ADVERTISEMENT

ಅಲೆಮಾರಿ ಹಾಡಿನಲೆ...

ಎಚ್.ಎಸ್.ರೋಹಿಣಿ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ಅಲೆಮಾರಿ ಹಾಡಿನಲೆ...
ಅಲೆಮಾರಿ ಹಾಡಿನಲೆ...   

`ರಾಜಕುಮಾರಿ ಡ್ರೆಸ್ ಹಾಕಿಕೊಳ್ಳೋದು ಅಂದರೆ ನನಗೆ ತುಂಬಾ ಇಷ್ಟ. ಅಂಥ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ~ ಎಂದು ತಮ್ಮ ಮುಂಗುರುಳು ನೋಡಿಕೊಂಡರು ರಾಧಿಕಾ ಪಂಡಿತ್.
ಟಪ್ಪಾಂಗುಚಿ ಹಾಡಿಗೆ ಹೆಜ್ಜೆಹಾಕಿದ್ದು, ಚಿತ್ರವಿಚಿತ್ರ ಕಾಸ್ಟ್ಯೂಮ್‌ಗಳನ್ನು ತೊಟ್ಟಿದ್ದು, ಮೃದು ಮಾತಿನ ಹುಡುಗಿಯಾಗಿ ನಟಿಸಿದ್ದು ಎಲ್ಲಾ ತಮ್ಮ ಚಿತ್ರಬದುಕಿನ ಮೊದಲುಗಳು ಎಂದು ರಾಧಿಕಾ ಹೇಳುತ್ತಿದ್ದರೆ ಅತ್ತ ನಾಯಕ ಯೋಗೀಶ್ ಮೊಬೈಲ್ ಸಂದೇಶಗಳನ್ನು ತೆರೆದು ನೋಡುವುದರಲ್ಲಿ ಮಗ್ನರಾಗಿದ್ದರು.

ಅವರಿಗೆ ಬಂದ ಸಂದೇಶಗಳ ತುಂಬೆಲ್ಲಾ ಹಾಡುಗಳ ಗುಣಗಾನ. ಅದಾಗ ತಾನೇ ರೇಡಿಯೋ ಮಿರ್ಚಿ 98.3 ಎಫ್‌ಎಂ ರೇಡಿಯೋ ವಾಹಿನಿ ಸ್ಟುಡಿಯೋದಲ್ಲಿ `ಅಲೆಮಾರಿ~ ಹಾಡುಗಳು ಪ್ರಸಾರವಾಗಿದ್ದವು. ಅವುಗಳನ್ನು ಕೇಳಿಸಿಕೊಂಡ ಗೆಳೆಯರು, ಹಿತೈಷಿಗಳಿಂದ ಬಂದ ಸಂದೇಶದ ಸಾರವನ್ನು ಹೇಳಿಕೊಂಡು ಯೋಗೀಶ್ ಮುಖದಲ್ಲಿ ಚಿತ್ರದ ಬಗ್ಗೆ ಭರವಸೆ ಭರ್ತಿಯಾಯಿತು. ಚಿತ್ರದಲ್ಲಿ ವಿಭಿನ್ನ ಕಾಸ್ಟ್ಯೂಮ್‌ಗಳನ್ನು ತೊಟ್ಟಿರುವುದಾಗಿ ಹೇಳಿದ ಅವರಿಗೆ ಹಾಡುಗಳಷ್ಟೇ ಚಿತ್ರದ ಕತೆಯ ಬಗ್ಗೆಯೂ ವಿಶ್ವಾಸ ಇದೆಯಂತೆ.

ಚಿತ್ರದಲ್ಲಿ ರಾಧಿಕಾ ಹೆಸರು ನೀಲಿ. ನೀಲಿ ಬಣ್ಣದ ಥೀಮ್ ಇಟ್ಟುಕೊಂಡು ಒಂದು ಹಾಡನ್ನು ಚಿತ್ರೀಕರಿಸಲಾಗಿದೆಯಂತೆ. ಜೊತೆಗೆ ರಾಧಿಕಾ ಚಿತ್ರದಲ್ಲಿ ಕಾಣಿಸಿಕೊಂಡಾಗೆಲ್ಲಾ ನೀಲಿ ಬಣ್ಣ ಆವರಿಸುವಂತೆ ಮಾಡಲಾಗಿದೆಯಂತೆ. ಅದನ್ನು ಸಂತಸದಿಂದ ಹೇಳಿಕೊಂಡ ರಾಧಿಕಾಗೆ `ತುಂಡು ಬೀಡಿ..~ ಎಂಬ ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕ್ದ್ದಿದೂ ನೆನಪಾಯಿತು. `ಯೋಗಿ ವೇಗಕ್ಕೆ ಕುಣಿಯಲು ಆರಂಭದಲ್ಲಿ ಕೊಂಚ ಕಷ್ಟವಾದರೂ ನಂತರ ನಿಭಾಯಿಸಿದೆ~ ಎಂದ ಅವರಿಗೆ `ಅಲೆಮಾರಿ~ ವಿಶಿಷ್ಟ ಅನುಭವ ನೀಡಿದ ಚಿತ್ರ.

