ADVERTISEMENT

ಅಕ್ಷರಶಃ ಚಿಕಿತ್ಸಕ ಸಂಗೀತ!

ನಾದದ ಬೆನ್ನೇರಿ...

ಉಮಾ ಅನಂತ್
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST
ವಿದುಷಿ ಡಾ. ಮೀನಾಕ್ಷಿ ರವಿ
ವಿದುಷಿ ಡಾ. ಮೀನಾಕ್ಷಿ ರವಿ   

`ಮಾನವ ಜನ್ಮ ದೊಡ್ಡದು; ಅದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ...' ಈ ಗೀತೆ ಆಕೆಯ ಕಂಠದಲ್ಲಿ ಹೊಮ್ಮಿದ ರೀತಿ ಅಪೂರ್ವವಾಗಿತ್ತು. ದುಂಡು ಮುಖ, ಶ್ವೇತವರ್ಣದ ಹುಡುಗಿ. ಆಕೆಯ ಮುಖ ನೋಡಿದಾಗ, ಹಾಡು ಕೇಳಿದಾಗ ಅಬ್ಬಬ್ಬಾ.. ಎಂಥ ಕಲಾವಿದೆ ಈಕೆ ಎಂದು ಒಂದು ಕ್ಷಣ ಅನಿಸಿತು.

ಅಂದು ಆ ಸಂಗೀತ ತರಗತಿಯಲ್ಲಿದ್ದ ಕೆಲವೇ ಕೆಲವು ವಿದ್ಯಾರ್ಥಿನಿಯರು ತಲಾ ಒಂದೊಂದು ಹಾಡು ಹಾಡಿದರು. ಹಾಡು ಮುಗಿಯುತ್ತಿದ್ದಂತೆ ಸಂಗೀತ ಶಿಕ್ಷಕಿ, ವಿದುಷಿ ಡಾ. ಮೀನಾಕ್ಷಿ ರವಿ ಮಾತು ಶುರು ಮಾಡಿದರು. “ಇಷ್ಟೂ ಶಿಷ್ಯೆಯರಲ್ಲಿ ಒಬ್ಬೊಬ್ಬರಿಗೆ ಒಂದೊಂದು ತರಹ ಸಮಸ್ಯೆ ಇದೆ.

ಹೀಗಾಗಿ `ಸ್ಪೆಷಲ್ ಮಕ್ಕಳಿಗೆ' ಎಂದೇ ಸಂಗೀತ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿಗೆ ಬರುವ ಮೊದಲು ಇವರಿಗೆ ಸ್ಮರಣ ಶಕ್ತಿ ಕಡಿಮೆ ಇದ್ದು, ಕಲಿಸಿದ ಹಾಡನ್ನು ಮತ್ತೆ ಹೇಳಲು ತಡವರಿಸುತ್ತಿದ್ದರು. ಈಗ ಇದು ಬಹಳಷ್ಟು ಪರಿಣಾಮಕಾರಿಯಾದ ಕಾರಣ ಎಲ್ಲರೂ ಸ್ವತಂತ್ರವಾಗಿ ಹಾಡುವಷ್ಟರ ಮಟ್ಟಿಗೆ ತಯಾರಾಗಿದ್ದಾರೆ.

ADVERTISEMENT

ಮೇಲ್ನೋಟಕ್ಕೆ ಇವರಿಗೆಲ್ಲ ಮಾನಸಿಕ ಸಮಸ್ಯೆ ಇದೆ ಎಂದೇ ಗೊತ್ತಾಗುವುದಿಲ್ಲ' ಎಂದಾಗ ನಿಜಕ್ಕೂ ಅಚ್ಚರಿಯಾಯಿತು. ಏಕೆಂದರೆ ಇಷ್ಟೂ ಮಕ್ಕಳು ಸಾಮಾನ್ಯರಂತೆಯೇ ಕಂಡವರು. `ಮಾನವ ಜನ್ಮ ದೊಡ್ಡದು..' ಹಾಡಿದ ಯುವತಿಯ ಹೆಸರು ಸೌಮ್ಯ. ಸೌಮ್ಯ ಮುಖದ ಆಕೆ ಖಿನ್ನತೆಯಿಂದ ಬಳಲುತ್ತಿದ್ದಾಳೆ.

