ADVERTISEMENT

ಅಬ್ಬ... ಆಕಾಶವಾಣಿ ಹಬ್ಬ

ಎಸ್.ರಶ್ಮಿ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಸಾಮಾನ್ಯವಾಗಿ ಆಕಾಶವಾಣಿ ಪ್ರತಿ ವರ್ಷವೂ ಆಹ್ವಾನಿತ ಶ್ರೋತೃಗಳಿಗಾಗಿ ಸಂಗೀತ ಸಮ್ಮೇಳನವನ್ನು ಏರ್ಪಡಿಸುತ್ತದೆ. ಆದರೆ ಅದು `ಒಂದು~ ವರ್ಗದ ಕಾರ್ಯಕ್ರಮವಾಗಿತ್ತು.
ಕೇಳುಗರು ಹಾಗೂ ಧ್ವನಿಯನ್ನು ನೀಡುವ ಆಕಾಶವಾಣಿಯ ನಡುವೆಯೊಂದು ನೇರ ಸಂಬಂಧ ಏರ್ಪಡಿಸುವುದರ ಕೊರತೆ ಇತ್ತು.
 
ಈ ಕೊರತೆಯನ್ನು ನೀಗಲೆಂದೇ ಸಂಗೀತ ಕಛೇರಿಯ, ಕಾರ್ಯಕ್ರಮದ ಸ್ವರೂಪವನ್ನು ಮಾರ್ಪಾಟುಗೊಳಿಸಲಾಯಿತು. ಇದಕ್ಕೆ ಹಬ್ಬದ ಸ್ವರೂಪ ನೀಡಲಾಯಿತು ಎನ್ನುತ್ತಾರೆ ಬೆಂಗಳೂರು ಆಕಾಶವಾಣಿ ಕೇಂದ್ರದ ಉಪ ನಿರ್ದೇಶಕ ಡಾ.ಚೇತನ ನಾಯಕ್.

ಈ ಇಡೀ ವಾರ ನಾದನದಿಯಾಗಲಿದೆ. ಬೆಂಗಳೂರಿನಲ್ಲಿಯೇ ನೆಲೆಸಿರುವ ವಿವಿಧ ಭಾಷೆಗಳ ಕವಿಗಳಿಂದ ಕವನ ವಾಚನ ನಡೆಯಲಿದೆ. ರಾಮನಗರ ಪಟ್ಟಣದಲ್ಲಿ ಸಮಾರೋಪಕ್ಕೆ ಜನಪದ ಮೇಳವನ್ನೇ ಆಯೋಜಿಸಿದೆ.

ಇದು ಇಡೀ ಕನ್ನಡತನ ಮತ್ತು ಕರ್ನಾಟಕದ ಸಂಗೀತ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಲಿ ಎಂಬುದು ಆಕಾಶವಾಣಿ ಬಳಗದ ಆಶಯವಾಗಿತ್ತು. ಈ ಇಡೀ ಹಬ್ಬದ ಆಯೋಜನೆಗಾಗಿ ಆರು ತಿಂಗಳಿಂದ ಶ್ರಮಿಸಿದೆ.

ಈ ಶ್ರಮ ಆಹ್ವಾನ ಪತ್ರಿಕೆಯಲ್ಲಿಯೇ ಕಂಡು ಬರುತ್ತಿದೆ. ಸುಪ್ರಸಿದ್ಧ ವೀಣಾ ವಾದಕ, ಹಿರಿಯ ಸಂಗೀತ ತಜ್ಞ ಪ್ರೊ. ವಿಶ್ವೇಶ್ವರನ್ ಉದ್ಘಾಟಿಸಲಿದ್ದಾರೆ. ಅವರಿಗೂ ಆಕಾಶವಾಣಿಗೂ 60 ವರ್ಷಗಳ ಸುದೀರ್ಘ ಬಾಂಧವ್ಯ. ಆ ಅನುಭವವನ್ನು ಉದ್ಘಾಟನಾ ಸಮಾರಂಭದಲ್ಲಿ ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಡಲಿದ್ದಾರೆ.

