ಸರೋವರಗಳ ಸೀಮೆ ಎಂದೇ ಪ್ರಖ್ಯಾತವಾದ ಲೇಕ್ ಡಿಸ್ಟ್ರಿಕ್ಟ್ ವಾಯವ್ಯ ಇಂಗ್ಲೆಂಡಿನ ಒಂದು ಅಚ್ಚುಕಟ್ಟಾದ ಭಾಗ. ಲೇಕ್ ಡಿಸ್ಟ್ರಿಕ್ಟ್ ರಾಷ್ಟ್ರೀಯ ಉದ್ಯಾನವು ಆ ದೇಶದ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವಾಗಿದೆ. ತುಂಬಾ ಎತ್ತರದ ಬೆಟ್ಟ ಗುಡ್ಡಗಳನ್ನೂ, ಕಣಿವೆ ಮಾರ್ಗಗಳನ್ನೂ, ಕಡಿದಾದ ರಸ್ತೆಗಳು ಹಾಗೂ ಅತ್ಯಂತ ದೊಡ್ಡ ಮತ್ತು ಆಳವಾದ ಸರೋವರಗಳನ್ನೂ ಈ ಪ್ರದೇಶ ಹೊಂದಿದೆ.
ಲೇಕ್ ಡಿಸ್ಟ್ರಿಕ್ಟ್ ಹೆಗ್ಗುರುತು ಎಂದರೆ ವಾಯವ್ಯ ಇಂಗ್ಲೆಂಡಿನಲ್ಲಿ ದಕ್ಷಿಣಕ್ಕೆ ಮ್ಯಾಂಚೆಸ್ಟರ್, ಉತ್ತರಕ್ಕೆ ಕಾರ್ನಿಸ್. ಇಲ್ಲಿಗೆ ಲಂಡನ್ ನಗರದಿಂದ ಕೇವಲ ಐದು ಗಂಟೆಗಳ ಪ್ರಯಾಣ. ಇಂಗ್ಲೆಂಡಿನ ವಿಶಿಷ್ಟ ಪ್ರದೇಶವಾದ ಇದು ಲೇಕ್ ಡಿಸ್ಟ್ರಿಕ್ಟ್ ರಾಷ್ಟ್ರೀಯ ಉದ್ಯಾನ ಪ್ರಾಧಿಕಾರದ ಆಡಳಿತಕ್ಕೆ ಒಳಪಟ್ಟಿದೆ. ಜನರು ಬಂದು ನೋಡಿ ಆನಂದಿಸಲು ಅನುವಾಗುವಂತೆ ಪ್ರಾಧಿಕಾರವು ಉತ್ತೇಜನ ನೀಡುತ್ತಿದೆ. ಈ ಉದ್ಯಾನವು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿದೆ. ಇದರ ಒಟ್ಟು ವಿಸ್ತೀರ್ಣ 2,362 ಕಿಲೋಮೀಟರ್ ಹಾಗೂ ಎತ್ತರ 3,200 ಅಡಿ.
ಲೇಕ್ ಡಿಸ್ಟ್ರಿಕ್ಟ್ ಎನ್ನುವುದು ಇಂಗ್ಲೆಂಡಿನಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ. ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 2,000 ಮಿಲಿಮೀಟರ್ ಅಥವಾ 80 ಅಂಗುಲಗಳು. ವರ್ಷದಲ್ಲಿ ಅಕ್ಟೋಬರ್‌ನಿಂದ ಜನವರಿಯವರೆಗೆ ಹೆಚ್ಚು ಮಳೆ ಬೀಳುತ್ತದೆ. ಇಲ್ಲಿ ಚಳಿಗಾಲದಲ್ಲಿ ಚಳಿ ಸಾಧಾರಣ. ಬೇಸಿಗೆಯಲ್ಲೂ ತಂಪಾದ ಹವೆ. ಒಣ ಹವೆಯುಳ್ಳ ಹವಾಮಾನ. ಪ್ರವಾಸಕ್ಕೆ ಹೇಳಿ ಮಾಡಿಸಿರುವಂತಹ ತಾಣ. ಆದರೂ ಲೇಕ್ ಡಿಸ್ಟ್ರಿಕ್ಟ್‌ಗೆ ಭೇಟಿ ನೀಡಬಹುದಾದ ಸೂಕ್ತಕಾಲ ಏಪ್ರಿಲ್, ಮೇ ತಿಂಗಳ ವಸಂತ ಋತು ಹಾಗೂ ಸೆಪ್ಟೆಂಬರ್, ಅಕ್ಟೋಬರ್‌ನ ಶರತ್ಕಾಲ. ನಾವು ತಂಗಿದ್ದ ಲ್ಯಾಂಕಾಸ್ಟರ್ ಪ್ರದೇಶವೇ ಒಂದು ಆಕರ್ಷಕ ಪ್ರಕೃತಿಧಾಮ. ಇನ್ನು ನಾವು ಭೇಟಿ ನೀಡಲಿರುವ ಲೇಕ್ ಡಿಸ್ಟ್ರಿಕ್ಟ್ ಹೇಗಿರಬಹುದು ಎಂಬ ಬಹುನಿರೀಕ್ಷೆ ಹಾಗೂ ತವಕದಲ್ಲಿ ಮೊದಲಿಗೆ ಸರೋವರವನ್ನು ತಲುಪಿದಾಗ, ನಮ್ಮ ನಿರೀಕ್ಷೆಗಳು ಹೆಚ್ಚಿನ ಪ್ರಮಾಣದಲ್ಲಿ ಗರಿಗೆದರಿದವು.