ಈಗ ಸಂಗೀತದಿಂದ ಸಾಕಷ್ಟು ಚೇತರಿಸಿಕೊಂಡಿದ್ದಾಳೆ.ಬನಶಂಕರಿಯ ಕತ್ರಿಗುಪ್ಪೆಯಲ್ಲಿರುವ `ಮೀರಾ ಸಂಗೀತ ಸಂಶೋಧನಾ ಸಂಸ್ಥೆ' ವಿಭಿನ್ನವಾದದ್ದು. ಇಲ್ಲಿ ಸಂಗೀತ ಕಲಿಯುವ 60 ಮಕ್ಕಳು ಕರ್ನಾಟಕಿ ಶಾಸ್ತ್ರೀಯ ಸಂಗೀತ ಕಲಿಯುತ್ತಾರೆ. ಸಂಗೀತ ಚಿಕಿತ್ಸೆ ವಿಭಾಗದಲ್ಲಿ 12 ಯುವತಿಯರು ಥೆರಪಿಗೆ ಒಳಗಾಗುತ್ತಿದ್ದಾರೆ. ಈ 12 ಶಿಷ್ಯೆಯರಿಗೆ ಒಂದಲ್ಲ ಒಂದು ಸಮಸ್ಯೆ ಇದೆ.

ಈ ಸಂಗೀತ ಸಂಸ್ಥೆಗೆ ಇದೀಗ 30 ವರ್ಷ ತುಂಬಿದೆ. ಇಲ್ಲಿ ಕರ್ನಾಟಕಿ ಸಂಗೀತದ ಜತೆಗೆ ಭಕ್ತಿಗೀತೆಗಳನ್ನೂ ಹೇಳಿಕೊಡಲಾಗುತ್ತದೆ. ಮೊದಮೊದಲು ಬರೀ ಸಂಗೀತವನ್ನು ಮಾತ್ರ ಕಲಿಸಲಾಗುತ್ತಿತ್ತು. ಕಳೆದ ಐದು ವರ್ಷಗಳಿಂದ `ವಿಶೇಷ ವಿದ್ಯಾರ್ಥಿ'ಗಳಿಗೆ ಇಲ್ಲಿ ಸಂಗೀತ ಚಿಕಿತ್ಸೆಯನ್ನೂ ನೀಡಲಾಗುತ್ತದೆ.

`ಸಂಗೀತ ಮೂರು ದೃಷ್ಟಿಕೋನದಿಂದ ಬಹಳ ಉಪಯುಕ್ತವಾಗುತ್ತದೆ. ಮಾನವೀಯ ಮೌಲ್ಯ ಹೆಚ್ಚಿಸಲು, ಮಾನಸಿಕ ಆರೋಗ್ಯ ಕಾಪಾಡಲು ಮತ್ತು ಸಂಗೀತದಿಂದ ಅಧ್ಯಾತ್ಮ ಚಿಂತನೆಗೆ ಅನುಕೂಲವಾಗುತ್ತದೆ' ಎಂದು ವಿವರಿಸುತ್ತಾರೆ ಸಂಗೀತ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ವಿದುಷಿ ಮೀನಾಕ್ಷಿ.

ಸುಮಾರು ನಾಲ್ಕರಿಂದ ಐವತ್ತು ವರ್ಷದವರೆಗಿನ ಶಿಷ್ಯಂದಿರು ಇಲ್ಲಿ ಸಂಗೀತ ಕಲಿಯುತ್ತಾರೆ. ಸಂಗೀತದ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿಶೇಷ ಸಂಗೀತ ತರಬೇತಿ ಇಲ್ಲಿ ಲಭ್ಯ. `ವಿಶೇಷ ಮಕ್ಕಳಿಗೆ ಸೂಕ್ತವಾದ ಸಂಗೀತ ಚಿಕಿತ್ಸೆಯೂ ಇಲ್ಲಿ ಸಿಗುತ್ತದೆ.

ಪುಟ್ಟ ಮಕ್ಕಳಿಗೆ ಸಂಗೀತ ತರಬೇತಿ ನೀಡಲು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಮೀನಾಕ್ಷಿ ರವಿ ಅವರ ಜತೆಗೆ ಶುಭಾ ರಾಮಚಂದ್ರ, ಚೇತನಾ, ರಶ್ಮಿ, ಶ್ರೀಲಕ್ಷ್ಮಿ ಎಂಬ ನಾಲ್ವರು ಶಿಕ್ಷಕಿಯರು ಇದ್ದಾರೆ. ಸಂಜೆ 4.30ರಿಂದ ಸಂಗೀತ ಪಾಠ ಶುರುವಾಗುತ್ತದೆ. ವಾರದಲ್ಲಿ ನಾಲ್ಕು ದಿನ ಕ್ಲಾಸ್‌ಗಳಿರುತ್ತವೆ.

`ಸಂಗೀತ ಮಕ್ಕಳ ಮೇಲೆ ಬಹಳ ಪ್ರಭಾವ ಬೀರುತ್ತದೆ. ಬೌದ್ಧಿಕ ಮಟ್ಟ ಹೆಚ್ಚಳ, ಉಸಿರಾಟಕ್ಕೆ ವ್ಯಾಯಾಮ, ಏಕಾಗ್ರತೆ ಇದರಿಂದ ಬೆಳೆಯುತ್ತದೆ. ವ್ಯಕ್ತಿತ್ವ ವಿಕಸನಕ್ಕೂ ಸಂಗೀತ ಮಾಧ್ಯಮ ಆಗಬಲ್ಲದು' ಎಂದು ವಿವರಿಸುತ್ತಾರೆ ಅವರು.
ಮೀರಾ ಸಂಗೀತ ಚಿಕಿತ್ಸಾ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಹತ್ತು ಹಲವು ಚಟುವಟಿಕೆಗಳು ಸಂಗೀತಾಸಕ್ತರಿಗೆ ಬಹಳ ಉಪಯುಕ್ತವಾಗಿವೆ.

ಸಂಗೀತ ಕಲಿಯಲು ಅವಕಾಶ ಮತ್ತು ಅನುಕೂಲವಿಲ್ಲದೆ ಇರುವ ಮಕ್ಕಳಿಗೆ ಉಚಿತವಾಗಿ ಸಂಗೀತ ಕಲಿಸುವುದು, ವಿಶೇಷ ಮಕ್ಕಳಿಗೆ (ದೈಹಿಕ, ಮಾನಸಿಕ, ಭಾವನಾತ್ಮಕ ನಡವಳಿಕೆ ಸಮಸ್ಯೆ ಇರುವ) ಹಾಗೂ ವ್ಯಕ್ತಿಗಳಿಗೆ ವೃತ್ತಿಪರ ಸಲಹೆ ಮತ್ತು ಸಂಗೀತ ಚಿಕಿತ್ಸೆ ನೀಡುವುದು, ಸಂಗೀತ ಚಿಕಿತ್ಸೆಗೆ ಸಂಬಂಧಿಸಿದಂತೆ ಅರಿವು ಮೂಡಿಸಲು ಕಾರ್ಯಾಗಾರ ಏರ್ಪಡಿಸುವುದು, ಆಗಾಗ ಸಂಗೀತ ಕಛೇರಿ ಏರ್ಪಡಿಸಿ ಮಕ್ಕಳಿಗೆ ವೇದಿಕೆ ಒದಗಿಸಿ ಕೊಡುವುದು, ಸಂಗೀತಕ್ಕೆ, ಸಂಗೀತ ಚಿಕಿತ್ಸೆಗೆ ಸಂಬಂಧಿಸಿದ ಪುಸ್ತಕ, ಪತ್ರಿಕೆ, ಸೀಡಿ ಹೊರತರುವುದು, ಸಂಗೀತ ಚಿಕಿತ್ಸಾಕಾರರಿಗೆ ತರಬೇತಿ ನೀಡಿ, ವೈದ್ಯಕೀಯ, ಮಾನಸಿಕ, ಸಾಮಾಜಿಕ ಪುನರ್ವಸತಿ ಕೇಂದ್ರಗಳಲ್ಲಿ ಸಂಗೀತ ಚಿಕಿತ್ಸೆಯನ್ನು ನಡೆಸಲು ಸಲಹೆ, ಸಹಾಯ ಮತ್ತು ಮಾರ್ಗದರ್ಶನ ನೀಡುವುದು ಮುಂತಾದ ಉಪಯುಕ್ತ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಗೀತ ಕಲಿಕೆಯನ್ನು ಆಧರಿಸಿ `ಸಾಕ್ಷ್ಯಚಿತ್ರ' ಕೂಡ ಮಾಡಲಾಗಿದೆ. 

ಬಹುಮುಖ ವ್ಯಕ್ತಿತ್ವ
ವಿದುಷಿ ಮೀನಾಕ್ಷಿ ರವಿ ಅವರಿಗೆ ಸಂಗೀತ ಅನುವಂಶೀಯವಾಗಿ ಬಂದದ್ದು. ಇವರ ತಾತ ವಿದ್ವಾನ್ ಎಂ.ಎನ್. ಶಂಕರಶಾಸ್ತ್ರಿ ಹಾಗೂ ತಾಯಿ ಲಕ್ಷ್ಮಿ ನರಸಮ್ಮ ಮೊದಲ ಗುರುಗಳು. ಸಂಗೀತ ಕಲಿಕೆ ಜೀವನದ ನಿರಂತರ ಲಹರಿ ಎನ್ನುವ ಡಾ. ಮೀನಾಕ್ಷಿ, 10 ವರ್ಷ ವಿದ್ವಾನ್ ಆರ್.ಆರ್. ಕೇಶವಮೂರ್ತಿ ಮತ್ತು ವಿದ್ವಾನ್ ಬಳ್ಳಾರಿ ಶೇಷಗಿರಿ ಆಚಾರ್ ಅವರಲ್ಲಿ ಸಂಗೀತ ಕಲಿತವರು.

ಸ್ನಾತಕೋತ್ತರ ಪದವಿ ಪಡೆದು ಪಿಎಚ್.ಡಿ. ಮಾಡಿರುವ ಇವರು, ಸಂಗೀತದ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. `ಸಂಗೀತ ಮತ್ತು ಮಾನಸಿಕ ಆರೋಗ್ಯ', `ಸಂಗೀತ ಮತ್ತು ಅಧ್ಯಾತ್ಮ', `ಸಂಗೀತ ಮಾನವೀಯ ಮೌಲ್ಯಗಳನ್ನು ನೀಡುವ ಸಾಧನ', `ಸಂಸಾರ ಮತ್ತು ದಾಸರ ಪದಗಳ ಸಾರ', `ವ್ಯಕ್ತಿತ್ವ ವಿಕಸನಕ್ಕೆ ತ್ಯಾಗರಾಜರ ಕೊಡುಗೆ', `ಸಂಗೀತದಲ್ಲಿ ಓಂಕಾರದ ಮಹತ್ವ', `ಚಿಕಿತ್ಸಾ ದೃಷ್ಟಿಯಿಂದ ಸಂಗೀತ'- ಹೀಗೆ ಹಲವಾರು ವಿಷಯಗಳ ಬಗ್ಗೆ ಇವರು ಸಂಗೀತ ಪ್ರಾತ್ಯಕ್ಷಿಕೆ ನೀಡಿದ್ದಾರೆ.

ಶಂಕರಾಚಾರ್ಯರ ಸೌಂದರ್ಯ ಲಹರಿಯ 100 ಶ್ಲೋಕಗಳಿಗೆ 100 ರಾಗಗಳಲ್ಲಿ ಅರ್ಥಕ್ಕೆ ಸೂಕ್ತವಾಗಿ ರಾಗ ಸಂಯೋಜನೆ ಮಾಡಿ ಸೀಡಿಯನ್ನು ಹೊರತಂದಿದ್ದಾರೆ. ಇವರು ಹಾಡಿರುವ ಅನೇಕ ಸೀಡಿಗಳು ಹೊರಬಂದಿವೆ. `ನಾದಮಂಥನ' ಎಂಬ ಕೃತಿಯನ್ನೂ ಮೀರಾ ರವಿ ಬರೆದಿದ್ದಾರೆ.

ರಾಜ್ಯದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಛೇರಿ, ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಮೀರಾ ಸಂಗೀತ ಚಿಕಿತ್ಸಾ ಮತ್ತು ಸಂಶೋಧನಾ ಕೇಂದ್ರದ ಎಲ್ಲ ಚಟುವಟಿಕೆಗಳನ್ನು ವಿಸ್ತಾರ ಮಾಡಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಬೇಕು ಎಂಬ ಮಹತ್ತರವಾದ ಗುರಿಯನ್ನು ಇಟ್ಟುಕೊಂಡಿರುವ ಇವರು ಈ ಸಂಗೀತ ಶಾಲೆಯ ಮೂಲಕ ಹಲವು ಸಹೃದಯರಿಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ರೂಪುಗೊಂಡಿದ್ದಾರೆ.

ವಿಳಾಸ: ಮೀರಾ ಸಂಗೀತ ಚಿಕಿತ್ಸಾ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ, ನಂ.79, `ಆಶೀರ್ವಾದ', 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಕತ್ರಿಗುಪ್ಪೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-85. ಫೋನ್: 080-266694782, 95350 55252

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.