ADVERTISEMENT

ಏರುವ ಬಾರಾಕೇದಾರ!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 5:18 IST
Last Updated 22 ಆಗಸ್ಟ್ 2019, 5:18 IST
   

ಉತ್ತರ ಭಾರತದ ಚಾರ್‌ಧಾಮ್ ಯಾತ್ರೆ (ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಹಾಗೂ ಬದರಿನಾಥ) ವರ್ಷದಲ್ಲಿ 6 ತಿಂಗಳು ಮುಚ್ಚಿರುತ್ತದೆ. ಅಕ್ಷಯ ತೃತೀಯ ದಿನದಂದು ವಿಶೇಷ ಪೂಜೆಯೊಂದಿಗೆ ಕೇದಾರನಾಥ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಇದಾದ ಎರಡು ದಿನಗಳ ನಂತರ ಬದರಿನಾಥ ದೇವಾಲಯವನ್ನು ತೆರೆಯುತ್ತಾರೆ. ಅಕ್ಟೋಬರ್‌ನಲ್ಲಿ ಪುನಃ ದೇವಾಲಯಗಳನ್ನು ಮುಚ್ಚಲಾಗುತ್ತದೆ.

ಈ ವರ್ಷದ ಮೇ ತಿಂಗಳಲ್ಲಿ ಉತ್ತರ ಭಾರತದ ಹದಿನೈದು ದಿನಗಳ ಪ್ರವಾಸದ ಭಾಗವಾಗಿ, ಬದರಿ–ಕೇದಾರಕ್ಕೆ ಪ್ರವಾಸಕ್ಕೆ ಹೊರಟೆವು. ಘರ್ವಾಲ್ ಮಂಡಲ್ ವಿಕಾಸ್ ನಿಗಮದಲ್ಲಿ ರೂಮ್‌ ಬುಕ್ ಮಾಡಿಸಿದೆವು. ಎರಡೇ ತಾಣಗಳಿಗೆ ಹೋಗುವವರಾದ್ದರಿಂದ, ಹೃಷಿಕೇಶದಲ್ಲಿ ನಮ್ಮ ಗುರುತಿನ ಚೀಟಿ ತೋರಿಸಿ, ‘ದೋ ಧಾಮ್’ ಕಾರ್ಡ್ ಮಾಡಿಸಿಕೊಂಡು ಪ್ರಯಾಣ ಆರಂಭಿಸಿದೆವು.

ಹೃಷಿಕೇಶದಿಂದ ಬಸ್‌ನಲ್ಲಿ ಹೊರಟು ಸೋನಾಪ್ರಯಾಗ್‌ ತಲುಪಿದೆವು. ಇದು ಹತ್ತುಗಂಟೆಗಳ ಹಾದಿ. ಸೋನಾಪ್ರಯಾಗ್‌ದಿಂದ ಗೌರಿಕುಂಡ ಮೂಲಕ ಕೇದಾರನಾಥಕ್ಕೆ ತಲುಪಿದೆವು. ಅದು ಕೇದಾರ ಯಾತ್ರೆಯ ಪೀಕ್ ಸೀಸನ್. ಹಾಗಾಗಿ ಎಲ್ಲಿ ನೋಡಿದರು ಯಾತ್ರಿಗಳು. ಅವರನ್ನು ಕೊಂಡೊಯ್ಯುವ ಕುದುರೆಗಳು ಹಾಗೂ ಪೋನಿ (ಮರದ ಬುಟ್ಟಿಯನ್ನು ಬೆನ್ನಮೇಲೆ ಕಟ್ಟಿಕೊಂಡು ಅದರೊಳಗೆ ಯಾತ್ರಿಗಳನ್ನು ಕೂರಿಸಿಕೊಂಡು ಹೋಗುವ ವಿಧಾನ).

ADVERTISEMENT

ಬೆಟ್ಟ ಏರಲು ಕುದುರೆ, ಪೋನಿ

ಗೌರಿಕುಂಡದಿಂದ ಕೇದಾರನಾಥ 16 ಕಿ.ಮೀಗಳ ಕಾಲು ದಾರಿ. ಕುದುರೆ ಅಥವಾ ಪೋನಿಯಲ್ಲಿ ಹೋಗಬಯಸುವವರು, ಗೌರಿಕುಂಡದಲ್ಲಿ ಸರ್ಕಾರ ನಿಗದಿ ಪಡಿಸಿದ ದರ ನೀಡಿ (ಕುದುರೆ/ಪೋನಿಯಲ್ಲಿ ಬೆಟ್ಟ ಏರಲು ₹2500, ಇಳಿಯಲು ₹1500) ಹೋಗಬಹುದು. ಎಚ್ಚರವಿರಲಿ, ಅಕಸ್ಮಾತ್ ದಾರಿ ಮಧ್ಯೆ ಆಯಾಸವಾಗಿ, ಕುದುರೆ/ಪೋನಿಯಲ್ಲಿ ಹೋಗಬೇಕಾಗಿ ಬಂದರೆ, ನೀವು ದುಬಾರಿ ಬೆಲೆ ತೆರಬೇಕಾದೀತು. ಅಂದ ಹಾಗೆ, ಸಮಯದ ಅಭಾವ ಇರುವವರಿಗೆ ಹೆಲಿಕಾಪ್ಟರ್‌ ಸೇವೆ ಇದೆ. ರುದ್ರಪ್ರಯಾಗ್‌ನಿಂದ 18ಕಿ.ಮೀ ದೂರದಲ್ಲಿ ಇರುವ ಫಾಟಾದಿಂದ ಕೇದಾರನಾಥಕ್ಕೆ ಪ್ರತಿದಿನ ಬೆಳಿಗ್ಗೆ 4ರಿಂದ ಸಂಜೆ 6ರವರೆಗೆ ಹೆಲಿಕಾಪ್ಟರ್ ಸೇವೆ ಇದೆ. ಹೋಗಿ ಬರಲು ಒಬ್ಬರಿಗೆ ₹7ಸಾವಿರ. ಆನ್‌ಲೈನ್‌ನಲ್ಲಿ ಮುಂಗಡ ಕಾಯ್ದಿರಿಸುವುದು ಉಚಿತ.

ನಮಗೆ ಇಡೀ ದಿನ ಸಮಯವಿತ್ತು. ಹೀಗಾಗಿ ಕಾಲ್ನಡಿಗೆಯಲ್ಲೇ ಹೋಗಲು ತೀರ್ಮಾನಿಸಿದೆವು. ಗೌರಿಕುಂಡದಿಂದ ಬೆಳಗ್ಗೆ 9ಕ್ಕೆ ಚಾರಣ ಪ್ರಾರಂಭಿಸಿದೆವು. ಜಿಟಿ ಜಿಟಿ ಮಳೆ, ಮೋಡ ಕವಿದ ವಾತಾವರಣ, ಒಂದೆಡೆ ಹಿಮಾಲಯ ಶಿಖರ, ಮತ್ತೊಂದೆಡೆ ಶಾಂತವಾಗಿ ಹರಿಯುತಿರುವ ಅಲಕನಂದಾ ನದಿ. ಎತ್ತ ನೋಡಿದರೂ ದಟ್ಟ ಹಸಿರಿನ ಪರ್ವತ ಶ್ರೇಣಿಗಳು. ಅಬ್ಬಾ! ಪ್ರಕೃತಿ ಮಾತೆಗೆ ಶರಣು ಹೇಳುತ್ತಾ ನಮ್ಮ ಚಾರಣ ಸಾಗಿತು.

ದಾರಿಯ ಇಕ್ಕೆಲಗಳಲ್ಲಿ 2013ರ ಭೀಕರ ಪ್ರವಾಹದಲ್ಲಿ ಗೌರಿಕುಂಡದಿಂದ ಕೇದಾರನಾಥ ನಡುವಿರುವ ಭೂಪ್ರದೇಶ ನಾಶವಾಗಿರುವ ಕುರುಹುಗಳು ಕಂಡವು. ರಸ್ತೆ ಬದಿಯಲ್ಲಿ ತಿಂಡಿ ತಿನಿಸುಗಳ ಮಳಿಗೆಗಳಿದ್ದವು. ಅಲ್ಲಲ್ಲಿ ಶೌಚಾಲಯ ವ್ಯವಸ್ಥೆ. ಅರ್ಧ ದಾರಿಯಲ್ಲಿ ಪೊಲೀಸ್ ಚೌಕಿಯೂ ಸಿಕ್ಕಿತು. ಪ್ರತಿ 2 ಕಿ.ಮೀಗೆ ಒಂದು ಪ್ರಥಮ ಚಿಕಿತ್ಸಾಲಯವೂ ಇತ್ತು. ಒಟ್ಟಿನಲ್ಲಿ ದೇಹ ಹಾಗೂ ಮನಸ್ಸು ಗಟ್ಟಿ ಇದ್ದರೆ ಕೇದಾರನಾಥನ ದರ್ಶನ ಸರಾಗವಾಗಿ ಮಾಡಬಹುದು.

ವಿರಮಿಸುತ್ತಾ.. ಹೆಜ್ಜೆ ಹಾಕುತ್ತಾ..

ನಾವು ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಮಧ್ಯಾಹ್ನ 2ಗಂಟೆ ಹೊತ್ತಿಗೆ ಅರ್ಧ ದಾರಿ ಸವೆಸಿದೆವು. ಬಿಸಿ ಬಿಸಿ ಚಪಾತಿ, ದಾಲ್, ಚಾವಲ್ ಊಟ ಮಾಡಿ, ಕೆಲ ಕಾಲ ವಿಶ್ರಾಂತಿ ಪಡೆದು ಮುಂದೆ ಸಾಗಿದೆವು. ಮೊದಲ 7 ಕಿ.ಮೀ ಅಷ್ಟೇನು ಕಠಿಣ ಅನಿಸಲಿಲ್ಲ, ರಾಂಬಾಡಾ(ಅರ್ಧ ದಾರಿಯಲ್ಲಿ ಸಿಗುವ ಒಂದು ಪುಟ್ಟ ಊರು) ನಂತರದ 7 ಕಿ.ಮೀ ದಾರಿ ತುಂಬಾ ಕ್ಲಿಷ್ಟಕರ ಎನ್ನಿಸಿತು. ಬೆಟ್ಟ ಏರಲು ಹರಸಾಹಸ ಪಡಬೇಕಾಯಿತು.

ಸಂಜೆಯಾದಂತೆ ಥಂಡಿಯ ವಾತಾವರಣ. ಹುಣ್ಣಿಮೆಯ ದಿನವಾದ್ದರಿಂದ ಹಿಮ ಕಡಿದು ನಿರ್ಮಿಸಿದ್ದ ರಸ್ತೆ ಮಧ್ಯೆ ನಡೆಯುತ್ತಿದ್ದಾಗ, ಸ್ವರ್ಗಕ್ಕೆ ಮೂರೇ ಗೇಣು ಎನ್ನುತ್ತಾರಲ್ಲಾ ಹಾಗನ್ನಿಸುತ್ತಿತ್ತು. ಜೋರಾಗಿ ಹೆಜ್ಜೆ ಹಾಕುವ ಮನಸ್ಸಾದರೂ, ಜೊತೆಯಲ್ಲಿ ಅಪ್ಪ ಅಮ್ಮ ಇದ್ದಿದ್ದರಿಂದ, ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅಲ್ಲಲ್ಲಿ ವಿರಮಿಸಿಕೊಂಡೇ ನಿಧಾನವಾಗಿ ಸಾಗುತ್ತಿದ್ದೆವು. ಸೂರ್ಯ ಮುಳುಗುತ್ತಲೇ, ಚಳಿ ಜೋರಾಯಿತು. ಬೆಟ್ಟ ಏರಿದ ಹಾಗೆ, ಆಮ್ಲಜನಕ ಪ್ರಮಾಣವೂ ಕಡಿಮೆಯಾಗುತ್ತಿತ್ತು. ಕೇದಾರನಾಥದಿಂದ ಒಂದು ಕಿ.ಮೀ ದೂರದಲ್ಲಿ ಕೇದಾರ ಬೇಸ್ ಕ್ಯಾಂಪ್ ಇದೆ. ಕುದುರೆ ಸೇವೆ ಇಲ್ಲಿಗೆ ಕೊನೆಗೊಳ್ಳುತ್ತದೆ. ದಾರಿಯಲ್ಲಿ ರಾತ್ರಿ ಊಟ ಮುಗಿಸಿ, ಕೊನೆಯ ಕೆಲವು ಹೆಜ್ಜೆ ಇಡುತ್ತಾ ಮುಂದೆ ಸಾಗುವಾಗ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಭೋಲೇನಾಥನ ದೇವಾಲಯ ಕಂಡಿತು. ದೇವಾಲಯ ನೋಡುತ್ತಿದ್ದಂತೆ, ನಡೆದ ದಣಿವು ಮಾಯವಾಯಿತು. ಪಟ್ಟ ಕಷ್ಟವೆಲ್ಲ ಸಾರ್ಥಕವೆನಿಸಿತು.

