ADVERTISEMENT

ಮಾಂಡೋವಿ ದಡದಲ್ಲಿ ಪೋರ್ಚುಗಲ್‌ ಕೋಟೆ

ಅಮೃತ್ ಜೋಗಿ
Published 4 ಏಪ್ರಿಲ್ 2019, 6:30 IST
Last Updated 4 ಏಪ್ರಿಲ್ 2019, 6:30 IST
   

ಗೋವಾಕ್ಕೆ ಹೋದರೆ ಬೀಚುಗಳಲ್ಲೇ ಕಾಲಕಳೆಯಬೇಕಾಗಿಲ್ಲ. ಬೀಚ್‌ಗಳಷ್ಟೇ ಆಕರ್ಷಕವಾಗಿರುವ ಬೇರೆ ಪ್ರವಾಸಿ ಸ್ಥಳಗಳಿವೆ. ಹಿಂದೆ ಹೋದಾಗಲೆಲ್ಲ ಬೀಚುಗಳಲ್ಲೇ ಸಮಯ ಕಳೆದು ವಾಪಸ್ ಬಂದಿದ್ದೆ. ಈ ಬಾರಿ, ಬಾಡಿಗೆ ಬೈಕ್‌ನಲ್ಲಿ ಸಮುದ್ರದತ್ತ ಮುಖ ಮಾಡದೇ ಬೇರೆ ಸ್ಥಳಗಳ ಬೇಟೆಗೆ ಹೊರಟಾಗ ಸಿಕ್ಕಿದ್ದೇ ರಾಯಿಸ್ ಮಾಗೋಸ್ ಕೋಟೆ.

ರಾಯಿಸ್ ಮಾಗೋಸ್ ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ‘ಮೂವರು ಬುದ್ಧಿವಂತ ವ್ಯಕ್ತಿಗಳು’ ಎಂದರ್ಥ. ಪಣಜಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ಬಾರ್ದೇಜ್‍ನಲ್ಲಿ ಮಾಂಡೋವಿ ನದಿ ತಟದಲ್ಲಿ ಈ ಕೋಟೆಯಿದೆ. ಇಲ್ಲಿಂದ ಇನ್ನೊಂದು ದಡದಲ್ಲಿರುವ ಪಣಜಿ ಸುಂದರವಾಗಿ ಕಾಣುತ್ತದೆ.

ಹಿಂದೂ ಮತ್ತು ಪೋರ್ಚುಗಲ್ ಶೈಲಿಗಳೆರಡೂ ಈ ಕೋಟೆಯಲ್ಲಿದೆ. ಪೋರ್ಚುಗೀಸರೊಂದಿಗೆ ಮರಾಠ ಮತ್ತು ಇತರ ವಂಶಗಳೂ ಇಲ್ಲಿ ಆಡಳಿತ ನಡೆಸಿ ಕೋಟೆಯನ್ನು ನವೀಕರಿಸುತ್ತ ಹೋಗಿದ್ದು ಇದಕ್ಕೆ ಕಾರಣ. ನೋಡಲು ಚಿಕ್ಕದಾದರೂ ರಕ್ಷಣೆಯ ದೃಷ್ಟಿಯಿಂದ ಇದು ಮಹತ್ವದ ಕೋಟೆಯಾಗಿದೆ. ಹೀಗಾಗಿ ಗೋವಾದಲ್ಲಿ ಆಡಳಿತ ನಡೆಸಿದ ಎಲ್ಲರೂ ಈ ಕೋಟೆಗೆ ಪ್ರಾಶಸ್ತ್ಯ ನೀಡಿದ್ದಾರೆ.

ADVERTISEMENT

ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಾಕಷ್ಟು ನೀರು ದೊರೆಯುವಂತೆ ಪೋರ್ಚುಗೀಸರು ಕೋಟೆಯನ್ನು ವಿನ್ಯಾಸಗೊಳಿಸಿದ್ದರು. ಮೂಲ ಸೈನಿಕ ಠಾಣೆಯಿಂದ ಸ್ವಲ್ಪ ದೂರಕ್ಕೆ ಎತ್ತರದ ಸ್ಥಳದಲ್ಲಿ ಕೋಟೆ ಇರುವುದರಿಂದ ಸಮುದ್ರದಲ್ಲಿ ದೂರದವರೆಗೂ ನಿಗಾ ಇಡಬಹುದಾಗಿತ್ತು. ಇದಕ್ಕಾಗಿ ಕಾವಲು ಗೋಪುರಗಳಿವೆ. ನಡುವೆ ಇರುವ ಕಾಲುದಾರಿಗಳು ಕೊಠಡಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.

ನದಿಯತ್ತ ಇಳಿಯುವ ಇನ್ನೊಂದು ದಾರಿ ಸಿಲಿಂಡರ್ ಮಾದರಿಯ ನಿಗಾ ಸ್ಥಳಗಳಿಗೆ ಕೊಂಡೊಯ್ಯುತ್ತದೆ. ಇಲ್ಲೇ ಇರುವ ಪುಟ್ಟ ಬಾವಿ ಕೋಟೆಗೆ ನಿರಂತರವಾಗಿ ನೀರಿನ ಮೂಲವಾಗಿತ್ತು. ಎರಡು ಶತಮಾನಗಳ ಕಾಲ ಪೋರ್ಚುಗೀಸರು, ಡಚ್ಚರ ದಾಳಿಯಿಂದ ರಕ್ಷಿಸಿಕೊಳ್ಳಲು ಕೋಟೆಯಲ್ಲಿ ಮಾರ್ಪಾಡು ಮಾಡುತ್ತಲೇ ಸಾಗಿದರು. ಸುತ್ತಲೂ ಕೆಂಪು ಕಲ್ಲಿನ ಗೋಡೆಯನ್ನು ಹೊಂದಿರುವ ರಾಯಿಸ್ ಮಾಗೋಸ್ ಕೋಟೆಯಲ್ಲಿ 33 ಫಿರಂಗಿಗಳಿದ್ದವು. ನಡುವೆ ಮರಾಠರ ವಶದಲ್ಲಿ ಕೋಟೆ ಎರಡು ವರ್ಷಗಳ ಕಾಲವಿತ್ತು. ಬ್ರಿಟಿಷರು ಪೋರ್ಚುಗೀಸರಿಂದ ಗೋವಾವನ್ನು ವಶಪಡಿಸಿಕೊಂಡ ಬಳಿಕ 1800ರ ಬಳಿಕ ಇದನ್ನು ಕಾರಾಗೃಹವನ್ನಾಗಿ ಪರಿವರ್ತಿಸಿದರು. ನೌಕಾ ದಾಳಿಯ ಬೆದರಿಕೆ ಕಡಿಮೆಯಾಗುತ್ತಿದ್ದಂತೆ ಕೋಟೆ ಮಹತ್ವ ಕಳೆದುಕೊಳ್ಳಲಾರಂಭಿಸಿತು.

ಗೋವಾ ಸ್ವಾತಂತ್ರ್ಯ ಚಳವಳಿ ತೀವ್ರವಾದಾಗ ಅಲ್ಪಾವಧಿ ಜೈಲು ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿ ಇರಿಸಲಾಗುತ್ತಿತ್ತು. 1990ರ ಬಳಿಕ ಇದು ಸಂಪೂರ್ಣ ಅವಗಣನೆಗೆ ಒಳಗಾಗಿ ಕಸಕಡ್ಡಿಗಳ ತಾಣವಾಯಿತು. ಕೋಟೆಯ ಮೂಲ ರೂಪವೇ ಮಾಯವಾಯಿತು. ಕೋಟೆಯ ಮರುನಿರ್ಮಾಣಕ್ಕಾಗಿ 2007ರಲ್ಲಿ ಗೋವಾ ಸರ್ಕಾರ ಮತ್ತು ಲಂಡನ್ನಿನ ಹೆಲೆನ್ ಹ್ಯಾಮ್ಲಿನ್ ಟ್ರಸ್ಟ್ ನಡುವೆ ನಡೆದ ಒಪ್ಪಂದದಿಂದಾಗಿ ಕೋಟೆ ಇಂದು ಪ್ರವಾಸಿ ತಾಣವಾಗಿದೆ. ಕೋಟೆಯ ಪಕ್ಕದಲ್ಲಿಯೇ ಇರುವ ರಾಯಿಸ್ ಮಾಗೋಸ್ ಚರ್ಚ್ ಕೋಟೆಯಷ್ಟೇ ಪಾರಂಪರಿಕವಾಗಿದೆ.

ರಾಯಿಸ್ ಮಾಗೋಸ್, ಅಗೋಡಾ ಕೋಟೆಯಷ್ಟು ದೊಡ್ಡದಲ್ಲ. ಆದರೆ ಸುಂದರವಾಗಿದೆ. ಗೊತ್ತಿರುವವರಷ್ಟೇ ಇಲ್ಲಿಗೆ ಬರುವುದರಿಂದ ಪ್ರವಾಸಿಗರ ಗದ್ದಲ ಇಲ್ಲ. ಹಾಗಾಗಿ ‘ಜೋಡಿ ಹಕ್ಕಿ’ಗಳು ಹೆಚ್ಚಿರುತ್ತವೆ. ಒಂದು ಗಂಟೆಯೊಳಗೆ ಕೋಟೆ ನೋಡಬಹುದು. ಕೋಟೆಗೆ ಸನಿಹದಲ್ಲಿ ಕೋಕೋ ಬೀಚ್, ಕಾಲಗುಂಟೆ, ಶಾಪೋರ ಕೋಟೆಗಳೂ ಇವೆ.

ಕೋಟೆಯ ಕೆಳಗಿರುವ ಸ್ವಾಗತ ಕೊಠಡಿಯಲ್ಲಿ ಟಿಕೆಟ್ ಪಡೆಯಬೇಕು. ಅಲ್ಲಿಯೇ ಕೋಟೆಗೆ ಸಂಬಂಧಿಸಿದ ಮತ್ತು ಗೋವಾ ಪ್ರವಾಸಿ ಸ್ಥಳಕ್ಕೆ ಸಂಬಂಧಿಸಿದ ಮಾಹಿತಿ ಕೇಂದ್ರವೂ ಇದೆ. ಪುಟ್ಟದಾದ ಪುಸ್ತಕ ಮಳಿಗೆ ಇದೆ. ಬೆಳಿಗ್ಗೆ 9.30ಕ್ಕೆ ಕೋಟೆ ತೆರೆದರೆ ಮುಚ್ಚುವುದು ಸಂಜೆ 5.30ಕ್ಕೆ. ಇಲ್ಲಿ ವಸತಿ ಸೌಲಭ್ಯವಿಲ್ಲ. ಕೋಟೆಯ ಹೊರಗೆ ಒಂದಿಷ್ಟು ಮಳಿಗೆಗಳಿವೆ.

ಕೋಟೆಯ ಹಿನ್ನೆಲೆ

ಪಣಜಿಯಲ್ಲಿ ನಾಲ್ಕೈದು ಇಕ್ಕಟ್ಟಾದ ಓಣಿಯಂಥ ರಸ್ತೆಗಳನ್ನು ಪೋರ್ಚುಗೀಸ್ ಪರಂಪರೆಯ ಸಂರಕ್ಷಣೆಯ ಹೆಸರಿನಲ್ಲಿ ಹಾಗೆಯೇ ಬಿಡಲಾಗಿದೆ. 1510ರಲ್ಲಿ ಪೋರ್ಚುಗೀಸ್ ನಾವಿಕ ಆಲ್ಫನ್ಸೊ ಡಿ ಅಲ್ಬುಕರ್ಕ್ ಎಂಬಾತ ಬಂದಾಗ ಬಾರ್ದೇಜ್‍ನಲ್ಲಿ ಪುಟ್ಟದಾದ ಸೈನಿಕ ಠಾಣೆಯಿತ್ತು. ಆಗ ದಕ್ಷಿಣ ಗೋವಾವನ್ನು ನಿಯಂತ್ರಿಸುತ್ತಿದ್ದ ಬಿಜಾಪುರದ ಯೂಸುಫ್ ಆದಿಲ್ ಷಾಗೆ ಸೇರಿದ ಆಯಕಟ್ಟಿನ ಸ್ಥಳ ಇದು. ಇದರ ವಶಕ್ಕಾಗಿ ಆದಿಲ್ ಷಾ ಮತ್ತು ಅಲ್ಬುಕರ್ಕ್ ನಡುವೆ ಹಲವು ಸುತ್ತಿನ ಹೋರಾಟ ನಡೆಯಿತು. ಆರಂಭದಲ್ಲಿ ಅಲ್ಬುಕರ್ಕ್ ಹಿನ್ನಡೆ ಕಂಡರೂ ಪೋರ್ಚುಗಲ್‍ನಿಂದ ಬಂದ ಹೆಚ್ಚುವರಿ ಸೇನಾದಳದ ನೆರವಿನಿಂದ ಇದನ್ನು ವಶಪಡಿಸಿ ಕೊಳ್ಳುತ್ತಾನೆ. ತದನಂತರ ರಾಯಿಸ್ ಮಾಗೋಸ್ ಕೋಟೆಯ ರೂಪ ಪಡೆಯಲಾರಂಭಿಸಿತು. ಹಂತ ಹಂತವಾಗಿ ಕೋಟೆ ಅಭಿವೃದ್ಧಿ ಹೊಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.