ADVERTISEMENT

ಅವಕಾಶದ ಬಾಗಿಲಿನ ಎದುರು ತೃಪ್ತಿ

ಪ್ರಜಾವಾಣಿ ವಿಶೇಷ
Published 30 ಮೇ 2014, 19:30 IST
Last Updated 30 ಮೇ 2014, 19:30 IST
ಅವಕಾಶದ ಬಾಗಿಲಿನ ಎದುರು ತೃಪ್ತಿ
ಅವಕಾಶದ ಬಾಗಿಲಿನ ಎದುರು ತೃಪ್ತಿ   

ರಂಗಭೂಮಿಯೆಡೆಗೆ ಪ್ರೀತಿ ಬೆಳೆಸಿಕೊಂಡ ಅಪ್ಪನ ಜೊತೆ ತೃಪ್ತಿ ರೋವೆ ಅವರ ಪುಟಾಣಿ ಹೆಜ್ಜೆಗಳೂ ಸಾಗುತ್ತಿದ್ದವು. ಅಲ್ಲಿ ಅಭಿನಯಿಸುತ್ತಿದ್ದ ಅನೇಕರನ್ನು ಕಂಡು ತಾವೂ ನಟಿಯಾಗಬೇಕು ಎಂದು ಆಶಿಸುತ್ತಿತ್ತು ಆ ಮನಸ್ಸು. ಹೆಣ್ಣು ಎಂಬ ಕಾರಣಕ್ಕೆ ಮನೆಯಲ್ಲಿ ಪ್ರೋತ್ಸಾಹ ಸಿಗಲಿಲ್ಲ. ಶಾಲೆ, ಮನೆ ಎಂದುಕೊಂಡೇ ಬೆಳೆದದ್ದರಿಂದ ಕಾಲೇಜು ಸೇರುವವರೆಗೆ ಶಿಕ್ಷಣ ಬಿಟ್ಟು ಬೇರೇನನ್ನೂ ಯೋಚಿಸಲಿಲ್ಲ.
ನಂತರ ನಿಧಾನವಾಗಿ ಆಸೆಬುತ್ತಿ ಬಿಡಿಸಿಟ್ಟ ಮಗಳಿಗೆ ಅಪ್ಪನಿಂದ ಒಪ್ಪಿಗೆ ಸಿಕ್ಕಿತು. ಕಾಲೇಜುಗಳಲ್ಲಿ ನಾಟಕ, ನೃತ್ಯ ಸ್ಪರ್ಧೆಗಳಲ್ಲಿ ತೃಪ್ತಿ ಅವರು ಕಾಣಿಸಿಕೊಳ್ಳಲಾರಂಭಿಸಿದರು.

ಜೈನ್‌ ಕಾಲೇಜಿನಲ್ಲಿ ಬಿ.ಕಾಂ. ಪದವಿ ಹಾಗೂ ಪಬ್ಲಿಕ್‌ ರಿಲೇಶನ್ಸ್‌ ವಿಭಾಗದಲ್ಲಿ ಕಲಿತ ನಂತರ ಡೆಲ್‌ ಕಂಪೆನಿಯಲ್ಲಿ ಉದ್ಯೋಗ ಹಿಡಿದರು. ಹಣ ಕೈಗೆ ಬರುತ್ತಿದ್ದಂತೆ ಅಭಿನಯ ತರಗತಿಗೆ ಸೇರಿಕೊಂಡರು. ಮನೆಯಲ್ಲಿ ಹೇಳದೆ ಮಾಡೆಲಿಂಗ್‌ ಕ್ಷೇತ್ರಕ್ಕೂ ನಿಧಾನವಾಗಿ ಕಾಲಿಟ್ಟರು. ಬಾಲಿವುಡ್‌ ಖ್ಯಾತಿಯ ನೃತ್ಯ ಸಂಯೋಜಕ ಶೈಮಕ್ ದಾವರ್‌ ಅವರ ಬಳಿ ನೃತ್ಯಾಭ್ಯಾಸ ಮಾಡಿದರು.

ಸಮಕಾಲೀನ ಹಾಗೂ ಬಾಲಿವುಡ್‌ ನೃತ್ಯ ಶೈಲಿಯಲ್ಲಿ ಪಳಗಿದ ಇವರಿಗೆ ಗುರುವೇ ನೃತ್ಯ ಶಿಕ್ಷಕಿಯಾಗುವ ಅವಕಾಶ ನೀಡಿದರು.
ಕ್ರಮೇಣ ಅವಕಾಶಗಳಿಗೆ ತೆರೆದುಕೊಂಡ ತೃಪ್ತಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ‘ಮುಗಿಲು’ ಹಾಗೂ ‘ಅಡ್ವೊಕೇಟ್‌ ಅರ್ಜುನ್‌‘ ಅವರು ನಟಿಸಿದ ಪ್ರಮುಖ ಧಾರಾವಾಹಿಗಳು. ಛಾಯಾಚಿತ್ರಗ್ರಾಹಕ ಪ್ರವೀಣ್‌ ಅವರು 2004ರಲ್ಲಿ ಆಯೋಜಿಸಿದ್ದ ‘ಫೋಟೊಜೆನಿಕ್‌ ಫೇಸ್‌’ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡರು.

