ADVERTISEMENT

ಕಥೆ ಹೇಳುವ ಪರಂಗೋರಿಗಳು...

ಎಂ.ಎನ್.ಯೋಗೇಶ್‌
Published 14 ಮೇ 2019, 7:08 IST
Last Updated 14 ಮೇ 2019, 7:08 IST
ಗೋರಿಗಳು
ಗೋರಿಗಳು   

ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀರಂಗಪಟ್ಟಣದಿಂದ ಮುನ್ನೂರು ಮೀಟರ್‌ ದೂರದಲ್ಲಿ ಮಾವಿನ ತೋಪೊಂದು ಕಾಣುತ್ತದೆ. ಆ ತೋಪಿನೊಳಗೆ ವಸಂತ ಮಾಸದಲ್ಲಿ ಮಾವಿನ ಹಣ್ಣು ಅರಸುತ್ತಾ ಹೊರಟರೆ ಮಾವು ಮಾತ್ರವಲ್ಲ, ನೇರಳೆ, ಹಲಸು, ಸೀಬೆಹಣ್ಣು ಕೂಡ ದೊರೆಯುತ್ತವೆ. ಕಾವೇರಿ ನದಿ ತೀರದಲ್ಲಿರುವ ಆ ಹಣ್ಣುಗಳ ತೋಟದಲ್ಲಿ ಕೋಗಿಲೆ, ನವಿಲುಗಳ ನಿನಾದವೂ ಕಿವಿ ಸವರುತ್ತದೆ.

ಆ ಗಿಡಗಳ ನಡುವೆ ಒಂದಷ್ಟು ಗೋರಿಗಳು ಕಾಣುತ್ತವೆ. ಸ್ಮಾರಕಗಳಂತೆ ಕಾಣುವ ಗೋರಿಗಳ ಮೇಲಿರುವ ಮಸುಕಾದ ಮಾಹಿತಿ, ಶತಮಾನಗಳ ಹಿಂದಿನ ಇತಿಹಾಸ ತರೆದಿಡುತ್ತಲೇ ನಮ್ಮನ್ನು ಇಂಗ್ಲೆಂಡ್‌, ಸ್ವಿಡ್ಜರ್ಲೆಂಡ್‌, ಫ್ರಾನ್ಸ್‌ಗೆ ಕರೆದೊಯ್ಯುತ್ತವೆ!

ಅಲ್ಲಿರುವುದು ಪರಂಗಿಗಳ ಗೋರಿಗಳು ಅರ್ಥಾತ್‌ ‘ಪರಂಗೋರಿ’ಗಳು. ಕೆಲವು ಗೋರಿಗಳ ಮೇಲೂ ಅದರೊಳಗೆ ಸಮಾಧಿಯಾಗಿರುವ ವ್ಯಕ್ತಿಗಳ ಬಗ್ಗೆ ಕಿರು ಬರಹಗಳಿವೆ. ಆ ಸಂಕ್ಷಿಪ್ತ ಬರಹದಲ್ಲಿ ಅವರು ಏಕೆ ಸತ್ತರು? ಹೇಗೆ ಸತ್ತರು? ಯಾವಾಗ ಸತ್ತರು? ಎಂಬ ಮಾಹಿತಿ ಇದೆ. ಗೋರಿಗಳ ಮೇಲಿರುವ ಕೆಲವು ಮಾಹಿತಿಗಳು ಮನಸ್ಸನ್ನು ಕಲಕುತ್ತವೆ. ಆದರೆ, ಆ ಅಕ್ಷರಗಳನ್ನು ತಾಳ್ಮೆಯಿಂದ ಓದಬೇಕು. ಏಕೆಂದರೆ, ಶತಮಾನಗಳಷ್ಟು ಹಳೆಯದಾದ ‘ಕಲ್ಬರಹಗಳು’ ಕೆಲವು ಕಡೆ ಅಳಿಸಿ ಹೋಗಿವೆ. ಅರ್ಧಂಬರ್ಧ ಉಳಿದಿರುವ ಅಕ್ಷರಗಳನ್ನು ತನ್ಮಯರಾಗಿಯೇ ಓದಬೇಕು. ಆಗ ಸತ್ತವರ ಕತೆಗಳು ಗೋರಿಯಿಂದ ಎದ್ದು ಬರುತ್ತವೆ.

ADVERTISEMENT

ಗೋರಿಯೊಳಿಗಿರುವವರ ಕಥೆ

ಒಂದು ಗೋರಿಯಲ್ಲಿ ಸೈನ್ಯಾಧಿಕಾರಿಯೊಬ್ಬ ಕೇವಲ 32 ವರ್ಷಕ್ಕೆ ಪ್ಲೇಗ್‌ನಿಂದ ಸತ್ತು ಮಲಗಿದ್ದಾನೆ. ಇನ್ನೊಂದರಲ್ಲಿ ಸೈಕಲ್‌ ಮೇಲಿಂದ ಬಿದ್ದು ಸತ್ತಿದ್ದಾನೆ. ಮತ್ತೊಬ್ಬ ಹಾವು ಕಚ್ಚಿ ಸತ್ತು ಗೋರಿಯಾಗಿದ್ದಾನೆ. ವೈದ್ಯನೊಬ್ಬ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುತ್ತಿದ್ದಾಗ ತಾನೂ ಆ ರೋಗಕ್ಕೆ ತುತ್ತಾಗಿ ಸಾಯುತ್ತಾನೆ. ಇವೆಲ್ಲ ಸಾಧಾರಣ ಎನ್ನಿಸುವ ಕಥೆಗಳು.

ಆದರೆ, ಗನ್‌ ತಯಾರಿಕೆಯಲ್ಲಿ ಹೆಸರುವಾಸಿಯಾಗಿದ್ದ ಕಮಾಂಡೆಂಟ್‌ ಸ್ಕಾಟ್‌ ಪತ್ನಿ ಕ್ಯಾರೋಲಿನ್‌ ಇಸಾಬೆಲ್ಲಾ ಸ್ಕಾಟ್‌ ಸಾವಿನ ಕತೆ ಇದೆಯಲ್ಲಾ, ಅದು ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಆಕೆ ಹೆರಿಗೆ ವೇಳೆ ಸಾಯುತ್ತಾಳೆ. ವಿಚಿತ್ರ ಎಂದರೆ, ತಾಯಿಯೊಂದಿಗೆ ಸತ್ತು ಹುಟ್ಟಿದ ಭ್ರೂಣಕ್ಕೂ ಒಂದು ಗೋರಿ ಕಟ್ಟಿದ್ದಾರೆ.

ಐದು ವರ್ಷದ ಮಗ ಸತ್ತಾಗ, ತಂದೆ ‘ಈಗಷ್ಟೇ ಅರಳಿದ ಹೂವು ನೀನು’ ಎಂದು ನೋವಿನಿಂದ ನೆನೆದು ಗೋರಿ ಕಟ್ಟಿಸಿದ್ದಾರೆ. ಕುಟುಂಬ ಸದಸ್ಯರನ್ನು ಸಾಲಾಗಿ ಸಮಾಧಿ ಮಾಡಿದ ಗೋರಿಗಳಿವೆ. ಪತಿಯ ಸ್ಮರಣೆಯಲ್ಲಿ ಪತ್ನಿ ಕಟ್ಟಿಸಿದ ಗೋರಿ, ಪತ್ನಿ ಪ್ರೀತಿಯ ಸ್ಮಾರಕವಾಗಿರುವ ಗೋರಿ, ಮಕ್ಕಳ ಹೆಸರಿನಲ್ಲಿ ತಂದೆ–ತಾಯಿ ಕಟ್ಟಿದ ಗೋರಿಗಳು ಗಮನ ಸೆಳೆಯುತ್ತವೆ.

ಶ್ರೀರಂಗಪಟ್ಟಣದ ನೆಲದಲ್ಲಿ ಮಣ್ಣಾದ ವಿದೇಶಿ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರ ಕತೆಗಳಂತೂ ಬಲು ಕುತೂಹಲ ಮೂಡಿಸುತ್ತವೆ. ‘ಸತ್ತಾಗ ಗೋರಿಗಳ ಮೇಲೆ ಯಾರೂ ಸಾವಿನ ಕಾರಣ ಬರೆಸುವುದಿಲ್ಲ’ ಎಂಬುದು ಕನ್ನಡ ಚಿತ್ರ
ವೊಂದರ ಪ್ರಸಿದ್ಧ ಸಂಭಾಷಣೆ. ಆದರೆ ಪರಂಗೋರಿಯ ಕೆಲವು ಗೋರಿಗಳ ಮೇಲೆ ಸಾವಿನ ಕಾರಣವಿದ್ದು ಮನ ಮುಟ್ಟುತ್ತವೆ.

ಇವರೆಲ್ಲ ಯಾರು?

ಸ್ವಿಡ್ಜರ್ಲೆಂಡ್‌ನಿಂದ ಬಂದ 800 ಸೈನಿಕರ ‘ಡಿ ಮ್ಯೂರನ್‌ ರೆಜಿಮೆಂಟ್‌’ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ ಭಾಗವಾಗಿತ್ತು. ‘ಚಾರ್ಲ್ಸ್‌ ಡ್ಯಾನಿಯಲ್‌ ಮ್ಯೂರನ್‌’ ಈ ಪಡೆಯ ಮುಖ್ಯಸ್ಥ. ಈ ಸೈನ್ಯ ನಾಲ್ಕನೇ ಆಂಗ್ಲೊ–ಮೈಸೂರು ಯುದ್ಧದಲ್ಲಿ ಬ್ರಿಟಿಷರ ಪರ ಹೋರಾಡಿತ್ತು. ಯುದ್ಧದಲ್ಲಿ ಸತ್ತ ಸೈನಿಕರನ್ನು ಕಾವೇರಿ ನದಿ ತೀರದಲ್ಲಿ ಸಮಾಧಿ ಮಾಡಲಾಯಿತು. 1799ರಲ್ಲಿ ಟಿಪ್ಪು ಸುಲ್ತಾನ್‌ ಸತ್ತ ನಂತರವೂ ಈ ಸೈನಿಕರು ಮೈಸೂರು ಪ್ರಾಂತ್ಯದಲ್ಲೇ ಇದ್ದರು. ಅವರ ಕುಟುಂಬ ಸದಸ್ಯರನ್ನೂ ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿ ಗೋರಿ ಕಟ್ಟಲಾಯಿತು. ಆ ಸ್ಥಳ ಗ್ಯಾರಿಸನ್‌ ಸ್ಮಶಾನ (ಗ್ಯಾರಿಸನ್‌ ಸಿಮೆಟರಿ) ಎಂಬ ಹೆಸರು ಪಡೆಯಿತು. 1800ರಿಂದ 1860ರವರೆಗೆ ಮೃತಪಟ್ಟ 80 ಸೈನಿಕರು ಹಾಗೂ 227 ಕುಟುಂಬ ಸದಸ್ಯರು ಸೇರಿ 307 ಗೋರಿಗಳು ಈ ಸಮಾಧಿ ಸ್ಥಳದಲ್ಲಿವೆ.

ಅನಾಮಧೇಯ ಸ್ಥಳ

ಕಳೆದ 200 ವರ್ಷಗಳಿಂದ ಈ ಸಮಾಧಿ ಸ್ಥಳ ಅನಾಮಧೇ ಯವಾಗಿಯೇ ಉಳಿದಿತ್ತು. ಗೋರಿಗಳು ಮಳೆ, ಗಾಳಿಗೆ ಶಿಥಿಲ ಗೊಂಡಿದ್ದವು. ಹೆಸರು ಕೆತ್ತಿಸಿದ್ದ ಅಮೃತ ಶಿಲೆಗಳು, ಕಬ್ಬಿಣದ ಬೇಲಿಯ ಸರಳು ಕಳ್ಳಕಾಕರ ಪಾಲಾಗಿದ್ದವು. ಇಲ್ಲಿ ಸಿಗುವ ಸೀಬೆಹಣ್ಣು, ಹಲಸಿನ ಹಣ್ಣು, ನೇರಳೆ ಹಣ್ಣು ಕಿತ್ತು, ಹೆದ್ದಾರಿಯಲ್ಲಿ ಮಾರಾಟ ಮಾಡಿ ಹಲವರು ಜೀವನ ಕಂಡುಕೊಂಡಿದ್ದರು. ನದಿ ತೀರದ ಈ ಶಾಂತಿಯ ತೋಟ ಅನೈತಿಕ ಚಟುವಟಿಕೆಗಳ ತಾಣವಾಗಿಯೇ ಇತ್ತು.

ಆದರೆ 2007ರಲ್ಲಿ ಡಿ ಮ್ಯೂರನ್‌ ರೆಜಿಮೆಂಟ್ ಮುಖ್ಯಸ್ಥ ಚಾರ್ಲ್ಸ್‌ ಡ್ಯಾನಿಯಲ್‌ ಮ್ಯೂರನ್‌ ಕುಟುಂಬದ ಹೊಸ ತಲೆಮಾರು ತಾತನ ಸಮಾಧಿ ಅರಸಿ ಶ್ರೀರಂಗಪಟ್ಟಣಕ್ಕೆ ಬಂತು. ಫ್ರಾನ್ಸ್‌ನಲ್ಲಿ ನೆಲೆಸಿದ್ದ ಲೂಯಿಸ್‌ ಡಾಮಿನಿಕ್‌ ಡಿ ಮ್ಯೂರನ್‌ ಹಾಗೂ ಆತನ ಪತ್ನಿ ಮ್ಯೂನಿಕ್‌ ಸಮಾಧಿಗಳ ಸ್ಥಿತಿ ಕಂಡು ಮರುಗಿದರು. ಸ್ಮಾರಕದ ಉಳಿವಿಗಾಗಿ ಟೊಂಕಕಟ್ಟಿ ನಿಂತ ಈ ದಂಪತಿ ರಾಜ್ಯ ಪ್ರಾಚ್ಯವಸ್ತು ಸಂಗ್ರಹ ನಿರ್ದೇಶನಾಲಯದ ಸಹಾಯದೊಂದಿಗೆ ಸಮಾಧಿಗಳ ಜೀರ್ಣೋದ್ಧಾರ ಆರಂಭಿಸಿತು. 2012ರಲ್ಲಿ ಲೂಯಿಸ್‌ ಮೃತಪಟ್ಟ ನಂತರ ಅವರ ಮಗ ಜೀನ್‌ ಡಿ ಮ್ಯೂರನ್‌ ಹಾಗೂ ಡಾ.ಸೋಫಿಯಾ ದಂಪತಿ ಸಮಾಧಿ ಉಳಿಸುವ ಕಾರ್ಯ ಮುಂದುವರಿಸಿದರು. ಜೊತೆಗೆ ಇಂಗ್ಲೆಂಡ್‌, ಫ್ರಾನ್ಸ್‌ನಲ್ಲಿ ನೆಲೆಸಿರುವ ಹೊಸ ತಲೆಮಾರಿನ ಸದಸ್ಯರೂ ಈ ಕಾರ್ಯಕ್ಕೆ ಕೈಜೋಡಿಸಿದರು.

ಸಂರಕ್ಷಿತ ಪ್ರದೇಶ

ಪ್ರಾಚ್ಯವಸ್ತು ನಿರ್ದೇಶನಾಲಯ ಮೂರು ಎಕರೆಯ ಈ ಜಾಗವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಈಗಲೂ ಮ್ಯೂರನ್‌ ಕುಟುಂಬ ಸದಸ್ಯರು ಮೈಸೂರಿನ ಸೇಂಟ್‌ ಬಾರ್ತಲೋಮಿಯಾ ಚರ್ಚ್‌ ಸಹಯೋಗದೊಂದಿಗೆ ಪರಂಗೋರಿಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಗೋರಿಗಳ ಹಳೆಯ ಸ್ವರೂಪವನ್ನು ಉಳಿಸಿಕೊಂಡು ಹೊಸ ರೂಪ ನೀಡಲಾಗಿದೆ.

ಈ ಅಪರೂಪದ ತಾಣಕ್ಕೆ ಭೇಟಿ ನೀಡಲು ಸರಿಯಾದ ರಸ್ತೆ ಇಲ್ಲ. ರೆಸಾರ್ಟ್‌, ನದಿಯನ್ನು ಸುತ್ತಿಕೊಂಡು ಬರಬೇಕು. ‘ನಾನು ಹೀಗೆ ಸುತ್ತು ಹಾಕಿಕೊಂಡೇ ಇಲ್ಲಿಗೆ ಬರುತ್ತೇನೆ. ಸರ್ಕಾರ ದಾರಿಯೊಂದನ್ನು ಮಾಡಿದರೆ, ಇದೊಂದು ಉತ್ತಮ ಪ್ರವಾಸಿ ತಾಣವಾಗುತ್ತದೆ’ ಎನ್ನುತ್ತಾರೆ, ಆ ಗೋರಿಗಳ ತಾಣವನ್ನು ಕಾಯುತ್ತಿರುವ 75ರ ಹರೆಯದ ವಿದ್ಯಾಲಕ್ಷ್ಮಿ!

ದಾರಿ ಇಲ್ಲ, ಭೂಗಳ್ಳರ ಕಣ್ಣು

ಗ್ಯಾರಿಸನ್ ಸಮಾಧಿ ಸ್ಥಳಕ್ಕೆ ತೆರಳಲು ಯಾವ ಕಡೆಯಿಂದಲೂ ದಾರಿ ಇಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಸ್ಮಾರಕ ಸೂಚಿಸುವ ಕಲ್ಲು ಇದೆ. ಅದು ಟೀ ಅಂಗಡಿಯ ಕಲ್ಲು ಬೆಂಚಿನ ಜೊತೆ ಸೇರಿದೆ. ಆ ಕಲ್ಲಿನ ಮೇಲೆ ‘ಸಮಾಧಿ ಸ್ಥಳ 300 ಮೀಟರ್‌ ಅಂತರದಲ್ಲಿದೆ’ ಎಂಬ ಮಾಹಿತಿ ಇದೆ. ಆದರೆ ಅಲ್ಲಿಗೆ ತೆರಳಲು ಚರಂಡಿಯ ಮೇಲೆ ನಡೆದು ಹೋಗಬೇಕು. ಕೊಳಚೆ, ಗಿಡಗಂಟಿಗಳನ್ನು ಮೀಟಿ ಹೆಜ್ಜೆ ಹಾಕಿದರೆ ಸಮಾಧಿ ಸ್ಥಳ ಸಿಗುತ್ತದೆ.

ಗ್ಯಾರಿಸನ್‌ ಸಮಾಧಿ ಸ್ಥಳಕ್ಕೆ ಹೆಚ್ಚಾಗಿ ಭೇಟಿ ನೀಡುವವರು ವಿದೇಶಿ ಪ್ರವಾಸಿಗರು, ಇತಿಹಾಸದ ವಿದ್ಯಾರ್ಥಿಗಳು. ಆದರೆ, ಈ ಸ್ಥಳವನ್ನು ನೋಡಲೇ ಬೇಕೆನ್ನುವವರು ಹುಡುಕಿಕೊಂಡು ಹೋಗುತ್ತಾರೆ. ‌

ವಿಚಿತ್ರ ಎಂದರೆ, ಆ ಪ್ರದೇಶದ ಸುತ್ತ ಹೋಟೆಲ್‌, ರೆಸಾರ್ಟ್‌, ಖಾಸಗಿ ಶಾಲೆಗಳು ತಲೆ ಎತ್ತಿವೆ. ಅವುಗಳ ನಡುವೆ ಈ 2 ಶತಮಾನದ ಸ್ಮಾರಕ ಜೀವಂತವಾಗಿದೆ ಎಂಬ ಸಣ್ಣ ಕುರುಹೂ ಅಲ್ಲಿ ಸಿಗುವುದಿಲ್ಲ.

ಪ್ರಕೃತಿ ರಮಣೀಯ ಸೌಂದರ್ಯದ ನಡುವೆ ಇರುವ ಈ ಸ್ಮಾರಕದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು ಕೆಲವೇ ದಿನಗಳಲ್ಲಿ ಇದು ಮಾಯವಾದರೂ ಆಶ್ಚರ್ಯವಿಲ್ಲ ಎಂದು ಇತಿಹಾಸ ತಜ್ಞರೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.

ಚಿತ್ರಗಳು: ಸಂತೋಷ್ ಚಂದ್ರಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.