ADVERTISEMENT

ಅಂಜನಾಳ ರಿಯಾಲಿಟಿ ಶುಕ್ರದೆಸೆ

ಸುರೇಖಾ ಹೆಗಡೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಭರವಸೆ ಹೊಮ್ಮಿಸುವ ಕಂಗಳು, ಪ್ರಭುತ್ವ ಮೆರೆಯುವ ಗುಂಡುಮುಖ, ಕೇಳುತ್ತಾ ಹಾಗೆಯೇ ಮೈಮರೆಸಬಲ್ಲ ಕಂಠಸಿರಿ. ಕೇವಲ ಹತ್ತು ವರ್ಷದ ಅಂಜನಾ ಪದ್ಮನಾಭನ್ ಮೊದಲ ನೋಟಕ್ಕೆ ದಕ್ಕುವುದು ಹೀಗೆ. ಆದರೆ ಈ ಪುಟ್ಟ ವಯಸ್ಸಿಗೆ ಅವಳು ನಗರ ಹೆಮ್ಮೆ ಪಡುವ ಸಾಧನೆ ಮಾಡಿದ್ದಾಳೆ. `ಇಂಡಿಯನ್ ಐಡಲ್' ರಿಯಾಲಿಟಿ ಶೋನಲ್ಲಿ `ಟಾಪ್ 10' ಸ್ಪರ್ಧಿಗಳಲ್ಲಿ ಒಬ್ಬಳಾಗಿ ಗುರುತಿಸಿಕೊಂಡಿರುವ ಅಂಜನಾ ಸಂಗೀತ ಪಯಣದ ಸಿಹಿ ಅನುಭವವನ್ನು `ಮೆಟ್ರೊ' ಮುಂದೆ ತೆರೆದಿಟ್ಟಳು.

ಹಾಡುವ ಕಲೆ, ಶ್ರುತಿ ಮಾಧುರ್ಯದಿಂದ ತೀರ್ಪುಗಾರರಾದ ವಿಶಾಲ್ ಶೇಖರ್ ಹಾಗೂ ಶ್ರೇಯಾ ಘೋಷಾಲ್ ಅವರ ಮನಗೆದ್ದ ಈ ಪೋರಿ 80 ಸ್ಪರ್ಧಿಗಳಲ್ಲಿ ಗುರುತಿಸಿಕೊಂಡವಳು.

ಐದನೇ ತರಗತಿಯಲ್ಲಿ ಓದುತ್ತಿರುವ ಅವಳು 5ನೇ ವಯಸ್ಸಿನಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿದಳು. ಮೊದಲಿಗೆ ಅಖಿಲಾ ಅವರಿಂದ ಸಂಗೀತ ಕಲಿತ ಅವಳು ಈಗ ಪಂಡಿತ್ ಹೆಗಡೆ ಅವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತದಿಂದ ಕಲಿಕೆ ಪ್ರಾರಂಭಿಸಿ ಇದೀಗ ಹಿಂದೂಸ್ತಾನಿ ಕಲಿಕೆಯನ್ನೂ ಪ್ರಾರಂಭಿಸಿರುವವಳಿಗೆ ಅಪ್ಪನೇ ಸ್ಫೂರ್ತಿ. `ಅಪ್ಪ ವೃತ್ತಿಪರ ಗಾಯಕ ಅಲ್ಲದಿದ್ದರೂ ಅವರ ದನಿ ನನಗೆ ಇಷ್ಟ. ಹಾಡುವ ವೈಖರಿಯನ್ನು ಕಲಿತದ್ದು ಅವರಿಂದಲೇ. ತಮಿಳುನಾಡಿನವರಾದ ನಮಗೆ ಈಗ ಬೆಂಗಳೂರು ಸೂರು. ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದೇನೆ. ಇಂಡಿಯನ್ ಐಡಲ್ ಸ್ಪರ್ಧೆಗಾಗಿ ಮೂರು ತಿಂಗಳು ರಜೆ ನೀಡಿ ಶಾಲೆಯವರು ಸಹಕರಿಸಿದರು. ಸಮಯ ಸಿಕ್ಕಾಗಲೆಲ್ಲಾ ಓದಿಕೊಳ್ಳುತ್ತಿದ್ದೆ' ಎಂದು  ನೆನೆಸಿಕೊಳ್ಳುತ್ತಾಳೆ ಅಂಜನಾ.

ಶಿಶುವಾಗಿದ್ದಾಗಲೇ ಪುಟಾಣಿ ಅಂಜನಾ ಮಲಯಾಳಿ ಹಾಡುಗಳಿಗೆ ತಲೆದೂಗುತ್ತಿದ್ದಳು. ಹಾಡು ಕಿವಿಮೇಲೆ ಬಿದ್ದೊಡನೆ ಅಳು ನಿಲ್ಲಿಸಿ ಕೇಕೆ ಹಾಕಿ ಖುಷಿ ತೋರ್ಪಡಿಸುತ್ತಿದ್ದಳು. ಅಪ್ಪ-ಅಮ್ಮನಿಗೂ ಮಗಳ ಅಳು ನಿಲ್ಲಿಸುವ ಸುಲಭ ಮಾರ್ಗ ಸಂಗೀತವಾಯಿತು. ಕ್ರಮೇಣ ತೊದಲು ನುಡಿಯಲ್ಲೇ ಹಾಡುಗಳನ್ನು ಗುನುಗಲು ಪ್ರಾರಂಭಿಸಿದ್ದನ್ನು ಕಂಡು ಸಂಗೀತ ತರಬೇತಿ ಕೊಡಿಸಲು ನಿರ್ಧರಿಸಿದರು. ಅಲ್ಲಿಂದ ಅಂಜನಾ ಯಶಸ್ವಿ ಪಯಣ ಪ್ರಾರಂಭವಾಯಿತು. ತಮಿಳು ರಿಯಾಲಿಟಿ ಶೋ `ಏರಟೆಲ್ ಸೂಪರ್ ಸಿಂಗರ್ ಜೂನಿಯರ್ 3'ರಲ್ಲಿ ಸೆಮಿಫೈನಲ್ಸ್‌ವರೆಗೆ ಸಂಗೀತ ಸುಧೆ ಹರಿಸಿದ ಅಂಜನಾ ತುಸು ಎಡವಿದಳು. ಆದರೆ ಆಕೆಯ ಛಲ ಮತ್ತೆ `ಇಂಡಿಯನ್ ಐಡಲ್'ಗೆ ಕರೆದೊಯ್ದಿತು. ಅಲ್ಲೂ ತನ್ನ ಛಾಪು ಮೂಡಿಸಿರುವ ಬಾಲೆಗೆ ಪ್ರಖ್ಯಾತ ಹಿನ್ನೆಲೆ ಗಾಯಕಿ ಆಗುವ ಬಯಕೆ.

ಗಾಯನವನ್ನು ಹೊರತುಪಡಿಸಿ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಟೆನ್ನಿಸ್, ಕ್ರಿಕೆಟ್ ಈಕೆಗೆ ಅಚ್ಚುಮೆಚ್ಚು. ಈಜುಗಾರಿಕೆಯಲ್ಲೂ ಆಸಕ್ತಿ. ಅಮೆರಿಕದ ಹಾಂಕಾಂಗ್‌ನಲ್ಲಿರುವ ಡಿಸ್ನಿಲ್ಯಾಂಡ್‌ಗೆ ಹೋಗಬೇಕು ಎಂದು ಆಸೆಯ ಬುತ್ತಿ ಬಿಚ್ಚುವ ಇವಳಿಗೆ ಅಪ್ಪ-ಅಮ್ಮನನ್ನೂ ಅಲ್ಲಿಗೆ ಕರೆದೊಯ್ಯಬೇಕೆಂಬ ಬಯಕೆ.

ತಮಿಳು ಸಿನಿಮಾಗಳಲ್ಲಿ ಮೂರು ಹಾಡನ್ನು ಈಕೆ ಹಾಡಿದ್ದು, ಅದರಲ್ಲಿ ಒಂದು ಗುಂಪಿನಲ್ಲಿ, ಹಲವರ ನಡುವೆ ಹಾಡಿದ್ದು. ಇನ್ನೆರಡನ್ನು ತಾನೇ ಹಾಡಿದ್ದೇನೆ ಎಂದು ವಿಶ್ವಾಸದಿಂದ ಕಣ್ಣರಳಿಸುತ್ತಾಳೆ ಸಿರಿಕಂಠದ ಹುಡುಗಿ.

ಇಷ್ಟವಾಗುವ ಪಟ್ಟಿಯಲ್ಲಿ ಹೇಳಿ ಮುಗಿಸಲಾರದಷ್ಟು ಹಾಡುಗಳಿವೆಯಂತೆ. ಅವುಗಳಲ್ಲಿ `ಅಜಿ ರೂಟ್ ಕರ್...' ಎಂಬ ಹಳೆ ಗೀತೆ ಹಾಗೂ ರಾಹತ್ ಫತೇ ಅಲಿ ಖಾನ್ ಅವರ ಗಾಯನದ ಹೀರೊಯಿನ್ ಸಿನಿಮಾದ `ಸಯ್ಯಾ' ಈಕೆಗೆ ಇಷ್ಟವಾದ ಹಾಡುಗಳು.

`ಮೊದಲು ಶಾಂತವಾಗಿ, ಹಾಡನ್ನು ಸಂಪೂರ್ಣವಾಗಿ ಕೇಳಿ ಅದರಲ್ಲಿನ ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ. ಹಾಡಿನ ಧಾಟಿ ಬಯಸುವ ಭಾವ ಅರಿಯಲು ಪ್ರಯತಿಸುತ್ತಿದ್ದುದನ್ನು ಬಿಟ್ಟರೆ ಉಳಿದೆಲ್ಲಾ ಪಾಠ ಅಪ್ಪನದ್ದು. ನಾನು ಹೇಗೆ ಹಾಡಬೇಕು ಎಂಬ ಪ್ರತಿ ಹೆಜ್ಜೆಯನ್ನು ಗಮನಿಸಿ ತಿದ್ದುತ್ತಿದ್ದರು. ಮೇರು ಗಾಯಕರ ಮಾರ್ಗದರ್ಶನದ ಮಾತುಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ' ಎಂದು ತನ್ನ ಪಯಣದ ಹಾದಿ ನೆನೆಯುತ್ತಾ ಹಿಗ್ಗುತ್ತಾಳೆ ಅಂಜನಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.