ADVERTISEMENT

ಆಸ್ತಮಾ ಎಂಬ ಭೂತ

ಮಾಲತಿ ಭಟ್ಟ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಮೂರು ವರ್ಷದ ಹಸುಳೆ. ಕೆಂಪು ಕೆನ್ನೆ, ತುಂಬಿದ ಗಲ್ಲ. ಜೋಕಾಲಿ ಜೀಕಿ, ಜಾರುಬಂಡಿಯಲ್ಲಿ ಜಾರಿ, ಕುಣಿಯುತ್ತ ಮನೆಗೆ ಹೋಗಿದ್ದೇ ತಡ. ನಿಲ್ಲದ ಆಕ್ಷಿ... ಕಟ್ಟಿಕೊಂಡ ಮೂಗು. ರಾತ್ರಿ ಮುಸುಕಿದಂತೆ ಉಸಿರಾಡಲು ಕಷ್ಟಪಡುತ್ತಿದ್ದ ಕಂದಮ್ಮ... ಶ್ವಾಸ ಎಳೆಯುವಾಗ ಗೊರ್ರ ಗೊರ್ರ ಸದ್ದು. ಯಾರದಾದರೂ ದೃಷ್ಟಿ ತಾಕೀತಾ... ಎಳೆಯ ಅಮ್ಮನ ಕಣ್ಣಲ್ಲೂ ನೀರು...

ಆಕೆ 10ನೇ ತರಗತಿ ವಿದ್ಯಾರ್ಥಿನಿ. ಭವಿಷ್ಯ ನಿರ್ಧರಿಸುವ ವರ್ಷವಿದು. ಬೆಳಿಗ್ಗೆ ಸ್ಕೂಲು, ಸಂಜೆ ಟ್ಯೂಷನ್... ರಾತ್ರಿ ಓದು... ಸ್ನೇಹಿತೆಯರ ಜೊತೆ ಐಸ್‌ಕ್ರೀಂ ತಿಂದಿದ್ದೇ ನೆಪ. ರಾತ್ರಿ ಉಬ್ಬಸ. ನಾಲ್ಕು ದಿನ ಶಾಲೆ, ಟ್ಯೂಷನ್‌ಗೆಲ್ಲ ಅನಿವಾರ್ಯ ರಜೆ.

ಬೆಂಗಳೂರಿನ ಯಾವುದೇ ಬಡಾವಣೆಗೆ ಹೋಗಿ ವಿಚಾರಿಸಿ... ಒಂದಲ್ಲ ಒಂದು ಮನೆಯಲ್ಲಿ ಇಂತಹ ಸಮಸ್ಯೆಯ ಮಕ್ಕಳು ಕಾಣಸಿಗುತ್ತಾರೆ. ಇದಕ್ಕೆಲ್ಲ ವೈದ್ಯರು ನೀಡುವ ಹೆಸರು ಆಸ್ತಮಾ ಅಥವಾ ದಮ್ಮು ಅಥವಾ ಉಬ್ಬಸ.

ಒಂದು ಅಂದಾಜಿನ ಪ್ರಕಾರ ಬೆಂಗಳೂರಿನ ಶೇ 30ರಷ್ಟು ಜನ ಅಲರ್ಜಿ ಮತ್ತು ಆಸ್ತಮಾದಿಂದ ಬಳಲುತ್ತಿದ್ದಾರೆ. ಮತ್ತೊಂದು ವಿಷಾದದ ಸಂಗತಿಯೆಂದರೆ ಆಸ್ತಮಾ ಮತ್ತು ಅಲರ್ಜಿಯಿಂದ ಬಳಲುತ್ತಿರುವವರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ಸುಮಾರು 15 ಲಕ್ಷ.

ಆಸ್ತಮಾ ಎಂಬ ಜೀವ ಹಿಂಡುವ, ನರಳಿಸುವ ಈ ಕಾಯಿಲೆ ಆಡುವ, ನಲಿಯುವ, ಶಾಲೆಗೆ ಹೋಗುವ ಮುದ್ದು ಕಂದಮ್ಮಗಳ ಮುಖ ಬಾಡಿಸುತ್ತಿದೆ. ಇನ್‌ಹೇಲರ್ ಸೇವಿಸುತ್ತ, ನೆಬ್ಯುಲೈಸೇಷನ್‌ಗಾಗಿ ಕ್ಲಿನಿಕ್, ಆಸ್ಪತ್ರೆಗೆ ಎಡತಾಕುವಂತೆ ಮಾಡುತ್ತದೆ.

ಆಸ್ತಮಾಗೆ ಕಾರಣ ಹುಡುಕುತ್ತ ಹೊರಟರೆ ಬ್ರಹ್ಮರಾಕ್ಷಸನಂತೆ ಬೆಳೆಯುತ್ತಿರುವ ಬೆಂಗಳೂರು ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ.

ಎರಡು ದಶಕಗಳ ಹಿಂದೆ ಬೆಂಗಳೂರು ಅಕ್ಷರಶಃ ಮರಗಳ ನಗರವಾಗಿತ್ತು. ವಾಹನಗಳು ವಿರಳವಾಗಿದ್ದವು. ಆಗ ನಗರದ ತಂಪಿನ ಹವೆ ಕೆಲವರನ್ನು ಮಾತ್ರ ಕಾಡಿಸುತ್ತಿತ್ತು. ಬೆಂಗಳೂರಿನ ಅಸಂಖ್ಯಾತ ಮರ, ಗಿಡಗಳಲ್ಲಿ ಬಿಡುತ್ತಿದ್ದ ಹೂಗಳ ಪರಾಗರೇಣು ಅಲರ್ಜಿಗೆ ಕಾರಣ ಎಂದು ತಜ್ಞರು ಹೇಳುತ್ತಿದ್ದರು.

ಈಗ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಮರಗಳಿಗೆ ಕೊಡಲಿ ಹಾಕಲಾಗಿದೆ. ಪರಾಗರೇಣುಗಳ ಜೊತೆಗೆ ಈಗ ಬೆಂಬಿಡದ ವಾಹನಗಳ ಹೊಗೆ. ಫ್ಲೈಒವರ್, ಅಂಡರ್‌ಪಾಸ್, ಮೆಟ್ರೊಗಾಗಿ ಸಿಕ್ಕ, ಸಿಕ್ಕ ಕಡೆ ಅಗೆದ ರಸ್ತೆಗಳ ಧೂಳನ್ನು ಉಸಿರಿನ ಜೊತೆ ಸೇವಿಸಬೇಕಾಗಿದೆ.

ಶುದ್ಧಹವೆಯ ಕೊರತೆ, ದಿಢೀರ್ ಎಂದು ಬದಲಾಗುವ ಹವಾಮಾನ, ಬಿಸಿ, ಬಿಸಿಯಾದ ತಿಳಿ ಆಹಾರದ ಬದಲು ಸಮಯ ಸಿಕ್ಕಾಗ, ಕೈಗೆ ಸಿಕ್ಕ ಆಹಾರ ಸೇವಿಸುವ ಅವಸರದ ಜೀವನಶೈಲಿ ಇವೆಲ್ಲ ಸಹ ಆಸ್ತಮಾಗೆ ಕಾರಣವಾಗುತ್ತವೆ. ಕೆಲ ಹಳೆಯ ಬಡಾವಣೆಗಳಲ್ಲಿ ಜಾಗದ ಕೊರತೆಯಿಂದ ಗಾಳಿ, ಬೆಳಕು ತೂರಲು ಅವಕಾಶ ಇಲ್ಲದಂತೆ ನಿರ್ಮಿಸಲಾದ ಕಿಷ್ಕಿಂಧೆಯಂತಹ ಮನೆಗಳು ಸಹ ಅಲರ್ಜಿ, ನೆಗಡಿ, ಆಸ್ತಮಾಕ್ಕೆ ದಾರಿ ಮಾಡಿಕೊಡುತ್ತವೆ.

ಕಾರಣ ಏನು?
ಸಾಮಾನ್ಯವಾಗಿ ಆಸ್ತಮಾ ಅಥವಾ ಅಲರ್ಜಿ ಹೊಂದಿರುವವರ ದೇಹ ಸೂಕ್ಷ್ಮವಾಗಿದ್ದು, ಹೊರಗಿನ ವಸ್ತುಗಳಿಗೆ ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಧೂಳು, ಪರಾಗ ಇತ್ಯಾದಿ ಅಲರ್ಜಿ ಉಂಟು ಮಾಡುವ ‘ಅಲರ್ಜಿನ್’ಗಳು ಉಸಿರಿನ ಜೊತೆ ಶ್ವಾಸನಾಳ ಸೇರಿದಾಗ ಶ್ವಾಸಕೋಶದಲ್ಲಿ ಊತ ಉಂಟಾಗಿ ಉಸಿರಾಟ ಕಷ್ಟವಾಗುತ್ತದೆ.

ತೇವಾಂಶ ಭರಿತ ಬೆಂಗಳೂರಿನ ಹವೆ ‘ಡಸ್ಟ್‌ಮೈಟ್’ (ಆಸ್ತಮಾಕ್ಕೆ ಕಾರಣವಾಗುವ ಸೂಕ್ಷ್ಮಾಣು ಜೀವಿ)ಗಳನ್ನು ಸ್ವರ್ಗದಂತೆ ಪೊರೆಯುತ್ತದೆ. ಮನೆಯ ಕಾರ್ಪೆಟ್, ಹಾಸಿಗೆ, ಅಡುಗೆ ಮನೆಗಳಲ್ಲಿ ಈ ಸೂಕ್ಷ್ಮ ಜೀವಿಗಳು ಇರುತ್ತವೆ.

ಶೇ 60ರಷ್ಟು ಆಸ್ತಮಾ ಪ್ರಕರಣಗಳಿಗೆ ಡಸ್ಟ್‌ಮೈಟ್‌ಗಳು ಕಾರಣವಾದರೆ, ವಾಹನಗಳಿಂದ ಹೊರಬರುವ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್, ಬೆನ್‌ಝಿನ್, ನೈಟ್ರೊಜನ್ ಆಕ್ಸೈಡ್, ಹೈಡ್ರೊಕಾರ್ಬನ್ ಮತ್ತು ಸಲ್ಫರ್ ಡೈಆಕ್ಸೈಡ್‌ನಂತಹ ವಿಷಪೂರಿತ ಅನಿಲಗಳು ಸಹ ಆಸ್ತಮಾಗೆ ಪ್ರಚೋದನೆ ನೀಡುತ್ತವೆ ಎನ್ನುತ್ತಾರೆ ವೈದ್ಯರು.
ಆಸ್ತಮಾ ಕೆಲವರಲ್ಲಿ ಆನುವಂಶೀಯ. ಅಪ್ಪ-ಅಮ್ಮಂದಿರಲ್ಲಿ ಆಸ್ತಮಾ ಇದ್ದಲ್ಲಿ ಮಕ್ಕಳಿಗೂ ಬಳವಳಿಯಾಗಿ ಬರುತ್ತದೆ. ಮತ್ತೆ ಕೆಲವರಲ್ಲಿ ವಿಷಮ ಪರಿಸರದಿಂದಲೂ ಕಾಣಿಸಿಕೊಳ್ಳುತ್ತದೆ.

