ADVERTISEMENT

ಕಮಾನು ಕಟ್ಟಿಹ ಭೀಮನ ಬೆಟ್ಟ

ಹೇಮಮಾಲಾ ಬಿ.
Published 12 ಜೂನ್ 2019, 19:30 IST
Last Updated 12 ಜೂನ್ 2019, 19:30 IST
ಬೀಮನಬೆಟ್ಟ
ಬೀಮನಬೆಟ್ಟ   

ಅಂದು ಮೇ ತಿಂಗಳ ಕೊನೆಯ ಭಾನುವಾರ. ವಾರಾಂತ್ಯ ವನ್ನು ಪ್ರಕೃತಿಯೊಂದಿಗೆ ಕಳೆಯಬೇಕೆಂದು ನಿರ್ಧರಿಸಿದ್ದ ಸುಮಾರು ಮೂವತ್ತು ಮಂದಿ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಮೈಸೂರು, ಗಂಗೋತ್ರಿ ಘಟಕದ ಸದಸ್ಯರು ಮುಂಜಾನೆ ಮೈಸೂರಿನಿಂದ ಹೊರಟು ಬನ್ನೂರು, ಮಳವಳ್ಳಿ, ಹಲಗೂರು, ಕಂಚನಹಳ್ಳಿ ಮಾರ್ಗವಾಗಿ ಪ್ರಯಾಣಿಸಿ, ‘ಭೀಮಪ್ಪನ ಬೆಟ್ಟ’ದ ತಪ್ಪಲಲ್ಲಿ ಸೇರಿದ್ದೆವು.

ಎದುರುಗಡೆ ಕಾಣಿಸುತ್ತಿದ್ದ ಸಾಧಾರಣ ಎತ್ತರದ ಬೆಟ್ಟದಲ್ಲಿ ಮೇಲ್ನೋಟಕ್ಕೆ ವಿಶೇಷವೇನೂ ಇದ್ದಂತಿರಲಿಲ್ಲ. ಆದರೆ ಅದು ಅದ್ಭುತವಾದ ಪ್ರಾಕೃತಿಕ ವೈಶಿಷ್ಟ್ಯ ಹಾಗೂ ಪೌರಾಣಿಕ ಹಿನ್ನೆಲೆ ಯುಳ್ಳ ಬೆಟ್ಟ ಎಂದು ಗೊತ್ತಾಯಿತು. ಸ್ಥಳೀಯರು ಆ ಬೆಟ್ಟಕ್ಕೆ ಪೂಜನೀಯ ಸ್ಥಾನವನ್ನು ಕಲ್ಪಿಸಿದ್ದಾರೆ.

ಕಂಚನಹಳ್ಳಿ ತಿರುವಿನಲ್ಲಿ ನಾವು ಚಹಾ ಕುಡಿದ ಅಂಗಡಿಯಲ್ಲಿದ್ದ ಹಿರಿಯ ಮಹಿಳೆಯೊಬ್ಬರು ‘ಅದು ಭೀಮಪ್ಪನ ಬೆಟ್ಟ, ಅಲ್ಲಿಗೆ ಸ್ನಾನ ಮಾಡದೆ ಹೋಗ್ಬಾರ್ದು, ಚಪ್ಲಿ ಹಾಕ್ಕೊಂಡು ಹತ್ಬಾರ್ದು, ಹಾಂಗೇನಾರ ಮಾಡಿದ್ರೆ ಜೇನ್ನೊಣಗ್ಳು ಎದ್ದು ಬರ್ತಾವೆ’ ಅಂದಿದ್ದರು. ಆದರೆ ಶೂ ಹಾಕಿಯೇ ಚಾರಣ ಮಾಡುವ ಅಭ್ಯಾಸವುಳ್ಳ ಹೆಚ್ಚಿನ ವರಿಗೆ ಚಪ್ಪಲಿಯನ್ನೂ ಹಾಕದೆ ಬೆಟ್ಟ ಏರುವುದು ಅಸಾಧ್ಯ ಎಂದು ಅರಿವಿದ್ದ ಕಾರಣ, ಬೆಟ್ಟವನ್ನು ಹತ್ತಿದ ಮೇಲೆ ಅಲ್ಲಿರುವ ಪುಟ್ಟ ಗುಡಿಯ ಬಳಿ ಶೂ/ಚಪ್ಪಲಿ ತೆಗೆದರಾಯಿತು ಎಂದು ಅನುಕೂಲ ಶಾಸ್ತ್ರ ಮಾಡಿಕೊಂಡೆವು!