ನಮ್ಮಲ್ಲಿ ಮಲೆನಾಡು ಇದೆಯಲ್ಲಾ, ಅದರಂತೆಯೇ ಇರುವ ಈ ಲೇಕ್ ಡಿಸ್ಟ್ರಿಕ್ಟ್ ಪ್ರಕೃತಿಯ ರಮಣೀಯತೆಗೆ ಮತ್ತೊಂದು ಹೆಸರು. ಮಲೆನಾಡು ಮೂರು-ನಾಲ್ಕು ಜಿಲ್ಲೆಗಳಿಗೆ ಮಾತ್ರ ವ್ಯಾಪಿಸಿದೆ. ಇಲ್ಲಿಯ ಲೇಕ್ ಡಿಸ್ಟ್ರಿಕ್ಟ್‌ನ ವಿಸ್ತೀರ್ಣ ಅದಕ್ಕಿಂತಲೂ ಹೆಚ್ಚಿನ ಪ್ರದೇಶವನ್ನು ಆವರಿಸಿದೆ. ಹಾಗಾಗಿ, ಇಲ್ಲಿ ನಿತ್ಯ ಚಿರಂತನವಾದ, ಹರಿದ್ವರ್ಣದಿಂದ ಕೂಡಿದ ಬೇರೊಂದು ಹಸಿರು ಲೋಕವೇ ಸೃಷ್ಟಿಯಾಗಿದೆ.
ಇಲ್ಲಿ ಸರೋವರಗಳೇ ಪ್ರಮುಖವಾಗಿದ್ದು, ನಮ್ಮಲ್ಲಿರುವಂತೆ ಹೆಚ್ಚು ಜಲಪಾತಗಳಿಲ್ಲ. ಆದರೆ ನೀರು ಸ್ವಯಂ ಶೇಖರಣೆಯಾಗಿದೆ. ಬೆಟ್ಟಗುಡ್ಡಗಳ ಸಾಲು ಅದಕ್ಕೆ ಇಂಬುಕೊಟ್ಟಿರುವುದರಿಂದ ಇಡೀ ದೃಶ್ಯ ಚೇತೋಹಾರಿಯಾಗಿದೆ. ಇದರ ಸೌಂದರ್ಯವೋ ‘ನಿಚ್ಚಂ ಪೊಸತು’.
ಲೇಕ್ ಡಿಸ್ಟ್ರಿಕ್ಟ್‌ನ ಗ್ರಾಸ್‌ಮಿಯರ್ ಎಂಬ ಪ್ರದೇಶವು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಕಾರಣ, ಇಲ್ಲಿಯೇ ಮಹಾಕವಿ ವರ್ಡ್ಸ್‌ವರ್ತ್ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಬಾಳಿ, ತಮ್ಮ ಕಾವ್ಯವನ್ನು ರಚಿಸಿದ್ದು. ಇಲ್ಲಿಯ ಅದ್ಭುತ ಸೌಂದರ್ಯವೇ ಅವರಿಗೆ ಸ್ಫೂರ್ತಿ ನೀಡಿ, ಅವರ ರೊಮ್ಯಾಂಟಿಕ್ ಕಾವ್ಯ ರಚನೆಗೆ ಪ್ರಭಾವವನ್ನುಂಟು ಮಾಡಿತು.
1799ರಲ್ಲಿ ವರ್ಡ್ಸ್‌ವರ್ತ್ ಮತ್ತು ಅವರ ಸಹೋದರಿ ಲೇಕ್ ಡಿಸ್ಟ್ರಿಕ್ಟ್ ಪ್ರವಾಸವನ್ನು ಕೈಗೊಂಡರು. ಆಗ ಅವರು ಪಾಳುಬಿದ್ದಿದ್ದ 17ನೇ ಶತಮಾನದ ಕಟ್ಟಡವೊಂದನ್ನು ಗಮನಿಸಿದರು. ಪ್ರಕೃತಿ ರಮ್ಯತೆಯ ಮಡಿಲಲ್ಲಿ ಹೂತುಹೋಗಿದ್ದ ಆ ಕಟ್ಟಡದ ಬಗ್ಗೆ ಪ್ರೀತಿ ಮೂಡಿ, ಅದನ್ನೇ ತಮ್ಮ ವಾಸಗೃಹವನ್ನಾಗಿ ಮಾಡಿಕೊಂಡರು. ‘ಡೌ ಕಾಟೇಜ್’ ಎಂದು ಹೆಸರಿಟ್ಟರು. ಆ ನಂತರ ಸ್ಯಾಮುಯೆಲ್ ಟೇಲರ್ ಕೋಲ್ರಿಜ್ ಕೂಡ ಹತ್ತಿರದಲ್ಲಿಯೇ ಮನೆ ಮಾಡಿಕೊಂಡು ಮತ್ತೊಬ್ಬ ಕವಿ ರಾಬರ್ಟ್ ಸೌದೀ ಎಂಬುವವರೊಂದಿಗೆ ವಾಸ್ತವ್ಯ ಹೂಡಿದರು. ‘ಲೇಕ್ ಕವಿಗಳು’ ಎಂದು ಮುಂದೆ ಖ್ಯಾತಿಗಳಿಸಿದ ಮೂವರೂ ಸನಿಹದಲ್ಲೇ ಇದ್ದರು.
‘ಡೌ ಕಾಟೇಜ್’ ಎಂಬುದು ವರ್ಡ್ಸ್‌ವರ್ತ್‌ನಂತಹ ಕವಿ ಶ್ರೇಷ್ಠನಿಗೆ ತುಂಬಾ ಸರಳ ವಾಸಸ್ಥಾನವಾದರೂ, ಅದರ ಪ್ರಕೃತಿ ಸಾಮೀಪ್ಯದ ಬಗ್ಗೆಯೇ ಮಮತೆಯನ್ನು ಬೆಳೆಸಿಕೊಂಡು ಅಲ್ಲಿಯೇ ವಾಸ ಮಾಡಿ, ತನ್ನ ಅತೀ ಶ್ರೇಷ್ಠವಾದ ‘ಪ್ರೆಲ್ಯೂಡ್’, ‘ಓಡ್ ಟೂ ಬ್ಯೂಟಿ’ ಹಾಗೂ ‘ಇಂಟಿಮೇಷನ್ಸ್ ಆಫ್ ಇಮ್‌ಮಾರ್ಟಾಲಿಟಿ’–ಇವುಗಳನ್ನು ಬರೆದರು. ‘ಡೌ ಕಾಟೇಜ್’ ಎಂಬುದು ಸದಾ ಕವಿಗಳ, ಕಲಾವಿದರ ಓಡಾಟದಿಂದಾಗಿ ಸಾಂಸ್ಕೃತಿಕ ತಾಣವಾಗಿ ಪರಿವರ್ತನೆಗೊಂಡಿತು.
ಈಗಲೂ ನಾವು ಮಹಾಕವಿ ವರ್ಡ್ಸ್‌ವರ್ತ್ ಕಾವ್ಯ ರಚನೆ ಮಾಡಿದ ಹಸಿರುತೋಟದ ತುಂಬಾ ಓಡಾಡಬಹುದು. ಅವರ ಹಿರಿಮೆಯ ಕುರುಹಾಗಿ, 1890 ರಲ್ಲಿ ವರ್ಡ್ಸ್‌ವರ್ತ್ ಟ್ರಸ್ಟ್‌ನವರು ಆ ಕಟ್ಟಡ ಮತ್ತು ತಾಣವನ್ನು ಖರೀದಿಸಿ ಅಭಿವೃದ್ಧಿಪಡಿಸಿದರು. ಮಾರನೆಯ ವರ್ಷ ಅವರ ನೆನಪಿಗಾಗಿ ಮ್ಯೂಸಿಯಂ ಆಗಿ ಮಾರ್ಪಡಿಸಿದರು. ಅವರಿದ್ದ ಮನೆಯ ಪಕ್ಕದಲ್ಲಿಯೇ ಈ ಮ್ಯೂಸಿಯಂ ಕೂಡಾ ಇದೆ. ಮ್ಯೂಸಿಯಂ ಅನ್ನು ನೋಡುವುದೇ ಒಂದು ರೀತಿಯ ಆಹ್ಲಾದಕರ ಅನುಭವ. ವರ್ಡ್ಸ್‌ವರ್ತ್ ಸ್ಮರಣಾರ್ಥ ಅವರಿದ್ದ ಮನೆಯನ್ನೇ ‘ಡೌ ಕಾಟೇಜ್’ ಎಂಬ ಹೆಸರಿನಲ್ಲಿಯೇ ಸ್ಮಾರಕ ಮಾಡಲಾಗಿದೆ. ಅದರ ಸುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಹೆಚ್ಚು ಕಡಿಮೆ ಉಳಿಸಿಕೊಳ್ಳಲಾಗಿದೆ. ಆ ಸ್ಮಾರಕಕ್ಕೆ ‘ಡೆಫೋಡಿಲ್ಸ್’ ಎಂದೇ ಹೆಸರು. ಅವರ ಸಮಾಧಿಯ ಮೇಲೆ ಡೆಫೋಡಿಲ್ಸ್ ಪದ್ಯದ ಕೊನೆಯ ಸಾಲುಗಳನ್ನು ಕೆತ್ತಲಾಗಿದೆ.
ಗ್ರಾಸ್‌ಮಿಯರ್ ವರ್ಡ್ಸ್‌ವರ್ತ್‌ನ ಅಪೂರ್ವ ವರ್ಣನೆಗಳಲ್ಲಿ ಒಂದಾದ, ಎಲ್ಲರೂ ನೋಡಬೇಕಾದ ಅತ್ಯಾಕರ್ಷಕ ಸ್ಥಳ. ಈ ಗ್ರಾಸ್‌ಮಿಯರ್ ಸರೋವರ, ಸುಮಾರು ಒಂದು ಕಿಲೋಮೀಟರ್ ಉದ್ದ ಅರ್ಧ ಕಿಲೋಮೀಟರ್ ಅಗಲ ಹಾಗೂ 75 ಅಡಿ ಆಳವಿದ್ದು, ವರ್ಡ್ಸ್‌ವರ್ತ್‌ನ ಸೌಂದರ್ಯ ಪರಿಭಾಷೆಗೆ ತಕ್ಕದಾಗಿದೆ. ವರ್ಡ್ಸ್‌ವರ್ತ್‌ನ ಸಮಾಧಿ ಇರುವ ಕಾರಣದಿಂದ ಗ್ರಾಸ್‌ಮಿಯರ್ ಹಳ್ಳಿ, ಲೇಕ್ ಡಿಸ್ಟ್ರಿಕ್ಟ್‌ನಲ್ಲಿ ಬಹಳ ಖ್ಯಾತಿ ಹೊಂದಿದೆ.
ವಿಂಡರ್‌ಮಿಯರ್ ಸರೋವರವು ಹನ್ನೊಂದು ಮೈಲಿ ಉದ್ದವಿದ್ದು, 5.7 ಚದರ ಮೈಲಿಗಳ ಸುತ್ತಳತೆಯನ್ನು ಹೊಂದಿದೆ. ಇದು 79 ಮೀಟರ್ ಆಳವಿದ್ದು ಇಂಗ್ಲೆಂಡಿನಲ್ಲಿಯೇ ಅತೀ ಆಳದ ಸರೋವರವೆಂದು ಪರಿಗಣಿತವಾಗಿದೆ. ಇವುಗಳಲ್ಲದೇ ಆಂಬಲ್‌ಸೈಡ್, ರೈಡಾಲ್, ಕೆಂಡಾಲ್, ಪಾಟರ್‌ಡೇಲ್, ಬಟರ್‌ಮಿಯರ್, ಬ್ರರ‍್ಸ್ ವಾಟರ್, ಬರೋಡೇಲ್, ಡರ್ವೆಂಟ್ ವಾಟರ್ ಮುಂತಾದ ಸರೋವರಗಳು ಸೌಂದರ್ಯಯುಕ್ತವಾಗಿ ಆಕರ್ಷಕವಾಗಿವೆ. ಒಂದೊಂದೂ ನೀರಿನ ತವನಿಧಿಯೇ!
ಈ ಲೇಕ್ ಡಿಸ್ಟ್ರಿಕ್ಟ್ ಪ್ರದೇಶವನ್ನು ನೋಡಲೆಂದೇ ಪ್ರವಾಸ ಕೈಗೊಂಡಿದ್ದೆ. ಜಲಮೂಲಗಳನ್ನು ಕಾಪಾಡುತ್ತಾ ಅದು ಸ್ವಲ್ಪವೂ ಮಲಿನವಾಗದಂತೆ ಕೈಗೊಂಡಿರುವ ಅಲ್ಲಿಯ ಪ್ರಾಧಿಕಾರದ ಕಾಳಜಿ, ಜತನವನ್ನು ಎಷ್ಟು ಕೊಂಡಾಡಿದರೂ ಸಾಲದು. ನೊಂದ ಮನಸ್ಸಿಗಂತೂ ಇದು ನೀಡುವ ಸಾಂತ್ವನ ಅಷ್ಟಿಷ್ಟಲ್ಲ. ಅದೇ ತಾನೇ ಒಟ್ಟು ಪ್ರಕೃತಿಯ ಅದಮ್ಯ ಶಕ್ತಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.