ADVERTISEMENT

ನದಿ-ಸಾಗರದ ಸಂಗಮ ಡೆಲ್ಟಾಬೀಚ್

ಕಳೆಯಲು ಮನದ ಬೇಸರ, ನೋಡಬನ್ನಿ ಕೋಡಿಬೆಂಗ್ರೆ ಪರಿಸರ

​ಪ್ರಜಾವಾಣಿ ವಾರ್ತೆ
Published 16 ಮೇ 2019, 14:13 IST
Last Updated 16 ಮೇ 2019, 14:13 IST
ಡೆಲ್ಟಾ ಬೀಚ್‌
ಡೆಲ್ಟಾ ಬೀಚ್‌   

ಒಂದು ಕಡೆ ಸಾಗರ ಸೇರಲು ತವಕಿಸುವ ನದಿಗಳು, ಇನ್ನೊಂದು ಕಡೆ ನದಿಗಳನ್ನು ತಬ್ಬಿಕೊಳ್ಳಲು ಕೈಗಳನ್ನು ಹರವಿ ನಿಂತುಕೊಂಡಂತಿರುವ ಸಾಗರ. ಒಂದೆಡೆ ಸೂರ್ಯಾಸ್ತ. ಇನ್ನೊಂದೆಡೆ ಮೀನು ಶಿಖಾರಿ ಮುಗಿಸಿ ಮನೆಯತ್ತ ಹೊರಟ ಮೀನುಗಾರರು. ಕಡಲ ತಡಿಯ ಮರಳಿನ ಮೇಲೆ ಬರಿಗಾಲಲ್ಲಿ ಹೆಜ್ಜೆ ಹಾಕುತ್ತಿರುವ ಜೋಡಿಗಳು..

ಇದು ಉಡುಪಿಯಿಂದ ಹದಿನೇಳು ಕಿ.ಮೀ ದೂರವಿರುವ ಕೋಡಿಬೆಂಗ್ರೆಯ ಕಡಲ ತೀರದ ಸೊಬಗು. ಈ ಸುಂದರ ಪರಿಸರ ಏಕಾಂಗಿ ಪ್ರವಾಸಕ್ಕೂ ಜತೆಯಾಗುತ್ತದೆ. ಕುಟುಂಬ ಸದಸ್ಯರ ಜತೆ ವಿಹರಿಸಲು ಸೈ ಎನ್ನುತ್ತದೆ. ಈ ಕಡಲ ತೀರಕ್ಕೆ ಮತ್ತೊಂದು ಹೆಸರು ಡೆಲ್ಟಾ ಬೀಚ್‌. ಬ್ಯುಸಿಲೈಫ್‌ನಿಂದ ಮುಕ್ತಿಪಡೆಯಬೇಕು. ಸುಂದರ ಪರಿಸರದಲ್ಲಿ ಓಡಾಡಬೇಕು. ಹರಿವ ನೀರಿನ ಮೇಲೆ ಹೆಜ್ಜೆ ಹಾಕಬೇಕು. ಸಂಜೆ ಸೂರ್ಯಾಸ್ತ ನೋಡುತ್ತಾ ವಿಹರಿಸುವ ಆಸಕ್ತರು ಇಲ್ಲಿಗೆ ಬರಬೇಕು. ಈ ಜಾಗದಲ್ಲಿ ಸೀತಾ ಮತ್ತು ಸುವರ್ಣಾ ನದಿಗಳು ಕಡಲಿಗೆ ಸೇರುವ ಜಾಗವಿದೆಯಲ್ವಾ, ಅದು ಕೊಡುವ ಖುಷಿಯೇ ಬೇರೆ.

ಉಡುಪಿ–ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕೈದು ಕಿ.ಮೀ ಕ್ರಮಿಸಿದರೆ ಸಂತೆಕಟ್ಟೆ ಎಂಬ ಊರು ಸಿಗುತ್ತದೆ. ಅಲ್ಲಿಂದ ಪಶ್ಚಿಮ ದಿಕ್ಕಿಗೆ ಹೊರಳಿದರೆ ಆ ರಸ್ತೆ ಕೋಡಿಬೆಂಗ್ರೆಗೆ ಕರೆದೊಯ್ಯುತ್ತದೆ. ಆ ದಾರಿಯಲ್ಲಿ ಕಡಲ ತೀರ ಸೇರುವುದೇ ಒಂದು ಸೊಗಸು.

ADVERTISEMENT

ಏಕೆ ಗೊತ್ತಾ? ನಾವು ಸಾಗುವ ರಸ್ತೆಯ ಇಕ್ಕೆಲಗಳಲ್ಲಿಯೂ ಸಾಲುಸಾಲು ತೆಂಗಿನಮರಗಳು ಸ್ವಾಗತ ಕೋರುತ್ತವೆ. ಒಂದರ ನಂತರ ಒಂದರಂತೆ ಸರಿದು ಹೋಗುವ ತೆಂಗಿನಮರಗಳ ಸಾಲುಗಳು ಒಮ್ಮಿಂದೊಮ್ಮೆಗೆ ಮನಸ್ಸನ್ನು ಹಗುರಗೊಳಿಸುತ್ತವೆ. ಧ್ಯಾನಸ್ಥ ಸ್ಥಿತಿಗೂ ಒಯ್ಯುತ್ತವೆ. ಅದೇ ಮಾರ್ಗದಲ್ಲಿ ಸಿಗುವ ಮತ್ತೊಂದು ಆಕರ್ಷಣೆಯೆಂದರೆ ತೋನ್ಸೆಯ ತೂಗುಸೇತುವೆ. ಜನಸಂಖ್ಯೆ ಕಡಿಮೆ ಇರುವ ಪ್ರದೇಶದಲ್ಲಿ ಈ ತೂಗುಸೇತುವೆಯ ನಡುವೆ ನಿಂತು ಸೂರ್ಯಾಸ್ತ ವೀಕ್ಷಿಸುವುದೇ ಒಂದು ಸೊಬಗು.

ಆ ದಾರಿಯಲ್ಲಿ ಮುಂದೆ ಸಾಗುತ್ತಿದ್ದಂತೆ, ಭೂಪ್ರದೇಶದ ಅಗಲ ಕಿರಿದಾಗುತ್ತದೆ. ಬಲದಿಕ್ಕಿನಲ್ಲಿ ಸುವರ್ಣಾ ನದಿ, ಸೀತಾನದಿ, ಎಡದಿಕ್ಕಿನಲ್ಲಿ ಅರಬ್ಬೀ ಸಮುದ್ರ. ಒಂದು ಕಡೆ ಅರಬ್ಬೀ ಸಮುದ್ರದಲ್ಲಿ ಅಬ್ಬರಿಸುವ ಅಲೆಗಳು, ಪಕ್ಕದಲ್ಲೇ ಜುಳು ಜುಳು ಹರಿಯುವ ಸುವರ್ಣಾ ನದಿ, ದೂರದಲ್ಲಿ ಇವರೆಡರ ಸಂಗಮ ಅಪರೂಪ ಹಾಗೂ ನಯನಮನೋಹರವಾಗಿದೆ.

ಈ ಡೆಲ್ಟಾ ಬೀಚ್‌ಗೆ ಸಂಜೆ ವೇಳೆ ಭೇಟಿ ನೀಡಿದರೆ, ಸೂರ್ಯಾಸ್ತಮಾನದ ಕ್ಷಣಕ್ಷಣದ ಸನ್ನಿವೇಶವನ್ನೂ ಕಣ್ಮನಗಳಲ್ಲಿ ತುಂಬಿಕೊಳ್ಳಬಹುದು. ಬಂದ ದಾರಿಯಲ್ಲೇ ತೆರಳಿದರೆ ಮಲ್ಪೆ ಕಿನಾರೆಯನ್ನು ಕೂಡ ನೋಡಿ ಹೋಗಬಹುದು.

ಕೋಡಿಬೆಂಗ್ರೆ ಪರಿಸರದಲ್ಲಿ ಸಾಕಷ್ಟು ಸಿನಿಮಾಗಳು, ವಿಡಿಯೊ ಆಲ್ಬಂ ಹಾಡುಗಳು ಚಿತ್ರೀಕರಣಗೊಂಡಿವೆ. ಉಡುಪಿಗೆ ಪ್ರವಾಸ ಹೋಗುವವರು ಒಮ್ಮೆ ಕೋಡಿಬೆಂಗ್ರೆಯ ಡೆಲ್ಟಾ ಬೀಚ್‌ಗೆ ಭೇಟಿ ನೀಡುವುದನ್ನು ಮರೆಯದಿರಿ.

ಹೋಗುವುದು ಹೇಗೆ?

ಉಡುಪಿಯಲ್ಲಿ ಅಷ್ಟಮಠಗಳ ದರ್ಶನ ಮುಗಿಸಿಕೊಂಡು, ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಕಿ.ಮೀ ಸಾಗಿದರೆ ಸಂತೆಕಟ್ಟೆ ಸಿಗುತ್ತದೆ. ಅಲ್ಲಿಂದ ಪಶ್ಚಿಮಕ್ಕೆ 10 ಕಿ.ಮೀ ಸಾಗಿದರೆ ಕೋಡಿಬೇಂಗ್ರೆ ತಲುಪುತ್ತೀರಿ.

ಉಡುಪಿ–ಕೋಡಿಬೆಂಗ್ರೆ (ಉಡುಪಿ ಸಿಟಿ ಬಸ್‌ ಸ್ಟಾಪ್‌ನಿಂದ) ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಆದರೆ, ಹೆಚ್ಚಾಗಿಲ್ಲ. ಹೀಗಾಗಿ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕು. ಸ್ವಂತ ವಾಹನ ಹೊಂದಿರುವವರಿಗೆ ಪ್ರಯಾಣ ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.