ADVERTISEMENT

‘ಸಾಧ್ಯವಾದಷ್ಟು ನಿಶ್ಶಬ್ದವಾಗಿ ಬೆಟ್ಟವನ್ನು ಹತ್ತೋಣ, ಅಕಸ್ಮಾತ್ ಜೇನ್ನೊಣಗಳು ದಾಳಿ ಮಾಡಿದರೆ ಸುಮಾರು ಕಾಲು ಗಂಟೆಯ ಕಾಲ ಇದ್ದಲ್ಲಿಯೇ ಬೆನ್ನು ಮೇಲೆಯಾಗಿ ಸದ್ದು ಮಾಡದೆ ನಿಶ್ಚಲವಾಗಿ ಮಲಗಿ ಅಥವಾ ಅಲ್ಲಾಡದೆ ಪ್ರತಿಮೆ ತರ ಹಾಗೇ ನಿಂತುಬಿಡಿ, ಯಾವುದೇ ಚಲನೆ ಇಲ್ಲದಿದ್ದರೆ ಜೇನ್ನೊಣಗಳು ಹಾಗೆಯೇ ಹೊರಟು ಹೋಗುತ್ತವೆ’ ಎಂದು ಸ್ವಾನುಭವದ ಉದಾಹರಣೆಯೊಂದಿಗೆ ಕಾರ್ಯಕ್ರಮದ ಆಯೋಜಕರು ವಿವರಿಸಿದರು.

ಸಮುದ್ರಮಟ್ಟದಿಂದ ಸುಮಾರು 5600 ಅಡಿ ಎತ್ತರದಲ್ಲಿರುವ ಭೀಮಪ್ಪನ ಬೆಟ್ಟವನ್ನೇರಲು ಸರಿಯಾದ ಮೆಟ್ಟಿಲುಗಳಿಲ್ಲ. ಚಿಕ್ಕ ದೊಡ್ಡ ಕಲ್ಲುಗಳನ್ನು ಪೇರಿಸಿದಂತಿದ್ದ ಕಾಲುದಾರಿಯಲ್ಲಿ ನಿಧಾನವಾಗಿ ಸಾಗುತ್ತಿದ್ದೆವು. ಮೇ ತಿಂಗಳ ಕೊನೆಯಾದುದರಿಂದ ಬೆಟ್ಟದಲ್ಲಿದ್ದ ಕುರುಚಲು ಗಿಡಗಳು ಕೂಡ ಒಣಗಿ ಭಣಗುಡುತ್ತಿತ್ತು. ಸುಮಾರು ಒಂದೂವರೆ ಗಂಟೆ ನಡೆದು ಬೆಟ್ಟದ ತುದಿ ತಲುಪುವಷ್ಟರಲ್ಲಿ ಬೃಹತ್ತಾದ ಕಲ್ಲಿನ ಕಮಾನು ಕಾಣಿಸಿತು. ಅದೇ ‘ಭೀಮನ ಕಿಂಡಿ’.

ಅಂದಾಜು 200 ಅಡಿ ಉದ್ದ, 150 ಅಡಿ ಅಗಲ 70 ಅಡಿ ಎತ್ತರವಿರಬಹುದಾದ ನಿಸರ್ಗ ನಿರ್ಮಿತ ಬಂಡೆಗಲ್ಲಿನ ಕಮಾನು ನೋಡಿ ಬೆರಗಾದೆವು. ಕಮಾನಿನ ಒಳಗೆ, ಸುಮಾರು ಎರಡೂವರೆ ಅಡಿ ಎತ್ತರದ ಬಸವನ ಮೂರ್ತಿಯಿದೆ. ಅದೇ ‘ಭೀಮೇಶ್ವರನ ಗುಡಿ’. ಅಲ್ಲಿವರೆಗೆ ಬಿಸಿಲಿನಲ್ಲಿ ನಡೆದು ಬಂದಿದ್ದ ನಮಗೆ ಈ ಕಲ್ಲಿನ ಕಮಾನು ನೆರಳು ನೀಡಿತು. ಅದರ ಕೆಳಗೆ ಬಂದಾಗ ಹವಾನಿಯಂತ್ರಿತ ಕೋಣೆ ಹೊಕ್ಕಂತಾಯಿತು. ಕೆಲವರು ಬೀಸುವ ತಂಗಾಳಿಗೆ ಮೈಯೊಡ್ಡಿ ಬಂಡೆಯ ಮೇಲೆ ಒರಗಿ ಸಣ್ಣ ನಿದ್ರೆ ಮಾಡಿದರೆ, ಇನ್ನು ಕೆಲವರು ಸುತ್ತಮುತ್ತಲಿನ ನಿಸರ್ಗದ ಸೊಬಗನ್ನು ಸವಿಯುತ್ತಾ ಕಾಲ ಕಳೆದರು. ಒಂದಿಬ್ಬರು ಹಾಡು ಹೇಳಿ ರಂಜಿಸಿದರು. ನಾವು ಒಯ್ದಿದ್ದ ಸೌತೆಕಾಯಿ, ಬಾಳೆಹಣ್ಣು ಇತ್ಯಾದಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಅಲ್ಲಿ ಹಲವಾರು ಮಂಗಗಳು ಕಾದಿದ್ದವು.

ಸ್ಥಳೀಯರು ಹೇಳುವ ಕಥೆ ಹೀಗಿದೆ; ತ್ರೇತಾಯುಗದಲ್ಲಿ ಪಾಂಡವರು ವನವಾಸ ಹೋಗಿದ್ದ ವೇಳೆ ಇಲ್ಲಿ ವಾಸವಾಗಿದ್ದರು. ಆಗ ಒಂದು ದಿನ ಭೀಮ ಈ ಬೆಟ್ಟದ ತಪ್ಪಲಲ್ಲಿ ಹೊಲವನ್ನು ಉಳುಮೆ ಮಾಡುತ್ತಿದ್ದ . ತಾಯಿ ಕುಂತಿ ಮಗನಿಗೆ ಊಟ ಕಟ್ಟಿಕೊಂಡು ತರುವಾಗ ಬೃಹದಾಕಾರದ ಬಂಡೆ ಎದುರಾಗಿ ಆಕೆಗೆ ದಾರಿ ಕಾಣದಾಯಿತು. ಕುಂತಿಯು ಭೀಮನನ್ನು ಕೂಗಿದಾಗ, ಅವನು ತನ್ನ ಗದೆಯಿಂದ ಬಂಡೆಗೆ ಪ್ರಹಾರ ಮಾಡಿದನಂತೆ. ಬಂಡೆಯಲ್ಲಿ ಕಮಾನು ಮೂಡಿ ಕುಂತಿ ಊಟ ತೆಗೆದುಕೊಂಡು ಹೋಗಲು ಸಾಧ್ಯವಾಯಿತು.

ವಿಜ್ಞಾನದ ಪ್ರಕಾರ ಸಿಡಿಲು ಬಡಿದು ಬಂಡೆಯಲ್ಲಿ ಬಿರುಕು ಉಂಟಾಗಿರಬಹುದು. ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯದಂತೆ ಇಲ್ಲಿನ ಶಿಲಾಪದರಗಳ ಚಲನೆಯಿಂದ ಸಾವಿರಾರು ವರ್ಷಗಳ ಹಿಂದೆ ಈ ಕಮಾನು ರಚನೆಯಾಗಿರುವ ಸಾಧ್ಯತೆಯಿದೆ.

ನಾವು, ಕಲ್ಲಿನ ಕಮಾನಿನ ಅಡಿಯಲ್ಲಿ ಒಂದೆರಡು ಗಂಟೆ ಕಾಲಕ್ಷೇಪ ಮಾಡಿ, ನಿಧಾನಕ್ಕೆ ಬೆಟ್ಟ ಇಳಿಯಲಾ ರಂಭಿಸಿದೆವು. ಬೆಟ್ಟ ಹತ್ತಲು ಅಂದಾಜು ಒಂದೂವರೆ ಗಂಟೆ ಬೇಕಾಯಿತು. ಇಳಿಯಲು ಮುಕ್ಕಾಲು ಗಂಟೆ ಸಾಕಾಯಿತು. ಎಲ್ಲರೂ ಬಂದಾದ ಮೇಲೆ ಬೆಟ್ಟದ ಕೆಳಗೆ, ನಾವು ಕಟ್ಟಿಕೊಂಡು ತಂದಿದ್ದ ಬುತ್ತಿ ಬಿಚ್ಚಿ ಊಟ ಮಾಡಿ ಮೈಸೂರಿಗೆ ಹಿಂದಿರುಗಿದಾಗ ಒಂದು ದಿನದ ಚಾರಣ ಸಂಪನ್ನವಾಯಿತು.

ಹೋಗುವುದು ಹೇಗೆ?
ಮೈಸೂರಿನಿಂದ ಹೊರಡುವುದಾದರೆ, ಮಳವಳ್ಳಿ, ಹಲಗೂರು, ಕಂಚನಹಳ್ಳಿ ಮಾರ್ಗವಾಗಿ ಸುಮಾರು 80 ಕಿ.ಮೀ ಪ್ರಯಾಣಿಸಬೇಕು. ಬೆಂಗಳೂರಿನಿಂದ ಕನಕಪುರ, ಸಾತನೂರು, ಕಬ್ಬಾಳ, ಕಂಚನಹಳ್ಳಿ ಮೂಲಕವೂ ಹೋಗಬಹುದು. ಖಾಸಗಿ ವಾಹನದಲ್ಲಿ 2-3 ಗಂಟೆ ಆಗುತ್ತದೆ.

ಬೆಟ್ಟದ ತಪ್ಪಲಿನಲ್ಲಿ ಪುಟ್ಟ ಗುಡಿಯೊಂದಿದೆ. ಇಲ್ಲಿಂದ ಕಾಲುದಾರಿಯಲ್ಲಿ ನಡೆಯುತ್ತಾ ಕಚ್ಚಾ ಮೆಟ್ಟಿಲುಗಳನ್ನು ಹತ್ತುತ್ತಾ ಹೋಗಬೇಕು. ಮುಂದೆ ಎಲೆಕ್ಟ್ರಿಕ್ ಕಂಬಗಳ ಸಾಲು ಕಾಣುತ್ತದೆ. ಅದರ ಉದ್ದಕ್ಕೂ ನಡೆದರೆ ಭೀಮನಕಿಂಡಿ ತಲುಪುತ್ತೇವೆ. ಈ ಚಾರಣ ಕಷ್ಟಕರವಾಗಿಲ್ಲ. ವಯಸ್ಸಾದವರೂ, ಮಂಡಿನೋವು ಇತ್ಯಾದಿ ಸಮಸ್ಯೆ ಇದ್ದವರೂ ನಿಧಾನವಾಗಿ ಬೆಟ್ಟ ಹತ್ತಿ ಇಳಿಯಬಹುದು. ಬೆಟ್ಟದ ಸಮೀಪದಲ್ಲಿ ಅಂಗಡಿ ಮುಂಗಟ್ಟುಗಳೇನೂ ಇಲ್ಲ. ಹೀಗಾಗಿ ಚಾರಣಿಗರು ಊಟ,ತಿಂಡಿ ಹಾಗೂ ಕುಡಿಯುವ ನೀರಿಗೆ ತಮ್ಮದೇ ಆದ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.