ADVERTISEMENT

ಅಸ್ಪೃಶ್ಯ ‘ಕಪ್ಪು’ ಗುಲಾಬಿ

ಸ್ಫೂರ್ತಿ ಗೌಡ ಎಚ್‌.ಡಿ.
Published 4 ಫೆಬ್ರುವರಿ 2016, 19:30 IST
Last Updated 4 ಫೆಬ್ರುವರಿ 2016, 19:30 IST
‘ಫ್ರೀ ಸ್ಟೇಟ್’ ಚಿತ್ರದ ದೃಶ್ಯ
‘ಫ್ರೀ ಸ್ಟೇಟ್’ ಚಿತ್ರದ ದೃಶ್ಯ   

ವರ್ಣ, ಜಾತಿಗಳನ್ನು ಮೀರಿದ್ದು ಪ್ರೀತಿ. ಅದೊಂದು ಜಾದುವಿನಂತೆ.  ಅಚ್ಚರಿಯ ರೀತಿಯಲ್ಲಿ ಸಂಭವಿಸುವ ಗುಣ ಅದಕ್ಕಿದೆ. ಬಲಿಷ್ಟ ತಡೆಗೋಡೆ, ನಿರ್ಬಂಧ ವಿಧಿಸಿದರೇನು ಮೀರಿ ಬೆಳೆದು ಹೂ ಅರಳಿಸಿ ನಗುವುದು ಪ್ರೀತಿ. 

ಅಂಕೆಗೆ ಸಿಗದೆ ಶಂಕೆಯ ನೆರಳಲ್ಲಿ ಬೆಳೆವ ಕೊನೆಗೆ ಸಾವಿನ ದಾರಿಯಲ್ಲಿ ನಿಶ್ಚಳವಾಗಿ ರಕ್ತ ಸುರಿಸಿಕೊಂಡು ಸಂಭ್ರಮದ ಪ್ರೀತಿ ಇನ್ನಿಲ್ಲವಾಗುದು.  ಇಂತಹದೊಂದು ಕಥೆ ಬರೆದು ‘ಫ್ರೀ ಸ್ಟೇಟ್’ ಚಿತ್ರ ನಿರ್ದೇಶಿಸಿದ್ದು ಸಾಲ್ಮನ್‌  ದೇ ಜಾಗೇರ್‌. ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಇಂಗ್ಲಿಷ್‌ ಭಾಷೆಯ ದಕ್ಷಿಣ ಆಫ್ರಿಕಾದ ಸಿನಿಮಾ. ಪ್ರಮುಖ ಪಾತದಲ್ಲಿ (ಜೆನೆಟ್‌) ನಿಕೋಲಾ ಬ್ರೆತೆನ್‌ಬನ್ಚ್‌,  (ರವಿ) ಆ್ಯಂಡ್ರಿವ್‌ ಗೋವೆಂದರ್‌ ಅಭಿನಯಯಿಸಿದ್ದಾರೆ.

ದಕ್ಷಿಣ ಆಫ್ರೀಕಾದಲ್ಲಿ ವರ್ಣಭೇದ ನೀತಿ ಜಾರಿಯಿದ್ದ ಸಮಯ, ಕರಿಯರು ಬಿಳಿಯರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುತ್ತಾರೆ. ದಕ್ಷಿಣ ಆಫ್ರಿಕಾದ ‘ಫ್ರೀ ಸ್ಟೇಟ್‌’ ಎಂಬ ಭಾಗದಲ್ಲಿ ರಾತ್ರಿ ವೇಳೆ ಬಿಳಿಯರನ್ನು ಹೊರತು ಪಡಿಸಿ ಭಾರತೀಯರು ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವಂತಿಲ್ಲ, ಬಿಳಿಯ ಹುಡುಗಿಯರನ್ನು ಕರಿಯರು ಪ್ರೀತಿಸುವಂತಿಲ್ಲ.

ವರ್ಣಭೇದ ನೀತಿಯ ಹಲವು ಕಾನೂನು ಕಟ್ಟಲೆ ಜಾರಿಯಾದಾ ‘ಫ್ರೀ ಸ್ಟೇಟ್‌’  ಜಾನೆಟ್‌ ಹುಟ್ಟೂರು. ವಿದ್ಯಾಭ್ಯಾಸ ಮುಗಿಸಿ ಮನೆ ಮರಳುವ ದಾರಿಯಲ್ಲಿ ಕಾರು ಪಂಕ್ಚರ್‌ ಆಗಿರುತ್ತದೆ, ಆದೇ ದಾರಿಯಲ್ಲಿ ಸಂಚರಿಸುತ್ತಿದ್ದ ಭಾರತೀಯ ರವಿ, ಜಾನೆಟ್‌ಳನ್ನು ಸುರಕ್ಷಿತವಾಗಿ ಮನೆ ತಲುಪಿಸುತ್ತಾನೆ.
ಅಲ್ಲದೆ ಆಕೆಯ ಕಾರನ್ನು ದುರಸ್ತಿ  ಮಾಡಿ ಜಾನೆಟ್‌ ಮನೆಗೆ ತಂದು ಒಪ್ಪಿಸುತ್ತಾನೆ. ಜಾನೆಟ್‌ ಭಾರತೀಯನೊಂದಿಗೆ ಸ್ನೇಹದಿಂದ ವರ್ತಿಸುತ್ತಿರುವುದನ್ನು ಸ್ಥಳೀಯ ಪೊಲೀಸರು ಗಮನಿಸುತ್ತಿರುತ್ತಾರೆ, ಈ ವಿಚಾರವಾಗಿ ಮಗಳನ್ನು ಹಿಡಿತದಲ್ಲಿ ಇಡುವಂತೆ ಜಾನೆಟ್‌ಳ ತಂದೆಗೆ ದೂರುತ್ತಾರೆ. ಆದರೆ,   ಮಗಳ ನಡೆಯನ್ನು ತಂದೆ ಗೌರವಿಸುತ್ತಾರೆ.

ತನಗೆ ಸಹಾಯ ಮಾಡಿದ  ರವಿಗೆ ಕೃತಜ್ಞತೆ ಸಲ್ಲಿಸುವುದಾಗಿ ಉಡುಗೊರೆಯೊಂದಿಗೆ ಜಾನೆಟ್‌ ರವಿಯ ಕುಟುಂಬ ನಡೆಸುತ್ತಿದ್ದ ಮಳಿಗೆಗೆ ಭೇಟಿ ನೀಡುತ್ತಾಳೆ.  ಜಾನೆಟ್‌ ಉಡುಗೊರೆಯಾಗಿ ತಂದಿದ್ದ ಬೀಫ್‌ ಖಾದ್ಯಗಳನ್ನು ನೋಡಿ ‘ನಾವು ಹಿಂದು’  ಎಂದು ರವಿ ತಾಯಿ ಜಾನೆಟ್‌ ಮೇಲೆ ಕೋಪಗೊಳ್ಳುತ್ತಾಳೆ.

ಇಂತಹ ಹಲವು ಧರ್ಮ ಸೂಕ್ಷ್ಮ ಮತ್ತು ವರ್ಣಭೇದಗಳ ನಡುವೆ ಜಾನೆಟ್‌ಳನ್ನು ರವಿ ಆಕೆ ಫಾಂಹೌಸ್‌ನಲ್ಲಿ ಭೇಟಿಯಾಗುತ್ತಿರುತ್ತಾನೆ. ಸ್ನೇಹ ಪ್ರೀತಿಯಾಗಿ ಹೂ ಅರಳಲು ಅದರ ಕಂಪು , ಗುಮಾನಿಯಿಂದ ಜಾನೆಟ್‌ಳ ಹಿಂದೆ ಪಹರೆ ಕಾಯುತ್ತಿದ್ದ ಪೊಲೀಸರಿಗೆ ತಟ್ಟುತ್ತದೆ.

ಮತ್ತೊಂದೆಡೆ ರವಿಗೆ ಭಾರತೀಯ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದು, ಜಾನೆಟ್‌ಳನ್ನು ಪ್ರೀತಿಸಿದ ಕಾರಣ ಮದುವೆ ರದ್ದುಗೊಳಿಸುವಂತೆ ಹುಡುಗಿ ಮನೆಯವರಿಗೆ ರವಿ ತಂದೆ ತಿಳಿಸುತ್ತಾರೆ.

ರವಿಯನ್ನು ಇಷ್ಟಪಟ್ಟಿದ್ದ ಭಾರತೀಯ ಯುವತಿ ನಿರಾಕರಣೆ ನೋವಿನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮಗಳನ್ನು ಕಳೆದುಕೊಂಡ ತಂದೆ, ಯುವತಿಯ ಅಣ್ಣ  ರವಿಯನ್ನು ಸಾಯಿಸಲು ಮುಂದಾಗುತ್ತಾರೆ.

ಅಷ್ಟರಲ್ಲಾಗಾಲೆ ಫ್ರೀ ಸ್ಟೇಟ್‌ನ ಪೊಲೀಸರು ರವಿಯನ್ನು ಭಯೋತ್ಪಾದಕ ಎಂದು ಗುರುತಿಸಿರುತ್ತಾರೆ. ಈ ಎಲ್ಲಾ ಬೆಳವಣಿಗೆಯಿಂದ ಇನ್ನೂ ಫ್ರೀ ಸ್ಟೇಟ್‌ನಲ್ಲಿ ತಾವು ‘ಒಂದಾಗಿ’ ಬಾಳಲು ಸಾಧ್ಯವಿಲ್ಲವೆನಿಸಿ, ಇಬ್ಬರು ದೇಶ ತೊರೆದು ಹೋಗಲು ನಿರ್ಧರಿಸುತ್ತಾರೆ.

ಅಷ್ಟರಲ್ಲಿ ಜಾನೆಟ್‌ಳನ್ನು ಪೊಲೀಸರು, ರವಿಯನ್ನು ಆತ್ಮಹತ್ಯೆ ಮಾಡಿಕೊಂಡ ಯುವತಿ ಅಣ್ಣ ಹಿಂಬಾಲಿಸಿ ಬರುತ್ತಾರೆ. ಗಲಭೆ ನಡುವೆ ರವಿಗೆ ಯುವತಿಯ ಅಣ್ಣ  ಗುಂಡು ಹಾರಿಸುತ್ತಾನೆ, ‘ಕರಿಯನನ್ನು ಪ್ರೀತಿಸಿದಕ್ಕೆ’ ಜಾನೆಟ್‌ಳನ್ನು ಕಾನೂನು ಜೈಲಿಗಟ್ಟುತ್ತದೆ.

ಬಾಳಲಾರದೆ, ಓಡಿಹೋಗಲು ಆಗದೆ ನಲುಗುವ ಜಾನೆಟ್‌–ರವಿ ಒಂದು ಕಡೆಯಾದರೆ, ರವಿಯಿಂದ ನಿರಾಕರಣೆಗೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ, ಆ ನೋವು ಭರಿಸಲಾಗದೆ ಗೋಳಾಡುವ ಆಕೆ ತಂದೆ ಸ್ಥಿತಿ ಕಾಡುವಂಥದ್ದು. ಎಲ್ಲಾ ನೋವುಗಳ ನಡುವೆ ‘ಫ್ರೀ ಸ್ಟೇಟ್‌’ ಕುದಿಯುವ  ವರ್ಣಭೇದ ನೀತಿಯನ್ನು ಹೊದ್ದು  ತಣ್ಣನೆ ಮೌನವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.