ADVERTISEMENT

ಅನುಭವಿ ನೃತ್ಯ, ಅಭಿನಯ ರಸಪಾಕ...

ಡಾ.ಎಂ.ಸೂರ್ಯ ಪ್ರಸಾದ್
Published 28 ಮೇ 2012, 19:30 IST
Last Updated 28 ಮೇ 2012, 19:30 IST

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಗುರು ವಸುಂಧರಾ ಸಂಪತ್‌ಕುಮಾರ್ ಅವರ ಶಿಷ್ಯೆ ಸುಜಾತಾ ಶ್ರೀನಿವಾಸನ್ ಅವರ ಭರತನಾಟ್ಯ ಹಲವಾರು ದೃಷ್ಟಿಗಳಿಂದ ಮಹತ್ವದ್ದೆನಿಸಿಕೊಂಡಿತು. ನೃತ್ಯಕ್ಕೆ ಕಿರಿದೆನಿಸಿದ ವೇದಿಕೆಯ ಮೇಲೆ ಅಗತ್ಯವಾಗಿ ಮಾಡಿಕೊಳ್ಳಬೇಕಾದ ಮಾರ್ಪಾಟುಗಳೊಂದಿಗೆ ಸಫಲ ಪ್ರದರ್ಶನ ನೀಡಿದ ಸುಜಾತಾ, ತಮ್ಮ ಗುರುಗಳಿಗಷ್ಟೇ ಅಲ್ಲದೆ ನೃತ್ಯಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.

ಅವರ ವರ್ಣದ ಆಯ್ಕೆ ಸಾರ್ಥಕ. ಜಟಿಲವಾದ ಜತಿಗಳು ಮತ್ತು ಅವುಗಳಿಗೆ ಕಲಾತ್ಮಕವಾಗಿ ಹೊಂದಿಕೊಂಡು ಭರತನಾಟ್ಯದ ಸುಂದರ ಜಾಮಿತಿಗಳನ್ನು ರೂಪಿಸಿದ ಅಡವುಗಳು ಮತ್ತು ಚಲನೆಗಳು ಮುದ ನೀಡಿದವು. ವರಟ್ಟುಂ ಸಾಲಿನ ಪುನರಾವೃತ್ತ ಅಭಿನಯ ರಸಪಾಕವನ್ನು ಗಟ್ಟಿಗೊಳಿಸಿತು. ನೃತ್ಯ ಮತ್ತು ನೃತ್ತಗಳೂ ಏಕಪ್ರಕಾರವಾಗಿ ಬೆಳಗಿದವು. ಅವರ ಅಭಿನಯಚಾತುರ್ಯದಿಂದ ಆ ಬಂಧದ ಆಶಯ ಸರಳೀಕೃತಗೊಂಡು ಗ್ರಹಿಕೆಯು ಸುಲಭ ಸಾಧ್ಯವಾಯಿತು.

ಗಂಭೀರ ಹಾಗೂ ನವಿರಾದ ರಸಭಾವಗಳಿಂದ ಓತಪ್ರೋತವಾಗಿರುವ ಜಯದೇವನ ಅಷ್ಟಪದಿಗಳನ್ನು ಸಾಕ್ಷಾತ್ಕಾರಗೊಳಿಸಬೇಕಾದರೆ ವಸ್ತುವಿನ ಬಗೆಗೆ ಪೂರ್ವಜ್ಞಾನ ಮತ್ತು ಮಂಡನೆಯಲ್ಲಿ ತಲ್ಲೆನತೆ ಬಹು ಮುಖ್ಯ.

