಎಂಬ ಹೆಸರು ಬಂದಿರಬೇಕು.

ಈ ಕಿರು ರಸ್ತೆಯಲ್ಲಿ ಅಪರೂಪಕ್ಕೆ ಆಸಕ್ತರು ಕಾರಿನಲ್ಲಿ ಬಂದು ಹೋಗುತ್ತಾರೆ. ಐರ್ಲೆಂಡಿನ ಅಪರೂಪದ ಸೌಂದರ್ಯ ದೃಶ್ಯಗಳಲ್ಲಿ ಗ್ಲೆನಿಫ್ ಹಾರ್ಸೋವು ಕೂಡ ಒಂದಾಗಿದೆ. ನಮ್ಮ ಕುಟುಂಬ ವರ್ಗ ಈ ಪ್ರಕೃತಿಯ ಸೌಂದರ್ಯವನ್ನು ಸವಿದು ಬರಲು ಒಂದು ಉತ್ತಮ ಅವಕಾಶ ಸಿಕ್ಕಿದಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.