ಆಸ್ತಮಾ, ಅಲರ್ಜಿಗೂ ಮನಸ್ಸಿನ ಸ್ಥಿತಿಗೂ ನೇರ ಸಂಬಂಧವಿದೆ. ಸಾಮಾನ್ಯವಾಗಿ ಅಲರ್ಜಿ ಹೊಂದಿರುವವರು ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಮನೆಯಲ್ಲೋ, ಕಚೇರಿಯಲ್ಲೋ ಕಿರಿ, ಕಿರಿಯಾದಾಗ ತಮ್ಮ ಅಭಿಪ್ರಾಯ ಕೇಳದ, ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ ಸನ್ನಿವೇಶದಲ್ಲಿ ಸಿಕ್ಕಿಕೊಂಡಾಗ ಎದೆ ಬಿಗಿದ, ಉಸಿರು ಕಟ್ಟಿದ ಅನುಭವವಾಗುತ್ತದೆ. ಮನಸ್ಸಿಗಾದ ನೋವನ್ನು ದೇಹ ಈ ರೀತಿ ವ್ಯಕ್ತಪಡಿಸುತ್ತದೆ ಎನ್ನುತ್ತಾರೆ ಕೆಲ ವೈದ್ಯರು.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಆಸ್ತಮಾಕ್ಕೂ ಇದೇ ಕಾರಣ. ಅವರು ಉದ್ವೇಗಕ್ಕೆ ಒಳಗಾದಾಗ, ಹಿಂಜರಿಕೆ, ಆತಂಕದ ಪರಿಸ್ಥಿತಿ ಉಂಟಾದಾಗ ಶ್ವಾಸನಾಳಗಳ ಸುತ್ತಲಿನ ಸ್ನಾಯು ಸಂಕೋಚನಗೊಳುತ್ತದೆ. ಒಂದು ರೀತಿಯ ಒತ್ತಡಕ್ಕೆ ಒಳಗಾಗುತ್ತದೆ. ಪದೇಪದೇ ಹೀಗಾದಾಗ ಇದು ಶ್ವಾಸನಾಳಗಳನ್ನು ದುರ್ಬಲಗೊಳಿಸುತ್ತದೆ ಅನ್ನುತ್ತಾರೆ ತಜ್ಞರು.

ಆಸ್ತಮಾಗೆ ಆಯುರ್ವೇದ, ಯೋಗ, ಹೋಮಿಯೋಪತಿ, ಅಲೊಪತಿ, ಯುನಾನಿ...ಹೀಗೆ ಎಲ್ಲ ರೀತಿಯ ವೈದ್ಯ ಪದ್ಧತಿಯಲ್ಲೂ ಔಷಧಗಳಿವೆ.

  ಇನ್‌ಹೇಲರ್‌ಗಳ ಸೇವನೆಯೇ ಎಲ್ಲಕ್ಕಿಂತ ಪರಿಣಾಮಕಾರಿ ಎಂಬ ಅಭಿಪ್ರಾಯವನ್ನು ಇತ್ತೀಚೆಗೆ ವೈದ್ಯರು ವ್ಯಕ್ತಪಡಿಸುತ್ತಿದ್ದಾರೆ. ಇನ್‌ಹೇಲರ್‌ಗಳ ಮೂಲಕ ಔಷಧ ಸೇವಿಸಿದಾಗ ಅತ್ಯಂತ ಕಡಿಮೆ ಪ್ರಮಾಣದ ಔಷಧ ನೇರವಾಗಿ ಶ್ವಾಸನಾಳಕ್ಕೆ ಹೋಗುತ್ತದೆ.

ತಕ್ಷಣ ಉಬ್ಬಸ ಕಡಿಮೆಯಾಗುತ್ತದೆ. ಔಷಧ ರಕ್ತಪ್ರವಾಹದಲ್ಲಿ ಸೇರದೇ ಇರುವುದರಿಂದ ಅಡ್ಡ ಪರಿಣಾಮವೂ ಇರುವುದಿಲ್ಲ ಅನ್ನುತ್ತಾರೆ ಎಂ.ಎಸ್. ರಾಮಯ್ಯ ಆಸ್ಪತ್ರೆಯ ತಜ್ಞ ವೈದ್ಯ ಡಾ. ಎ.ಆರ್ ಸೋಮಶೇಖರ್.

ಅದರ ಜೊತೆ ಜೀವನಶೈಲಿ ಸುಧಾರಿಸಿಕೊಳ್ಳುವುದು, ಮನೆಯ ನೈರ್ಮಲ್ಯ ಕಾಪಾಡಿಕೊಳ್ಳುವುದು, ಧೂಳು ತುಂಬಿದ ಪ್ರದೇಶಕ್ಕೆ ಹೋಗದೇ ಇರುವುದು, ಹತ್ತಿರದವರ ಜೊತೆ ಸೌಹಾರ್ದ ಸಂಬಂಧ ಕಾಪಾಡಿಕೊಳ್ಳುವುದರಿಂದಲೂ ಆಸ್ತಮಾ ಎಂಬ ಭೂತವನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT