ADVERTISEMENT

ಆಶ್ಲಿ ಯ ಅಸಲಿ ಮಾತು

ಡಿ.ಗರುಡ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಆಕೆ ಪ್ರಶ್ನೆಗಳ ಪ್ರವಾಹ ಹರಿಸಿದರು. ಅವರ ಸವಾಲುಗಳಿಗೆ ಉತ್ತರ ನೀಡುತ್ತಾ ಕನ್‌ಫ್ಯೂಸ್ ಆಗಿ ಮಿದುಳಿನ ಫ್ಯೂಸ್ ಹಾರುವುದೊಂದೇ ಬಾಕಿ! ಇಪ್ಪತ್ತು ನಿಮಿಷಗಳ ಕಾಲ ಪ್ರಶ್ನೆಗಳ ಸುರಿಮಳೆ. ಸಂದರ್ಶನ ಮಾಡುತ್ತಿದ್ದುದು ನಾನೋ; ಅವರೋ ಎನ್ನುವ ಗೊಂದಲವೂ ಕಾಡಿದ್ದು ನಿಜ.

ಈ ನಾಡಿನ ಬಗ್ಗೆ ತಿಳಿಯುವ ಕಾತರ. ಅವಸರದ ಆಡಿಷನ್ ಪ್ರವಾಸದ ಮೇಲೆ ಬಂದಾಕೆಗೆ ಅಲ್ಪಾವಧಿಯಲ್ಲಿ ಯೋಗ ಕಲಿಯಬೇಕು, ನಾಟಕ-ನೃತ್ಯ ಪ್ರದರ್ಶನಗಳನ್ನು ನೋಡಬೇಕೆನ್ನುವ ಆಸಕ್ತಿ. ಜೊತೆಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ `ಇಲ್ಲಿ ಹೇಗೆ?~ ಅನ್ನುವ ಕುತೂಹಲವನ್ನು ತಣಿಸಿಕೊಳ್ಳುವ ಉತ್ಸಾಹ.

ಕೆನ್ನೆಗೆ ಮುತ್ತಿಡುವ ಗುಂಗುರು ಕೂದಲನ್ನು ಮತ್ತೆ ಮತ್ತೆ ಹಿಂದೆ ತಳ್ಳುತ್ತಾ ಇಷ್ಟಗಲ ಕಣ್ಣರಳಿಸಿ ಮಾತನಾಡಿದ ಕೆನಡಾದ `ಮಿಶ್ರ ತಳಿ~ ಮಾಡೆಲ್ ಆಶ್ಲಿ ಜಾನ್ಸನ್ ಉತ್ತರ ನೀಡಿದ್ದು ಕಡಿಮೆ ಪ್ರಶ್ನೆ ಕೇಳಿದ್ದೇ ಹೆಚ್ಚು. ಅವರ “?” ಮಾರ್ಕ್‌ಗಳಿಗೆ ವಿರಾಮ ಹಾಕಿ ಒಂದಿಷ್ಟು ಪ್ರತಿಕ್ರಿಯೆ ಪಡೆಯುವ ಪ್ರಯತ್ನ ಮಾಡಿದಾಗ ದಕ್ಕಿದ್ದು ಇಷ್ಟು:

ಭಾರತದ ಯಾವುದಾದರೂ ಭಾಷೆ ಬರುತ್ತದಾ?

“ನಮಸ್ತೆ”, “ಕೆಸೆ ಹೈ” ಇಷ್ಟು ಮಾತ್ರ ಹಿಂದಿ ಗೊತ್ತು. ಎರಡು ತಲೆಮಾರುಗಳ ಹಿಂದಿನ ಭಾರತದ ಲಿಂಕ್. ಒಂದು ರೀತಿಯಲ್ಲಿ ಮಿಶ್ರಮಾಧುರ‌್ಯ. ಮನೆಯಲ್ಲಿ ಹಲವಾರು ಸಂಪ್ರದಾಯಗಳನ್ನು ಫಾಲೋ ಮಾಡುತ್ತೇವೆ.

ಆದ್ದರಿಂದ ನಮ್ಮದು ವಿಶ್ವಕುಟುಂಬ. ನಾನು ಇಂಡಿಯನ್ ಥರಾ ಕಾಣಿಸುತ್ತೇನೆ ಎಂದು ಕೆಲವರು ಹೇಳುತ್ತಾರೆ. ನನಗೂ ಹಾಗೆಯೇ ಅನಿಸುತ್ತದೆ. ನಿಮಗೆ ಹೇಗೆ ಕಾಣಿಸುತ್ತೇನೆ (ಕಿಲಕಿಲ ನಗು).

ಪಶ್ಚಿಮದಿಂದ ಪೂರ್ವದತ್ತ ಗಮನ ಹರಿದಿದ್ದು ಹೇಗೆ?

ಹದಿನೆಂಟನೇ ವಯಸ್ಸಿನಲ್ಲಿಯೇ ಮಾಡೆಲಿಂಗ್ ಆರಂಭಿಸಿದೆ. ಈಗ ನನಗೆ ಇಪ್ಪತ್ತು ನಡೀತಿದೆ. ಐದು ಅಡಿ ಏಳು ಅಂಗುಲ ಎತ್ತರ ಇದ್ದೇನೆ. ಭಾರತ-ಆಫ್ರಿಕಾ-ಕೆನಡಾ ಹೀಗೆ ಜನರೇಷನ್ ಮಿಕ್ಸ್ ಆಗಿರುವ ಕುಟುಂಬ ನಮ್ಮದು. ಕೆನಡಾದಲ್ಲಿ ನೂರಾರು ಫ್ಯಾಷನ್ ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿದ್ದೇನೆ.

ಈಗ ಒಂದಿಷ್ಟು ಅಡ್ವೆಂಚರ್ ಮಾಡುವ ಆಸಕ್ತಿ. ಆದ್ದರಿಂದ ಪೂರ್ವಜರ ನೆಲೆಯತ್ತ ಆಸೆಯಿಂದ ನೋಡಿದ್ದೇನೆ. ಅವಕಾಶ ಎಲ್ಲಿ ಸಿಕ್ಕರೂ ಒಪ್ಪಿಕೊಳ್ಳುತ್ತೇನೆ. ಆಡಿಷನ್ ಮುಗಿಸಿದ್ದೇನೆ ಪ್ರೊಜೆಕ್ಟ್ ಏನು ಅಂತಾ ಈಗಲೇ ಹೇಳಲು ಬಯಸುವುದಿಲ್ಲ. ಓಕೆ ಆದ ನಂತರ ಹೇಳುವುದು ಸರಿ ಎನಿಸುತ್ತದೆ.

ಆಡಿಷನ್‌ಗಾಗಿ ಪೇಯ್ಡ ಹಾಲಿಡೆನಾ?

ಒಂದು ರೀತಿ ಹಾಗೆಯೇ ಅನ್ನಬೇಕು. ಆದರೆ ನನ್ನ ಪರ್ಸ್‌ನಿಂದ ಒಂದಿಷ್ಟು ಖರ್ಚು ಮಾಡಿ ವಾರದ ಮಟ್ಟಿಗೆ ಯೋಗ ಕಲಿತಿದ್ದೇನೆ. ಆಡಿಷನ್ ಯಶಸ್ವಿ ಆಗಿದೆ ಅನಿಸುತ್ತದೆ. ಮತ್ತೆ ಇಲ್ಲಿಗೆ ಬಂದರೂ ಬರಬಹುದು.

ADVERTISEMENT

ಮುಂಬೈಗೂ ಕಾಸ್ಟಿಂಗ್ ಡೈರಕ್ಟರ್‌ಗಳನ್ನು ನೋಡಲು ಹೋಗಿದ್ದೆ. ಆ ನಗರದಲ್ಲಿ ಜನವೋ ಜನ. ಗಾರ್ಡನ್ ಸಿಟಿಯಲ್ಲಿ ಹಾಗಿಲ್ಲ. ಸಂಜೆ ಹೊತ್ತು ಡಾನ್ಸ್-ಡ್ರಾಮಾ ನೋಡಿ ಕಾಲ ಕಳೆದಿದ್ದೇನೆ.

ಈವರೆಗೆ ಮಾಡಿರುವ ದೊಡ್ಡ ಪ್ರೊಜೆಕ್ಟ್‌ಗಳು?

ಕೆನಡಾದಲ್ಲಿ ಟೆಲಿವಿಷನ್ ಡಾನ್ಸ್ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್. ಶಾಂಪೂ ಪ್ರಾಡಕ್ಟ್‌ಗಳಿಗೆ ರೂಪದರ್ಶಿ ಆಗಿದ್ದೇನೆ. ನನ್ನ ಕೇಶ ನೇರವಾಗಿವೆ. ಇತ್ತೀಚೆಗಷ್ಟೇ ಕರ್ಲಿ ಮಾಡಿಸಿಕೊಂಡಿದ್ದೇನೆ. ಕಾರ್ ಜಾಹೀರಾತಿಗಾಗಿ ಈ ಬದಲಾವಣೆ.

ಶೂಟಿಂಗ್ ಮುಗಿದ ನಂತರವೂ ಹಾಗೆಯೇ ಉಳಿಸಿಕೊಂಡಿದ್ದೇನೆ. ಭಾರತೀಯ ಮೂಲದ ಕೆಲವು ಆಯುರ್ವೇದ ಸೌಂದರ್ಯವರ್ಧಕ ಬ್ರಾಂಡ್‌ಗಳ ಪ್ಯಾಕ್ ಮೇಲೆಯೂ ನನ್ನ ಮುಖ ಕಾಣಿಸಿಕೊಂಡಿದೆ.

ಕನ್ನಡದಲ್ಲಿ ಅವಕಾಶ ಸಿಕ್ಕರೆ?


ಸ್ವೀಟ್...! ಐ ಲವ್ ಟು ವರ್ಕ್. ಸದ್ಯಕ್ಕೆ ಪ್ರಯತ್ನ. ಇಲ್ಲಿ ಅನೇಕ ವಿದೇಶಿಯರು ಕೆಲಸ ಮಾಡುತ್ತಿದ್ದಾರೆಂದು ಕೇಳಿದ್ದೇನೆ. ನನಗೂ ಅಂಥದೊಂದು ಅವಕಾಶ ಸಿಕ್ಕರೆ ಸಂತಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.