ಭಾನುವಾರ ಸಂಜೆ ಪಂಚವೀಣಾ ವಾದನದೊಂದಿಗೆ ಹಬ್ಬ ಆರಂಭವಾಗಲಿದೆ. ಡಿ. ಬಾಲಕೃಷ್ಣ, ಗೀತಾ ರಮಾನಂದ್, ರೇವತಿ ಮೂರ್ತಿ, ಮಂಜುಳಾ ಸುರೇಂದ್ರ ಮತ್ತು ವಾಣಿ ಯದುನಂದನ್ ಬೆರಳುಗಳು ವೀಣೆಯ ತಂತಿಯನ್ನು ಮೀಟಲಿವೆ. ಈ ನಾದದ ಹೊಳೆಯೊಂದಿಗೆ ಸಭಿಕರ ಭಾವನದಿಯೂ ಸೇರಲಿದೆ.
ಒಂದು ಗಂಟೆಯ ವೀಣಾ ವಾದನದ ನಂತರ ಸೌಮ್ಯ ಅವರ ಕರ್ನಾಟಕ ಶಾಸ್ತ್ರೀಯ ಗಾಯನವಿದೆ.

ಆಕಾಶವಾಣಿಯ ಮೂಲಕ ಸಹಸ್ರ ಸಹಸ್ರ ಜನರನ್ನು ಮುಟ್ಟುವ ಕಲಾವಿದರಿಗೆ ಒಂದೂ ಚಪ್ಪಾಳೆಯ ಸದ್ದು ಸಿಗದು. ಮೆಚ್ಚುಗೆಯಿಂದ ತಲೆದೂಗಿದರೂ ಆ ನೋಟ ಸಿಗದು. ಕೇಳುಗರಿಗೂ ಕಲಾವಿದನ ಮಾಂತ್ರಿಕ ಸ್ಪರ್ಶಕ್ಕೆ ಮನಸೋತರೂ ಅವರ ಮುಖ ಪರಿಚಯವಾಗದು. ಈ ಕೊರತೆ ನೀಗಿಸಲೆಂದೇ ಈ ಹಬ್ಬವನ್ನು ಆಯೋಜಿಸಲಾಗಿದೆ.

ನೆರೆದವರ ಕರತಾಡನ ಕಲಾವಿದರಿಗೆ ಸಲ್ಲುವ ಗೌರವವಾಗಿದೆ. ಅಪೂರ್ವ ಕಲಾವಿದರನ್ನು ಕಾಣುವ ಅವಕಾಶ ಕೇಳುಗರಿಗೆ ಉಚಿತವಾಗಿ ದೊರೆಯಲಿದೆ ಎನ್ನುತ್ತಾರೆ ಚೇತನ್ ನಾಯಕ್ ಅವರು.

ಸಂಗೀತ, ಸಾಹಿತ್ಯ, ನಾಟಕ, ವಾದ್ಯ ಜೊತೆಗೆ ಜನಪದ ಕಲಾ ಮೇಳಕ್ಕೂ ಸಮಪಾಲು ನೀಡಿರುವ ಕಲಾಕ್ಷೇತ್ರದ ಬಹುಪಾಲು ಪ್ರಕಾರಗಳನ್ನು ಸಮನ್ವಯಗೊಳಿಸಿರುವ ಅಪರೂಪದ ಹಬ್ಬ ಇದಾಗಿದೆ. ಒಂದಿಡೀ ವಾರದ ಹಬ್ಬದಲ್ಲಿ `ಆಕಾಶವಾಣಿ~ ಹೊಸತೊಂದು ವಾತಾವರಣವನ್ನೇ ಸೃಷ್ಟಿಸಲಿದೆ ಎನ್ನುತ್ತಾರೆ ಆಕಾಶವಾಣಿಯ ಸಂಗೀತ ವಿಭಾಗದ ಡಾ.ಎನ್.ರಘು.

ಬಹುತೇಕ ಸಾಮಾನ್ಯರಲ್ಲಿ ಆಕಾಶವಾಣಿ ಈಗ ಉಳಿದ ಬಾನುಲಿಯೊಂದಿಗೆ ಸ್ಪರ್ಧಿಸುವಂತಿಲ್ಲ ಎಂಬ ಭಾವನೆ ಇದೆ. ಅದು ನಿಜ ಕೂಡ. ಆಕಾಶವಾಣಿಗೆ ಸ್ಪರ್ಧಿಯಾಗಲು ಯಾರಿಗೂ ಸಾಧ್ಯವೇ ಇಲ್ಲ. ಅಲ್ಲಿ ಮಾತು ಬಂಡವಾಳವಾದರೆ, ಇಲ್ಲಿ ಮಾಹಿತಿಯೇ ಬಂಡವಾಳ.  ಜಾಗೃತಿಯ ಮುಖಾಂತರ ಲಾಭದ ಎಣಿಕೆಯಾಗುತ್ತದೆ. `ಆಕಾಶವಾಣಿ~ಗೆ ಸಮಸ್ಪರ್ಧಿಗಳೇ ಇಲ್ಲ ಎನ್ನುವುದು ಅವರ ಅಭಿಪ್ರಾಯ.

ಆಕಾಶವಾಣಿ ಬರೀಮಾತಿನ ವಾಹಿನಿಯಲ್ಲ. ಮಾಹಿತಿಯ ಕಣಜ. ಬರೀ ಮನರಂಜನೆಯ ಮಾಧ್ಯಮವೂ ಅಲ್ಲ. ಇದೇ ಆಶಯದೊಂದಿಗೆ ಆಕಾಶವಾಣಿ ಜನರ ಧ್ವನಿಯಾಗುತ್ತಿದೆ. ನೆಲದ ಧ್ವನಿಯಾಗುತ್ತಿದೆ ಆಕಾಶವಾಣಿಗೆ ಕೇಳುಗ ವರ್ಗ ಸದಾ ಇದ್ದೇ ಇದೆ.  ಜ್ಞಾನ, ಮಾಹಿತಿ, ಮನರಂಜನೆಯ ಸಮಹಿತವಾದ ಸಮನ್ವಿತಗೊಳಿಸಿದ ಕಾರ್ಯಕ್ರಮಗಳನ್ನೇ ನೀಡಲಾಗುತ್ತದೆ ಎನ್ನುತ್ತಾರೆ ಚೇತನ್.

ಹಬ್ಬದೊಳಗೇನಿದೆ?
ಸೋಮವಾರ ಸಾಹಿತ್ಯ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕನ್ನಡ, ಸಂಸ್ಕೃತ, ಕೊಡವ, ತುಳು, ಕೊಂಕಣಿ, ಹಿಂದಿ ಉರ್ದು, ತೆಲುಗು, ತಮಿಳು, ಮಲಯಾಳಂ ಭಾಷೆಯ ಕವಿಗಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
 
ಬಿ.ಆರ್. ಲಕ್ಷ್ಮಣರಾವ್, ಜರಗನಹಳ್ಳಿ ಶಿವಶಂಕರ್, ಬಿ.ಟಿ.ಲಲಿತಾ ನಾಯಕ್, ಚೆನ್ನಣ್ಣ ವಾಲಿಕಾರ್, ಸವಿತಾ ನಾಗಭೂಷಣ, ಮಾಲತಿ ಪಟ್ಟಣಶೆಟ್ಟಿ ಕನ್ನಡದ ಧ್ವನಿಯಾಗಲಿದ್ದಾರೆ. ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

ಬುಧವಾರ 14ನೇ ಫೆಬ್ರುವರಿ ವಿನಾಯಕ ತೊರವಿ, ಎಸ್.ಶಂಕರ್ ಅವರ ಗಾನಯುಗಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನಂತರ ಪ್ರವೀಣ್ ಗೋಡ್ಖಿಂಡಿ ಮತ್ತು ಎಂ.ಕೆ. ಪ್ರಾಣೇಶ್ ಅವರ ಬಾನ್ಸುರಿ ಮತ್ತು ಕೊಳಲು ವಾದನವಿದೆ.

15ರಂದು  ಡಾ.ಚಂದ್ರಶೇಖರ್ ಕಂಬಾರ್ ರಚಿಸಿರುವ ನಾಟಕ `ಶಿವರಾತ್ರಿ~ಯನ್ನು ಬೆಂಗಳೂರು ಪ್ರಯೋಗರಂಗ ಪ್ರಸ್ತುತ ಪಡಿಸಲಿದೆ.

ಎಚ್.ಎಸ್. ಸತ್ಯಾನಾರಾಯಣ ರಚನೆಯ `ಮಂಗ ಮಾಣಿಕ್ಯ ಪ್ರಹಸನ~ವನ್ನು ಬೆಂಗಳೂರಿನ ಕಲಾಗಂಗೋತ್ರಿ ಪ್ರಸ್ತುತ ಪಡಿಸಲಿದೆ.

ಗದಗನಕುಮಾರೇಶ್ವರ ಕೃಪಾ ಪೋಷಿತ ಪಂಡಿತ್ ಪಂಚಾಕ್ಷರಿ ಗವಾಯಿ ನಾಟ್ಯ ಸಂಘವು ಡಾ. ಪುಟ್ಟರಾಜ ಗವಾಯಿ ರಚಿಸಿರುವ `ಅಕ್ಕ ಮಹಾದೇವಿ~ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ. ಒಂದೇ ದಿನ ಮೂರು ನಾಟಕಗಳ ಅಪರೂಪದ ಪ್ರದರ್ಶನ ಇದು.

16ರಂದು ಆರ್ ಗಣೇಶ್ ಮತ್ತು ಆರ್. ಕುಮರೇಶ್ ಅವರ ಯುಗಳ ವಯೋಲಿನ್ ವಾದನವಿದೆ. ನಂತರ ಶ್ರೀರಾಮಪ್ರಸಾದ್ ಮತ್ತು ರವಿಕುಮಾರ್ ಅವರ ಯುಗಳ ಗಾಯನವಿದೆ.

ರೇನ್‌ಬೊ ಜಾಮ್‌ನಿಂದ 17ರಂದು ಎಐಆರ್ ರಾಕ್ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ರಿಂದ ಮೊದಲ ಸುತ್ತು ಆರಂಭವಾಗಲಿದೆ. ಒಟ್ಟು 11 ಬ್ಯಾಂಡ್‌ಗಳು ಇಲ್ಲಿ ಸ್ಪರ್ಧಿಸಲಿವೆ.
 
ರೇನ್‌ಬೊ ಜಾಮ್ ಆಗಿರುವುದರಿಂದ ಈ ಬ್ಯಾಂಡುಗಳಲ್ಲಿ ಎಲ್ಲ ಬಗೆಯ ಸ್ಪರ್ಧಿಗಳೂ ಕೂಡಿದ್ದಾರೆ. ಚಿಣ್ಣರ ಬ್ಯಾಂಡ್ ಇದೆ. ಹಿರಿಯ ನಾಗರಿಕರ ಬ್ಯಾಂಡ್ ಇದೆ. ಐಟಿ ವೃತ್ತಿ ನಿರತರ, ವಿದ್ಯಾರ್ಥಿಗಳ ಬ್ಯಾಂಡ್ ಸಹ ಇದೆ.

ಇದರಲ್ಲಿ ಅನುಭವಿ ಬ್ಯಾಂಡ್‌ಗಳೊಂದಿಗೆ ಕೆಲವೊಬ್ಬರು ಮೊದಲ ಸಲ ಪ್ರಸ್ತುತ ಪಡಿಸುವವರೂ ಇದ್ದಾರೆ. ಕಾಮನ ಬಿಲ್ಲು ಇಲ್ಲಿ ಎಲ್ಲರ ನಡುವೆ ಕಮಾನು ಕಟ್ಟಿದೆ. ಆ ಕಮಾಲು ಸವಿಯಲು 17ನೇ ಫೆಬ್ರುವರಿಯನ್ನು ನಿಗದಿಗೊಳಿಸಲಾಗಿದೆ. 11ಕ್ಕೆ ಸ್ಪರ್ಧೆ ಆರಂಭವಾಗಲಿದೆ. ಸಂಜೆ 5ಕ್ಕೆ ಬಹುಮಾನ ವಿತರಿಸಲಾಗುವುದು.

12ರಿಂದ 17ರವರೆಗೆ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಆಕಾಶವಾಣಿ ಹಬ್ಬ ಜರುಗಲಿದೆ. 12ರಂದು ಸಂಜೆ 5.30ಕ್ಕೆ ಉದ್ಘಾಟನಾ ಸಮಾರಂಭ. ನಂತರ 6 ಗಂಟೆಯಿಂದ 8ರವರೆಗೆ ಹಬ್ಬದ ಸಂಭ್ರಮ ಇಲ್ಲಿ ಅನುರಣಿಸಲಿದೆ. ಈಗಾಗಲೇ ಪಾಸು ಹಾಗೂ ಆಹ್ವಾನ ಪತ್ರಗಳ  ವಿತರಣೆಯಾಗಿದ್ದು, ಆಹ್ವಾನಿತರಿಗೆ ಹಾಗೂ ಪಾಸಿದ್ದವರಿಗೆ ಮಾತ್ರ ಪ್ರವೇಶವನ್ನು ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.