ADVERTISEMENT

ಇಟಲಿಯ ರೋಮ್ ನಗರದ ಟ್ರೆವಿ ಕಾರಂಜಿ

ಕೆ.ಪಿ.ಸತ್ಯನಾರಾಯಣ
Published 2 ಅಕ್ಟೋಬರ್ 2021, 19:30 IST
Last Updated 2 ಅಕ್ಟೋಬರ್ 2021, 19:30 IST
ಕಾರಂಜಿಯ ಮುಖ್ಯ ಶಿಲ್ಪಗಳು, ಎದುರಿನಿಂದ ಕಂಡಂತೆ
ಕಾರಂಜಿಯ ಮುಖ್ಯ ಶಿಲ್ಪಗಳು, ಎದುರಿನಿಂದ ಕಂಡಂತೆ   

ಇಟಲಿಯ ರೋಮ್ ನಗರದ ಸುತ್ತಾಟದಲ್ಲಿ ನೋಡಲು ಅನೇಕ ವಿಶೇಷಗಳಿವೆಯಾದರೂ, ಮುಖ್ಯವಾಗಿ ಪುರಾತನ ರಂಗಮಂದಿರ ಕೊಲೋಸಿಯಂ, ಸೈಂಟ್ ಪೀಟರ್ ಚೌಕವನ್ನು ಹೆಸರಿಸಲಾಗುತ್ತದೆ. ಆದರೆ ರೋಮ್ ನಗರದ ನಡುಭಾಗದಲ್ಲಿಯೇ ಇರುವ ವಿಶ್ವವಿಖ್ಯಾತ ಟ್ರೆವಿ ಕಾರಂಜಿಯನ್ನು (Trevi Fountain- ಇಟಾಲಿಯನ್‌ನಲ್ಲಿ Fontana Di Trevi) ನೋಡದಿದ್ದರೆ ನಮ್ಮ ರೋಮ್ ಪ್ರವಾಸ ಪೂರ್ಣವಾದಂತಾಗುವುದಿಲ್ಲ. ವಾಸ್ತು ಮತ್ತು ಶಿಲ್ಪಕಲೆ ಮೇಳೈಸಿದ ಈ ಅದ್ಭುತ ಕಲಾಕೃತಿಯು ಸೇಂಟ್‌ ಪೀಟರ್ ಚೌಕ ಮತ್ತು ವ್ಯಾಟಿಕನ್ ನಗರಕ್ಕೆ ಕೇವಲ ಎರಡು ಕಿ.ಮೀ ಮತ್ತು ರೋಮ್‌ ನಗರದ ಹೃದಯ ಭಾಗಕ್ಕೆ ಐದೂವರೆ ಕಿ.ಮೀ ದೂರದಲ್ಲಿದೆ.

ಕ್ರಿಸ್ತ ಪೂರ್ವದಲ್ಲಿಯೇ ನಗರದ ನೀರಿನ ಅಗತ್ಯವನ್ನು ಪೂರೈಸಲು ರೋಮ್‍ನ ತಂತ್ರಜ್ಞರು ಕನ್ಯೆಯೊಬ್ಬಳ ಸಹಾಯದಿಂದ ನಗರದ ಹೊರವಲಯದಲ್ಲಿ ಶುದ್ಧ ನೀರಿನ ಸೆಲೆಯನ್ನು ಕಂಡುಹಿಡಿದರಂತೆ. ಆ ಕನ್ಯೆಯ ಹೆಸರಿನ ಕಾಲುವೆಯ (Aqua Virgo) ಮೂಲಕ ನಗರಕ್ಕೆ ನೀರಿನ ಸರಬರಾಜಾಗುತ್ತಿತ್ತು. ಆ ಕಾಲುವೆಯು ನಗರದ ನಡುಭಾಗದಲ್ಲಿ ಕೊನೆಗೊಳ್ಳುತ್ತಲಿದ್ದು ಅಲ್ಲೊಂದು ಕೊಳವನ್ನು ನಿರ್ಮಿಸಲಾಗಿತ್ತು. ಆ ಸ್ಥಳದಲ್ಲಿಯೇ ಈಗ ಟ್ರೆವಿ ಕಾರಂಜಿ ಇದೆ.

ಕ್ರಿಸ್ತಶಕ ಹದಿನೇಳನೇ ಶತಮಾನದವರೆಗೂ ಈ ಕಾಲುವೆ ಮತ್ತು ಕೊಳ, ನಿರ್ವಹಣೆಯ ಕೊರತೆಯಿಂದ ಪಾಳುಬಿದ್ದಿದ್ದವು. 1730ರಲ್ಲಿ ಹನ್ನೆರಡನೆಯ ಪೋಪ್ ಕ್ಲೆಮೆಂಟ್ ಕಾಲುವೆಯ ಜೀರ್ಣೋದ್ಧಾರ ಮತ್ತು ಕೊಳದ ಮರುನಿರ್ಮಾಣಕ್ಕೆಂದು ಸ್ಪರ್ಧೆಯೊಂದನ್ನು ಏರ್ಪಡಿಸಿದನು. ಆ ಸ್ಪರ್ಧೆಯಲ್ಲಿ ಗೆದ್ದ ಇಟಲಿಯ ವಾಸ್ತುಶಿಲ್ಪಿ ನಿಕೋಲಾ ಸಾಲ್ವಿ ಈ ವಿಶಿಷ್ಟ ಕಾರಂಜಿಯನ್ನು (Baroque fountain)ವಿನ್ಯಾಸಗೊಳಿಸಿದನು.

ADVERTISEMENT

1732ರಲ್ಲಿ ಇದರ ಕೆಲಸ ಆರಂಭವಾಯಿತು. ಕೆಲಸ ಅರ್ಧ ಭಾಗದಷ್ಟು ನಡೆದಿದ್ದಾಗ ಸಾಲ್ವಿ ನಿಧನನಾದನು. ಆ ನಂತರ ವಿವಿಧ ಶಿಲ್ಪಿಗಳಿಗೆ ಈ ಕಾರ್ಯವನ್ನು ಪೂರ್ಣಗೊಳಿಸುವ ಹೊಣೆಯನ್ನು ವಹಿಸಲಾಯಿತು. ಮುಖ್ಯ ವಾಸ್ತುಶಿಲ್ಪಿಯಾಗಿ ಗುಸೆಪ್ ಪಾಣಿನಿಯನ್ನು ನೇಮಿಸಲಾಯ್ತು. 1762ರ ಮೇ ತಿಂಗಳ 22ರಂದು ಹದಿಮೂರನೆಯ ಪೋಪ್ ಕ್ಲೆಮೆಂಟ್ ಈ ಕಲಾಕೃತಿಯನ್ನು ಉದ್ಘಾಟಿಸಿದರು.

ಈ ಬಹುಮಾಧ್ಯಮ ಕಲಾಕೃತಿ 26.3 ಮೀಟರ್ - 86 ಅಡಿ ಎತ್ತರ ಹಾಗೂ 49.15 ಮೀಟರ್ - 161 ಅಡಿ ಅಗಲವಿದ್ದು, ರೋಮ್ ನಗರದ ಅತಿ ದೊಡ್ಡ ಕಾರಂಜಿ ಎನಿಸಿಕೊಂಡಿದೆ. ಮೂರು ದಾರಿಗಳು ಸೇರುವ ಸ್ಥಳದಲ್ಲಿರುವುದರಿಂದಾಗಿ ಇದಕ್ಕೆ ಟ್ರೆವಿ ಎಂಬ ಹೆಸರು ಬಂದಿದೆ. ರೋಮ್ ನಗರದಿಂದ 22 ಮೈಲಿಗಳ ದೂರದ ಸ್ಥಳದಲ್ಲಿ ದೊರಕುವ ಒಂದು ಬಗೆಯ ಸುಣ್ಣದ ಕಲ್ಲಿನಲ್ಲಿ (Travertine stone) ಈ ಶಿಲ್ಪ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಕಾರಂಜಿಯ ಹಿನ್ನೆಲೆಯಲ್ಲಿ ಶಿಲ್ಪಗಳ ಮೂಲಕ ಈ ನೀರಿನ ಕಾಲುವೆಯ ಕಥೆಯನ್ನು ನಿರೂಪಿಸಲಾಗಿರುವುದು ವಿಶೇಷವಾಗಿದೆ.