ಅಲ್ಲಿಂದ ರ್‍ಯಾಂಪ್‌ ಮೇಲೆ ಹೆಜ್ಜೆ ಊರುವ ಅವಕಾಶ ಸಿಕ್ಕಿತು. ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌ ಸೇರಿದಂತೆ ಅನೇಕ ವಾಣಿಜ್ಯ ಜಾಹೀರಾತುಗಳಿಗೆ ಮಾಡೆಲ್ ಆದರು. ನಿಯತಕಾಲಿಕೆಗಳಲ್ಲೂ ಪಾಶ್ಚಾತ್ಯ ದಿರಿಸು, ಬ್ಯೂಟಿ ಸಲೂನ್‌ ಜಾಹೀರಾತುಗಳಿಗೆ ರೂಪದರ್ಶಿಯಾದರು. ಹಲವು ಮಾಡೆಲ್‌ಗಳು ಕಾಣುವಂಥ ಜಾಹೀರಾತುಗಳಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ. ವೀಡಿಯೊ ಒಂದರಲ್ಲಿ ಅಭಿನಯಿಸಿದ್ದಾರೆ. 2007ರಲ್ಲಿ ‘ಮಿಸ್‌ ಬೆಂಗಳೂರು’ ಕಿರೀಟವೂ ಇವರಿಗೆ ಒಲಿದಿತ್ತು.
ಕೆಲವು ವರ್ಷಗಳಿಂದ ನಟನೆ, ಮಾಡೆಲಿಂಗ್‌ಗಳಿಂದ ದೂರವಿದ್ದ ತೃಪ್ತಿ ಆನ್‌ಲೈನ್‌ ನೆಟ್‌ವರ್ಕಿಂಗ್‌ ಬ್ಯುಸಿನೆಸ್‌ ಪ್ರಾರಂಭಿಸಿದರು. ಅದೂ ಅಲ್ಲದೆ ‘ವೈಫ್‌’ ಎಂಬ ಪ್ರಾಜೆಕ್ಟ್‌ ಒಂದನ್ನು ಕೈಗೆತ್ತಿಕೊಂಡಿದ್ದು, ಮಹಿಳೆಯರಿಗೆ ಹಣಕಾಸು ವ್ಯವಹಾರ, ವ್ಯಾಪಾರ ಕೌಶಲ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. 

ಮತ್ತೆ ನಟನೆಯತ್ತ ಚಿತ್ತ
ಕಳೆದ ಎರಡು ಮೂರು ವರ್ಷಗಳಿಂದ ತಾವು ಪ್ರೀತಿಸುವ ಮಾಡೆಲಿಂಗ್‌ ಹಾಗೂ ನಟನಾ ಕ್ಷೇತ್ರದಿಂದ ದೂರವಿದ್ದ ತೃಪ್ತಿ ಸೌಂದರ್ಯ ಸ್ಪರ್ಧೆಗಳು ಮತ್ತೆ ಅವಕಾಶಗಳ ಬಾಗಿಲು ತೆರೆಯಲಿವೆ ಎಂದು ನಂಬಿದ್ದಾರೆ. ಅವರ ನಿರೀಕ್ಷೆಯಂತೆ ಸ್ಪರ್ಧೆ ಮುಗಿಯುತ್ತಿದ್ದಂತೆ ಮಾಡೆಲಿಂಗ್‌ ಅವಕಾಶಗಳು ಸಿಕ್ಕಿವೆಯಂತೆ. ಸಿನಿಮಾ ಅವಕಾಶ ಒಂದು ಸಿಗುವ ಸಾಧ್ಯತೆ ಇದ್ದು, ಅದಿನ್ನೂ ಮಾತುಕತೆ ಹಂತದಲ್ಲಿದೆ. ಜಾಹೀರಾತು­ಗಳಲ್ಲೂ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ‘ಫ್ಯಾಷನ್‌ ಕ್ಷೇತ್ರವೇ ಹಾಗೆ. ಒಮ್ಮೆ ಕಳೆದುಹೋದರೆ ಜನ ನಮ್ಮನ್ನು ಮರತೇಬಿಡುತ್ತಾರೆ. ಹೀಗಾಗಿ ಮತ್ತೆ ಜನರ ಮನಸ್ಸನ್ನು ಗೆಲ್ಲಬೇಕು ಎನ್ನುವುದು ನನ್ನ ಆಸೆ’ ಎನ್ನುತ್ತಾರೆ ಅವರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನು ಕಂಡು ಅನೇಕರು ಮುಂಬರಲಿರುವ ‘ಏಷ್ಯಾ ಪೆಸಿಫಿಕ್‌’ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸೂಚಿಸಿದ್ದಾರಂತೆ. ತಮ್ಮದು ಲವ್‌ಮ್ಯಾರೇಜ್‌ ಎಂದು ಹಿಗ್ಗುವ ತೃಪ್ತಿ, ತಮ್ಮಿಬ್ಬರದು ಸಮಾನ ಮನಸ್ಥಿತಿ ಹಾಗೂ ಒಂದೇ ಗುರಿ ಎಂದು ಹೇಳಿ­ಕೊಳ್ಳುತ್ತಾರೆ. ಅತ್ತೆ ಕೂಡ ಪ್ರೀತಿಯಿಂದ ಪ್ರೋತ್ಸಾಹಿಸುತ್ತಾರೆ ಎಂದು ನೆನೆಯುತ್ತಾರೆ.

ಫಿಟ್‌ನೆಸ್‌ ಸಂಗತಿ
ಫಿಟ್‌ನೆಸ್‌ ವಿಷಯದಲ್ಲಿ ಅವರು ತುಂಬಾ ಅದೃಷ್ಟವಂತರು. ತಾವೂ ಅಮ್ಮನ ತರಹ, ಎಷ್ಟು ತಿಂದರೂ ದಪ್ಪಗಾಗುವುದಿಲ್ಲ ಎಂದು ಹಿಗ್ಗುತ್ತಾರೆ. ಅತ್ತೆ (ಅಪ್ಪನ ತಂಗಿ) ಯೋಗ ಕಲಿತಿದ್ದರು. ಚಿಕ್ಕಂದಿನಿಂದಲೂ ಅವರೊಂದಿಗೆ ಯೋಗಾಭ್ಯಾಸ ರೂಢಿಸಿಕೊಂಡೆ. ಬೆಳೆದಂತೆ ನೃತ್ಯ ತರಗತಿಗೆ ಸೇರಿಕೊಂಡೆ. ದೇಹದ ಫಿಟ್‌ನೆಸ್‌ಗೆ ನೃತ್ಯಕ್ಕಿಂತ ಉತ್ತಮವಾದ ವ್ಯಾಯಾಮವಿಲ್ಲ. ಇದೀಗ ವಾರದಲ್ಲಿ ಎರಡು ದಿನ ಜಿಮ್‌, ಮೂರು ದಿನ ಯೋಗ, ಪ್ರಾಣಾಯಾಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಆಗಾಗ ಚಾರಣಕ್ಕೆ ಹೋಗುವುದು ಅವರಿಷ್ಟದ ಹವ್ಯಾಸ. ಎಂದಿಗೂ ಡಯೆಟ್‌ ಮಾಡದ ತೃಪ್ತಿ ಹೆಚ್ಚು ಹೆಚ್ಚು ನೀರು ಕುಡಿಯುತ್ತಾರಂತೆ. ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಲು ಇದು ಸುಲಭ ಉಪಾಯ ಎನ್ನುತ್ತಾರೆ ಅವರು.

ಲೈಟ್‌ ಮೇಕಪ್‌ಗೆ ಅವರ ಆದ್ಯತೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ ಎನ್ನುವುದು ಇವರ ನಂಬಿಕೆ. ಬ್ಯೂಟಿ ಪಾರ್ಲರನ್ನು ಹೆಚ್ಚಾಗಿ ಅವಲಂಬಿಸದ ಅವರು ಅರಿಶಿಣ, ಲಿಂಬೆರಸ, ಟೊಮೊಟೊ, ಬಾದಾಮಿ ಮುಂತಾದ ಪೇಸ್ಟ್‌ಗಳನ್ನು ಬಳಸುತ್ತಾರೆ. ತ್ವಚೆಗಿಂತ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವರು ವಾರದಲ್ಲಿ ಎರಡು ಬಾರಿ ಹೆಡ್‌ ಮಸಾಜ್‌ ಮಾಡಿಸಿಕೊಳ್ಳುತ್ತಾರೆ. ಆರಾಮ ಹಾಗೂ ಸರಳತೆ ಬಯಸುವ ಅವರಿಗೆ ಕ್ಯಾಶುವಲ್ಸ್‌ ಧಿರಿಸು ಹೆಚ್ಚು ಇಷ್ಟವಂತೆ. ಕಾರ್ಯಕ್ರಮಗಳಿಗೆ ಮಾತ್ರ ಸೀರೆ ಮುಂತಾದ ಭಾರತೀಯ ಉಡುಗೆಗಳನ್ನೇ ತೊಡುತ್ತಾರೆ.

‘ಎಲ್ಲಾ ಕ್ಷೇತ್ರದಲ್ಲಿ ಏಳುಬೀಳು ಇರುವಂತೆ ಕೆಟ್ಟ ಅನುಭವಗಳೂ ಆಗುತ್ತವೆ. ಕೆಲವೊಮ್ಮೆ ಸಿಕ್ಕ ಉತ್ತಮ ಅವಕಾಶಗಳನ್ನು ಕೈಬಿಡಬೇಕಾಗುತ್ತದೆ. ಆದರೆ ಎಂದಿಗೂ ಮನಸ್ಸಿನ ಮಾತನ್ನೇ ಕೇಳಿ. ಅಪ್ಪ, ಅಮ್ಮ ಕಲಿಸಿದ ಸಂಸ್ಕಾರ, ನೀವು ನಂಬಿಕೊಂಡ ಸಿದ್ಧಾಂತಗಳನ್ನು ಬಿಟ್ಟು ಸಾಧಿಸ­ಬೇಕಾದುದು ಏನೂ ಇಲ್ಲ. ಏನೇ ಮಾಡಿದರೂ ದಿನದ ಕೊನೆ­ಯಲ್ಲಿ ಕನ್ನಡಿ ಮುಂದೆ ನಿಂತು ನಿಮ್ಮನ್ನು ನೀವು ಧೈರ್ಯವಾಗಿ ಎದುರಿಸುವಂತೆ ನಿಮ್ಮ ಕೆಲಸಗಳಿದ್ದರಾಯಿತು’ ಎಂದು ಕಿರಿಯರಿಗೆ ಕಿವಿಮಾತು ಹೇಳುತ್ತಾರೆ ಈ ಸುಂದರಿ.

ಸ್ಪರ್ಧೆ ಗಮ್ಮತ್ತು
ಸಿಂಗಪುರ ಮೂಲದ ಕಂಪೆನಿ ಇಆರ್‌ಎಂ ಆಯೋಜಿಸಿದ್ದ ‘ಮಿಸಸ್‌ ಏಷ್ಯಾ ಇಂಟರ್‌ನ್ಯಾಷನಲ್‌ ಇಂಡಿಯಾ 2014’ ಬಗ್ಗೆ ತೃಪ್ತಿ ಅವರಿಗೆ ಗೊತ್ತಾದದ್ದು ಅಂತರ್ಜಾಲದ ಮೂಲಕ. ದೂರವಾಣಿ ಮೂಲಕ ಸಂದರ್ಶನ ನಡೆಸಿ ಮೊದಲ ಸುತ್ತಿಗೆ ಆಯ್ಕೆ ಮಾಡಲಾಯಿತು. ಪುಣೆಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಅಂಡರ್‌ 40 ಹಾಗೂ 40 ಮೇಲ್ಪಟ್ಟು ಎಂಬ ಎರಡು ವಿಭಾಗಗಳಿದ್ದವು. ಅಂತಿಮ ಸುತ್ತಿಗೆ ಕೇವಲ ಏಳು ಜನರನ್ನು ಆಯ್ಕೆ ಮಾಡಲಾಗಿತ್ತು.

‘ನಮಗೆ ಸಾಂಸ್ಕೃತಿಕ, ಪ್ರತಿಭೆ, ಈವೆನಿಂಗ್‌ ಹಾಗೂ ಬ್ಯುಸಿನೆಸ್‌ ಸುತ್ತುಗಳಿದ್ದವು. ನಾನು ಕೂರ್ಗ್‌ ಶೈಲಿಯ ದಿರಿಸು ಧರಿಸಿ ಕರ್ನಾಟಕವನ್ನು ಪ್ರತಿನಿಧಿಸಿದೆ. ಟ್ಯಾಲೆಂಟ್‌ ಸುತ್ತಿನಲ್ಲಿ ಮೊದಲಿಗಳಾಗಿ ಮಿಸಸ್‌ ಟ್ಯಾಲೆಂಟ್‌ ಕಿರೀಟ ಧರಿಸಿದ್ದು ತುಂಬಾ ಖುಷಿ ನೀಡಿತು. ಈ ಸ್ಪರ್ಧೆಗೆ ಛಾಯಾಗ್ರಾಹಕ ಸಮೀರ್‌ ಬೆಳವಾಲ್ಕರ್‌, ಕಥಕ್‌ ನೃತ್ಯಗಾರ್ತಿ ಮುಗ್ಧಾ ಹಾಗೂ ಡಾ.ನೇನೆ ತೀರ್ಪುಗಾರರಾಗಿದ್ದರು’ ಎಂದು ವಿವರಿಸಿದರು ತೃಪ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.