ADVERTISEMENT

ಅಭಿಮಾನಿಗಳಿಗೆ ನಿರಾಸೆ ತಂದ ಸ್ಪೈಡರ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಅಭಿಮಾನಿಗಳಿಗೆ ನಿರಾಸೆ ತಂದ ಸ್ಪೈಡರ್‌
ಅಭಿಮಾನಿಗಳಿಗೆ ನಿರಾಸೆ ತಂದ ಸ್ಪೈಡರ್‌   

ಹಲವು ನಿರೀಕ್ಷೆಗಳೊಂದಿಗೆ ಬಿಡುಗಡೆ ಯಾದ ‘ಸ್ಪೈಡರ್‌’ ಚಿತ್ರ ಅಭಿಮಾನಿ ಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಖ್ಯಾತ ನಿರ್ದೇಶಕ ಎ.ಆರ್‌.ಮುರುಗದಾಸ್‌ ಮತ್ತು ಮಹೇಶ್‌ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬಂದ ಮೊದಲ ಚಿತ್ರವಾಗಿದ್ದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿತ್ತು. ಮಹೇಶ್‌ಬಾಬು ಕೆರಿಯರ್‌ನಲ್ಲೇ ಇದು ಭಾರಿ ಬಜೆಟ್‌ ಚಿತ್ರವಾಗಿತ್ತು. ಖುಷಿ, ನಾನಿಯಂತಹ ಹಿಟ್‌ ಚಿತ್ರಗಳ ನಿರ್ದೇಶಕ ಎಸ್‌.ಜೆ.ಸೂರ್ಯ ಅವರು ಇಲ್ಲಿ ಖಳನಟನ ಪಾತ್ರ ಪೋಷಿಸುತ್ತಾರೆ ಎಂದು ಮುರುಗದಾಸ್‌ ತಿಳಿಸಿದ ನಂತರ ಕಥೆ ಬಗ್ಗೆ ಕುತೂಹಲ ಹೆಚ್ಚಾಗಿತ್ತು.

ಇದೇ ಕುತೂಹಲದೊಂದಿಗೆ ಸಿನಿಮಾ ನೋಡಿದ ಪ್ರೇಕ್ಷಕರು, ‘ಇದು ಮುರುಗದಾಸ್‌ ನಿರ್ದೇಶಿಸು ವಂಥ, ಮಹೇಶ್‌ ಬಾಬು ಅವರಂಥ ಸೂಪರ್‌ಸ್ಟಾರ್ ನಟಿಸುವಂಥ ಚಿತ್ರ ಅಲ್ಲವೇ ಅಲ್ಲ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತರರ ಅಳು, ನೋವುಗಳನ್ನು ಕಂಡು ಮಹದಾನಂದ ಪಡುವ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬನ ಸುತ್ತ ಹೆಣೆದಿರುವ ಕಥೆಯೇ ಸ್ಪೈಡರ್. ಚಿಕ್ಕವಯಸ್ಸಿನಲ್ಲಿ ಕೆಟ್ಟತನವನ್ನು ಎದುರಿಸಿದ ಬಾಲಕನೊಬ್ಬ ದುಷ್ಟನಾಗಿ ಹೇಗೆ ಬದಲಾದ ಎಂಬ ಸಾಮಾಜಿಕ ಕಳಕಳಿಯ ಅಂಶವನ್ನು ಆಧಾರವಾಗಿ ಇಟ್ಟುಕೊಂಡು ಮುರುಗುದಾಸ್‌ ಉತ್ತಮ ಕಥೆಯನ್ನೇ ಬರೆದಿದ್ದಾರೆ.

ADVERTISEMENT

ಆದರೆ ತೆಲುಗು ಭಾಷಿಕರ ಅಭಿರುಚಿಗಿಂತ, ತಮಿಳು ಸಿನಿರಸಿಕರ ಅಭಿರುಚಿಗೆ ಮುರುಗದಾಸ್ ಹೆಚ್ಚು ಮನ್ನಣೆ ಕೊಟ್ಟಿದ್ದಾರೆ ಎಂಬುದು ಟಾಲಿವುಡ್‌ ಪ್ರೇಕ್ಷಕರ ಅಸಮಾಧಾನ.

‘ಗಜಿನಿ, ಸ್ಟಾಲಿನ್‌, ಕತ್ತಿ, ತುಪಾಕಿಯಂತಹ ಹಿಟ್ ಚಿತ್ರಗಳನ್ನು ನೀಡಿದ್ದ ಮುರುಗದಾಸ್‌ ಶೈಲಿಯ ಚಿತ್ರ ಇದಲ್ಲ’ ಎನ್ನುವುದು ಅವರ ಒಕ್ಕೊರಲ ಅಭಿಪ್ರಾಯ. ‘ಬ್ರಹ್ಮೋತ್ಸವಂ’ ಚಿತ್ರದ ವೈಫಲ್ಯವನ್ನು ಮರೆಸಲು ಮಹೇಶ್‌ಬಾಬು ಹೊಸ ಪಾತ್ರಕ್ಕೆ ತಕ್ಕಂತೆ ಕಸರತ್ತು ನಡೆಸಿದ್ದಾರೆ. ಆದರೆ 'ಖಳನಟನ ಎದುರು ನಾಯಕ ನಟ ಮಂಕಾಗಿದ್ದಾನೆ’ ಎಂಬುದು ಅಭಿಮಾನಿಗಳ ನಿರಾಸೆ.

‘ಭೈರವ ಎಂಬ ಪಾತ್ರದೊಂದಿಗೆ ಖಳನಾಗಿ ಮಿಂಚಿರುವ ಎಸ್‌.ಜೆ.ಸೂರ್ಯ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅವರ ನಟನೆಯೇ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌’ ಎಂಬುದು ತೇಲಿ ಬರುವ ಟ್ರೋಲ್‌ಗಳ ಒನ್‌ಲೈನ್ ಪಂಚಿಂಗ್. ಚಿತ್ರದ ಗ್ರಾಫಿಕ್‌ ಕೆಲಸವೂ ಚೆನ್ನಾಗಿಲ್ಲ. 'ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್‌ ಸನ್ನಿವೇಶಗಳನ್ನು ನಿರ್ವಹಿಸುವಾಗ ಇನ್ನಷ್ಟು ಶ್ರದ್ಧೆ ಇರಬೇಕಿತ್ತು' ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.