ಟ್ರೆವಿ ಕಾರಂಜಿಯ ಕೊಳಕ್ಕೆ ನಾಣ್ಯ ಎಸೆಯುವ ಪದ್ಧತಿಯಿದೆ

1988ರಲ್ಲೊಮ್ಮೆ ಹಾಗೂ 1998ರಲ್ಲಿ ನುರಿತ ಶಿಲ್ಪಿಗಳು ಬಿರುಕುಗಳನ್ನು ಮುಚ್ಚಿ, ಬಣ್ಣಗೆಟ್ಟಿದ್ದ ಕಲ್ಲು ಗಳನ್ನು ಸ್ವಚ್ಛಗೊಳಿಸಿ, ಕಲಾಕೃತಿಗಳ ಮೇಲೆ ಕುಳಿತಿದ್ದ ಖನಿಜಾಂಶಗಳನ್ನು ಕೆರೆದು ತೆಗೆದು, ಶಿಲ್ಪಗಳಿಗೆ ಹೊಸ ರೂಪು ಕೊಟ್ಟರು. ಕೊಳದ ಜೀರ್ಣೋದ್ಧಾರವನ್ನೂ ಮಾಡಲಾಯಿತು. ನೀರಿನ ಪುನರ್ಬಳಕೆಗಾಗಿ ನೀರೆತ್ತುವ ಹೊಸ ಯಂತ್ರಗಳನ್ನು ಅಳವಡಿಸಲಾಯ್ತು. ಪುನಃ 2015ರಲ್ಲಿ ಒಂದಷ್ಟು ರಿಪೇರಿಯ ಕಾರ್ಯಗಳನ್ನು ಕೈಗೊಳ್ಳಲಾಯಿತು. ಪ್ರಮುಖವಾಗಿ ರಾತ್ರಿ ಹೊತ್ತಿನಲ್ಲಿ ಕಾರಂಜಿಯ ಅಪೂರ್ವ ನೋಟದ ಅನುಭವ ದೊರಕಿಸುವುದಕ್ಕಾಗಿ ಎಲ್‌ಇಡಿ ಬಲ್ಬುಗಳನ್ನು ಅಳವಡಿಸಲಾಯ್ತು.

ಈ ನೀರಿನ ಕಾರಂಜಿಯೊಳಕ್ಕೆ ನಾಣ್ಯಗಳನ್ನು ಎಸೆಯುವ ಪದ್ಧತಿ ಬಹಳ ಕಾಲದಿಂದ ರೂಢಿಯಲ್ಲಿದೆ. ಬಲಗೈಯಲ್ಲಿ ನಾಣ್ಯಗಳನ್ನು ಹಿಡಿದು ಎಡ ಭುಜದ ಮೇಲಿನಿಂದ ನೀರಿಗೆ ಎಸೆಯಬೇಕೆಂದು ಹೇಳಲಾಗುತ್ತದೆ. ಪ್ರತಿನಿತ್ಯ ಸುಮಾರು ಮೂರು ಸಾವಿರ ಯೂರೋಗಳಷ್ಟು ನಾಣ್ಯಗಳು ಇಲ್ಲಿನ ಕೊಳದಲ್ಲಿ ಸಂಗ್ರಹವಾಗಿರುತ್ತವೆ. 2016ರಲ್ಲಿ ಸುಮಾರು 15 ಲಕ್ಷ ಡಾಲರ್‌ಗಳಷ್ಟು ಹಣ ಕಾರಂಜಿಯಲ್ಲಿ ದೊರಕಿತ್ತು. ಈ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ. ಎಷ್ಟೇ ಕಾವಲು ಇದ್ದರೂ ಕೊಳದಲ್ಲಿನ ನಾಣ್ಯಗಳನ್ನು ಕದಿಯಲು ಪ್ರಯತ್ನಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಕಾನೂನಿಗೆ ವಿರುದ್ಧವೆಂದು ಗೊತ್ತಿದ್ದರೂ, ಅಂತಹ ಪ್ರಯತ್ನಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ.

ಟ್ರೆವಿ ಕಾರಂಜಿ ಕುರಿತ ಅಂಚೆ ಚೀಟಿಯೊಂದನ್ನು 1972ರಲ್ಲಿ ಇಟಲಿಯ ಅಂಚೆ ಇಲಾಖೆ ಹೊರ ತಂದಿದೆ. 1953ರಲ್ಲಿ ತೆರೆಕಂಡ ‘ರೋಮನ್‌ ಹಾಲಿಡೆ’, 1954ರಲ್ಲಿ ಬಿಡುಗಡೆಯಾದ ‘ತ್ರೀ ಕಾಯಿನ್ಸ್‌ ಇನ್‌ ದಿ ಫೌಂಟನ್‌’ ಸೇರಿದಂತೆ ಹಲವು ಚಲನಚಿತ್ರಗಳಲ್ಲಿಯೂ ಈ ಕಾರಂಜಿ ಕಾಣಿಸಿಕೊಂಡಿದೆ.

ಯುರೋಪಿಯನ್ನರು ತಮ್ಮ ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅವುಗಳಿಂದಲೇ ತಮ್ಮ ಪ್ರವಾಸೋದ್ಯಮವನ್ನು ಬೆಳೆಸಿಕೊಳ್ಳುತ್ತಾರೆ. ಅಂತಹ ಪ್ರಯತ್ನಕ್ಕೊಂದು ಉದಾಹರಣೆ ಈ ಟ್ರೆವಿ ಕಾರಂಜಿ. ನೋಡಿ, ಫೋಟೊ ತೆಗೆದುಕೊಂಡು ಸಂಭ್ರಮಿಸಿ ಹಿಂತಿರುಗಿದ ಮೇಲೂ ನಮ್ಮ ನೆನಪಿನಲ್ಲಿ ತಾಜಾ ಆಗಿ ಉಳಿಯುತ್ತವೆ ಈ ಮನಮೋಹಕ ಸ್ಮಾರಕಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.