ಕುದುರೆಯೇರಿ ವಾಪಸ್

ಹಾಗೂ ಹೀಗೂ ರಾತ್ರಿ 10 ಗಂಟೆವರೆಗೆ ಕೇದಾರನಾಥನ ಸನ್ನಿಧಿ ತಲುಪಿದೆವು. ಅಂದು ಮುಂಗಡ ಕಾಯ್ದಿರಿಸಿದ್ದ ಕಾಟೇಜ್‌ನಲ್ಲಿ ವಾಸ್ತವ್ಯ ಮಾಡಿದೆವು. ಕೇದಾರನಾಥನ ದೇವಾಲಯದ ಒಳಗೆ ಪಾಂಡವರ ವಿಗ್ರಹಗಳಿವೆ. ಗರ್ಭಗುಡಿಯಲ್ಲಿ ಕಲ್ಲಿನ ಉದ್ಭವ ಮೂರ್ತಿಗಳಿವೆ. ಕೇದಾರನಾಥ ಸಮುದ್ರ ಮಟ್ಟದಿಂದ 12ಸಾವಿರ ಅಡಿಗಳ ಎತ್ತರದಲ್ಲಿದೆ. ಮಂದಿರದ ಸುತ್ತಲೂ ಹಿಮ ಆವರಿಸಿದ ಪರ್ವತಗಳು. ಪಕ್ಕದಲ್ಲೇ ಹರಿಯುವ ಅಲಕನಂದಾ ನದಿ. ಸೂರ್ಯೋದಯದ ವೇಳೆ ಮಂಜಿನ ಬೆಟ್ಟಗಳು ಬೆಳ್ಳಿಯಂತೆ ಕಂಗೊಳಿಸುತ್ತಿರುತ್ತವೆ.

ಕೇದಾರ ದೇವಾಲಯದಿಂದ ಹಿಂದಿರುಗುವಾಗ ಕುದುರೆ ಏರಿದೆವು. ಜಡಿ ಮಳೆಯಲ್ಲಿ ಕುದುರೆಯಲ್ಲಿ ಬರುವುದು ಒಂದು ಸಾಹಸವೇ ಸರಿ. ಕುದುರೆ ಪಟಪಟನೆ ಹೆಜ್ಜೆ ಹಾಕುವಾಗ, ಪಕ್ಕದಲ್ಲಿನ ಪ್ರಪಾತ ನೋಡಿ ಜೀವ ಹೋದಂಗೆ ಅನಿಸುತ್ತಿತ್ತು. ಕುದುರೆ ಮಾಲೀಕರು ದುಡ್ಡಿನ ಆಸೆಗಾಗಿ, ಅವುಗಳನ್ನು ಅಮಾನವೀಯವಾಗಿ ದುಡಿಸಿಕೊಳ್ಳುತ್ತಾರೆ. ನಾವು ಏರಿದ ಒಂದು ಕುದುರೆಯ ಕಾಲು ಕುಂಟುತ್ತಿದ್ದರಿಂದ ಅದು ಎರಡು ಬಾರಿ ರಸ್ತೆ ಮಧ್ಯೆ ಎಡವಿ ಬಿದ್ದಿತು. ದೇವರ ದಯೆ, ಅಷ್ಟೇನು ಹಾನಿಯಾಗಲಿಲ್ಲ. 4 ಗಂಟೆಗಳ ಸವಾರಿಯ ನಂತರ ಸಂಜೆ ಗೌರಿಕುಂಡ ತಲುಪಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.