ಹಾಡುಗಳಿಗೆ ಬರುತ್ತಿದ್ದ ಪ್ರತಿಕ್ರಿಯೆಗಳಿಂದ ಖುಷಿಯಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ `ಯೋಗಿಗಾಗಿಯೇ `ಬಾಬಾ ಬೆಂಗಳೂರು~ ಹಾಡಿನ ಟ್ಯೂನ್ ಸಿದ್ಧಪಡಿಸಿದೆ. ಯೋಗಿ ನಾಯಕರಾಗಿ ಇದ್ದಮೇಲೆ ಅವರಿಗೆ ಹೊಂದುವ ಟಪ್ಪಾಂಗುಚಿ ಹಾಡು ಇರದೇ ಇದ್ದರೆ ಹೇಗೆ?~ ಎಂದು ಪ್ರಶ್ನಿಸಿದರು.

`ಥರಥರ ಹಿಡಿಸಿದೆ ಮನಸಿಗೆ ನೀನು..~ `ನೀರಿಗೆ ಬಾರೆ ಚೆನ್ನಿ..~ ಹಾಡುಗಳಂತೆಯೇ `ಅಲೆಮಾರಿ~ಯ ಹಾಡುಗಳೆಲ್ಲಾ ಹಿಟ್ ಆಗುವುದು ಖಂಡಿತ ಎಂದರು.

ತಮ್ಮದು ಮ್ಯೂಸಿಕಲ್ ಸಿನಿಮಾ. ನಾಯಕಿಯ ತಂದೆ ಸಂಗೀತದ ಮೇಷ್ಟ್ರು. ಅದರಿಂದ ಸಂಗೀತದ ಅಲೆಯೊಂದು ಚಿತ್ರದುದ್ದಕ್ಕೂ ಇರಲಿದೆ. ಒಂದಕ್ಕಿಂತ ಒಂದು ಹಾಡು ವಿಭಿನ್ನ. `ನೀ ಮೊದಲ ಕವಿತೆ~ ಹಾಡಂತೂ ಪ್ರೇಕ್ಷಕರನ್ನು ಭಿನ್ನ ಲೋಕಕ್ಕೆ ಕರೆದೊಯ್ಯಲಿದೆ. ಅದರಲ್ಲಿ ಯೋಗಿ ಕಾಡುಮನುಷ್ಯರ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ತಮ್ಮ ಚಿತ್ರದ ಹಾಡುಗಳು ವಿಭಿನ್ನ ಅನುಭವ ನೀಡುವುದು ಖಂಡಿತ ಎಂದು ಭರವಸೆ ನೀಡಿದವರು ನಿರ್ದೇಶಕ ಸಂತು. ಅವರ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ಚಿತ್ರದ ಎಲ್ಲಾ ಹಾಡುಗಳನ್ನೂ ಅವರೇ ರಚಿಸಿದ್ದಾರೆ.

`ನೀ ಮೊದಲ ಕವಿತೆ..~ ಹಾಡು ಬರೆದು ಅದೇ ಗುಂಗಿನಲ್ಲಿಯೇ ದಿನಕಳೆದ ವಿಚಾರವನ್ನು ಹೇಳಿಕೊಂಡ ಸಂತು ಎಲ್ಲಾ ಹಾಡುಗಳು ಎಲ್ಲರನ್ನೂ ಕಾಡುವುದು ಖಂಡಿತ ಎಂದು ಆತ್ಮವಿಶ್ವಾಸದ ನಗೆ ಚೆಲ್ಲುತ್ತಾರೆ.

`ಮರೀಬೇಕು ನಿನ್ನ..~ ಹಾಡನ್ನು ಒಂದೇ ಟೇಕ್‌ನಲ್ಲಿ ಚಿತ್ರೀಕರಿಸುವ ನಿರ್ಧಾರ ಮಾಡಿದಾಗ ಗಾಯಕ ಕಾರ್ತೀಕ್ ಒಂದು ವಾರ ಸಮಯ ಕೇಳಿ ಒಂದೇ ಟೇಕ್‌ನಲ್ಲಿ ಹಾಡಿರುವುದು ವಿಶೇಷ. 

 ಸದ್ಯಕ್ಕೆ ಚಿತ್ರದ ಡಿ.ಎ ಕೆಲಸ ನಡೆಯುತ್ತಿದ್ದು ಫೆಬ್ರುವರಿ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಮನಸ್ಸು ಚಿತ್ರತಂಡಕ್ಕಿದೆ. ಅದಕ್ಕಾಗಿ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಮೊದಲಿಗೆ ರೇಡಿಯೋ ಮಿರ್ಚಿ ಸ್ಟುಡಿಯೋದಲ್ಲಿ ಹಾಡುಗಳನ್ನು ಗಾಳಿಗೆ ತೇಲಿಬಿಟ್ಟಿತು.

ಅಂದಹಾಗೆ `ಅಲೆಮಾರಿ~ ಚಿತ್ರದ ಆಡಿಯೋ ಸೀಡಿ ಖರೀದಿಸಿದವರಿಗೆ ಹಾಡುಗಳ ಚಿತ್ರೀಕರಣ ಇರುವ ವೀಡಿಯೊ ಸೀಡಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT