ADVERTISEMENT

ವಾಲ್‌ಪರೈ ಹಾದಿಯಲ್ಲಿ ಕಂಡ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:24 IST
Last Updated 28 ಸೆಪ್ಟೆಂಬರ್ 2025, 0:24 IST
<div class="paragraphs"><p>ಅಥಿರಪ್ಪಳ್ಳಿಯಿಂದ ವಾಲ್‌ಪರೈಗೆ ಹೋಗುವ ದಾರಿಯಲ್ಲಿ ಕಂಡ ರಮಣೀಯ ದೃಶ್ಯ</p></div>

ಅಥಿರಪ್ಪಳ್ಳಿಯಿಂದ ವಾಲ್‌ಪರೈಗೆ ಹೋಗುವ ದಾರಿಯಲ್ಲಿ ಕಂಡ ರಮಣೀಯ ದೃಶ್ಯ

   

ಬೈಕ್‌ ಸವಾರಿಗೆ ಹೇಳಿಮಾಡಿಸಿದಂತಿದೆ ಅಥಿರಪಳ್ಳಿ–ವಾಲ್‌ಪರೈ ನಡುವಿನ ಪ್ರಯಾಣ. ಜಲಾಶಯಗಳ ಹಿನ್ನೀರು, ಚಹಾ ತೋಟಗಳನ್ನು ಸೀಳಿಕೊಂಡು ಸಾಗುವ ರಸ್ತೆ, ರಮಣೀಯವಾದ ಪ್ರಕೃತಿ ಮನಸ್ಸಿಗೆ ಮುದ ನೀಡುತ್ತವೆ. ವಿಸ್ಮಯಲೋಕವೊಂದಕ್ಕೆ ಹೋದಂತಹ ಅನುಭವವಾಗುತ್ತದೆ.

ಬದುಕಿನ ಆಫ್-ರೋಡ್ (ಕಲ್ಲು-ಮಣ್ಣು ರಸ್ತೆ) ನಲ್ಲಿ ಸಿಲುಕಿಕೊಂಡಿದ್ದ ಗೆಳೆಯನಿಗೆ, ಯಾರೋ ಶನಿವಾರದಂದು ಗುರುವಾಯೂರುವಿನ ಶ್ರೀ ಕೃಷ್ಣನ ದರ್ಶನ ಪಡೆದರೆ, ಬಾಳ ಹಾದಿ ಸುಗಮವಾಗುವುದೆಂದು ಸಲಹೆ ಕೊಟ್ಟರಂತೆ. ಆಗಷ್ಟೇ ಹೊಸ ಆಫ್-ರೋಡ್ ಬೈಕ್ ಖರೀದಿಸಿದ್ದ ಆತ, ಅದರಲ್ಲಿ ಗುರುವಾಯೂರುವಿಗೆ ಹೋಗಿಬರೋಣವೆಂದು ನನ್ನನ್ನು ಕರೆದ. ದೇವರ ಬಗ್ಗೆ ನಂಬಿಕೆ ಇರದ ನಾನು, ಅವನೊಂದಿಗೆ ಹೊರಡಲು ಸಿದ್ಧನಾದೆ. ಕಾರಣವಿಷ್ಟೇ, ಗುರುವಾಯೂರುವಿನ ಜೊತೆಗೆ ಪದವಿ ಪೂರ್ವ ಹಂತದಲ್ಲಿ ನನ್ನ ಕುತೂಹಲ ಕೆರಳಿಸಿದ್ದ ಕೃಪಾಕರ ಸೇನಾನಿ ಹಾಗೂ ಕೆ. ಪುಟ್ಟಸ್ವಾಮಿ ಅವರ, ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಗದ್ಯದಲ್ಲಿ ಬರುವ ವಾಲ್‌ಪರೈ ಅರಣ್ಯದ ಚಿತ್ರಣ ಹಾಗೂ ‘ಅಥಿರಪಳ್ಳಿ-ವಾಲ್‌ಪರೈ’ ನಡುವಿನ ರಸ್ತೆ ಮಾರ್ಗವನ್ನು ಬೈಕ್‌ನಲ್ಲಿ ಸುತ್ತಬೇಕೆಂಬ ಆಸೆ.

ADVERTISEMENT

ಯೋಜನೆಯಂತೆ ಒಂದು ಮುಂಜಾನೆ 5.30ಕ್ಕೆ ಮೈಸೂರನ್ನು ಬಿಟ್ಟು ಬಂಡೀಪುರ-ಮುದುಮಲೈ-ಗೂಡಲೂರು ಮಾರ್ಗವಾಗಿ ಸಾಗಿ ಗುರುವಾಯೂರು ತಲುಪುವಷ್ಟರಲ್ಲಿ ಗಂಟೆ ಹನ್ನೆರಡಾಗಿತ್ತು. ಹಾಗೆಯೇ ಅಲ್ಲಿಂದ ಮೂರು ಕಿಲೋಮೀಟರ್‌ ದೂರದಲ್ಲಿ ದೇವಸ್ಥಾನದ ಆನೆಗಳ ಸಂರಕ್ಷಿತ ಪ್ರದೇಶವಾದ ‘ಆನೆಕೊಟ್ಟ’ಗೆ ಭೇಟಿ ನೀಡಿ ನಮ್ಮ ಯೋಜನೆಯ ಮೊದಲ ಹಂತವನ್ನು ಮುಗಿಸಿದೆವು.

ಪೌರಾಣಿಕವಾಗಿ ಇಲ್ಲಿನ ಕೃಷ್ಣನ ವಿಗ್ರಹವನ್ನು ಮುಳುಗಿಹೋಗಿದ್ದ ದ್ವಾರಕೆಯಿಂದ ದೇವಗುರು ಬೃಹಸ್ಪತಿ ಹಾಗೂ ವಾಯುದೇವರು ತಂದು ಪ್ರತಿಷ್ಠಾಪಿಸಿದರು ಎಂಬ ದಂತಕಥೆಯಿದೆ. ಆದಕಾರಣ ಈ ಸ್ಥಳಕ್ಕೆ ಗುರುವಾಯೂರು ಎಂದು ಹೆಸರು ಬಂದಿದೆ ಎನ್ನಲಾಗುತ್ತದೆ. ಕೇವಲ ಹಿಂದೂ ಭಕ್ತರಿಗೆ ಮಾತ್ರ ಇಲ್ಲಿ ಪ್ರವೇಶವಿದ್ದು, ಕೆಲ ದಿನಗಳ ಹಿಂದೆಯಷ್ಟೇ ಹಿಂದೂಯೇತರ ಮಹಿಳಾ ಯೂಟ್ಯೂಬರ್‌ ಒಬ್ಬರು ದೇಗುಲ ಪ್ರವೇಶಿಸಿದ ಕಾರಣ ದೇವಸ್ಥಾನದ ಆವರಣವನ್ನು ಶುದ್ಧಗೊಳಿಸಿದ ಸುದ್ದಿ ವಿವಿಧ ಮಾಧ್ಯಮಗಳಲ್ಲಿ ಹರಿದಾಡಿತ್ತು.

ವಿಶೇಷವೆಂದರೆ, ಐತಿಹಾಸಿಕ ವೈಕೋಂ ಸತ್ಯಾಗ್ರಹ ನಡೆದು ಇಂದಿಗೆ ಸರಿಯಾಗಿ ನೂರು ವರ್ಷ ಸಂದಿದೆ. ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯದ ವಿರುದ್ಧ ಭಾರತದಲ್ಲಿ ನಡೆದ ಅತಿದೊಡ್ಡ ಹೋರಾಟಗಳಲ್ಲಿ ಒಂದು. ಹಾಗಾಗಿ ಆ ಚಳವಳಿಯ ಮುಂದಾಳುಗಳಾದ ಕೆ.ಕೇಲಪ್ಪನ್, ಮಾಧವನ್, ಪೆರಿಯಾರ್‌, ನಾರಾಯಣಗುರು ಹಾಗೂ ಮಹಾತ್ಮರನ್ನು ಮನದಲ್ಲೇ ನೆನೆದು ನಮ್ಮ ಪ್ರಯಾಣ ಮುಂದುವರೆಸಿದೆವು. ರಾತ್ರಿ ಚಾಲಕುಡಿ ಪಟ್ಟಣದ ಮುಂಚೆಯೇ ಕಾಯ್ದಿರಿಸಿದ ವಸತಿಗೃಹಕ್ಕೆ ಬಂದು ತಂಗಿದೆವು.

ಮರುದಿನ ಮುಂಜಾನೆ ಸುಮಾರು 8.30ರ ಸಮಯ. ಬೈಕನ್ನು ಒಂದೆಡೆ ನಿಲ್ಲಿಸಿ, ಒಂದಷ್ಟು ದೂರ ಕಾಲ್ನಡಿಗೆಯಲ್ಲಿ ನಡೆಯುವಷ್ಟರಲ್ಲೇ ನಮ್ಮ ಕಣ್ಣಿನ ರೆಪ್ಪೆಗಳು ಅರಳಿದವು. ಹಾಲಿನ ಹೊಳೆಯೊಂದು ಕೊಂಚವೂ ಅಳುಕದೆ ಆಳಕ್ಕೆ ಬೀಳುವಂತೆ, ಅಥಿರಪಳ್ಳಿ ಜಲಪಾತದ ದೃಶ್ಯವು ನಮ್ಮನ್ನು ಪುಳಕಿತರನ್ನಾಗಿಸಿತು. ‘ಬಾಹುಬಲಿ’ ಚಿತ್ರದಲ್ಲಿ ವೀಕ್ಷಕರನ್ನು ಬಾಯಿ ತೆರೆದು ನೋಡುವಂತೆ ಮಾಡಿದ್ದ ಬೃಹತ್ ಜಲಪಾತವಿದು. ‘ಚಾಲಕುಡಿ’ ನದಿಯಿಂದಾದ ಈ ಜಲಪಾತವು ಕೇರಳದಲ್ಲೇ ಅತಿದೊಡ್ಡದು. ಕೆಲಕಾಲ ಅದರ ತೀರದಲ್ಲೇ ನಿಂತು ಆ ಸೊಬಗನ್ನು ಸವಿದು ಮುಂದುವರಿದೆವು.

ಮಲಕ್ಕಪ್ಪಾರ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಪ್ರವೇಶ ಪಡೆದು ಕೇರಳವನ್ನು ತಮಿಳುನಾಡಿಗೆ ಸಂಪರ್ಕಿಸುವ ಅಥಿರಪ್ಪಳ್ಳಿ-ವಾಲ್‌ಪರೈ ಮಾರ್ಗವನ್ನು ಹಿಡಿದು ಹೊರಟೆವು. ನಂತರ ಕಂಡಿದ್ದೆಲ್ಲಾ ಅಪ್ರತಿಮ ಚಿತ್ರಕಾರನೊಬ್ಬ ತನ್ನ ಬಿಡುವಿನ ವೇಳೆಯಲ್ಲಿ ನಿರ್ಮಲ ಚಿತ್ತದಿಂದ ಚಿತ್ರಿಸಿದ ವಿಸ್ಮಯ ಲೋಕ ಎಂಬಂತೆ ಕಾಣತೊಡಗಿತ್ತು. ಆನೆಗಳ ದಾಳಿಗೆ ಹೆಸರುವಾಸಿಯಾದ ಈ ಮಾರ್ಗವು, ನಮ್ಮ ಮನದಾಳದ ಅಳುಕನ್ನು ತನ್ನ ಚಿತ್ತಾರದಿಂದ ಮರೆಸುತ್ತಾ ಶೋಲಾಯರ್‌ ಜಲಾಶಯದ ಬಳಿ ಕರೆತಂದು ನಿಲ್ಲಿಸಿತು.

ಸುಮಾರು 216 ಅಡಿಗಳಷ್ಟು ಎತ್ತರವಿರುವ ಈ ಜಲಾಶಯವು, ಸುತ್ತಲೂ ಬೆಟ್ಟಗುಡ್ಡಗಳನ್ನು ಸವರಿ ಬೆಳೆಸಿದ ಚಹಾ ಗಿಡಗಳಿಂದ ಆವರಿಸಲ್ಪಟ್ಟಿದೆ. ಹಾಗೆಯೇ ಅದರ ಹಿನ್ನೀರಿನ ಪಕ್ಕದಲ್ಲೇ ಹಾದುಹೋಗುವ ರಸ್ತೆಯಿಂದ ಸಾಗುವಾಗ ಸಿಗುವ ಅದರ ವಿಹಂಗಮ ನೋಟವನ್ನು ಕಂಗಳಿಂದ ಸೆರೆಹಿಡಿಯುವಷ್ಟರಲ್ಲೇ, ನಮ್ಮ ಹೃದಯದ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಾ ಸಾಗುತ್ತದೆ.

ಹಾಗೆಯೇ ಸುಮಾರು 20 ಕಿಲೋಮೀಟರ್‌ವರೆಗೂ ಚಹಾ ತೋಟಗನ್ನು ಸೀಳಿದ ರಸ್ತೆಯಲ್ಲಿ ಸಾಗಿದ ನಮಗೆ ವಾಲ್‌ಪರೈ ಸಿಕ್ಕಿತು. 19ನೇ ಶತಮಾನದಲ್ಲಿ ಮಾರ್ಷ್ ಕಂಡ ವಾಲ್‌ಪರೈನ ದಟ್ಟಾರಣ್ಯ, 20ನೇ ಶತಮಾನದಲ್ಲಿ ಕೃಪಾಕರ ಸೇನಾನಿಯವರು ಕಂಡಂತ ಚಹಾ ತೋಟ ಹಾಗೂ 21ನೇ ಶತಮಾನದಲ್ಲಿ ನಾವು ಕಾಣುತ್ತಿರುವ ಜನನಿಬಿಡ ಪಟ್ಟಣವಾದ ವಾಲ್‌ಪರೈಯು ತೀರಾ ಬದಲಾಗಿದೆ. ಪ್ರಕೃತಿಯು ಮಾನವನ ಹಸ್ತಕ್ಷೇಪದಿಂದ ತನ್ನ ಅರಣ್ಯ ಸಂಸ್ಕೃತಿಯ ಎಲ್ಲಾ ಲಕ್ಷಣಗಳನ್ನೂ ಕಳಚಿಕೊಂಡು ಸುಸ್ಥಿರತೆಯಿಂದ ಅಸ್ಥಿರತೆ
ಯೆಡೆಗೆ ಸಾಗುತ್ತಿದ್ದ ದೃಶ್ಯ ಕಣ್ಣ ಮುಂದಿತ್ತು.

ಭಾರವಾದ ಹೃದಯದಲ್ಲಿ ಈ ಬದಲಾವಣೆಯನ್ನು ಸಹಿಸಿಕೊಂಡು, ಅಲ್ಲಿಯೇ ಸುತ್ತಮುತ್ತಲಿನ ಕೂಲಂಗಳ್ ನದಿ, ಕರುಮಲೈ ಚರ್ಚ್‌ಗಳಿಗೆ ಭೇಟಿ ನೀಡಿ ಮುಂದೆ ನಡೆದೆವು. ವಾಲ್‌ಪರೈಯಿಂದ ಪೊಲ್ಲಾಚಿ ನಡುವಿನ ಮಾರ್ಗವು 40 ಹೇರ್-ಪಿನ್ ತಿರುವುಗಳಿಂದ ಕೂಡಿದ ಅಂಕುಡೊಂಕಾದ ಹಾದಿ. ಬೈಕ್ ಸವಾರರಿಗೆ ಹೆಚ್ಚು ಮಜಾ ನೀಡುವ ಈ ಹಾದಿಯ ಮಧ್ಯದಲ್ಲಿ ಕಾಣುವ ಆಲಿಯರ್ ಜಲಾಶಯದ ದೃಶ್ಯವು, ನೋಡುಗರ ಮನಸ್ಸನ್ನು ರಂಜಿಸುತ್ತದೆ. ಘಟ್ಟ ಇಳಿದ ನಂತರ ಆಲಿಯರ್ ಜಲಾಶಯಕ್ಕೆ ಭೇಟಿ ನೀಡಿ ಸತ್ಯಮಂಗಳ ಮಾರ್ಗವಾಗಿ ಮೈಸೂರು ಸೇರುವಷ್ಟರಲ್ಲಿ ಗಂಟೆ ರಾತ್ರಿ ಹತ್ತಾಗಿತ್ತು.

ಚಹಾತೋಟಗಳನ್ನು ಸೀಳಿ ಸಾಗುವ ರಸ್ತೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.