ADVERTISEMENT

ವರ್ಲ್ಡ್‌ ಆನ್‌ ವೀಲ್ಸ್‌

ಇದು ಖಡಾಂತರ ಪ್ರವಾಸ‌

ಎಂ.ಮಹೇಶ
Published 27 ಸೆಪ್ಟೆಂಬರ್ 2018, 2:11 IST
Last Updated 27 ಸೆಪ್ಟೆಂಬರ್ 2018, 2:11 IST
ಅ
   

ವಾವ್‌! ಆ ಪಯಣ ನೆನೆದರೆ ರೋಮಾಂಚನವಾಗುತ್ತದೆ. ಬನ್ನಿ ನಿಮ್ಮನ್ನೂ ಆ ರೋಮಾಂಚನದ ಯಾನಕ್ಕೆ ಕರೆದೊಯ್ಯುತ್ತೇವೆ!

ನಾವು ಪ್ರವಾಸಕ್ಕೆ ಹೊರಟವರು ಆರು ಮಂದಿ. ಎಲ್ಲರೂ ಟ್ರೆಕ್ಕಿಂಗ್, ಬೈಕಿಂಗ್‌ನಂತಹ ಸಾಹಸ ಪ್ರವೃತ್ತಿಯವರು. ಕ್ರೀಡಾಸಕ್ತರು. ಹೆಚ್ಚಾಗಿ ಸ್ನೇಹಿತರು. ಬಳಗದ ರಜನಿಕಾಂತ್‌ ಟ್ರಾವೆಲ್‌ ಪ್ರಿಯ. 35ಕ್ಕೂ ಹೆಚ್ಚು ರಾಷ್ಟ್ರಗಳನ್ನೂ ವಿಮಾನದಲ್ಲಿ ಸುತ್ತಾಡಿ, ಸಮೃದ್ಧ ಅನುಭವ ಪಡೆದವರು. ಅವರೇ ಈ ರಸ್ತೆ ಮಾರ್ಗದ ಖಂಡಾಂತರ ಪ್ರವಾಸಕ್ಕೆ ಪ್ರೇರಣೆಯಾಗಿದ್ದು. ಆಗಲೇ ಹುಟ್ಟಿದ್ದು ‘ವರ್ಲ್ಡ್‌ ಆನ್‌ ವೀಲ್ಸ್‌’ ಯಾನ.

ಪ್ರಯಾಣದ ಸಿದ್ಧತೆಗೆ ಸಾಮಾಜಿಕ ಜಾಲತಾಣಗಳನ್ನು ಜಾಲಾಡಿದೆವು. ಇಂಥ ಸಾಹಸಿಗರ ಸಂಪರ್ಕಿಸಿ, ಮಾಹಿತಿ ಕಲೆ ಹಾಕಿದೆವು. ರಸ್ತೆ ಮಾರ್ಗಗಳಲ್ಲಿ ಯಾವುದು ಉತ್ತಮ ‘ರೂಟ್’ ಎಂದು ಗುರುತಿಸಿದೆವು. ವೀಸಾ ಪ್ರಕ್ರಿಯೆ ಪೂರ್ಣಗೊಳ್ಳುವ ಹೊತ್ತಿಗೆ, ನಮಗಿದ್ದ ರಜೆಯ ಸಮಯಾವಕಾಶ ಕಡಿಮೆಯಾಗುತ್ತಾ ಸಾಗಿತ್ತು. ಹೀಗಾಗಿ ಮುಂಬೈನಿಂದ ದುಬೈಗೆ ಹಡಗುಗಳಲ್ಲಿ ಹಾಗೂ ದುಬೈನಿಂದ ಇರಾನ್‌ಗೆ ಫೆರ್‍ರಿ (ನೀರಿನ ಮೇಲೆ ಭಾರಿ ವಾಹನ ಸಾಗಿಸುವ ವಾಹನ) ಮೂಲಕ ಕಾರುಗಳನ್ನು ಕಳಹಿಸಿದೆವು. ಕಾರುಗಳು ತಲುಪುವ ಹೊತ್ತಿಗೆ ನಾವೆಲ್ಲ ದುಬೈಗೆ ಹೋಗಿ, ಅಲ್ಲಿ ಸುತ್ತಾಡಿ, ಇರಾನ್‌ ತಲುಪಿದೆವು.