ಪಶ್ಯತಿ ದಿಶಿ ದಿಶಿ ಅಷ್ಟಪದಿಯ (ದರಬಾರಿ ಕಾನಡಾ) ಪದ-ಪದ-ವಿಸ್ತರಣೆಯ ಕ್ರಮ ಚೆನ್ನಾಗಿತ್ತು. ಅವರ ಅಭಿನಯ ಭಾಗದ ವಿವಿಧ ಹಂತಗಳು ಸ್ಥಾಯೀಭಾವವನ್ನು ದೃಢೀಕರಿಸಿದವು. ಸುಪ್ರಸಿದ್ಧ ತಮಿಳು ಕವಿ ಗೋಪಾಲಕೃಷ್ಣ ಭಾರತಿ ಅವರ ಚಿರಪರಿಚಿತ ಆಡುಂ ಚಿದಂಬರಂ (ಬೇಹಾಗ್) ರಚನೆಯು ಗರಿಷ್ಠ ಸಂವೇದನಾಶೀಲತೆಯಿಂದ ಪ್ರೇಕ್ಷಕರನ್ನು ಸೆಳೆಯಿತು. ಚಿದಂಬರದ ಚಿದಂಬರನಾಥಸ್ವಾಮಿಯ ಗುಣಗಾನ ಮಾಡುತ್ತಾ ಅವನ ತಾಂಡವ ನೃತ್ಯದ ವೈಭವವನ್ನು ತೋರಲಾಯಿತು.
 
ಅಲ್ಲಲ್ಲಿ ಅಳವಡಿಸಲಾಗಿದ್ದ ನೃತ್ತದಲ್ಲಿ ಸಂಕೀರ್ಣ ಜತಿಗಳು, ಕರಣಗಳು ಮತ್ತು ನಯನಾಕರ್ಷಕ ಭಂಗಿಗಳು ಕಾರ್ಯಕ್ರಮಕ್ಕೆ ಮುಕುಟಪ್ರಾಯವಾಯಿತು. ಕನಕದಾಸರ `ಬಾರೋ ಕೃಷ್ಣಯ್ಯ~ ಸಹ ಅನುಭವಪೂರ್ಣವಾಗಿ ಮೂಡಿಬಂತು.

ಗುರು ವಸುಂಧರಾ ಸಂಪತ್‌ಕುಮಾರ್ (ನಟುವಾಂಗ), ಬಾಲಸುಬ್ರಹ್ಮಣ್ಯಶರ್ಮ (ಗಾಯನ), ಡಾ.ನಟರಾಜಮೂರ್ತಿ (ಪಿಟೀಲು), ಜಯರಾಮ್ (ಕೊಳಲು), ಪ್ರಸನ್ನ (ರಿದಂ) ಮತ್ತು ಬಿ.ಆರ್. ಪುರುಷೋತ್ತಮ್ (ಮೃದಂಗ) ಅವರ ಸಮರ್ಥ ಸಾಥ್‌ನೊಂದಿಗೆ ನಿರೂಪಿತಗೊಂಡ ಭರತನಾಟ್ಯ ಸಿಂಧುಭೈರವಿ ತಿಲ್ಲಾನದೊಂದಿಗೆ ಮುಗಿಯಿತು.

ಚೊಕ್ಕ ಭರತನಾಟ್ಯ
ರಾಜೇಂದ್ರ ಮತ್ತು ನಿರುಪಮಾ ದಂಪತಿ  ಭರತನಾಟ್ಯ, ಕಥಕ್, ನೃತ್ಯ ಸಂಯೋಜನೆ ಇತ್ಯಾದಿಗಳಲ್ಲಿ ಅಸಾಧಾರಣ ಪ್ರತಿಭೆ ಮೆರೆಯುತ್ತಿದ್ದಾರೆ.ತಮ್ಮ ಅಭಿನವ ಡ್ಯಾನ್ಸ್ ಕಂಪೆನಿಯ ಮೂಲಕ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ನೃತ್ಯಶಿಕ್ಷಣದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ನೃತ್ಯಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಆರ್.ಎನ್. ಮೂರ್ತಿ ದತ್ತಿ ಪುರಸ್ಕಾರವನ್ನು ನೀಡುತ್ತಿದ್ದಾರೆ.

