ADVERTISEMENT

ದಿ ಕ್ಯಾಪಿಟೋಲ್‌ ಒಳಗೆ ಹೆಜ್ಜೆ ಹಾಕುತ್ತಾ...

ಎ.ಎಸ್.ನಾರಾಯಣರಾವ್
Published 23 ಫೆಬ್ರುವರಿ 2025, 0:35 IST
Last Updated 23 ಫೆಬ್ರುವರಿ 2025, 0:35 IST
ಅಮೆರಿಕದ ಸಂಸತ್‌ ಭವನ
ಅಮೆರಿಕದ ಸಂಸತ್‌ ಭವನ   

ಬೆಂಗಳೂರಿನ ವಿಧಾನಸೌಧ ಅಥವಾ ದೆಹಲಿಯ ಸಂಸತ್ ಭವನದ ಒಳಗೆ ಹೋಗಬೇಕು, ಅದರ ಸೌಂದರ್ಯ ಸವಿಯಬೇಕು ಎಂದರೆ ಸುಲಭಕ್ಕೆ ಸಾಧ್ಯವೇ ಇಲ್ಲ. ಹತ್ತಾರು ಕಟ್ಟುಪಾಡುಗಳು, ನಿರ್ಬಂಧಗಳು. ಜನಸಾಮಾನ್ಯರ ಪಾಲಿಗೆ ಇವುಗಳ ಪ್ರವೇಶ ಗಗನ ಕುಸುಮವೇ ಸರಿ. ವಶೀಲಿಬಾಜಿ ಮಾಡಿ, ರಾಜಕಾರಣಿಗಳ ಮರ್ಜಿಯಲ್ಲಿ ಹಾಗೂಹೀಗೂ ಕಷ್ಟಪಟ್ಟು ಪ್ರವೇಶ ಗಿಟ್ಟಿಸಿಕೊಂಡರೆ ‘ಅಲ್ಲಿ ಹೋಗಬೇಡಿ, ಇಲ್ಲಿ ನಿಲ್ಲಬೇಡಿ, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬೇಡಿ, ಫೊಟೊ ತೆಗೆಯಬೇಡಿ..’ ಅಂತ ಹೆಜ್ಜೆಹೆಜ್ಜೆಗೂ ಎಚ್ಚರಿಕೆ ನೀಡುವ, ಗದರಿಸುವ, ಕಡಿವಾಣ ಹಾಕುವ ಭದ್ರತಾ ಸಿಬ್ಬಂದಿಯ ಏರುದನಿ...

ಆದರೆ ವಿಶ್ವದ ಅತ್ಯಂತ ಬಲಾಢ್ಯ ದೇಶ ಎಂದೇ ಪರಿಗಣಿಸಲಾಗುವ ಅಮೆರಿಕದಲ್ಲಿ ಇದು ತದ್ವಿರುದ್ಧ. ಅಲ್ಲಿನ ಪ್ರಜೆಗಳು ಮಾತ್ರವಲ್ಲ ವಿದೇಶಿಯರು ಕೂಡ ಸಲೀಸಾಗಿ ಅಮೆರಿಕದ ಸಂಸತ್ (THE CAPITOL) ಅಥವಾ ಅಲ್ಲಿನ ರಾಜ್ಯಗಳ ಶಾಸನ ಸಭೆಗಳ ಕಟ್ಟಡಗಳ ಒಳಗೆ ಹೋಗಬಹುದು, ಸುತ್ತಾಡಬಹುದು, ಚಿತ್ರ ತೆಗೆದುಕೊಳ್ಳಬಹುದು, ವೀಕ್ಷಕರ ಗ್ಯಾಲರಿಗಳಲ್ಲಿ ಕುಳಿತು ಕಲಾಪ ವೀಕ್ಷಿಸಬಹುದು. ಅನಗತ್ಯ ಕಿರುಕುಳದ ಮಾತೇ ಇಲ್ಲ. ಸಿಬ್ಬಂದಿ ಬಹಳ ಸೌಜನ್ಯದಿಂದಲೇ ವ್ಯವಹರಿಸುತ್ತಾರೆ.

ವಾಷಿಂಗ್ಟನ್‌ನ ಎತ್ತರದ ಕ್ಯಾಪಿಟಲ್ ಹಿಲ್ ಪ್ರದೇಶದಲ್ಲಿ ಹಚ್ಚಹಸಿರು ಉದ್ಯಾನಗಳ ಮಧ್ಯೆ ತಲೆ ಎತ್ತಿ ನಿಂತಿರುವ, ಬಿಳಿಬಣ್ಣದಲ್ಲಿ ಮಿರುಗುವ ಈ ಬೃಹತ್ ಕಟ್ಟಡದಲ್ಲಿ ಅಮೆರಿಕದ ಶಾಸಕಾಂಗ ಕಾರ್ಯನಿರ್ವಹಿಸುತ್ತದೆ. ಕಟ್ಟಡದ ಒಂದು ಭಾಗದಲ್ಲಿ ಸೆನೆಟ್ ಮತ್ತು ಇನ್ನೊಂದು ಭಾಗದಲ್ಲಿ ಕಾಂಗ್ರೆಸ್ (ನಮ್ಮಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಇದ್ದಂತೆ) ಇವೆ. ಪ್ರತೀ ನಾಲ್ಕು ವರ್ಷಗಳಿಗೆ ಒಮ್ಮೆ ಜನವರಿ 20ರಂದು ಅಮೆರಿಕದ ಹೊಸ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೂಡ ಇದೇ ಕಟ್ಟಡದ ಪಶ್ಚಿಮ ಭಾಗದ ಮೆಟ್ಟಿಲುಗಳ ಮೇಲೆ ನಡೆಯುತ್ತದೆ. ಆದರೆ ಈ ಸಲ ವಿಪರೀತ ಚಳಿಯ ಕಾರಣ ಒಳಭಾಗದ ಗುಮ್ಮಟದ (ರೊಟಂಡಾ) ಕೆಳಗೆ ನಡೆದಿತ್ತು.

ADVERTISEMENT

ಈ ರೊಟಂಡಾ ಅಥವಾ ಗುಮ್ಮಟದ ಕೆಳಭಾಗ ಇಡೀ ಕಟ್ಟಡದ ಹೃದಯ ಇದ್ದಂತೆ. ಸುಂದರ ತೈಲ ಚಿತ್ರಗಳು, ಚಿತ್ತಾರಗಳು, ಅಮೆರಿಕದ ಸ್ವಾತಂತ್ರ್ಯ ಚಳವಳಿ ಮತ್ತು ಪ್ರಮುಖ ಘಟ್ಟಗಳನ್ನು ಬಿಂಬಿಸುವ ದೊಡ್ಡ ದೊಡ್ಡ ಕಲಾಕೃತಿಗಳು, ಅಮೆರಿಕದ ಎಲ್ಲ 50 ರಾಜ್ಯಗಳನ್ನು ಪ್ರತಿನಿಧಿಸುವ 50 ವಿಶಿಷ್ಟ ಸ್ಮರಣಿಕೆಗಳು, ವಿವಿಧ ಅಧ್ಯಕ್ಷರುಗಳ ಪ್ರತಿಮೆಗಳು ಇಲ್ಲಿವೆ.

ಈ ಕಟ್ಟಡದ ನಿರ್ಮಾಣದ ಚರಿತ್ರೆಯೇ ಅತ್ಯಂತ ರೋಚಕ. ನಿರ್ಮಾಣ ಶುರುವಾಗಿದ್ದು 1793ರಲ್ಲಿ. ಇದಾದ ಏಳು ವರ್ಷಗಳ ನಂತರ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮತ್ತು ಇತಿಹಾಸ ಪ್ರಸಿದ್ಧ ದಿ ಲೈಬ್ರರಿ ಆಫ್ ಕಾಂಗ್ರೆಸ್ (ಗ್ರಂಥಾಲಯ) ಇಲ್ಲಿ ಕಾರ್ಯಾರಂಭ ಮಾಡಿದವು. ಆದರೆ 1814ರಲ್ಲಿ ಬ್ರಿಟಿಷ್ ಸೇನೆ ಈ ಕಟ್ಟಡವನ್ನು ಸಂಪೂರ್ಣ ಸುಟ್ಟು ಹಾಕಿತು. ಈಗ ಕಾಣುತ್ತಿರುವ ಗುಮ್ಮಟದ ಭಾಗ ನಿರ್ಮಾಣವಾಗಿದ್ದು 1826ರಲ್ಲಿ. ಅವಶ್ಯಕತೆಗೆ ಅನುಗುಣವಾಗಿ ಕಾಲಕಾಲಕ್ಕೆ ಇದರ ವಿಸ್ತರಣೆ ನಡೆಯುತ್ತಲೇ ಬಂದಿದೆ. ಈಗ ಅಮೆರಿಕದ ಪ್ರಜಾಪ್ರಭುತ್ವದ ಸಂಕೇತವಾಗಿ ರಾರಾಜಿಸುತ್ತಿದೆ.

ಪ್ರವೇಶ ಹೇಗೆ?

ಕ್ಯಾಪಿಟೋಲ್‌ನ ಪೂರ್ವ ಪ್ರವೇಶ ದ್ವಾರದ ಕಡೆಯ ಮೆಟ್ಟಿಲುಗಳ ಕೆಳಗೆ ನೆಲದಡಿಯ ಅಂತಸ್ತಿನಲ್ಲಿ ಸಂದರ್ಶಕರ ಕೇಂದ್ರ ಇದೆ. ಅಲ್ಲಿಗೆ ಹೋಗಿ ಹೆಸರು ನೋಂದಾಯಿಸಬೇಕು. ಅದನ್ನು ಪ್ರವೇಶಿಸುವ ಮೊದಲೇ ಭದ್ರತಾ ತಪಾಸಣೆ ನಡೆಯುತ್ತದೆ. ಸಂದರ್ಶಕರ ಕೇಂದ್ರದಲ್ಲಿ ಸಂದರ್ಶಕರನ್ನು ತಂಡಗಳಾಗಿ ವಿಂಗಡಿಸುತ್ತಾರೆ. ಪ್ರತಿ ತಂಡಕ್ಕೂ ಒಬ್ಬ ಗೈಡ್ ಇರುತ್ತಾರೆ. ಅವರು ರೊಟಂಡಾವರೆಗೂ ಕರೆದುಕೊಂಡು ಹೋಗುತ್ತಾರೆ. ಹಾದಿಯುದ್ದಕ್ಕೂ ವಿವರಣೆ ಇರುತ್ತದೆ. ಪ್ರಶ್ನೆ ಕೇಳಬಹುದು. ಅನುಮಾನ ಪರಿಹರಿಸಿಕೊಳ್ಳಬಹುದು. ಸಂದರ್ಶಕರ ಕೇಂದ್ರದಲ್ಲಿ ಈ ಕಟ್ಟಡದ ಬಗ್ಗೆ ಸಮಗ್ರ ಮಾಹಿತಿ ನೀಡುವ ವಿವರಣಾ ಪುಸ್ತಿಕೆಗಳನ್ನು ಉಚಿತವಾಗಿ ಒದಗಿಸುವ ವ್ಯವಸ್ಥೆಯೂ ಇದೆ. ಹಿಂದಿಯಲ್ಲೂ ಈ ಪುಸ್ತಕಗಳನ್ನು ಮುದ್ರಿಸಿರುವುದು ವಿಶೇಷ.

ಆನ್‌ಲೈನ್‌ನಲ್ಲಾದರೆ https://www.visitthecapitol.gov ವೆಬ್‌ಸೈಟ್‌ಗೆ ಹೋಗಿ ನೋಂದಾಯಿಸಿಕೊಂಡು ಭೇಟಿ ಕೊಡಬಹುದು. ಅದು ಸಾಧ್ಯವಾಗದಿದ್ದರೂ ನೇರವಾಗಿ ಹೋಗಿ ನೋಂದಾಯಿಸಬಹುದು. ಆದರೆ ಇದಕ್ಕಾಗಿ ಮಧ್ಯಾಹ್ನ 2.30ರ ಒಳಗೆಯೇ ಅಲ್ಲಿರಬೇಕು.

ಸೆನೆಟ್ ಮತ್ತು ಕಾಂಗ್ರೆಸ್ ಸಭಾಂಗಣಗಳ ಸಂದರ್ಶಕರ ಗ್ಯಾಲರಿಗಳಿಗೆ ಹೋಗುವುದಾದರೆ ಬೇರೆಯೇ ಅನುಮತಿ ಪತ್ರ ಪಡೆದುಕೊಳ್ಳಬೇಕು. ಅದಕ್ಕೇನೂ ಉದ್ದುದ್ದ ಫಾರಂ ಭರ್ತಿ ಮಾಡುವ, ಹತ್ತಾರು ಪ್ರಶ್ನೆಗಳನ್ನು ಎದುರಿಸುವ ಪ್ರಮೇಯ ಇಲ್ಲವೇ ಇಲ್ಲ. ನಿಮ್ಮ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್ ತೋರಿಸಿದರೆ ಸಾಕು.

ದಿ ಕ್ಯಾಪಿಟೋಲ್‌ ಸುತ್ತಾಡಿ ಬರುವುದೆಂದರೆ ಇತಿಹಾಸದೊಂದಿಗೆ ಸಂವಾದ ನಡೆಸಿದಂತೆಯೂ, ವಾಸ್ತುಶಿಲ್ಪದ ಮೋಡಿಯಲ್ಲಿ ಕಳೆದುಹೋದ ಅನುಭವ. 

ಮ್ಯೂಸಿಯಂಗಳ ನಗರ!

ವಾಷಿಂಗ್ಟನ್ ನಗರವನ್ನು ಒಂದು ಅರ್ಥದಲ್ಲಿ ಮ್ಯೂಸಿಯಂಗಳ ನಗರ ಎಂದೇ ಕರೆಯಬಹುದು. ಒಂದಕ್ಕಿಂತ ಒಂದು ಭವ್ಯ, ಮಾಹಿತಿಪೂರ್ಣ ಮ್ಯೂಸಿಯಂಗಳು. ಹೆಚ್ಚಿನವು ಕ್ಯಾಪಿಟಲ್ ಹಿಲ್ ಪ್ರದೇಶದ ಸುತ್ತಮುತ್ತ ಇವೆ. ವಿಶೇಷ ಎಂದರೆ ಬಹುತೇಕ ಮ್ಯೂಸಿಯಂಗಳಲ್ಲಿ ಪ್ರವೇಶ ಉಚಿತ. ನೀವು ಕಾಲ್ನಡಿಗೆ ಪ್ರಿಯರಾದರೆ ಇನ್ನೂ ಒಳ್ಳೆಯದು. ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಡಿಕೊಂಡು ಹೋಗಿ ನೋಡಬಹುದು. ಆದರೆ ಒಂದೆರಡು ದಿನದಲ್ಲೇ ಇವನ್ನೆಲ್ಲ ನೋಡಲು ಆಗುವುದಿಲ್ಲ. ಒಂದೊಂದೂ ಅಷ್ಟೊಂದು ವಿಶಾಲ.

ವಿಶ್ವದ ವಿವಿಧ ಭಾಗಗಳಿಂದ ಸಂಗ್ರಹಿಸಿ ಬೆಳೆಸಲಾದ ಅಪರೂಪದ ಸಸ್ಯ ಸಂಪತ್ತಿನ ಯುಎಸ್ ಬೊಟಾನಿಕ್ ಗಾರ್ಡನ್, ಆಫ್ರಿಕನ್ ಅಮೆರಿಕನ್ ಸಿವಿಲ್ ವಾರ್ ಮೆಮೋರಿಯಲ್, ಡೈನೋಸಾರ್‌ಗಳು ಮತ್ತು ಆಫ್ರಿಕಾದ ಆನೆಗಳ ಬದುಕಿನ ಮೇಲೆ ಬೆಳಕು ಚೆಲ್ಲುವ ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ, ರಾಷ್ಟ್ರೀಯ ಪ್ರಾರ್ಥನಾ ಸ್ಥಳ ನ್ಯಾಷನಲ್ ಕ್ಯಾಥೆಡ್ರಲ್, ಯುಎಸ್ ಹಾಲೊಕಾಸ್ಟ್ ಮ್ಯೂಸಿಯಂ, ಬೋನ್ಸಾಯ್ ಸಸ್ಯಗಳನ್ನು ಒಳಗೊಂಡ ಯುಎಸ್ ನ್ಯಾಷನಲ್ ಆರ್ಬೊರೆಟಮ್, ಅಮೆರಿಕದಲ್ಲಿ ಬಹಳಷ್ಟು ವರ್ಷ ದಾಸ್ಯಕ್ಕೆ ಒಳಗಾಗಿದ್ದ ಆಫ್ರಿಕಾ ಮೂಲದ ಕಪ್ಪುವರ್ಣೀಯ ಅಮೆರಿಕನ್ನರ ಸಾಧನೆಗಳನ್ನು ಮತ್ತು ಅವರು ಅನುಭವಿಸಿದ ಕಷ್ಟಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಆಕರ್ಷಕ ಹೊರಾಂಗಣ ವಿನ್ಯಾಸದ ನ್ಯಾಷನಲ್ ಮ್ಯೂಸಿಯಂ ಆಫ್ ದಿ ಅಮೆರಿಕನ್ ಇಂಡಿಯನ್, ಆಫ್ರಿಕನ್ ಅಮೆರಿಕನ್ನರ ಕಲೆ–ಪರಂಪರೆ ಬಿಂಬಿಸುವ ನ್ಯಾಷನಲ್ ಮ್ಯೂಸಿಯಂ ಆಫ್ ಆಫ್ರಿಕನ್ ಆರ್ಟ್‌ಗಳನ್ನು ನೋಡುವುದೇ ಒಂದು ಸಂಭ್ರಮ.

ದಿ ಕ್ಯಾಪಿಟೋಲ್‌ದಿಂದ ಕೇವಲ ಒಂದೂವರೆ ಕಿ.ಮೀ ದೂರದಲ್ಲಿನ ಸ್ಮಿತ್‌ಸೋನಿಯನ್ ನ್ಯಾಷನಲ್ ಏರ್ ಆ್ಯಂಡ್‌ ಸ್ಪೇಸ್ ಮ್ಯೂಸಿಯಂ ಒಂದು ರೀತಿ ವಾಷಿಂಗ್ಟನ್‌ನಲ್ಲಿರುವ ಮ್ಯೂಸಿಯಂಗಳಿಗೆ ಕಿರೀಟ ಇದ್ದಂತೆ. ವೈಮಾನಿಕ ಮತ್ತು ಅಂತರಿಕ್ಷ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಇಲ್ಲಿ ಅನುಭವಿಸಬಹುದು.

ವಾಷಿಂಗ್ಟನ್ ಯೂನಿಯನ್ ಸ್ಟೇಷನ್ ರೈಲು ನಿಲ್ದಾಣದ ಬದಿಯಲ್ಲೇ ಇರುವ ಪೋಸ್ಟಲ್ ಮ್ಯೂಸಿಯಂ, ಇಂಡಿಪೆಂಡೆನ್ಸ್ ಅವೆನ್ಯೂದ ಹಿರೋಷಿಮಾ ಮ್ಯೂಸಿಯಂ, ಏಷಿಯನ್ ಆರ್ಟ್ ಮ್ಯೂಸಿಯಂ, ಅಮೆರಿಕನ್ ಆರ್ಟ್ ಆ್ಯಂಡ್‌ ಹಿಸ್ಟರಿ ಮ್ಯೂಸಿಯಂ... ಹೀಗೆ ಹೆಚ್ಚೂ ಕಡಿಮೆ ಒಂದೂವರೆ ಡಜನ್‌ಗಳಷ್ಟು ಮ್ಯೂಸಿಯಂಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಇದರ ಹೊರತಾಗಿ ಎರಡು ಗಂಟೆ ಕಾಲ್ನಡಿಗೆಗೆ ನೀವು ತಯಾರಿದ್ದರೆ ಎಂಟು ಮುಖ್ಯ ಸ್ಮಾರಕಗಳನ್ನು ನೋಡಬಹುದು. ಅದಕ್ಕಾಗಿ ನಿಮ್ಮ ನಡಿಗೆ ಥಾಮಸ್ ಜೆಫರ್ಸನ್ ಸ್ಮಾರಕದಿಂದ ಶುರು ಆಗಬೇಕು. ಹಾಗೇ ಸಾಗುತ್ತ ಫ್ರಾಂಕ್ಲಿನ್ ರೂಸ್‌ವೆಲ್ಟ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಕೊರಿಯನ್ ವಾರ್ ವೆಟರನ್ಸ್, ಅಬ್ರಹಾಂ ಲಿಂಕನ್, ವಿಯೆಟ್ನಾಂ ವಾರ್, ವರ್ಲ್ಡ್ ವಾರ್ 2 ಮತ್ತು ಜಾರ್ಜ್ ವಾಷಿಂಗ್ಟನ್ ಸ್ಮಾರಕ ನೋಡಬಹುದು.

ಗುಮ್ಮಟದ ಒಳಭಾಗದಲ್ಲಿ ತೈಲಚಿತ್ರಗಳು
ಆಫ್ರಿಕಾ ಅಮೆರಿಕ ಇತಿಹಾಸ ಮತ್ತು ಸಂಸ್ಕೃತಿ ಬಿಂಬಿಸುವ ರಾಷ್ಟ್ರೀಯ ಮ್ಯೂಸಿಯಂ
ದಿ ಕ್ಯಾಪಿಟೋಲ್‌ನ ಗುಮ್ಮ‌ಟದ ಒಳಭಾಗದಲ್ಲಿ ಅಮೆರಿಕದ ಅಧ್ಯಕ್ಷರುಗಳ ಪ್ರತಿಮೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.