ADVERTISEMENT

ಜೂನ್ 23, ಇರಾನ್‌ನಿಂದ ನಮ್ಮ ಪ‍್ರವಾಸ ಆರಂಭವಾಯಿತು. ಓಹ್‌, ಇರಾನ್‌ನಲ್ಲಿ ಎಂಥ ಅದ್ಭುತ ರಸ್ತೆಗಳು, ಅಷ್ಟೇ ಶಿಸ್ತುಬದ್ಧ ಸಂಚಾರ ನಿಯಮ ಪಾಲಿಸುವ ಚಾಲಕರು. ನಿಗದಿತ ಪಥದಲ್ಲೇ ಸಾಗುವವರನ್ನು ನೋಡುವುದೇ ಚಂದ. ಅಲ್ಲಿ ಹಗಲಿನಲ್ಲೂ ವಾಹನಗಳ ದೀಪ ಆನ್‌ ಮಾಡಿಕೊಂಡೇ ಸಾಗಬೇಕು (ಹೈಬೀಮ್ ಬಳಸುವಂತಿಲ್ಲ). ಓವರ್‌ಟೇಕ್ ಮಾಡಬೇಕಾದರೆ 20 ಅಡಿ ಅಂತರದಿಂದಲೇ ಡಿಪ್ ಅಂಡ್ ಡಿಮ್ ಮಾಡುತ್ತಾ ಮುಂದಿನ ಚಾಲಕರಿಗೆ ಸೂಚನೆ ಕೊಡುತ್ತಾ ಹೋಗಬೇಕು. ಪ್ರವಾಸ ಕೈಗೊಂಡ ದೇಶಗಳ ಪೈಕಿ ಶೇ 70ರಷ್ಟು ಕಡೆಗಳಲ್ಲಿ ಒಂದೇ ರೀತಿಯ ಸಿಗ್ನಲ್‌ಗಳು, ಸೈನ್‌ ಬೋರ್ಡ್‌ಗಳು.

ದೇಶಕ್ಕೊಂದೇ ಟೋಲ್!

ನಮ್ಮಲ್ಲಿದ್ದಂತೆ ಹಲವು ಟೋಲ್‌ಗಳು, ವಾಹನಗಳ ಉದ್ದುದ್ದ ಸಾಲುಗಳು ಅಲ್ಲಿರಲಿಲ್ಲ. ಇಡೀ ದೇಶಕ್ಕೆ ಒಂದು ಟೋಲ್‌ಗೇಟ್‌ (ಅದರಲ್ಲಿ ಶೇ 90ರಷ್ಟು ಮಾನವರಹಿತ). ಟೋಲ್ ಪ್ರವೇಶಿಸುವಾಗ ಎಂಟ್ರಿ ಬಟನ್ ಒತ್ತಿದರೆ ಟಿಕೆಟ್‌ ಬರುತ್ತಿತ್ತು. ಎಕ್ಸಿಟ್‌ನಲ್ಲಿದ್ದ ಯಂತ್ರದಲ್ಲಿ ಕಾರ್ಡ್‌ ಅಥವಾ ನಗದು ಬಳಸಿ ಶುಲ್ಕ ಪಾವತಿಸಬೇಕು. ಒಂದು ಕಡೆ ನಮ್ಮ ಕಾರ್ಡ್ ಸ್ವೀಕೃತವಾಗಲಿಲ್ಲ. ಆಗ ಅಲ್ಲಿದ್ದ ಫೋನ್‌ ಚಿಹ್ನೆ ಒತ್ತಿದೆವು. ಅಲ್ಲಿಗೇ ಕರೆ ಬಂತು. ಸಂಬಂಧಿಸಿದ ಸಿಬ್ಬಂದಿ ಮಾರ್ಗದರ್ಶನ ಮಾಡಿದರು. ಕಾರ್ಡ್‌ ರೀ ಎಂಟ್ರಿ ಮಾಡಿದ ಮೇಲೆ, ಅಕ್ಸೆಪ್ಟ್‌ ಆಯಿತು.

ನಾವು, ತುರ್ಕ್ಮೇನಿಸ್ತಾನ್ ಗಡಿಯಲ್ಲಿದ್ದೆವು. ಅಲ್ಲಿನ ಕರೆನ್ಸಿ ಖಾಲಿಯಾಯಿತು. ಆತಂಕ ಶುರುವಾಯಿತು. ಅಲ್ಲೇ ಇದ್ದ ಸ್ಥಳೀಯರೊಬ್ಬರು ನಮ್ಮ ಪರದಾಟ ನೋಡಿ, ನಮ್ಮ ಕರೆನ್ಸಿ ಪಡೆದು, ಅಲ್ಲಿನ ಕರೆನ್ಸಿ ವಿನಿಯಮ ಮಾಡಿಕೊಟ್ಟರು.

ನೆರವಾದ ಭಾಷಾಂತರದ ಆ್ಯಪ್‌

ರಸ್ತೆ ಮೂಲಕ ದೇಶದಿಂದ ದೇಶಕ್ಕೆ ಪ್ರವಾಸ ಮಾಡುವ ನಮ್ಮ ಯಾನಕ್ಕೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ತುಂಬಾ ನೆರವಾದವು. ಇರಾನ್‌ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕ ವ್ಯಕ್ತಿಯೊಬ್ಬರು ಇಂಗ್ಲಿಷ್‌ನಿಂದ ಇರಾನಿ ಭಾಷೆಗೆ ಭಾಷಾಂತರವಾಗುವ ‘ಐ ಟ್ರಾನ್ಸ್‌ಲೇಟ್‌’ ಆ್ಯಪ್‌ ಪರಿಚಯಿಸಿದರು. ಆ ಆ್ಯಪ್‌ ಧ್ವನಿ ಗ್ರಹಿಸಿ, ಅಲ್ಲಿನ ಭಾಷೆಯಲ್ಲಿ ಅರ್ಥ ತಿಳಿಸುತ್ತಿತ್ತು. ಈ ಅಪ್ಲಿಕೇಷನ್ ಬಳಸಿ, ಸ್ಥಳೀಯರೊಂದಿಗೆ ಸಂವಹನ ನಡೆಸುತ್ತಿದ್ದೆವು; ಮಾತನಾಡುತ್ತಿದ್ದೆವು. ಪ್ರತಿ ದೇಶದ ಗಡಿ ದಾಟುತ್ತಿದ್ದಂತೆಯೇ ಕಾರ್‌ಗೆ ವಿಮೆ ಪಡೆಯಬೇಕು, ಅಲ್ಲಿನ ಸಿಮ್‌ ಕಾರ್ಡ್‌ ತೆಗೆದುಕೊಳ್ಳಬೇಕು. ಕರೆನ್ಸಿ ವಿನಿಮಯ ಮಾಡಿಕೊಳ್ಳಬೇಕು. ತುರ್ಕಮೆನಿಸ್ತಾನ ಕಸ್ಟಮ್ಸ್‌ ಅಧಿಕಾರಿಗಳೇ ಈ ಕೆಲಸ ಮಾಡಿಕೊಟ್ಟರು.

ಸುದೀರ್ಘ ಏಕಮುಖ ಸಂಚಾರ

ಇರಾನ್‌ನಲ್ಲಿ 2 ಸಾವಿರದಿಂದ 3ಸಾವಿರ ಕಿ.ಮೀ.ನಷ್ಟು ಏಕಮುಖ ಸಂಚಾರದ ವ್ಯವಸ್ಥೆ ಇತ್ತು. ಒಂದು ರಸ್ತೆಗೂ ಇನ್ನೊಂದು ತುಂಬಾ ಅಂತರ. ಹೀಗಾಗಿ ನಮಗೆ ಎದುರಿನಿಂದ ವಾಹನ ಬರುತ್ತದೆ ಎಂಬ ಆತಂಕವೇ ಇರುತ್ತಿರಲಿಲ್ಲ. ಇಂಥ ವ್ಯವಸ್ಥೆಯನ್ನು ನೋಡಿದ್ದು ಇದೇ ಮೊದಲು.

ಅಲ್ಲಿನ ಕ್ಯಾಂಪ್‌ ಸಂಸ್ಕೃತಿ ವಿಶೇಷ. ಅಲ್ಲಿನ ಜನ ಬಿಸಿಲು ಹೆಚ್ಚಿದ್ದಾಗ ಮನೆ ತೊರೆದು, ಕೆರೆ ದಂಡೆಯಲ್ಲಿರುವ (ಟೌನ್‌ಶಿಪ್‌ ರೀತಿ) ಕ್ಯಾಂಪಿಂಗ್‌ ಸೈಟ್‌ನಲ್ಲಿ ಟೆಂಟ್ ಹಾಕುತ್ತಾರೆ. ಕಾರ್‌ಗಳಿಗೆ ಕ್ಯಾರವಾನ್‌ ಸಿಕ್ಕಿಸಿಕೊಂಡು ಹೊರಟು ಬಿಡುತ್ತಾರೆ. ಐರೋಪ್ಯ ರಾಷ್ಟ್ರಗಳಲ್ಲಿ ಇದು ಹೆಚ್ಚಾಗಿ ಕಂಡಿತು. ನಾವೂ ಸ್ವಿಡ್ಜರ್‌ಲೆಂಡ್‌ನಲ್ಲಿ ಕ್ಯಾಂಪ್ ಸೈಟ್‌ನಲ್ಲಿ ತಂಗಿದ್ದೆವು.

ಇರಾನ್‌ನ ಇಸ್ವಾಹಾನ್‌, ಬುಕಾರಾ, ಸ್ವಿಟ್ಜರ್‌ಲೆಂಡ್‌, ವಾರ್ಸಾ(ಪೋಲೆಂಡ್‌) ನಗರಗಳಲ್ಲಿ ಕಾರ್‌ ಬಿಟ್ಟು ಬೈಸಿಕಲ್‌ಗಳಲ್ಲೇ ಸುತ್ತಾಡಿ
ದೆವು. ಕಜಕಿಸ್ತಾನದ ಅಲ್ಮಾಟಿ ನಗರದಲ್ಲಿ 32 ಡಿಗ್ರಿ ಸೆ. ಉಷ್ಣಾಂಶವಿತ್ತು. ಅಷ್ಟು ಬಿಸಿಲಿಗೆ ಬೆದರುವ ಜನ. ಅಲ್ಲಿ ರಸ್ತೆಗಳಿಗೆಲ್ಲಾ ನೀರು ಸಿಂಪಡಿಸುತ್ತಿದ್ದರು. ಕಿರ್ಗಿಸ್ತಾನದಲ್ಲಿ ರೈತರು ಟ್ರಾವೆಲರ್‌ಗಳಿಗಾಗಿಯೇ ಗುಡಿಸಲು ನಿರ್ಮಿಸಿರುತ್ತಾರೆ. ನಾವು ಅದರಲ್ಲೇ ಉಳಿದಿದ್ದೆವು. ತುರ್ಕಮೆನಿಸ್ತಾನ ಗಡಿ ದಾಟಲು ವಿಳಂಬವಾಯಿತು. ಬಾಜಿಗಿರಾಮ್‌ ಗಡಿಯಲ್ಲೇ ರಾತ್ರಿ ಕಳೆದವು.

ಸ್ನೇಹ, ಪ್ರೀತಿಯ ಗಾಳಿ

ಇರಾನ್‌ ಬಗ್ಗೆ ನಮಗಿದ್ದ ಅಭಿಪ್ರಾಯಗಳನ್ನೆಲ್ಲ ಈ ಪ್ರವಾಸ ಬದಲಿಸಿತು. ಜನರೊಟ್ಟಿಗಿನ ಒಡನಾಟದಿಂದ ಭಯ ಕಡಿಮೆಯಾಗುತ್ತಾ ಹೋಯಿತು. ಅಲ್ಲಿನ ಸ್ನೇಹಮಯ ವಾತಾವರಣ ಮನವನ್ನು ಹಗುರವಾಗಿಸಿತು. ಅಲ್ಲಿ ಮಹಿಳೆಯರಿಗಿರುವ ಸ್ವಾತಂತ್ರ್ಯ, ಸ್ವಚ್ಛತೆಗೆ ನೀಡಿದ ಆದ್ಯತೆ, ನಮ್ಮನ್ನು ಬೆರಗಾಗಿಸಿತು.

ಈ ನಡುವೆ ಒಂದು ವಿಚಿತ್ರ ಕಾಣಿಸಿತು. ತುರ್ಕ್ಮೇನಿಸ್ತಾನದಲ್ಲಿನ ಒಂದು ಕಡೆ ಬೆಂಕಿ ಹೊತ್ತಿ ಉರಿಯುತ್ತಿತ್ತು. ಸುತ್ತ ಪ್ರವಾಸಿಗರು ನಿಂತು ನೋಡುತ್ತಿದ್ದರು. ಅದು ‘ದರ್ವಾಜಾ’ ಗ್ಯಾಸ್‌ ಕ್ರಿಯೇಟರ್ಸ್‌ ಎಂಬ ಸ್ಥಳ. 40 ವರ್ಷಗಳ ಹಿಂದೆ ಬಾವಿ ತೋಡಿದಾಗ, ಭೂಮಿ ಕುಸಿದಿತ್ತಂತೆ. ಅಲ್ಲಿ ಈಗಲೂ ಅನಿಲ ಸೋರುತ್ತಿದೆ. ಅಗ್ನಿ ಜ್ವಾಲೆಯಾಗಿ ಉರಿಯುತ್ತಿದೆ. ಇದು ಮಾನವನ ದುರಾಸೆಯಿಂದಾದ ಅನಾಹುತಕ್ಕೆ ಹಿಡಿದ ಕನ್ನಡಿ. ಎಂಥ ವಿಚಿತ್ರ ಅನ್ನಿಸಿತು. ಆಗ ಆ ಸ್ಥಳದಲ್ಲಿದ್ದ ಪ್ರವಾಸಿಗರೊಂದಿಗೆ ನಾವು ಒಂದಷ್ಟು ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟೆವು. ನಿರಂಜನ ಪಾಟೀಲ ಈ ಕುರಿತು ಹೆಚ್ಚಿನ ಆಸಕ್ತಿ ವಹಿಸಿದರು.

ಉಜ್ಬೇಕಿಸ್ತಾನದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಹಲವು ಸ್ಥಳಗಳನ್ನು ಪರಿಚಯಿಸಿದರು. ಸಮರ್‌ಖಂಡ್‌ನಲ್ಲಿ ಸಿಕ್ಕ ಐವರು ಪಾಕ್‌ ಪ್ರಜೆಗಳು. ತುಂಬಾ ಆತ್ಮೀಯವಾಗಿ ಮಾತನಾಡಿದರು. ಭಾರತಕ್ಕೆ ಭೇಟಿ ಕೊಡುವ ಆಸಕ್ತಿ ವ್ಯಕ್ತಪಡಿಸಿದರು!

ಭದ್ರಾವತಿ ಹುಡುಗರು ಸಿಕ್ಕರು!

ಲಿಥುವೇನಿಯಾದಲ್ಲಿ ಪ್ರವಾಸ ಮಾಡುತ್ತಿದ್ದಾಗ, ಅಲ್ಲಿ ವಿದ್ಯಾಭ್ಯಾಸಕ್ಕೆಂದು ತೆರಳಿರುವ ಭಾರತದ ಕೆಲವು ವಿದ್ಯಾರ್ಥಿಗಳು ಸಿಕ್ಕರು. ಅದರಲ್ಲಿ ನಮ್ಮ ರಾಜ್ಯದ ಭದ್ರಾವತಿಯ ಹುಡುಗರೂ ಇದ್ದರು. ಕನ್ನಡದ ಹುಡುಗರನ್ನು ಕಂಡು ಖುಷಿಯಾಯಿತು. ಅವರೇ ನಮ್ಮ ಮುಂದಿನ ಪಯಣಕ್ಕೆ ಒಂದಷ್ಟು ಮಾರ್ಗದರ್ಶನ ನೀಡಿದರು. ಈ ವೇಳೆ ತಾಷ್ಕೆಂಟ್‌ನಲ್ಲಿರುವ ಲಾಲ್‌ ಬಹದ್ದೂರ್‌ ಶಾಸ್ತ್ರಿ ಸ್ಮಾರಕ, ಜಿನಿವಾದಲ್ಲಿರುವ ಗಾಂಧೀಜಿ ಪ್ರತಿಮೆ ತುಂಬಾ ನೆನಪಿನಲ್ಲಿ ಉಳಿಯುವ ಸ್ಥಳಗಳು.

ಮರೆಯಲಾಗದ ನೆನಪುಗಳು..

ದೇಶಗಳು ಬೇರೆ ಬೇರೆಯಾದರೂ ಮಾನವೀಯತೆ ಗಂಗೆ ಎಲ್ಲೆಡೆಯೂ ಹರಿಯುತ್ತಿದೆ. ಇದಕ್ಕೊಂದು ಉದಾಹರಣೆ ಮಾಸ್ಕೋದಲ್ಲಿ ನಡೆದ ಘಟನೆ. ನಾವು ಹೋಟೆಲ್‌ನಲ್ಲಿ ಪಾಸ್‌ಪೋರ್ಟ್‌ ಹಾಗೂ ಹಣವಿದ್ದ ಕಿಟ್‌ ಬಿಟ್ಟುಬಂದಿದ್ದೆವು. ಅದನ್ನು ಮರಳಿ ಪಡೆಯಲು ನೆರವಾಗಿದ್ದು ತಾಂಜೇನಿಯಾದ ವಿದ್ಯಾರ್ಥಿ. ನಮಗೆ ಟ್ಯಾಕ್ಸಿ ಮಾಡಿಕೊಟ್ಟು ನಮ್ಮೊಂದಿಗೇ ಇಡೀ ರಾತ್ರಿ ಇದ್ದು, ನೆರವಾದ ಆ ಹುಡುನನ್ನು ಬಿಟ್ಟು ಬರುವಾಗ ಮನಸ್ಸು ತುಂಬಿ ಬಂತು. ಅಲ್ಲಿ ಹೋಟೆಲ್‌ನವರು ನಮ್ಮ ಎಲ್ಲ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟಿದ್ದರು.

ಇರಾನ್‌ನಿಂದ ಆರಂಭವಾದ ನಮ್ಮ ಖಂಡಾಂತರ ಪ್ರವಾಸ ಫ್ರಾನ್ಸ್‌ನಲ್ಲಿ ಅಂತಿಮ ಗೊಂಡಿತು. ನಮ್ಮ ಪ್ರವಾಸಕ್ಕೆ ಈ ಹಾದಿಯುದ್ದಕ್ಕೂ ಮಾರ್ಗದರ್ಶನ ನೀಡಿದ್ದು ಸ್ಮಾರ್ಟ್‌ ಫೋನ್‌ಗಳು. ಥ್ಯಾಂಕ್ಸ್‌ ಟು ಟೆಕ್ನಾಲಜಿ! ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡರೆ ಅದಕ್ಕಿಂತ ಒಳ್ಳೆಯ ಮಾರ್ಗದರ್ಶಕ ಬೇಕಾಗಿಲ್ಲವೇನೋ!

ಅಂಕಿ–ಅಂಶ

6 - ಪೂರ್ವ ಸಿದ್ಧತೆಗೆ ತೆಗೆದುಕೊಂಡ ತಿಂಗಳು

6‌‌ - ತಂಡದಲ್ಲಿದ್ದ ಸದಸ್ಯರು

2 - ಬಳಸಿದ ವಾಹನಗಳು

2‌‌ - ಸುತ್ತಿದ ಖಂಡಗಳು

22 - ಸಂಚರಿಸಿದ ದೇಶಗಳು

45 - ಸಂದರ್ಶಿಸಿದ ಪ್ರಮುಖ ನಗರಗಳು

15,400 ಕಿ.ಮೀ. - ಒಟ್ಟು ಕ್ರಮಿಸಿದ ದೂರ

58 - ಪ್ರವಾಸದ ದಿನಗಳು

ನೀವೂ ಹೋಗ್ತೀರಾ? ಇದನ್ನು ಗಮನಿಸಿ

* ಸಾಹಸ ಮನೋಭಾವ, ಧೈರ್ಯ ಬೇಕು. ಪೂರ್ವ ಸಿದ್ಧತೆ ತುಂಬಾ ಅಗತ್ಯ.

* ಉತ್ತಮ ಸ್ಥಿತಿಯಲ್ಲಿರುವ ಸ್ವಂತ ವಾಹನ, ಒರಿಜಿನಲ್ ದಾಖಲೆ ಪತ್ರಗಳು ಜೊತೆಗಿರಬೇಕು.

* ಅಂತರರಾಷ್ಟ್ರೀಯ ವಾಹನ ಚಾಲನಾ ಪರವಾನಗಿ.

* ವಾಹನ ಸಂಚಾರಕ್ಕೆ ಅನುಮತಿ.

* ಮಾರ್ಗ ಅಂತಿಮಪಡಿಸಿಕೊಳ್ಳಬೇಕು.

* ಅಗತ್ಯ ವೀಸಾಗಳು ಕಡ್ಡಾಯ.

* ಔಷಧಿಗಳು, ಪ್ರೊಟೀನ್‌ ಬಾರ್, ತುರ್ತು ಸಂದರ್ಭಕ್ಕಾಗಿ (ರೆಡಿ ಟು ಈಟ್) ಆಹಾರ, ಅಡುಗೆಗೆ ಬೇಕಾದ ಸಾಮಗ್ರಿಗಳು.

* ಸ್ಮಾರ್ಟ್‌ ಫೋನ್‌ನಂತಹ ಗ್ಯಾಜೆಟ್‌ಗಳು. ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ ಆ್ಯಪ್

* ಡಾಲರ್ಸ್‌ ಅಥವಾ ಯುರೊ. 2–3 ರೀತಿಯ ಮಲ್ಟಿಕರೆನ್ಸಿ ಕ್ರೆಡಿಟ್‌ ಕಾರ್ಡ್‌ಗಳಿರಬೇಕು.

* ಟೆಂಟ್‌ಗೆ ಬೇಕಾಗುವ ಸಾಮಗ್ರಿಗಳು.

* ಆರೋಗ್ಯದ ಬಗ್ಗೆ ಕಾಳಜಿ.

ಸೆ. 30ರಿಂದ ಫೋಟೊ ಪ್ರದರ್ಶನ

ಪ್ರವಾಸದ ವೇಳೆ ತೆಗೆದ ಅಪರೂಪದ ಫೋಟೊಗಳ ಪ್ರದರ್ಶನವನ್ನು ಇದೇ ಸೆ.30 ಹಾಗೂ ಅಕ್ಟೋಬರ್ 1, 2ರಂದು ಬೆಳಗಾವಿಯ ಗೋವಾವೇಸ್‌ ಸಮೀಪದ ಮಹಾವೀರ ಭವನ ಕಲಾ ಗ್ಯಾಲರಿಯಲ್ಲಿ ಆಯೋಜಿಸಲಿದ್ದೇವೆ. ನೀವೆಲ್ಲಾ ನೋಡಲು ಬರುತ್ತೀರಲ್ಲವೇ? ಸಂ‍ಪರ್ಕಕ್ಕೆ 99005 05022.

ವಾವ್‌ (ವರ್ಲ್ಡ್‌ ಆನ್‌ ವ್ಹೀಲ್ಸ್‌) ಸದಸ್ಯರು

ಉದ್ಯಮಿಗಳಾದ ರಜನಿಕಾಂತ್ ಹಾಗೂ ಎಸ್. ರಾಜನ್‌ (ಬೆಂಗಳೂರು), ಸಹಾಯಕ ಔಷಧ ನಿಯಂತ್ರಕ ರಘುರಾಂ ನಿಡವಂದ (ಬೆಳಗಾವಿ) , ಪೊಲೀಸ್‌ ಅಧಿಕಾರಿಗಳಾದ ಚನ್ನಬಸವಣ್ಣ ಲಂಗೋಟಿ, ನಿರಂಜನ್‌ ಪಾಟೀಲ (ಬೆಳಗಾವಿ), ಮುರುಗೇಶ ಚನ್ನಣ್ಣನವರ (ಧಾರವಾಡ).‌

ವಿದೇಶಗಳಲ್ಲಿ ಕಾರು ಬಳಕೆ– ಅನುಮತಿ ಹೇಗೆ?

ವಿಶ್ವಸಂಸ್ಥೆಯಲ್ಲಿ ನೋಂದಾಯಿತ ದೇಶಗಳಲ್ಲಿ ನಮ್ಮ ವಾಹನಗಳನ್ನು ಬಳಸಲು ‘ಕಾರ್ನೆ–ಡಿ–ಪ್ಯಾಸೇಜ್’(ಪಾಸ್‌ಪೋರ್ಟ್‌ ಫಾರ್‌ ದಿ ವೆಹಿಕಲ್) ಅನುಮತಿ ಪಡೆಯಬೇಕು. ಎಎಐ (ಆಟೊಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ) ಈ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಇದರ ಕಚೇರಿಗಳು ಚೆನ್ನೈ ಹಾಗೂ ಮುಂಬೈನಲ್ಲಿ ಮಾತ್ರ ಇವೆ. ನಾವು ಮುಂಬೈನಲ್ಲಿ ಪಡೆದೆವು.

ವಾಹನದ ಇನ್‌ವಾಯ್ಸ್‌ ಮೌಲ್ಯದ 3 ಪಟ್ಟು ಹಣವನ್ನು ಬ್ಯಾಂಕ್‌ ಗ್ಯಾರೆಂಟಿ ಕೊಡಬೇಕು.‘ಅಲ್ಲಿ ವಾಹನ ಮಾರುವುದಿಲ್ಲ’ ಎನ್ನುವ ಖಾತ್ರಿಗಾಗಿ ಹೀಗೆ ಹಣ ಕಟ್ಟಿಸಿಕೊಳ್ಳಲಾಗುತ್ತದೆ. ಇದಕ್ಕೆ ಒಂದು ವರ್ಷ ವಾಲಿಡಿಟಿ ಇರುತ್ತದೆ. ಎರಡೂ ವಾಹನಗಳಿಗೆ ₹ 1.60 ಲಕ್ಷ ಶುಲ್ಕ ತುಂಬಿದೆವು. ಬ್ಯಾಂಕ್‌ ಗ್ಯಾರೆಂಟಿಯಷ್ಟೇ ರೀಫಂಡ್‌ ಆಗುತ್ತದೆ. ಶುಲ್ಕ ವಾಪಸ್‌ ಬರುವುದಿಲ್ಲ.

ಐರೋಪ್ಯ ಒಕ್ಕೂಟದ ರಾಷ್ಟ್ರದಲ್ಲಿ ಓಡಾಡಲು ‘ಶೆಂಗಾನ್ ವೀಸಾ (schengen visa)’ ಬೇಕು. ಅದು ಬೆಂಗಳೂರಲ್ಲೇ ಸಿಗುತ್ತದೆ. ಇರಾನ್‌ ವೀಸಾಕ್ಕೆ ಹೈದರಾಬಾದ್‌, ರಷ್ಯಾ ವೀಸಾಕ್ಕೆ ಚೆನ್ನೈ ಹಾಗೂ ತುರ್ಕ್ಮೇನಿಸ್ತಾನ್‌, ಉಜ್ಬೇಕಿಸ್ತಾನ್‌, ಕಜಕಿಸ್ತಾನ್‌ ವೀಸಾ ನವದೆಹಲಿಯಲ್ಲಿ ಸಿಗುತ್ತದೆ. ನವದೆಹಲಿಗೆ ಮಾತ್ರ ಎಲ್ಲರೂ ಸಂದರ್ಶನಕ್ಕೆ ಹೋಗಿದ್ದೆವು. ಉಳಿದ ಕಡೆಗೆ ಅಫಿಡವಿಟ್‌ ಸಹಿತ ಪ್ರತಿನಿಧಿ ತೆರಳಿದರೆ ಸಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.