ಹನುಮಂತನಗರದ ಕೆ.ಎಚ್. ಕಲಾಸೌಧದಲ್ಲಿ ಕಳೆದ ವಾರ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಯ ಮೃದುಲಾ ರಾವ್ ಅವರಿಗೆ ಈ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ಅಂದು ಸಂಜೆಯ ಮೊದಲ ಕಾರ್ಯಕ್ರಮದಲ್ಲಿ ಅಭಿನವ ನೃತ್ಯ ಶಾಲೆಯ ನವೀನ್ ಹೆಗ್ಡೆ ಅವರ ಚಿಕ್ಕ-ಚೊಕ್ಕ ಭರತನಾಟ್ಯ ಪ್ರದರ್ಶನ ನಡೆಯಿತು. ನವೀನ್ ಆರಂಭಿಸಿದ ಸೂರ್ಯಾಂಜಲಿ (ಲವಂಗಿ) ಯಲ್ಲಿ ಆದಿತ್ಯ ಹೃದಯ ಶ್ಲೋಕದ ಮೂಲಕ ಆರೋಗ್ಯಕಾರಕ ಸೂರ್ಯನಿಗೆ ನಮನಗಳನ್ನು ಸಲ್ಲಿಸಲಾಯಿತು.

ಶಿವಸ್ತುತಿಯಲ್ಲಿ (ಹಂಸಾನಂದಿ) ಪುರುಷ ನೃತ್ಯಕ್ಕೆ ಶೋಭೆಯನ್ನು ಹೆಚ್ಚಿಸುವಂತಹ ಓಜ ಮತ್ತು ಓಘಮಯ ಚಲನೆಗಳು, ಶಿವನ ರೂಪ, ಗುಣ ಮತ್ತು ಲೀಲೆಗಳನ್ನು ಅರ್ಥೈಸುವಂತಹ ಭಂಗಿಗಳು ಆಕರ್ಷಿಸಿದವು. ಸಾಂಪ್ರದಾಯಿಕ ತೋಡಯ ಮಂಗಳಂ ರಾಗ ಮತ್ತು ತಾಳಮಾಲಿಕೆಗಳಲ್ಲಿ ಕಾವು ತುಂಬಿತು. ಅವರು ಅಭಿನಯಿಸಿದ ಸುನಾದವಿನೋದಿನಿ ಗಮನಾರ್ಹವೆನಿಸಿತು.

ಮೃದು ತಂತ್ರಗಾರಿಕೆ
ಪುರಸ್ಕಾರವನ್ನು ಸ್ವೀಕರಿಸಿದ ಮೃದುಲಾ ರಾವ್ ಅವರ ನೃತ್ಯ ಪ್ರದರ್ಶನ ನಯನ ಮಧುರ ಮತ್ತು ಮೃದು ತಂತ್ರಗಾರಿಕೆಯಿಂದ ಸೆಳೆಯಿತು. ಮಾಯಾಮಾಳವಗೌಳ ರಾಗದ ಆಡಿಕೊಂಡಾರ್ ಬಂಧದ ಮೂಲಕ ಆರಂಭಗೊಂಡ ಪ್ರದರ್ಶನ ಧನ್ಯಾಸಿ ವರ್ಣದೊಂದಿಗೆ ಮುಂದುವರೆಯಿತು.

ಏಕಾಗ್ರತೆ ಮತ್ತು ಸ್ಥಿಮಿತದೊಂದಿಗೆ ಅದರ ಪಲ್ಲವಿ ಭಾಗವನ್ನು ವಿಸ್ತರಿಸಿದರು. ಆವರ್ತನಗಳನ್ನು ಬಿಡಿಸಿ ಮಂಡಿಸುವಾಗ ನೃತ್ಯ ಮತ್ತು ನೃತ್ತ ಅಂಶಗಳು ಅವರ ಅನುಭವಕ್ಕೆ ಸಾಕ್ಷಿಯಾಯಿತು. ಶಹನ ಪದಾಭಿನಯ ಪ್ರೌಢವಾಗಿತ್ತು. ಕದನಕುತೂಹಲ ತಿಲ್ಲಾನ ಸುಯೋಗ್ಯವಾದ ಸಮಾಪ್ತಿಯನ್ನು ಒದಗಿಸಿತು. ಗುರು ನಿರುಪಮ (ನಟುವಾಂಗ), ಬಾಲಸುಬ್ಯಹ್ಮಣ್ಯ ಶರ್ಮ (ಗಾಯನ), ಮಹೇಶ್ ಸ್ವಾಮಿ (ಕೊಳಲು) ಮತ್ತು ಲಿಂಗರಾಜು (ಮೃದಂಗ)ಅವರ ಪಕ್ಕವಾದ್ಯ ಸಹಕಾರವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.