ADVERTISEMENT

ಅಹೋರಾತ್ರಿ ಸಂಗೀತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST
ಅಹೋರಾತ್ರಿ ಸಂಗೀತ ಸಮ್ಮೇಳನ
ಅಹೋರಾತ್ರಿ ಸಂಗೀತ ಸಮ್ಮೇಳನ   

ನಗರದಲ್ಲಿ ಮೂರು ದಶಕಗಳಿಂದ ನಿರಂತರವಾಗಿ ಅಹೋರಾತ್ರಿ ಸಂಗೀತ ಸಮ್ಮೇಳನವನ್ನು ನಡೆಸಿಕೊಂಡು ಬಂದಿರುವ ಗುರುರಾವ್ ದೇಶಪಾಂಡೆ ಸಂಗೀತ ಸಭಾ ಈ ವರ್ಷದ ಕಾರ್ಯಕ್ರಮ-ಗುರುರಾವ್ ದೇಶಪಾಂಡೆ ಸಂಗಿತ ಮಹೋತ್ಸವವನ್ನು ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು (ಡಿ.24) ಹಮ್ಮಿಕೊಂಡಿದೆ.

ಪ್ರತಿವರ್ಷದಂತೆ ಈ ಸಂಗೀತ ಸಮ್ಮೇಳನದಲ್ಲಿ ಗುರುರಾವ್ ದೇಶಪಾಂಡೆ ರಾಷ್ಟ್ರೀಯ ಸಂಗೀತ ಪುರಸ್ಕಾರ `ಗುರು ಗಂಧರ್ವ'ವನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು. ಹೆಸರಾಂತ ಗಾಯಕ ಸಹೋದರರಾದ ಪಂಡಿತ್ ರಾಜನ್ ಮತ್ತು ಪಂಡಿತ್ ಸಾಜನ್ ಮಿಶ್ರಾ ಅವರು ಈ ಬಾರಿ ಗುರು ಗಂಧರ್ವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಂಗೀತ ಸಭಾ ತಿಳಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆನರಾ ಬ್ಯಾಂಕ್ ಪ್ರಾಯೋಜಿಸಿರುವ ಈ ಸಂಗೀತ ಸಮ್ಮೇಳನದಲ್ಲಿ ರಾಮಚಂದ್ರಾಪುರ ಮಠದ ಶ್ರೀ ಭಾರತೀಶ್ವರ ಭಾರತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕೆನರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ರವೀಂದ್ರ ಭಂಡಾರಿ, ಕನ್ನಡ ಸಂಸ್ಕೃತಿ ಮತ್ತು ಮಾಹಿತಿ ಇಲಾಖೆಯ ಕಾರ್ಯದರ್ಶಿ ಬಸವರಾಜು, ಶಾಸಕ ಡಾ.ಅಶ್ವತ್ಥನಾರಾಯಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ, ಹಿರಿಯ ವಿದ್ವಾಂಸ ಪಂಡಿತ್ ವಿನಾಯಕ ತೊರವಿ ಅವರ ಕಛೇರಿಗಳ ಸಿ.ಡಿ ಹಾಗೂ ತೊರವಿ ಅವರ ಶಿಷ್ಯ ದತ್ತಾತ್ರೇಯ ವೇಲಂಕರ್ ಅವರ ಹಾಡುಗಾರಿಕೆಯ ಸಿ.ಡಿ. ಕೂಡಾ ಬಿಡುಗಡೆಯಾಗಲಿದೆ.

ಅಹೋರಾತ್ರಿ ಸಂಗೀತ ಕಛೇರಿ: ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೇ ರಾತ್ರಿಯಿಡೀ ಸತತವಾಗಿ ನಡೆಯುವ ಸಂಗೀತ ಕಛೇರಿಗಳು. ಪಂಡಿತ್ ರಾಜನ್-ಸಾಜನ್ ಮಿಶ್ರಾ ಅವರ ದ್ವಂದ್ವ ಹಾಡುಗಾರಿಕೆ ಪ್ರಮುಖ ಆಕರ್ಷಣೆಯಾಗಿದ್ದರೆ, ಅಪೂರ್ವ ಗೋಖಲೆ ಮತ್ತು ಎಂ.ಎಸ್. ಶೀಲಾ ಅವರ ಗಾಯನವೂ ಈ ಸಂಗೀತ ಸಮ್ಮೇಳನದಲ್ಲಿರುತ್ತದೆ. ಪಂಡಿತ್ ಕುಮಾರ್ ಬೋಸ್ ಅವರಿಂದ ತಬಲಾ ಸೋಲೊ, ಉಸ್ತಾದ್ ಸರ್ವಾರ್ ಹುಸೇನ್ ಅವರ ಸಾರಂಗಿ ವಾದನವೂ ಸಂಗೀತಾಭಿಮಾನಗಳಿಗೆ ರಸದೌತಣವಾಗಲಿದೆ. ಕಾರ್ಯಕ್ರಮದ ರೂವಾರಿ ಪಂಡಿತ್ ವಿನಾಯಕ ತೊರವಿ ಅವರ ಗಾಯನವೂ ಇದೆ.

ಪಳಗಿದ ಕೈಗಳೇ ಪಕ್ಕವಾದ್ಯಗಳಲ್ಲೂ ಸಹಕಾರ ನೀಡಲಿರುವುದು ಮತ್ತೊಂದು ವಿಶೇಷ. ತಬಲಾದಲ್ಲಿ ಪಂ. ರವೀಂದ್ರ ಯಾವಗಲ್, ಪಂ.ಆಶೀಶ್ ಸೇನ್‌ಗುಪ್ತಾ ಹಾಗೂ ಪಂ. ರಾಜೇಂದ್ರ ನಾಕೋಡ್, ಹಾರ್ಮೋನಿಯಂನಲ್ಲಿ ಡಾ.ರವೀಂದ್ರ ಕಾಟೋಟಿ ಹಾಗೂ ಪಂ. ವ್ಯಾಸಮೂರ್ತಿ ಕಟ್ಟಿ, ಮೃದಂಗದಲ್ಲಿ ವಿದ್ವಾನ್ ಬಿ.ಸಿ. ಮಂಜುನಾಥ್, ಘಟಂನಲ್ಲಿ ಎಸ್.ಎನ್. ನಾರಾಯಣಮೂರ್ತಿ, ವಯೊಲಿನ್‌ನಲ್ಲಿ ವಿದುಷಿ ನಳಿನಾ ಮೋಹನ್ ನೆರವು ನೀಡಲಿದ್ದಾರೆ. ಸೋಮವಾರ ರಾತ್ರಿ 9ರ ನಿಗದಿತ ವೇಳೆಗೆ ಸಂಗೀತ ಸಮ್ಮೇಳನ ಶುರುವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT